logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Shiv Sena Balasaheb: ಬಂಡಾಯ ಶಾಸಕರ ಬಣಕ್ಕೆ 'ಶಿವಸೇನಾ ಬಾಳಾಸಾಹೇಬ್' ಎಂದು ಹೆಸರಿಟ್ಟ ಶಿಂಧೆ

Shiv Sena Balasaheb: ಬಂಡಾಯ ಶಾಸಕರ ಬಣಕ್ಕೆ 'ಶಿವಸೇನಾ ಬಾಳಾಸಾಹೇಬ್' ಎಂದು ಹೆಸರಿಟ್ಟ ಶಿಂಧೆ

Meghana B HT Kannada

Jun 25, 2022 03:02 PM IST

google News

ಬಂಡಾಯ ಶಾಸಕರ ಬಣ

    • ನಮ್ಮ ಗುಂಪನ್ನು ‘ಶಿವಸೇನಾ ಬಾಳಾಸಾಹೇಬ್’ ಎಂದು ಕರೆಯಲಾಗುವುದು. ನಾವು ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳುವುದಿಲ್ಲ ಎಂದು ಶಿವಸೇನೆ ಬಂಡಾಯ ಶಾಸಕ ದೀಪಕ್ ಕೇಸರ್ಕರ್ ಹೇಳಿದ್ದಾರೆ.
ಬಂಡಾಯ ಶಾಸಕರ ಬಣ
ಬಂಡಾಯ ಶಾಸಕರ ಬಣ

ಮುಂಬೈ: ಇತ್ತ ಬಂಡಾಯ ಶಾಸಕರ ಅನರ್ಹತೆಯನ್ನು ಖಚಿತಪಡಿಸಿಕೊಳ್ಳಲು ಶಿವಸೇನೆ ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದು, ಅತ್ತ ತಮ್ಮ ನೇತೃತ್ವದ ಬಂಡಾಯ ಶಾಸಕರ ಬಣಕ್ಕೆ 'ಶಿವಸೇನಾ ಬಾಳಾಸಾಹೇಬ್' ಎಂದು ಏಕನಾಥ್ ಶಿಂಧೆ ಹೆಸರಿಟ್ಟಿದ್ದಾರೆ.

ನಮ್ಮ ಗುಂಪನ್ನು ‘ಶಿವಸೇನಾ ಬಾಳಾಸಾಹೇಬ್’ ಎಂದು ಕರೆಯಲಾಗುವುದು. ನಾವು ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳುವುದಿಲ್ಲ ಎಂದು ಶಿವಸೇನೆ ಬಂಡಾಯ ಶಾಸಕ ದೀಪಕ್ ಕೇಸರ್ಕರ್ ಹೇಳಿದ್ದಾರೆ. ಈ ಹಿಂದೆ ಕೂಡ ಏಕನಾಥ್​ ಶಿಂಧೆ, ನಾವು ಬಾಳಾಸಾಹೇಬ್ ಠಾಕ್ರೆಯವರ ಶಿವಸೇನೆಯನ್ನು ಬಿಟ್ಟಿಲ್ಲ ಮತ್ತು ಬಿಡುವುದೂ ಇಲ್ಲ. ನಾವು ಅವರ ಹಿಂದುತ್ವವನ್ನು ಅನುಸರಿಸುತ್ತಿದ್ದೇವೆ ಮತ್ತು ಅದನ್ನು ಮುಂದೆ ಕೊಂಡೊಯ್ಯುತ್ತೇವೆ ಎಂದು ತಿಳಿಸಿದ್ದರು.

