ಬಜೆಟ್ 2024: ಜಾತಿ ಸಮೀಕ್ಷೆ ಬೇಡಿಕೆಗೆ ಪರೋಕ್ಷ ಉತ್ತರ; ಸಾಧನೆಯ ಆತ್ಮವಿಶ್ವಾಸದೊಂದಿಗೆ ದೂರದೃಷ್ಟಿಯ ಸದೃಢ ಮಾತು -ಸಂಪಾದಕೀಯ
Feb 02, 2024 07:56 AM IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
- Budget 2024: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಭವಿಷ್ಯದ ಕನಸುಗಳಿಗಿಂತಲೂ ಸರ್ಕಾರದ ಸಾಧನೆಗಳ ಬಗೆಗಿನ ಆತ್ಮವಿಶ್ವಾಸವೇ ಎದ್ದು ಕಾಣಿಸಿತು. ಚುನಾವಣೆ ನೆರಳಿನ ಬಜೆಟ್‌ನಲ್ಲಿ ಪ್ರತಿಪಕ್ಷಗಳ ದೊಡ್ಡ ಬೇಡಿಕೆಯನ್ನು ಸರ್ಕಾರ ಹೇಗೆ ಎದುರಿಸಲು ಸಜ್ಜಾಗಿದೆ ಎಂಬ ಇಣುಕುನೋಟ ಕೊಟ್ಟಿದ್ದು ವಿಶೇಷ.
ಸಂಪಾದಕೀಯ: ಪ್ರತಿ ವರ್ಷ ಫೆಬ್ರುವರಿ 1 ರಂದು ಮಂಡಿಸಲಾಗುವ ಭಾರತದ ವಾರ್ಷಿಕ ಬಜೆಟ್ ವಿಶ್ಲೇಷಿಸುವಾಗ ‘ಸಾಲುಗಳ ನಡುವೆ’ (Between the lines) ಓದುವುದು ವಾಡಿಕೆ. ಬಜೆಟ್ ದಾಖಲೆಯು ಕೇವಲ ಅಂಕಿಅಂಶಗಳ ಸರ್ಕಸ್ ಅಷ್ಟೇ ಅಲ್ಲ. ಅದು ಪ್ರಚಲಿತ ರಾಜಕೀಯ, ದೇಶದ ಆರ್ಥಿಕ ಪರಿಸ್ಥಿತಿ, ಜನರ ಸ್ಥಿತಿಗತಿ ಮತ್ತು ವಾಣಿಜ್ಯ ವಹಿವಾಟಿನ ಸ್ಥಿತಿಗತಿಯನ್ನು ಬಿಂಬಿಸುವ ಮಹತ್ವದ ಹೇಳಿಕೆಯಾಗಿರುತ್ತದೆ. ಚಾಲ್ತಿಯಲ್ಲಿರುವ ರಾಜಕೀಯ ಸಂದರ್ಭ, ಆರ್ಥಿಕ ಪರಿಸ್ಥಿತಿ, ಜನರ ಭಾವನೆ ಮತ್ತು ಅದನ್ನು ಸರ್ಕಾರವು ಹೇಗೆ ಗ್ರಹಿಸಿದೆ ಎನ್ನುವುದನ್ನೂ ತಿಳಿಸುತ್ತದೆ. ಈ ವರ್ಷ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 6ನೇ ಬಜೆಟ್ ಮಂಡಿಸಿದರು. ಇದು ಪೂರ್ಣ ಪ್ರಮಾಣದ ಬಜೆಟ್ ಅಲ್ಲ; ಚುನಾವಣೆ ನೆರಳಿನ ಮಧ್ಯಂತರ ಬಜೆಟ್ ಎನ್ನುವುದನ್ನು ಗಮನದಲ್ಲಿರಿಸಿಕೊಂಡೇ ಬಜೆಟ್‌ನ ಆಂತರ್ಯ ಅರಿಯಲು ಪ್ರಯತ್ನಿಸಬೇಕಾಗುತ್ತದೆ.
