Edible Oil: ಜನಸಾಮಾನ್ಯರಿಗೆ ಗುಡ್ ನ್ಯೂಸ್, ಮುಂದಿನ ವಾರದಿಂದ ಅಡುಗೆ ಎಣ್ಣೆ ಭಾರಿ ಅಗ್ಗ
Jul 07, 2022 01:21 PM IST
ಸಾಂದರ್ಭಿಕ ಚಿತ್ರ
- “ಕಳೆದ ಒಂದು ವಾರದಲ್ಲಿ ಜಾಗತಿಕ ಮಟ್ಟದಲ್ಲಿ ಅಡುಗೆ ಎಣ್ಣೆ ಬೆಲೆಗಳು ಶೇಕಡಾ 10 ರಷ್ಟು ಕುಸಿದಿದೆ ಎಂದು ಅಡುಗೆ ಎಣ್ಣೆ ಸಂಘಗಳು ಮತ್ತು ಪ್ರಮುಖ ತಯಾರಕರಿಗೆ ತಿಳಿಸಿದ್ದೇವೆ. ಇದರ ಪ್ರಯೋಜನ ಗ್ರಾಹಕರಿಗೆ ಆಗಬೇಕು. ನಾವು ಎಂಆರ್‌ಪಿಯನ್ನು ಕಡಿಮೆ ಮಾಡಲು ಕೇಳಿಕೊಂಡಿದ್ದೇವೆ” ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ.
ನವದೆಹಲಿ: ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನಸಾಮಾನ್ಯರು ಹಲವು ತಿಂಗಳುಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ನಡುವೆ ಗ್ಯಾಸ್ ಬೆಲೆಯೂ ಹೆಚ್ಚಿದ್ದು, ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ವ್ಯಾಪಕ ಬೆಲೆ ಏರಿಕೆಯ ನಡುವೆ ಗ್ರಾಹಕರಿಗೆ ಪರಿಹಾರವಾಗಿ, ಕೇಂದ್ರ ಸರ್ಕಾರವು ಶುಭಸುದ್ದಿಯೊಂದನ್ನು ಕೊಡಲು ಮುಂದಾಗಿದೆ.
ಶೀಘ್ರದಲ್ಲೇ ದೇಶಾದ್ಯಂತ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಲಿದೆ. ಮುಂದಿನ ಒಂದು ವಾರದೊಳಗೆ ಆಮದು ಮಾಡಿಕೊಳ್ಳುವ ಅಡುಗೆ ಎಣ್ಣೆಗಳ MRP(ಮಾರಾಟ ದರ)ಯನ್ನು ಲೀಟರ್‌ಗೆ 10 ರೂಪಾಯಿವರೆಗೆ ಕಡಿತಗೊಳಿಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಇದರೊಂದಿಗೆ ಒಂದೇ ಬ್ರಾಂಡ್ ಅಥವಾ ಕಂಪನಿಯ ಎಣ್ಣೆಗೆ ದೇಶಾದ್ಯಂತ ಏಕರೂಪದ MRPಯನ್ನು ಕಾಪಾಡಿಕೊಳ್ಳಲು ಸೂಚನೆ ನೀಡಿದೆ.
ಒಂದು ವಾರದೊಳಗೆ ಬೆಲೆ ಬದಲಾವಣೆಯನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರ ಅಡುಗೆ ಎಣ್ಣೆ ಉತ್ಪಾದನಾ ಕಂಪನಿಗಳಿಗೆ ಸೂಚಿಸಿದೆ. ಕಳೆದ ಕೆಲವು ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಅಡುಗೆ ಎಣ್ಣೆ ಬೆಲೆ ಗಣನೀಯವಾಗಿ ಇಳಿಕೆ ಕಂಡಿದ್ದು, ಇದರ ಬೆನ್ನಲ್ಲೇ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.
ಭಾರತವು ತನ್ನ ಅಡುಗೆ ಎಣ್ಣೆಯ ಅಗತ್ಯತೆಯ ಶೇಕಡಾ 60ಕ್ಕಿಂತ ಹೆಚ್ಚು ಪ್ರಮಾಣವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಾದ ಅಲ್ಲೋಲ ಕಲ್ಲೋಲದಿಂದಾಗಿ ಕಳೆದ ಕೆಲವು ತಿಂಗಳುಗಳಲ್ಲಿ ಉತ್ಪನ್ನದ ಚಿಲ್ಲರೆ ಬೆಲೆ ಒತ್ತಡಕ್ಕೊಳಗಾಗಿತ್ತು. ಇತ್ತೀಚೆಗೆ ಜಾಗತಿಕ ಮಾರುಕಟ್ಟೆ ಚೇತರಿಸಿಕೊಂಡಿದ್ದು, ಇದರ ಪರಿಣಾಮವಾಗಿ ಜಾಗತಿಕ ಬೆಲೆಯಲ್ಲಿ ಇಳಿಕೆಯಾಗಿದೆ.
ಅಡುಗೆ ಎಣ್ಣೆ ತಯಾರಕರು ಕಳೆದ ತಿಂಗಳು ಲೀಟರ್‌ಗೆ 10-15 ರೂಪಾಯಿಗಳವರೆಗೆ ಬೆಲೆಯನ್ನು ಕಡಿತಗೊಳಿಸಿದ್ದರು. ಅದಕ್ಕೂ ಮುಂಚೆ, ಜಾಗತಿಕ ಮಾರುಕಟ್ಟೆ ಚೇತರಿಸುವ ಲಕ್ಷಣಗಳಿಂದ MRPಯನ್ನೂ ಕಡಿಮೆಗೊಳಿಸಿದ್ದರು.
