Assembly Elections: ಮೂರು ರಾಜ್ಯಗಳಲ್ಲಿ ವರ್ಷದ ಮೊದಲ ವಿಧಾನಸಭೆ ಚುನಾವಣೆಗಳಿಗೆ ವೇದಿಕೆ ಸಜ್ಜು: ಈಶಾನ್ಯದತ್ತ ದೇಶದ ಚಿತ್ತ
Jan 19, 2023 02:52 PM IST
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್
- 2023ರ ಹೊಸ ವರ್ಷದ ಆರಂಭದಲ್ಲೇ ಚುನಾವಣಾ ಜ್ವರ ಏರತೊಡಗಿದೆ. ದೇಶದ ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಹಾಗೂ ನಾಗಲ್ಯಾಂಡ್ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ತ್ರಿಪುರಾದಲ್ಲಿ ಫೆಬ್ರವರಿ 16ರಂದು ಮತದಾನ ನಡೆಯಲಿದ್ದು, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಫೆಬ್ರವರಿ 27ರಂದು ಮತದಾನ ನಡೆಯಲಿದೆ. ಮಾರ್ಚ್ 2ರಂದು ಮೂರೂ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ನವದೆಹಲಿ: 2023ರ ಹೊಸ ವರ್ಷದ ಆರಂಭದಲ್ಲೇ ಚುನಾವಣಾ ಜ್ವರ ಏರತೊಡಗಿದೆ. ದೇಶದ ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಹಾಗೂ ನಾಗಲ್ಯಾಂಡ್ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ.
ಹೌದು, ತ್ರಿಪುರಾ, ಮೇಘಾಲಯ ಹಾಗೂ ನಾಗಾಲ್ಯಾಂಡ್ ರಾಜ್ಯಗಳ ವಿಧಾನಸಭೆ ಚುನಾವಣೆಯ ದಿನಾಂಕವನ್ನು, ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ತ್ರಿಪುರಾದಲ್ಲಿ ಫೆಬ್ರವರಿ 16ರಂದು ಮತದಾನ ನಡೆಯಲಿದ್ದು, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಫೆಬ್ರವರಿ 27ರಂದು ಮತದಾನ ನಡೆಯಲಿದೆ. ಮಾರ್ಚ್ 2ರಂದು ಮೂರೂ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಈ ಮೂರೂ ರಾಜ್ಯಗಳು ತಲಾ 60 ಸದಸ್ಯರ ಬಲವನ್ನು ಹೊಂದಿದ್ದು, ಒಂದೇ ಹಂತದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಮೂರು ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಹೈಸ್ಕೂಲ್ ಪರೀಕ್ಷೆಗಳು ಮತ್ತು ಭದ್ರತಾ ಪಡೆಗಳ ಚಲನವಲನವನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಲಾಗಿದೆ ಎಂದೂ ಆಯೋಗ ಮಾಹಿತಿ ನೀಡಿದೆ.
ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾದಲ್ಲಿ ಒಟ್ಟು 62.8 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಈ ಪೈಕಿ 31.47 ಲಕ್ಷ ಮಹಿಳಾ ಮತದಾರರು, 80 ವರ್ಷ ಮೇಲ್ಪಟ್ಟ 97,000 ಮತದಾರರು ಸೇರಿದ್ದಾರೆ. ಅಲ್ಲದೇ ಮೂರೂ ರಾಜ್ಯಗಳಿಂದ ಒಟ್ಟು 1.76 ಲಕ್ಷಕ್ಕೂ ಮತದಾರರು ಇದೇ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತ್ರಿಪುರಾ ರಾಜ್ಯವನ್ನು ಗೆದ್ದುಕೊಂಡಿತ್ತು. ಹೀಗಾಗಿ ಈ ರಾಜ್ಯದ ಮೇಲೆ ಬಿಜೆಪಿ ವಿಶೇಷ ಗಮನ ಹರಿಸಲಿದೆ. ಅದರಂತೆ ಮೇಘಾಲಯದಲ್ಲಿ ಬಿಜೆಪಿಯು ಸರ್ಕಾರದ ಭಾಗವಾಗಿದೆ, ಅಲ್ಲಿ ಈಶಾನ್ಯದಿಂದ ರಾಷ್ಟ್ರೀಯ ಸ್ಥಾನಮಾನವನ್ನು ಹೊಂದಿರುವ ಏಕೈಕ ರಾಜಕೀಯ ಪಕ್ಷವಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆ.
