logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Donkey Route: ಅಪಾಯಕಾರಿ ಅಮೆರಿಕನ್ ಡ್ರೀಮ್‌ಗೆ ಡಾಂಕಿ ರೂಟ್‌, ಡಾಂಕಿ ಫ್ಲೈಟ್‌ ಹಿಡಿದ 96,917 ಭಾರತೀಯರು ಅಮೆರಿಕದಲ್ಲಿ ಸೆರೆ

Donkey Route: ಅಪಾಯಕಾರಿ ಅಮೆರಿಕನ್ ಡ್ರೀಮ್‌ಗೆ ಡಾಂಕಿ ರೂಟ್‌, ಡಾಂಕಿ ಫ್ಲೈಟ್‌ ಹಿಡಿದ 96,917 ಭಾರತೀಯರು ಅಮೆರಿಕದಲ್ಲಿ ಸೆರೆ

Umesh Kumar S HT Kannada

Dec 28, 2023 12:19 PM IST

google News

ವಿಮಾನ (ಸಾಂಕೇತಿಕ ಚಿತ್ರ)

  • ಶಾರುಖ್ ಖಾನ್ ಅಭಿಯನದ ‘ಡಂಕಿ’ ಸಿನಿಮಾ ತೆರೆಕಂಡ ಸಮಯದಲ್ಲೇ ಡಾಂಕಿ ರೂಟ್, ಡಾಂಕಿ ಫ್ಲೈಟ್‌ ಮೂಲಕ ಫ್ರಾನ್ಸ್‌ಗೆ ತಲುಪಿದ 300 ಭಾರತೀಯರನ್ನು ಅಧಿಕಾರಿಗಳು ತಡೆದಿದ್ದಾರೆ. ಇದು ಆಕಸ್ಮಿಕ. ಅಪಾಯಕಾರಿ ಅಮೆರಿಕದ ಕನಸು ನನಸು ಮಾಡುವ ಡಾಂಕಿ ರೂಟ್, ಡಾಂಕಿ ಫ್ಲೈಟ್ ಕುರಿತ ಸ್ಪಷ್ಟ ವಿವರಣೆ ಹೀಗಿದೆ.

ವಿಮಾನ (ಸಾಂಕೇತಿಕ ಚಿತ್ರ)
ವಿಮಾನ (ಸಾಂಕೇತಿಕ ಚಿತ್ರ) (Pixabay)

ಬಾಲಿವುಡ್‌ನಲ್ಲಿ ಶಾರುಖ್ ಖಾನ್‌ ಅಭಿನಯದ ‘ಡಂಕಿ’ ಸಿನಿಮಾ ಡಿಸೆಂಬರ್ 21 ರಂದು ತೆರೆಕಂಡು ಸದ್ದುಮಾಡುತ್ತಿದೆ. ಈ ಸಿನಿಮಾ ಅಕ್ರಮ ವಲಸೆ ಕುರಿತಾದ ಕಥಾಹಂದರ ಹೊಂದಿದ್ದು, ಹಾಸ್ಯ ಲೇಪನ ಉಳ್ಳದ್ದಾಗಿದೆ. ಅಮೆರಿಕ, ಬ್ರಿಟನ್‌, ಕೆನಡಾದಂತಹ ದೇಶಗಳಿಗೆ ಉದ್ಯೋಗಕ್ಕೆ ಹೋಗಲು ಬಳಸುವ ಡಾಂಕಿ ರೂಟ್‌ (Donkey Route) ವಲಸೆ ವಿಧಾನ ಸಂಕಷ್ಟಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