ಚುನಾವಣೆ ಮುಗಿದು ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಮಾತ್ರ ಮಧ್ಯಂತರ ಬಜೆಟ್ ಚಾಲ್ತಿಯಲ್ಲಿರುತ್ತದೆ. ನಂತರ ಮಂಡನೆಯಾಗುವ ಪೂರ್ಣ ಪ್ರಮಾಣದ ಬಜೆಟ್‌ಗೆ ಹೆಚ್ಚು ಬೆಲೆ. ಮಧ್ಯಂತರ ಬಜೆಟ್‌ನ ಘೋಷಣೆಗಳಿಗೆ ಹೊಸ ಬಜೆಟ್ ಬದ್ಧವಾಗಿರಬೇಕು ಎಂದೇನೂ ಇಲ್ಲ. 2019 ರಲ್ಲಿ ಪಿಯೂಷ್ ಗೋಯಲ್ ಮ್ಯಾರಥಾನ್ ಬಜೆಟ್ ಮಂಡಿಸಿದ್ದರು. ಆ ಮಧ್ಯಂತರ ಬಜೆಟ್ ರೈತರಿಗೆ ನಗದು ವರ್ಗಾವಣೆ ಯೋಜನೆಯಾದ ಪಿಎಂ-ಕಿಸಾನ್ ಯೋಜನೆಯನ್ನು ಪರಿಚಯಿಸಿತು. ಈ ಪ್ರಯತ್ನವು ರೈತರಿಗೆ ಸರ್ಕಾರದ ಮೇಲಿದ್ದ ಅಸಮಾಧಾನವನ್ನು ಶಮನಗೊಳಿಸಲು ಸಹಾಯ ಮಾಡಿತು. ನರೇಂದ್ರ ಮೋದಿ ಸರ್ಕಾರವನ್ನು ಎರಡನೇ ಅವಧಿಗೆ ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ತರುವಲ್ಲಿ ತನ್ನದೇ ಆದ ರೀತಿಯಲ್ಲಿ ನೆರವಾಯಿತು.
ಆದರೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ (ಫೆ 1) ಮಂಡಿಸಿದ ಬಜೆಟ್ ಇದಕ್ಕೆ ವ್ಯತಿರಿಕ್ತವಾಗಿತ್ತು. ನರೇಂದ್ರ ಮೋದಿ ಆಡಳಿತ ಶುರುವಾಗಿ ಸುಮಾರು 10 ವರ್ಷಗಳಾಗಿವೆ. ಒಂದು ದಶಕದ ಆಡಳಿತದ ನಂತರ ಎದುರಿಸುತ್ತಿರುವ ಚುನಾವಣೆ ಇದು. ಸಹಜವಾಗಿಯೇ ಮಹತ್ವದ ಅವರ ಭಾಷಣದ ಮೊದಲ ಭಾಗವು ಕಳೆದ ದಶಕದಲ್ಲಿ ಸರ್ಕಾರ ಏನೆಲ್ಲಾ ಸಾಧನೆ ಮಾಡಿದೆ ಎನ್ನುವುದನ್ನು ವಿವರಿಸಿತು. ಗಮನ ಸೆಳೆದ ಒಂದು ಮುಖ್ಯ ಅಂಶವೆಂದರೆ ನಿರ್ಮಲಾ ಅವರ ಮಾತಿನಲ್ಲಿ ಹಿಂದಿನ ಸರ್ಕಾರಗಳ ಕಾರ್ಯಕ್ಷಮತೆಯ ಬಗ್ಗೆ ಆಕ್ರೋಶದ ಹೋಲಿಕೆಗಳು ಇರಲಿಲ್ಲ. ವಿರೋಧ ಪಕ್ಷಗಳ ಬಗ್ಗೆ ಹೆಚ್ಚು ಟೀಕೆಗಳೂ ಇರಲಿಲ್ಲ. ಇದು ಮುಖ್ಯ ಬೆಳವಣಿಗೆ. ಏಕೆಂದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರಕ್ಕೆ ಮರಳುವ ವಿಶ್ವಾಸ ಬಿಜೆಪಿಗೆ ಇದೆ ಎನ್ನುವುದನ್ನು ಇದು ಸೂಚಿಸುತ್ತದೆ. ಬಿಹಾರದಲ್ಲಿ ಇತ್ತೀಚೆಗೆ ನಿತೀಶ್ ಕುಮಾರ್ ಅವರು ಮತ್ತೆ ಬಿಜೆಪಿ ತೆಕ್ಕೆಗೆ ಸೇರಿದ್ದೂ ಸೇರಿದಂತೆ ಒಟ್ಟಾರೆ “ಇಂಡಿಯಾ” ಒಕ್ಕೂಟದ ಬಲ ಕಡಿಮೆಯಾಗಿರುವುದನ್ನು ಈ ಅಂಶವು ಪರೋಕ್ಷವಾಗಿ ಸೂಚಿಸುತ್ತದೆ.