ಜಾಗತಿಕ ಬೆಲೆಯಲ್ಲಿ ಮತ್ತಷ್ಟು ಕುಸಿತವನ್ನು ಗಮನಿಸಿದ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ, ದೇಶದ ಎಲ್ಲಾ ಅಡುಗೆ ಎಣ್ಣೆ ಸಂಘಗಳು ಮತ್ತು ಪ್ರಮುಖ ತಯಾರಕರ ಸಭೆಯನ್ನು ಕರೆದಿದ್ದರು. ಸದ್ಯ ಇರುವ ಮಾರುಕಟ್ಟೆ ಪ್ರವೃತ್ತಿಯನ್ನು ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ಜಾಗತಿಕ ಬೆಲೆಗಳ ಕುಸಿತದ ಅಂತಿಮ ಪ್ರಯೋಜನ ಗ್ರಾಹಕರಿಗೆ ಆಗುವ ನಿಟ್ಟಿನಲ್ಲಿ MRP ಅನ್ನು ಕಡಿಮೆ ಮಾಡುವ ನಿರ್ಧಾರಕ್ಕೆ ಬರಲಾಯಿತು.
“ನಾವು ಈ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದೇವೆ. ಕಳೆದ ಒಂದು ವಾರದಲ್ಲಿ ಜಾಗತಿಕ ಮಟ್ಟದಲ್ಲಿ ಅಡುಗೆ ಎಣ್ಣೆ ಬೆಲೆಗಳು ಶೇಕಡಾ 10 ರಷ್ಟು ಕುಸಿದಿದೆ ಎಂದು ಅಡುಗೆ ಎಣ್ಣೆ ಸಂಘಗಳು ಮತ್ತು ಪ್ರಮುಖ ತಯಾರಕರಿಗೆ ತಿಳಿಸಿದ್ದೇವೆ. ಇದನ್ನು ಗ್ರಾಹಕರಿಗೆ ವರ್ಗಾಯಿಸಬೇಕು. ನಾವು ಎಂಆರ್‌ಪಿಯನ್ನು ಕಡಿಮೆ ಮಾಡಲು ಕೇಳಿಕೊಂಡಿದ್ದೇವೆ” ಎಂದು ಸಭೆಯ ನಂತರ ಪಾಂಡೆ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
ಆಮದು ಮಾಡಿಕೊಳ್ಳುವ ಎಲ್ಲಾ ಖಾದ್ಯ ತೈಲಗಳಾದ ತಾಳೆ ಎಣ್ಣೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಗಳಲ್ಲಿ ಪ್ರತಿ ಲೀಟರ್‌ಗೆ 10 ರೂಪಾಯಿಯವರೆಗೆ ಎಂಆರ್‌ಪಿ ಕಡಿಮೆ ಮಾಡುವ ಭರವಸೆಯನ್ನು ಪ್ರಮುಖ ಖಾದ್ಯ ತೈಲ ತಯಾರಕರುನೀಡಿದ್ದಾರೆ ಎಂದು ಪಾಂಡೆ ಹೇಳಿದ್ದಾರೆ. ಮುಂದಿನ ವಾರದ ವೇಳೆಗೆ ಈ ದರ ಜಾರಿಗೆ ಬರಲಿದೆ. ಒಮ್ಮೆ ಈ ಅಡುಗೆ ಎಣ್ಣೆಯ ಬೆಲೆ ಕಡಿಮೆ ಮಾಡಿದ ಬಳಿಕ, ಇತರ ಅಡುಗೆ ಎಣ್ಣೆಗಳ ದರವೂ ಕಡಿಮೆಯಾಗಲಿದೆ.
ಪ್ರಸ್ತುತ ದೇಶದ ವಿವಿಧ ವಲಯಗಳು ಅಥವಾ ರಾಜ್ಯಗಳಲ್ಲಿ ಲೀಟರ್‌ಗೆ 3-5 ರೂಪಾಯಿಗಳ ವ್ಯತ್ಯಾಸವಿದೆ. ಹೀಗಾಗಿ ದೇಶಾದ್ಯಂತ ಒಂದು ಬ್ರಾಂಡ್‌ಗಳ ಎಲ್ಲಾ ಅಡುಗೆ ಎಣ್ಣೆಗಳಿಗೆ ದೇಶದ ಎಲ್ಲಾ ಭಾಗಗಳಲ್ಲೂ ಏಕರೂಪದ MRP ಕಾಯ್ದುಕೊಳ್ಳುವಂತೆ ಕಾರ್ಯದರ್ಶಿ ಎಣ್ಣೆ ತಯಾರಕರನ್ನು ಕೇಳಿಕೊಂಡಿದ್ದಾರೆ. ಸಾರಿಗೆ ಮತ್ತು ಇತರ ವೆಚ್ಚಗಳು ಎಂಆರ್‌ಪಿಯಲ್ಲೇ ಅಡಕವಾಗಿರುವುದರಿಂದ, ಎಂಆರ್‌ಪಿಯಲ್ಲಿ ಯಾವುದೇ ವ್ಯತ್ಯಾಸವಾಗಬಾರದು ಎಂದು ಪಾಂಡೆ ಅಡುಗೆ ಎಣ್ಣೆ ತಯಾರಕರ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಈ ವಿಷಯದ ಬಗ್ಗೆ ತಯಾರಕರು ಒಪ್ಪಿಗೆ ಸೂಚಿಸಿದ್ದಾರೆ.
ವಿಭಾಗ