ಆಕಸ್ಮಿಕವೆಂಬಂತೆ, ನಿಕರಾಗುವಾ(Nicaragua) ಗೆ ಹೊರಟಿದ್ದ 300ಕ್ಕೂ ಹೆಚ್ಚು ಭಾರತೀಯರನ್ನು ಹೊತ್ತ ವಿಮಾನವನ್ನು "ಮಾನವ ಕಳ್ಳಸಾಗಣೆ" (human trafficking) ಶಂಕೆಯ ಕಾರಣ ಫ್ರಾನ್ಸ್‌ನಲ್ಲಿ ತಡೆಹಿಡಿಯಲಾಗಿತ್ತು. ಫ್ರಾನ್ಸ್‌ನಲ್ಲಿ ನಾಲ್ಕು ದಿನ ವಿಚಾರಣೆ ಎದುರಿಸಿದ ವಿಮಾನದಲ್ಲಿದ್ದವರು, ಮಂಗಳವಾರ ಭಾರತಕ್ಕೆ ಮರಳಿದ್ದಾರೆ.

ಭಾರತದಿಂದ ಹೊರಟ ವಿಮಾನವು ಅಕ್ರಮ ವಲಸಿಗರನ್ನು ಹೊತ್ತೊಯ್ಯುತ್ತಿದೆ ಎಂದು ಫ್ರೆಂಚ್ ಅಧಿಕಾರಿಗಳು ಅನಾಮಧೇಯ ಸುಳಿವು ಪಡೆದ ಹಿನ್ನೆಲೆಯಲ್ಲಿ ಚಾಲೋನ್ಸ್-ವಾಟ್ರಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತಡೆಯಲಾಗಿತ್ತು. ಈ ಅಕ್ರಮ ವಲಸಿಗರಿಗೆ ನಿಕರ್‌ಗುವಾ ನಂಟಿನ ಆರೋಪ ಜಗತ್ತಿನ ಹುಬ್ಬೇರುವಂತೆ ಮಾಡಿದೆ. ನಿಕರ್‌ಗುವಾ ಎಂಬುದು ಸೆಂಟ್ರಲ್ ಅಮೆರಿಕನ್ ರಾಷ್ಟ್ರವಾಗಿದ್ದು, ಅಲ್ಲಿ ಅಕ್ರಮ ವಲಸಿಗರಿಗೆ ಆಶ್ರಯ ನೀಡಲಾಗುತ್ತಿದೆ ಎಂಬ ವಿಚಾರ ಗಮನಸೆಳೆದಿದೆ.

ಇಂಗ್ಲಿಷ್ ಭಾಷೆಯಲ್ಲಿ ಡಾಂಕಿ ರೂಟ್‌, ಡಾಂಕಿ ಫ್ಲೈಟ್‌ ಎಂಬಿತ್ಯಾದಿ ಪದಗಳನ್ನು ಈ ಅಕ್ರಮ ವಲಸೆಗೆ ಬಳಸಲಾಗುತ್ತದೆ. ಈ ಪದಗಳು ಹುಟ್ಟಿಕೊಂಡಿರುವುದು ಹೇಗೆ ಎಂದು ಗಮನಿಸುವುದಾದರೆ, ಪಂಜಾಬಿ ಪದ ‘ಡಂಕಿ’ ಗಮನಸೆಳೆಯುತ್ತದೆ. ಈ ಪದದ ಅರ್ಥ ಪ್ರಾದೇಶಿಕವಾಗಿ, ಸನ್ನಿವೇಶಕ್ಕೆ ತಕ್ಕಂತೆ ಬಳಕೆಯ ಸಂದರ್ಭದಲ್ಲಿ ಬದಲಾಗುತ್ತದೆ. ವಿಶೇಷವಾಗಿ ಈ ಪದಗಳನ್ನು ಅಕ್ರಮವಾಗಿ ದೇಶದ ಗಡಿ ದಾಟಿ ಇನ್ನೊಂದು ದೇಶಕ್ಕೆ ಹೋಗುವುದಕ್ಕೆ ಬಳಸಲಾಗುತ್ತದೆ. ಆದರೆ ಈ ಪ್ರಯಾಣ ಹಲವು ದೇಶಗಳ ಮೂಲಕ ಸಾಗುತ್ತದೆ ಎಂಬುದು ವಿಶೇಷ.