ಮಧ್ಯಂತರ ಬಜೆಟ್ ನಲ್ಲಿ ದೊಡ್ಡ ಸಂದೇಶವೂ ಇದೆ. 2019 ರಲ್ಲಿ ಚುನಾವಣೆಗೆ ಮೊದಲು ಸರ್ಕಾರವು ಕೃಷಿ ಬಿಕ್ಕಟ್ಟಿನ ಸಮಸ್ಯೆಯನ್ನು ನಿಭಾಯಿಸಬೇಕಾಗಿತ್ತು. ಆದರೆ 2024 ರ ಹೊತ್ತಿಗೆ ಪರಿಸ್ಥಿತಿ ಬದಲಾಗಿದೆ. ಈಗ ತುರ್ತಾಗಿ ಪರಿಹರಿಸಬೇಕಾದ ಯಾವುದೇ ಸಮಸ್ಯೆ ಸರ್ಕಾರದ ಎದುರು ಇಲ್ಲ. ಹಲವು ಹಣಕಾಸು ವಿಶ್ಲೇಷಕರು ಮತ್ತು ಅರ್ಥಶಾಸ್ತ್ರಜ್ಞರು ಅನುಮೋದಿಸಿದ ಮತ್ತು ದತ್ತಾಂಶದಲ್ಲಿ ಪ್ರತಿಬಿಂಬಿತವಾಗಿರುವ ಮಾಹಿತಿಯ ಪ್ರಕಾರ ಆರ್ಥಿಕತೆಯು ಶೇ 7.3 ರಷ್ಟು ಬೆಳೆಯುವ ನಿರೀಕ್ಷೆಯಿದೆ. ಬೆಳವಣಿಗೆಯ ಭರವಸೆ ಕೊಡುವ ಆತ್ಮವಿಶ್ವಾಸದ ಮಾತುಗಳಿಗೆ ಮೊದಲು ಕೇಂದ್ರ ಸರ್ಕಾರವು ರೂಢಿಗತವಾಗಿದ್ದ ಹಲವು ಪಾಶ್ಚಾತ್ಯ ಆರ್ಥಿಕ ವಿಶ್ಲೇಷಣಾ ಮಾದರಿಗಳನ್ನು ತಿರಸ್ಕರಿಸಿದ ಅಂಶವನ್ನೂ ಮನಗಾಣಬೇಕಾಗಿದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ಸರ್ಕಾರ ದೊಡ್ಡಮೊತ್ತವನ್ನು ಮೀಸಲಿಟ್ಟಿದೆ. ಇದರ ಜೊತೆಗೆ ವಾಣಿಜ್ಯ ಮತ್ತು ಹೂಡಿಕೆದಾರ ಸ್ನೇಹಿ ನೀತಿಗಳು; ಜನಪರ ಯೋಜನೆಗಳಿಗೆ ಒತ್ತು ನೀಡುವ ಬಗ್ಗೆ ಮುಂದಿನ ಪೂರ್ಣ ಬಜೆಟ್‌ನಲ್ಲಿ ಸ್ಪಷ್ಟ ಚಿತ್ರಣ ಸಿಗಬಹುದು.
ಆದರೆ ಹಣದುಬ್ಬರ ನಿಯಂತ್ರಣಕ್ಕೆ ಅನುಸರಿಸುತ್ತಿರುವ ಮಾದರಿಗಳನ್ನು ಸರಿಯಾಗಿ ಅರ್ಥೈಸಬೇಕಾಗಿದೆ. ಆರ್ಥಿಕ ಜಗತ್ತಿನ ಉತ್ಪಾದನೆ, ಬೇಡಿಕೆ, ಪೂರೈಕೆ ಸರಪಳಿಗಳನ್ನು ಸದೃಢಗೊಳಿಸುವ ಬದಲು ಸರ್ಕಾರವು ತನ್ನ ನೀತಿ ಮತ್ತು ಯೋಜನೆಗಳ ಮೂಲಕ ಕೃತಕವಾಗಿ ಹಣದುಬ್ಬರ ನಿಯಂತ್ರಣದಲ್ಲಿ ಇರಿಸಲು ಮುಂದಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ವಿಶ್ವದ ಹಲವು ದೇಶಗಳಿಗೆ ಹೋಲಿಸಿದರೆ ಭಾರತದ ಹಣದುಬ್ಬರ ನಿಯಂತ್ರಣದಲ್ಲಿದೆ, ಕೇಂದ್ರ ಮತ್ತು ಹಲವು ರಾಜ್ಯ ಸರ್ಕಾರಗಳು ಜನರ ಹೊರೆ ಕಡಿಮೆ ಮಾಡಲು ಮುಂದಾಗಿವೆ ಎನ್ನುವುದು ನಿಜ. ಆದರೆ ಆರ್ಥಿಕತೆಯ ಪೂರ್ಣಪ್ರಮಾಣದ ಚೇತರಿಕೆಗೆ ಇಷ್ಟೇ ಸಾಕಾಗುವುದಿಲ್ಲ.