ನಾಗಾಲ್ಯಾಂಡ್‌ನಲ್ಲಿ, ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ ಅಧಿಕಾರದಲ್ಲಿದ್ದು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಅಂದರೆ ಚುನಾವಣೆ ನಡೆಯಲಿರುವ ಮೂರೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಮತ್ತು ಸರ್ಕಾರ ನಡೆಸುತ್ತಿರುವ ಮೈತ್ರಿಕೂಟದ ಭಾಗವಾಗಿರುವುದು ವಿಶೇಷ.
ಆದಾಗ್ಯೂ ಈ ಬಾರಿಯ ವಿಧಾನಸಭೆ ಚುನಾವಣೆಗಳು ಬಿಜೆಪಿಗೆ ಸವಾಲಾಗಿವೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದಾರೆ. ಪ್ರಮುಖವಾಗಿ ತ್ರಿಪಿರಾದಲ್ಲಿ ಬಿಜೆಪಿ ಗೆಲುವಿಗಾಗಿ ಪ್ರಯಾಸಬೇಕಿದೆ ಎಂದು ಹೇಳಲಾಗುತ್ತಿದೆ. ಆಂತರಿಕ ಸಂಘರ್ಷ ಹಾಗೂ ಇತರ ಕಾರಣಗಳು ಬಿಜೆಪಿಗೆ ತ್ರಿಪುರಾದಲ್ಲಿ ಸವಾಲಾಗಿ ಪರಿಣಮಿಸಿವೆ ಎನ್ನಲಾಗಿದೆ.
ಇದೇ ಕಾರಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜನ್ ವಿಶ್ವಾಸ್ ಯಾತ್ರೆಯನ್ನು ತ್ರಿಪುರಾದಲ್ಲಿ ಹಮ್ಮಿಕೊಂಡಿದ್ದರು. ಆದರೂ ಪಕ್ಷ ಸಂಘಟನೆ ಅಷ್ಟು ಸುಲಭದ ಕೆಲಸವಲ್ಲ ಎಂಬುದು ಬಿಜೆಪಿಗೆ ಮನವರಿಕೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿದೆ. ಅಲ್ಲದೇ ಇಲ್ಲಿನ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನೂ ಹದ್ದುಬಸ್ತಿನಲ್ಲಿ ಇಡುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಪ್ರತ್ಯೇಕತಾವಾದಿ ಸಂಘಟನೆಗಳೊಂದಿಗೆ ಕೇಂದ್ರ ಸರ್ಕಾರ ಮಾಡಿಕೊಂಡ ಶಾಂತಿ ಒಪ್ಪಂದ ಉತ್ತಮ ಫಲಿತಾಂಶ ನೀಡಿವೆ.
ನಿನ್ನೆ(ಜ.17-ಮಂಗಳವಾರ)ಯಷ್ಟೇ ಮುಕ್ತಾಯಗೊಂಡ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ, ಈ ವರ್ಷ ನಡೆಯಲಿರುವ ೯ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಜಯಿಸುವ ಕುರಿತು ಪಕ್ಷದ ವರಿಷ್ಠರು ಚರ್ಚೆ ನಡೆಸಿದ್ದಾರೆ.
ಒಟ್ಟಿನಲ್ಲಿ ಹೊಸ ವರ್ಷದ ಮೊದಲ ವಿಧಾನಸಭೆ ಚುನಾವಣೆಗಳು ತ್ರಿಪುರಾ, ಮೇಘಾಲಯ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ನಡೆಯಲಿದ್ದು, ದೇಶದ ಚಿತ್ತ ಈಗ ಈಶಾನ್ಯ ರಾಜ್ಯಗಳತ್ತ ನೆಟ್ಟಿದೆ ಎಂದು ಹೇಳಬಹುದು.
ವಿಭಾಗ