'ಶಿವಸೇನಾ ಬಾಳಾಸಾಹೇಬ್ ಹೊಸ' ಗುಂಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್, ಸ್ಪೀಕರ್‌ನಿಂದ ಕಾನೂನು ಅನುಮತಿ ಪಡೆಯುವವರೆಗೆ, ಅಂತಹ ಗುಂಪುಗಳಿಗೆ ಅಧಿಕಾರ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಕಾರ್ಯಕಾರಿ ಸಭೆ ನಡೆಯುತ್ತಿರುವ ನಡುವೆಯೇ ಏಕನಾಥ್ ಶಿಂಧೆ ಗುಂಪಿನ ಹೊಸ ಹೆಸರು ಹೊರಬಿದ್ದಿದೆ. 38 ಬಂಡಾಯ ಶಾಸಕರು ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿದ್ದು, ಅವರನ್ನು ಬಗ್ಗುಬಡಿಯಲು ಮಹಾ ವಿಕಾಸ್ ಅಘಾಡಿ ಸರ್ಕಾರ ಕೆಚ್ಚೆದೆಯ ಹೋರಾಟವನ್ನು ಮುಂದುವರೆಸಿದೆ.

ಬಂಡಾಯ ಶಾಸಕರ ಬಣವು ಹಂಗಾಮಿ ಸ್ಪೀಕರ್ ನರಹರಿ ಜಿರ್ವಾಲ್ ಅವರಿಗೆ ಪತ್ರ ಬರೆದಿದ್ದು, ಏಕನಾಥ್ ಶಿಂಧೆ ಅವರು ವಿಧಾನಸಭೆಯಲ್ಲಿ ಚುನಾಯಿತ ನಾಯಕರಾಗಲಿದ್ದಾರೆ ಎಂದು ಹೇಳಿದ್ದಾರೆ. ಅವರನ್ನು ಬೆಂಬಲಿಸುವ ಇಬ್ಬರು ಸ್ವತಂತ್ರ ಶಾಸಕರು 16 ಬಂಡಾಯ ಶಾಸಕರನ್ನು ಅನರ್ಹಗೊಳಿಸುವ ಶಿವಸೇನೆಯ ಪ್ರಸ್ತಾಪವನ್ನು ಸ್ವೀಕರಿಸಿದ ಜಿರ್ವಾಲ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ನಿನ್ನೆ ಬಂಡಾಯ ಎದ್ದವರ ವಿರುದ್ಧ ಕಿಡಿಕಾರಿದ್ದರು. ಪಕ್ಷಾಂತರಿಗಳನ್ನು 'ಬೆನ್ನಿಗೆ ಚೂರಿ ಹಾಕುವವರು' ಎಂದು ಜರಿದಿದ್ದರು. ಇದೀಗ ಶಿವಸೇನೆಯು ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯನ್ನು ದಾದರ್‌ನಲ್ಲಿರುವ ಶಿವಸೇನಾ ಭವನದಲ್ಲಿ ಕರೆದಿದೆ. ಏಕನಾಥ್ ಶಿಂಧೆ ಸೇರಿದಂತೆ ಎಲ್ಲಾ ಬಂಡಾಯ ಶಾಸಕರ ಅನರ್ಹತೆಯನ್ನು ಖಚಿತಪಡಿಸಿಕೊಳ್ಳಲು ಶಿವಸೇನೆ ಹರಸಾಹಸ ನಡೆಸುತ್ತಿದೆ.

ಇದಕ್ಕೂ ಮುನ್ನ ಅಂದರೆ ಜೂನ್​ 22 ರಂದು ಫೇಸ್​ಬುಕ್​ ಲೈವ್​ ಬಂದಿದ್ದ ಉದ್ಧವ್ ಠಾಕ್ರೆ, ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧವಿರುವುದಾಗಿ ಹೇಳಿದ್ದರು. ನಾನು ರಾಜೀನಾಮೆ ಪತ್ರವನ್ನು ಸಿದ್ಧವಾಗಿ ಇಟ್ಟುಕೊಂಡಿದ್ದೇನೆ. ಆದರೆ ಬಂಡಾಯ ಶಾಸಕರು ನನ್ನನ್ನು ಭೇಟಿ ಮಾಡಲಿ. ನನಗೆ ಮುಖಕೊಟ್ಟು ಮಾತನಾಡಲಿ. ನನ್ನ ಮೇಲೆ ವಿಶ್ವಾಸವಿಲ್ಲ ಎಂದು ಹೇಳಲಿ. ನಾನು ಸಿಎಂ ಸ್ಥಾನ ತ್ಯಜಿಸಿದ ಬಳಿಕ ಶಿವಸೇನೆಯಿಂದಲೇ ಯಾರಾದರೂ ಒಬ್ಬರು ಅಧಿಕಾರ ವಹಿಸಿಕೊಳ್ಳಬೇಕೆಂದು ಬಯಸುವುದಾಗಿ ತಿಳಿಸಿದ್ದರು.