ಮಧ್ಯಂತರ ಬಜೆಟ್ ಎನ್ನುವುದು “ಹೆಚ್ಚು ಕಡಿಮೆ ನಿರೀಕ್ಷಿತ” ಮತ್ತು ಎಂದಿನಂತೆ ಒಂದು ಶಿಷ್ಟಾಚಾರ" ಎಂಬ ಮಾತುಗಳನ್ನು ಹಲವರು ತಮ್ಮ ವ್ಯಾಖ್ಯಾನಗಳಲ್ಲಿ ಬಳಸಿದ್ದಾರೆ. ಇದನ್ನು ಸುಳ್ಳು ಎಂದು ಹೇಳುವ ಯಾವ ಘೋಷಣೆಯೂ ನಿರ್ಮಲಾ ಅವರ ಬಜೆಟ್‌ನಲ್ಲಿ ಇಲ್ಲ. ಸಾಮಾನ್ಯ ಜನರು, ಹೂಡಿಕೆದಾರರು ಮತ್ತು ಉದ್ಯಮಿಗಳ ನಿರೀಕ್ಷೆಯಂತೆ ಸರ್ಕಾರ ನಡೆದುಕೊಳ್ಳುವುದು ಸಹ ಒಂದು ನಿರ್ಧಾರವೇ ಆಗಿರುತ್ತದೆ. ಇದೇ ಬೇಸಿಗೆಗೆ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ದೀರ್ಘಾವಾಧಿ ಹೂಡಿಕೆಯ ನಿರ್ಣಯಗಳನ್ನು ಚುನಾವಣೆ ಕಾರಣಕ್ಕೆ ಮುಂದೂಡಬೇಕಿಲ್ಲ ಎನ್ನುವ ಪರೋಕ್ಷ ಸಂದೇಶವನ್ನೂ ಈ ಬಜೆಟ್ ಕೊಟ್ಟಿದೆ. “2047 ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ” ಎನ್ನುವುದು ನಿರ್ಮಲಾ ಅವರ ಆತ್ಮವಿಶ್ವಾಸದ ಮಾತಾಗಿತ್ತು. “ವಿಕಸಿತ ಭಾರತ” ಎನ್ನುವುದು ಅವರ ಮಾತಿನಲ್ಲಿ ಪದೇಪದೆ ಕೇಳಿಬಂದ ಮುಖ್ಯ ಪದವಾಗಿತ್ತು.
ಗ್ರಾಮೀಣ ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಹಲವು ವರದಿಗಳು ಸೂಚಿಸುತ್ತಿವೆ. ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವು "ಕೆ-ಆಕಾರದ ಚೇತರಿಕೆ"ಯ ನಿರೂಪಣೆಯನ್ನು ಒಪ್ಪಿಕೊಳ್ಳಲಿಲ್ಲ. “ಕೆ-ಆಕಾರದ ಚೇತರಿಕೆ” ಎನ್ನುವುದನ್ನು ಸ್ಥೂಲವಾಗಿ ಹೀಗೆ ವ್ಯಾಖ್ಯಾನಿಸಬಹುದು; ಕೊರೊನಾ ಪಿಡುಗಿನ ನಂತರ ಹಲವು ವಲಯಗಳು ಕಳೆಗುಂದಿವೆ, ವಲಯವಾರು ಚೇತರಿಕೆ ಒಮ್ಮೆಲೆ ಸಾಧ್ಯವಿಲ್ಲ. ಚೇತರಿಕೆಗೆ ಸಮಯ ಬೇಕು ಎನ್ನುವುದು ಈ ವಾದ ಮಾಡುವವರ ಕೊಡುವ ವಿವರಣೆ. ಈ ಮಾತುಗಳಲ್ಲಿ ಸತ್ವ ಇರಬಹುದಾದರೂ ಸರ್ಕಾರವು ಘೋಷಿಸುವ, ಅನುಷ್ಠಾನ ಮಾಡುವ ಜನಕಲ್ಯಾಣ ಯೋಜನೆಗಳು ಗ್ರಾಮೀಣ ಪ್ರದೇಶದ ಜನರಿಗೆ ಬದುಕುವ ಭರವಸೆ ಮೂಡಿಸುತ್ತವೆ ಎನ್ನುವುದು ಕಣ್ಣಿಗೆ ಕಾಣಿಸುವ ಸತ್ಯ. ಕರ್ನಾಟಕ ಸರ್ಕಾರದ ಭಾಗ್ಯಲಕ್ಷ್ಮಿ, ಶಕ್ತಿ ಮತ್ತು ಅನ್ನಭಾಗ್ಯ ಯೋಜನೆಗಳನ್ನು ಉದಾಹರಣೆಯಾಗಿ ಪರಿಗಣಿಸಬಹುದು.