ಉದಾಹರಣೆಗೆ ಹೇಳುವುದಾದರೆ, ಯುರೋಪಿಯನ್ ಯೂನಿಯನ್‌ನ ಷೆಂಗೆನ್ ಪ್ರದೇಶಕ್ಕೆ ಪ್ರವಾಸಿ ವೀಸಾವನ್ನು ಯಾರು ಬೇಕಾದರೂ ಪಡೆಯಬಹುದು. ಈ ವೀಸಾ ಹೊಂದಿದರೆ ಯುರೋಪ್‌ನ 26 ದೇಶಗಳಲ್ಲಿ ಮುಕ್ತವಾಗಿ ಸಂಚರಿಸಬಹುದು. ಅಲ್ಲಿಂದ ನಂತರ "ಏಜೆಂಟ್‌ಗಳ" ಸಹಾಯದೊಂದಿಗೆ ಯುಕೆಗೆ ಅಕ್ರಮವಾಗಿ ಪ್ರವೇಶಿಸಬಹುದು. ಇದನ್ನು ಬಳಸಿಕೊಂಡು ಸಾಗುವ ಪಯಣಕ್ಕೆ ಡಾಂಕಿ ರೂಟ್‌ ಪ್ರಯಾಣ ಎನ್ನುತ್ತಾರೆ. ವಿಮಾನದಲ್ಲಿ ಅಂತಹ ಪ್ರಯಾಣಿಕರೇ ತುಂಬಿಕೊಂಡಿದ್ದರೆ ಅಂತಹ ವಿಮಾನವನ್ನು ಡಾಂಕಿ ಫ್ಲೈಟ್ ಎಂದೂ ಕರೆಯುವುದುಂಟು.

ಈ ಏಜೆಂಟ್‌ಗಳು ಸಾಮಾನ್ಯವಾಗಿ ನಕಲಿ ದಾಖಲಾತಿಯಿಂದ ಹಿಡಿದು ಶಿಪ್ಪಿಂಗ್ ಕಂಟೈನರ್‌ಗಳ ಮೂಲಕ ಕಳ್ಳಸಾಗಣೆಯವರೆಗೆ ಸೇವೆಗಳಿಗೆ ಭಾರಿ ಶುಲ್ಕವನ್ನು ವಿಧಿಸುತ್ತಾರೆ. ಪ್ರತಿ ವರ್ಷ, ಸಾವಿರಾರು ಭಾರತೀಯರು ತಮ್ಮ ಪ್ರಾಣವನ್ನೇ ಪಣವಾಗಿಟ್ಟುಕೊಂಡು ಇಂತಹ ಅಪಾಯದ ವಿಧಾನಗಳ ಮೂಲಕ ಯುನೈಟೆಡ್ ಸ್ಟೇಟ್ಸ್, ಕೆನಡಾ ಅಥವಾ ಯುರೋಪಿಯನ್ ದೇಶಗಳನ್ನು ಪ್ರವೇಶಿಸಲು ಪ್ರಯತ್ನಿಸುತ್ತಾರೆ.

ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಯುಸಿಬಿಪಿ) ಅಂಕಿಅಂಶಗಳ ಪ್ರಕಾರ 2022ರ ಅಕ್ಟೋಬರ್ ಮತ್ತು 2023 ರ ಸೆಪ್ಟೆಂಬರ್ ನಡುವೆ ದಾಖಲೆಯ 96,917 ಭಾರತೀಯರನ್ನು ಅಕ್ರಮವಾಗಿ ಅಮೆರಿಕ ಪ್ರವೇಶಿಸುವಾಗ ಬಂಧಿಸಲಾಗಿದೆ. ಈ ಪೈಕಿ ಕೆನಡಾ ಗಡಿಯಲ್ಲಿ 30,010 ಮತ್ತು ಮೆಕ್ಸಿಕೊ ಗಡಿಯಲ್ಲಿ 41,770 ಭಾರತೀಯರು ಸಿಕ್ಕಿಬಿದ್ದಿದ್ದಾರೆ.

