logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಂಪಾದಕೀಯ: ತಮಿಳುನಾಡು ರಾಜಕಾರಣದಲ್ಲಿ ಮಿನುಗಲು ಬಂದಿದೆ ಮತ್ತೊಂದು ತಾರೆ, ವಿಜಯ್ ರಾಜಕೀಯ ಪ್ರವೇಶ

ಸಂಪಾದಕೀಯ: ತಮಿಳುನಾಡು ರಾಜಕಾರಣದಲ್ಲಿ ಮಿನುಗಲು ಬಂದಿದೆ ಮತ್ತೊಂದು ತಾರೆ, ವಿಜಯ್ ರಾಜಕೀಯ ಪ್ರವೇಶ

D M Ghanashyam HT Kannada

Feb 06, 2024 07:48 AM IST

google News

ತಮಿಳು ನಟ ವಿಜಯ್

    • Tamil Nadu Politics: ಕಾಲಿವುಡ್‌ನಲ್ಲಿ ಇಂದಿಗೂ ವಿಜಯ್ ಗೆಲ್ಲುವ ಕುದುರೆ. ಅವರ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಕಂಡಿವೆ. ತಮಿಳುನಾಡಿನಾದ್ಯಂತ ಅವರಿಗೆ ಅಭಿಮಾನಿ ಬಳಗಗಳಿವೆ. ಆದರೆ ತಮಿಳುನಾಡಿನಲ್ಲಿ ರಾಜಕೀಯ ಯಶಸ್ಸು ಸಾಧಿಸಲು ಇಷ್ಟೇ ಸಾಕೇ?
ತಮಿಳು ನಟ ವಿಜಯ್
ತಮಿಳು ನಟ ವಿಜಯ್

Editorial: ಎಐಎಡಿಎಂಕೆ ಪಕ್ಷವನ್ನು ಹತ್ತಾರು ವರ್ಷಗಳ ಕಾಲ ಬಿಗಿಮುಷ್ಟಿಯಲ್ಲಿ ಮುನ್ನಡೆಸಿದ ಜನಪ್ರಿಯ ನಾಯಕಿ ಜೆ.ಜಯಲಲಿತಾ ನಿಧನದ ನಂತರ ತಮಿಳುನಾಡು ರಾಜಕೀಯದ ಪ್ರಭೆ ತುಸು ಮಸುಕಾಗಿತ್ತು. ಡಿಎಂಕೆ ಪಕ್ಷದ ಕೆ.ಕರುಣಾನಿಧಿ ಅವರ ಸಾವಿನ ನಂತರ ಅಧಿಕಾರಕ್ಕೆ ಬಂದ ಸ್ಟಾಲಿನ್ ಪಕ್ಷದ ಮೇಲೆ ಮೊದಲಿನಿಂದಲೇ ಹಿಡಿದ ಸಾಧಿಸಿದ್ದವರು.

ಹೀಗಾಗಿ ಹೇಳಿಕೊಳ್ಳುವಂಥ ಮಹತ್ವದ ಯಾವುದೇ ಬೆಳವಣಿಗೆಗಳು ಕಾಣಿಸಲಿಲ್ಲ. ರಾಜಕೀಯಕ್ಕೆ ಬರುವ ಮಾತನಾಡುತ್ತಿದ್ದ ಸೂಪರ್‌ಸ್ಟಾರ್ ರಜನಿಕಾಂತ್ ಏಕಾಏಕಿ ಹಿಂದೆ ಸರಿದು ಅಚ್ಚರಿ ಮೂಡಿಸಿದರು. ಕಮಲ್ ಹಾಸನ್ ರಾಜಕೀಯದಲ್ಲಿ ಇದ್ದಾರಾದರೂ ಸಿನಿಮಾದಲ್ಲಿ ಸಿಕ್ಕಷ್ಟು ಯಶಸ್ಸು ರಾಜಕಾರಣದಲ್ಲಿ ಇನ್ನೂ ಒಲಿದಿಲ್ಲ. ತಮಿಳುನಾಡು ರಾಜ್ಯದಲ್ಲಷ್ಟೇ ಅಲ್ಲ, ಭಾರತದ ವಿವಿಧೆಡೆ ತಮಿಳುನಾಡು ರಾಜಕಾರಣದ ವಿದ್ಯಮಾನಗಳು ನೆನಪಾಗಲು ಕಾರಣ ಇದೆ. ಅದೆಂದರೆ ತಮಿಳು ಸ್ಟಾರ್‌ ನಟ ವಿಜಯ್.