ತಮ್ಮ ಭಾಷಣದ ಮೊದಲ ಭಾಗದಲ್ಲಿ, ಸೀತಾರಾಮನ್ ಅವರು “ನಾಲ್ಕು ಜಾತಿಗಳು” ಎಂದು ಉಲ್ಲೇಖಿಸಿದರು. ಈ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಹೇಳಿದ್ದ ಕುರಿತೂ ನೆನಪಿಸಿಕೊಂಡರು. “ಬಡವರು, ಮಹಿಳೆಯರು, ಯುವಕರು ಮತ್ತು ರೈತರು ನಮಗೆ ಮುಖ್ಯ” ಎಂದು ತಮ್ಮ ದೃಷ್ಟಿಯಲ್ಲಿರುವ ಜಾತಿಗಳು ಯಾವುದು ಎಂದು ತಿಳಿಸಿಕೊಟ್ಟರು. ಕಳೆದ ದಶಕದಲ್ಲಿ ತಮ್ಮ ಸರ್ಕಾರ ಅವರಿಗಾಗಿ ಏನು ಮಾಡಿದೆ ಎಂಬುದರ ಬಗ್ಗೆ ಮಾತನಾಡಿದರು. ಇದು ಬಿಜೆಪಿಯ ಕಲ್ಯಾಣ ಯೋಜನೆಗಳ ಕೇಂದ್ರಬಿಂದುವಾಗಿರಬಹುದು. ಅದರೆ ಅಷ್ಟಕ್ಕೇ ಸೀಮಿತವಾಗದೆ ಕಳೆದ ದಶಕದಲ್ಲಿ ತನ್ನ ತೆಕ್ಕೆಗೆ ಸೆಳೆದುಕೊಂಡಿರುವ ‘ಇತರ ಹಿಂದುಳಿದ ವರ್ಗ’ (ಒಬಿಸಿ) ಮತಗಳನ್ನು ಮರಳಿ ಪಡೆಯುವ ಅವಕಾಶದ ಬಗ್ಗೆ ಬಿಜೆಪಿಗೆ ಆಶಾಭಾವನೆ ಇರುವುದನ್ನು ಇದು ಬಿಂಬಿಸಿದೆ. ವಿರೋಧ ಪಕ್ಷಗಳ ಜಾತಿ ಸಮೀಕ್ಷೆಯ ಬೇಡಿಕೆಗೆ ಬಿಜೆಪಿ “ನಾಲ್ಕು ಜಾತಿಗಳು” ಎನ್ನುವ ಮೂಲಕ ಉತ್ತರ ನೀಡಿದೆ ಎಂದೂ ವಿಶ್ಲೇಷಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂದೊಮ್ಮೆ ‘ಹಿಂದೂಸ್ತಾನ್ ಟೈಮ್ಸ್’ ದೈನಿಕಕ್ಕೆ ನೀಡಿದ್ದ ಸಂದರ್ಶನದಲ್ಲಿ “ದೇಶದಲ್ಲಿ ಹೊಸ ಜಾತಿಗಳು ಉದ್ಭವವಾಗಿವೆ. ಅದು ಫಲಾನುಭವಿಗಳ ಜಾತಿ” ಎಂದು ಹೇಳಿದ್ದರು. ಫಲಾನುಭವಿಗಳ “ಜಾತಿ”ಯ ಮೇಲೆ ಸರ್ಕಾರಕ್ಕೆ, ವಿತ್ತ ಸಚಿವರಿಗೆ ವಿಶ್ವಾಸವಿದೆ ಎನ್ನುವುದನ್ನು ಈ ಬಜೆಟ್ ಸಾರಿ ಹೇಳಿದೆ. ಆದರೆ “ಹೊಸ ಜಾತಿ”ಗೆ ಸೇರಿದವರ ಬದುಕು ಸಿಹಿಗೊಳಿಸುವ ಯಾವುದೇ ಮಹತ್ವದ ಮಹತ್ವದ ಘೋಷಣೆಗಳು ಕಾಣಿಸಿಲ್ಲ ಎನ್ನುವುದನ್ನೂ ಮರೆಯುವಂತಿಲ್ಲ.