ನನ್ನ ವಿರುದ್ಧ ಎಷ್ಟು ಮಂದಿ ಇದ್ದಾರೆ ಎಂಬುದು ನನಗೆ ಬೇಕು. ಯಾರಾದರೂ ಒಬ್ಬ ಶಾಸಕ ನನ್ನ ವಿರುದ್ಧ ಇದ್ದರೂ ನಾನು ನನ್ನ ಸಿಎಂ ಹುದ್ದೆಯಿಂದ ಕೆಳಗಿಳಿಯುತ್ತೇನೆ. ಒಬ್ಬನೇ ಒಬ್ಬ ಎಂಎಲ್‌ಎ ನನ್ನ ವಿರುದ್ಧ ಇದ್ದರೆ ಅದು ನನಗೆ ನಾಚಿಕೆಗೇಡಿನ ಸಂಗತಿ. ನನ್ನ ಸ್ವಂತ ಜನಕ್ಕೆ ನಾನು ಮುಖ್ಯಮಂತ್ರಿಯಾಗಿರುವುದು ಇಷ್ಟವಿಲ್ಲವಾದರೆ ನಾನು ತಕ್ಷಣವೇ ರಾಜೀನಾಮೆ ನೀಡುತ್ತೇನೆ. ನಾನು ಕುರ್ಚಿಗಾಗಿ ಹೋರಾಡುವವನಲ್ಲ. ಆದರೆ ಶಿವಸೇನೆಯನ್ನು ಮುನ್ನಡೆಸಲು ನಾನು ಅಸಮರ್ಥನೆಂದು ಭಾವಿಸುವವರು ದಯವಿಟ್ಟು ನನ್ನ ಬಳಿಗೆ ಬರಬೇಕು ಎಂದು ಉದ್ಧವ್​ ಠಾಕ್ರೆ ಹೇಳಿದ್ದರು.

ಇನ್ನು ಇತ್ತ ನಿನ್ನೆ ಮುಂಬೈನಲ್ಲಿ ಬಂಡಾಯ ಶಾಸಕರಾದ ಮಂಗೇಶ್ ಕುಡಾಲ್ಕರ್ ಮತ್ತು ದಿಲೀಪ್ ಲಾಂಡೆ ಅವರ ಕಚೇರಿಗಳನ್ನು ಶಿವಸೈನಿಕರು (ಶಿವಸೇನೆ ಕಾರ್ಯಕರ್ತರು) ಧ್ವಂಸಗೊಳಿಸಿದ್ದರು. ಇಂದು ಪುಣೆಯಲ್ಲಿ ಬಂಡಾಯ ಶಾಸಕ ತಾನಾಜಿ ಸಾವಂತ್ ಅವರ ಕಚೇರಿಯನ್ನು ಶಿವಸೈನಿಕರು ಧ್ವಂಸಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಮುಂಬೈ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ ಮತ್ತು ನಗರದ ಎಲ್ಲಾ ರಾಜಕೀಯ ಕಚೇರಿಗಳಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚಿಸಿದ್ದಾರೆ.

ಏಕನಾಥ್ ಶಿಂಧೆ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರಿಗೆ ಬರೆದ ಪತ್ರದಲ್ಲಿ ಬಂಡಾಯ ಶಾಸಕರ ಕುಟುಂಬ ಸದಸ್ಯರಿಗ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಇದು ಸೇಡಿನ ಕ್ರಮವಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಆಡಳಿತಾರೂಢ ಮಹಾ ಅಘಾಡಿ ಸರ್ಕಾರ ಈ ಆರೋಪವನ್ನು ನಿರಾಕರಿಸಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