ಇದೀಗ 49ರ ಹರೆಯದಲ್ಲಿರುವ ವಿಜಯ್ ಅವರ ಸಿನಿಮಾಗಳು ಇಂದಿಗೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ತಂದುಕೊಡುತ್ತಿವೆ. ಸಿನಿಮಾ ಕ್ಷೇತ್ರದಲ್ಲಿ ಸಿಕ್ಕಿರುವ ಯಶಸ್ಸಿನ ಲಾಭವನ್ನು ರಾಜಕೀಯ ಕ್ಷೇತ್ರದಲ್ಲಿ ಪಡೆದುಕೊಳ್ಳುವ ಪ್ರಯತ್ನವನ್ನು ವಿಜಯ್ ಮಾಡುತ್ತಿದ್ದಾರೆ. ಕಳೆದ ವಾರವಷ್ಟೇ ತಮ್ಮ ಹೊಸ ರಾಜಕೀಯ ಪಕ್ಷವಾದ "ತಮಿಳಗ ವೆಟ್ರಿ ಕಳಗಂ" (ತಮಿಳುನಾಡು ವಿಜಯ ಪಕ್ಷ) ಪಕ್ಷವನ್ನು ವಿಜಯ್ ಘೋ‍ಷಿಸಿದರು. ರಾಜ್ಯದಲ್ಲಿ 2026 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಿಸಿದರು.

ಚಲನಚಿತ್ರಗಳಲ್ಲಿ ಸಾಂದರ್ಭಿಕ ಟೀಕೆಗಳು ಅಥವಾ ಪ್ರಾಸಂಗಿಕ ಹೇಳಿಕೆಗಳನ್ನು ಹೊರತುಪಡಿಸಿದರೆ ವಿಜಯ್ ಅವರು ಈವರೆಗೂ ತಮ್ಮ ರಾಜಕೀಯ ನಡೆ ಏನು ಎಂಬುದರ ಬಗ್ಗೆ ಯಾವ ಸೂಚನೆಯನ್ನೂ ನೀಡಿರಲಿಲ್ಲ. ಪಕ್ಷದ ಹೆಸರನ್ನು ಅವರ ಮುಂದಿನ ನಡೆಯ ಮುನ್ಸೂಚನೆಯಾಗಿ ಪರಿಗಣಿಸಿದರೆ, ತಮಿಳುನಾಡಿನ ಪಾರಂಪರಿಕ ದ್ರಾವಿಡ ರಾಜಕಾರಣದ ತೆಕ್ಕೆಗೆ ಸಿಲುಕುವ ಉದ್ದೇಶ ಅವರಿಗೆ ಇಲ್ಲ. ಆದರೆ ರಾಜಕೀಯದ ಕೇಂದ್ರವಾಗಿ ತಮಿಳು ಅಸ್ಮಿತೆಯ ಭಾವನೆಯನ್ನು ಬಳಸಿಕೊಳ್ಳಲು ಮುಂದಾಗಿರುವುದು ಸ್ಪಷ್ಟವಾಗುತ್ತದೆ.

ವಿಜಯ್ ಅಭಿನಯದ ಚಿತ್ರಗಳ ಹಣ ಗಳಿಕೆ ಮತ್ತು ಅವರು ಹೊಂದಿರುವ ಅಭಿಮಾನಿ ಬಳಗಗಳ ಗಾತ್ರವು ವಿಜಯ್ ಅವರು ದೀರ್ಘಾವಧಿಯ ಜನಪ್ರಿಯ ನಟ ಎನ್ನುವುದಕ್ಕೆ ಸಾಕ್ಷಿ ಹೇಳುತ್ತಿವೆ. ಆದರೆ ತಮಿಳುನಾಡು ರಾಜಕೀಯದಲ್ಲಿ ಯಶಸ್ಸು ಗಳಿಸಲು ಇಷ್ಟೇ ಅಂಶಗಳು ಸಾಕೇ? ತಮಿಳು ಚಿತ್ರರಂಗದ ದಿಗ್ಗಜರು ಎನಿಸಿದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರಿಗೆ ರಾಜಕೀಯದಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಗಲಿಲ್ಲ ಎನ್ನುವುದನ್ನು ಮರೆಯುವಂತಿಲ್ಲ. ಎಂ.ಜಿ.ರಾಮಚಂದ್ರನ್ (ಎಂಜಿಆರ್) ಮತ್ತು ಜೆ.ಜಯಲಲಿತಾ ಅವರು ಸಿನಿಮಾ ಕ್ಷೇತ್ರದ ಜನಪ್ರಿಯತೆಯನ್ನು ರಾಜಕೀಯ ಬದುಕಿನ ಏಳ್ಗೆಗೆ ಬಳಸಿಕೊಂಡರು.