ಇಷ್ಟೊಂದು ಅಪಾಯ ಎದುರಿಸಿ ಡಾಂಕಿ ರೂಟ್‌ ಮೂಲಕ ಹೋಗುವ ಭಾರತೀಯರು, ಈಕ್ವಡಾರ್‌, ಬೊಲಿವಿಯಾ ಅಥವಾ ಗುಯಾನಾ ಮುಂತಾದ ಲ್ಯಾಟಿನ್ ಅಮೆರಿಕ ದೇಶಗಳಿಗೆ ಮೊದಲು ಪ್ರವೇಶಿಸುತ್ತಾರೆ. ಅಲ್ಲಿ ಅವರಿಗೆ ತಲುಪಿದ ಕೂಡಲೇ ವೀಸಾ ಅಥವಾ ಟೂರಿಸ್ಟ್ ವೀಸಾ ಸಿಗುತ್ತದೆ. ಕೆಲವು ಏಜೆಂಟ್‌ಗಳು ದುಬೈನಿಂದಲೇ ಮೆಕ್ಸಿಕೋಗೆ ನೇರ ವೀಸಾ ಒದಗಿಸಿಕೊಡುತ್ತಾರೆ.

ಆದಾಗ್ಯೂ, ಮೆಕ್ಸಿಕೋದಲ್ಲಿ ನೇರವಾಗಿ ಹೋಗಿ ಇಳಿಯವುದು ತುಂಬಾ ಅಪಾಯಕಾರಿ. ಅಲ್ಲಿ ಅಧಿಕಾರಿಗಳು ಬಹಳ ಸುಲಭವಾಗಿ ವಲಸಿಗರನ್ನು ಗುರುತಿಸಿ ಬಂಧಿಸುತ್ತಾರೆ. ಹೀಗಾಗಿ ಲ್ಯಾಟಿನ್ ಅಮೆರಿಕದಿಂದ ಏಜೆಂಟ್‌ಗಳು ತಮ್ಮ ಕ್ಲೈಂಟ್‌ಗಳನ್ನು ಮೊದಲು ಕೊಲಂಬಿಯಾಕ್ಕೆ ಕರೆದೊಯ್ಯುತ್ತಾರೆ. ಇದು ಪನಾಮಾಕ್ಕಿಂತ ಅಮೆರಿಕದ ಗಡಿಗೆ ಹೆಚ್ಚು ಸಮೀಪದಲ್ಲಿದೆ.

ಕೊಲಂಬಿಯಾದಿಂದ ಪನಾಮಾಕ್ಕೆ ಹೋಗಲು ಡೇರಿಯನ್ ಗ್ಯಾಪ್ ಎಂಬ ಅತ್ಯಂತ ಅಪಾಯಕಾರಿ ಅರಣ್ಯದ ಮೂಲಕ ಅಕ್ರಮ ವಲಸಿಗರು ಸಾಗಬೇಕು. ಈ ದಟ್ಟಾರಣ್ಯದಲ್ಲಿ ರಸ್ತೆ, ಸೇತುವೆ ಏನೇನೂ ಇಲ್ಲ. ದಟ್ಟಡವಿಯಲ್ಲಿ ಚಿರತೆ, ಅನಕೊಂಡ ಮುಂತಾದ ವನ್ಯಜೀವಿಗಳಿಗೆ ಬಲಿಯಾಗದೇ, ದರೋಡೆಕೋರರು, ಕ್ರಿಮಿನಲ್ ಗ್ಯಾಂಗ್‌ಗಳ ಕಣ್ತಪ್ಪಿಸಿ ಪನಾಮಾ ತಲುಪಿದರೆ ಅದುವೇ ದೊಡ್ಡ ಸಾಹಸ. ಇದು 8 -10 ದಿನಗಳ ಪ್ರಯಾಣ.

ಈ ಪ್ರಯಾಣದ ಬಳಿಕ ಅಕ್ರಮ ವಲಸಿಗರು ಗ್ವಾಟೆಮಾಲಾ ಜತೆಗೆ ದಕ್ಷಿಣದ ಗಡಿ ಹಂಚಿಕೊಂಡಿರುವ ಮೆಕ್ಸಿಕೋ ಭಾಗದಲ್ಲಿ ಸಂಚರಿಸಬೇಕು. ಗ್ವಾಟೆಮಾಲದ ಉತ್ತರದ ಗಡಿ ಹೋಂಡುರಸ್‌ ಸೇರುವ ಮೊದಲು ಎಲ್‌ ಸಾಲ್ವಡೋರ್‌ ಮೂಲಕ ಸಾಗಬೇಕು. ಈ ರಸ್ತೆ ಸಾಗಿ ಹೋಂಡುರಸ್‌ ತಲುಪಿದರೆ ಅಲ್ಲಿಂದಾಚೆಗೆ ನಿಕರ್‌ಗುವಾ. ಈ ಪ್ರಯಾಣವು ಸ್ಥಳೀಯ ಹವಾಮಾನ, ರಾಜಕೀಯ ಸನ್ನಿವೇಶ ಹೀಗೆ ಹಲವು ಅಂಶಗಳ ಪರಿಣಾಮಕ್ಕೆ ಒಳಗಾಗುವಂಥದ್ದು. ಹೀಗಾಗಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುವಂಥದ್ದು.

ಹೀಗಾಗಿ ಡಾಂಕಿ ಫ್ಲೈಟ್‌ ವಿಧಾನ ಚಾಲ್ತಿಗೆ ಬಂದಿದೆ. ಭಾರತದಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿರುವುದಾಗಿ ಬಿಂಬಿಸಿ, ಮಾನವ ಕಳ್ಳಸಾಗಣೆ ನಡೆಸುತ್ತಾರೆ. ಸಾಮಾನ್ಯವಾಗಿ ಇಂತಹ ವಿಮಾನಗಳು ಏಕಮುಖ ಸಂಚಾರ ಮಾತ್ರ ಮಾಡುತ್ತವೆ. ಈ ರೀತಿ ಮಾಡುವಾಗ ಕಾನೂನು ಏಜೆನ್ಸಿಗಳ ಗಮನಕ್ಕೆ ಬಂದರೆ, ವಿಮಾನವನ್ನು ತಡೆಯಲಾಗುತ್ತದೆ.

ಫ್ರಾನ್ಸ್‌ನಲ್ಲಿ ಆಗಿವುದು ಇದೇ ವಿದ್ಯಮಾನ. ಹೈದರಾಬಾದ್‌ ಮೂಲದ ಶಶಿ ಕಿರಣ್ ರೆಡ್ಡಿ ಎಂಬಾತ ನಿಕರ್‌ಗುವಾಕ್ಕೆ ವಿಮಾನಗಳನ್ನು ಹೊಂದಿಸಿಕೊಡುವ ಕೆಲಸ ಮಾಡುತ್ತಾನೆ. ಪ್ಯಾರಿಸ್‌ನಿಂದ 150 ಕಿ.ಮೀ. ದೂರದ ಚಾಲೋನ್ಸ್-ವಾಟ್ರಿ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಲು ನಿಂತ ವಿಮಾನ ಅಧಿಕಾರಿಗಳ ಕಣ್ಣಿಗೆ ಬಿತ್ತು. ಈಗ ಈ ಕುರಿತ ವಿಚಾರಣೆ ಪ್ರಗತಿಯಲ್ಲಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