ಆದರೆ ಇವರಿಬ್ಬರೂ ರಾಜಕೀಯದಲ್ಲಿ ನೆಲೆಯೂರಲು ಸಿನಿಮಾ ಜನಪ್ರಿಯತೆಯ ಜೊತೆಗೆ ಬೇರೆ ಕಾರಣಗಳೂ ಇದ್ದವು. ಎಂಜಿಆರ್ ಅವರು ರಾಜಕೀಯಕ್ಕೆ ಪ್ರವೇಶಿಸುವ ಮೊದಲು ದ್ರಾವಿಡ ಚಳವಳಿಯೊಂದಿಗೆ ಸಂಬಂಧ ಹೊಂದಿದ್ದರು. ಎಐಎಡಿಎಂಕೆಯ ಪ್ರಚಾರ ಕಾರ್ಯದರ್ಶಿ ಸೇರಿದಂತೆ ಅನೇಕ ಹುದ್ದೆಗಳಲ್ಲಿ ಕೆಲಸ ಮಾಡಿದ ನಂತರ ಜಯಲಲಿತಾ ಅವರು ಎಂಜಿಆರ್ ಅವರ ಪರಂಪರೆಯನ್ನು ವಾರಸುದಾರಿಕೆಯಾಗಿ ಪಡೆದರು. ತಮಿಳುನಾಡಿನ ಮತ್ತೊಬ್ಬ ಜನಪ್ರಿಯ ತಾರೆ ವಿಜಯಕಾಂತ್ ಡಿಎಂಡಿಕೆ ಪಕ್ಷವನ್ನು ಸ್ಥಾಪಿಸಿ ಅಲ್ಪ ಯಶಸ್ಸನ್ನು ಕಂಡ ಸಂಗತಿಯನ್ನೂ ನಾವು ಮರೆಯುವಂತಿಲ್ಲ.

ಇದೀಗ ತಮಿಳುನಾಡು ರಾಜಕಾರಣದ ಶಕ್ತಿಕೇಂದ್ರಗಳು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಗುರುತಿಸಲಾಗುತ್ತದೆ. ಇವರಿಬ್ಬರೂ ಕ್ರಮವಾಗಿ ಡಿಎಂಕೆ ಮತ್ತು ಎಐಎಡಿಎಂಕೆ ನಾಯಕರಾಗಿ ಕರುಣಾನಿಧಿ ಮತ್ತು ಜಯಲಲಿತಾ ಅವರು ಹೊಂದಿದ್ದಷ್ಟು ವರ್ಚಸ್ಸನ್ನು ಹೊಂದಿಲ್ಲ ಎನಿಸಬಹುದು. ಇವರ ಎದುರು ಹೊಸ ಮುಖಗಳನ್ನು ಮತದಾರರು ಸ್ವಾಗತಿಸಬಹುದು. ಆದರೆ ತಮಿಳುನಾಡಿನ ಮತದಾರರು ಭಾರತದ ಇತರ ರಾಜ್ಯಗಳ ಮತದಾರರಂತೆಯೇ ಹಲವು ವಿಚಾರಗಳಲ್ಲಿ ನಡೆದುಕೊಂಡಿರುವುದನ್ನು ನಾವು ಗಮನಿಸಬೇಕು.

ಸ್ಪಷ್ಟ ಚಿಂತನೆ ಹೊಂದಿರುವವರು ಮತ್ತು ಪಕ್ಷ ಕಟ್ಟಲು ಶ್ರಮ ಹಾಕುವ ಪರಿಶ್ರಮಿ ನಾಯಕರಿಗೆ ತಮಿಳುನಾಡಿನ ಜನರು ಈ ಹಿಂದೆ ಗೆಲುವಿನ ರುಚಿ ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಚಿಸಿದರೆ ತಮಿಳುನಾಡು ರಾಜಕೀಯದಲ್ಲಿ ಛಾಪು ಮೂಡಿಸಲು ವಿಜಯ್‌ಗೆ ಪರದೆಯ ಮೇಲಿನ ಅಭಿನಯ ತಂದುಕೊಟ್ಟಿರುವ ಆಕರ್ಷಣೆಯ ಜೊತೆಗೆ ನಿಜ ಜೀವನದಲ್ಲಿ ಜನರನ್ನು ಹೇಗೆ ಕಾಣುತ್ತಾರೆ? ಜನರ ಬಗ್ಗೆ ಯಾವ ಆಲೋಚನೆ ಹೊಂದಿದ್ದಾರೆ? ರಾಜಕೀಯದ ಬಗ್ಗೆ ಎಂಥ ಚಿಂತನೆ ಹೊಂದಿದ್ದಾರೆ ಎನ್ನುವ ಅಂಶಗಳು ಮುಖ್ಯವಾಗಬೇಕು. ಆಗ ಮಾತ್ರ ತಮಿಳುನಾಡು ರಾಜಕಾರಣದಲ್ಲಿ ಹೊಸ ನಾಯಕನ ಉಗಮ ಎನ್ನುವ ಮಾತಿಗೆ ಅರ್ಥ ಬರುತ್ತದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