logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bjp Strategy 2024: ವಿಪಕ್ಷ ಮಹಾಮೈತ್ರಿಯ ಸವಾಲು ಎದುರಿಸಲು ಸಜ್ಜಾಗಿದೆ ಬಿಜೆಪಿ; ಸೋಲನುಭವಿಸಿದ 160 ಸ್ಥಾನಗಳು ಟಾರ್ಗೆಟ್‌

BJP Strategy 2024: ವಿಪಕ್ಷ ಮಹಾಮೈತ್ರಿಯ ಸವಾಲು ಎದುರಿಸಲು ಸಜ್ಜಾಗಿದೆ ಬಿಜೆಪಿ; ಸೋಲನುಭವಿಸಿದ 160 ಸ್ಥಾನಗಳು ಟಾರ್ಗೆಟ್‌

Umesh Kumar S HT Kannada

Jun 26, 2023 08:00 AM IST

google News

ಬಿಜೆಪಿ ನಾಯಕರಾದ ಪ್ರಲ್ಹಾದ್‌ ಜೋಶಿ, ಅಮಿತ್‌ ಷಾ, ಜೆ ಪಿ ನಡ್ಡಾ (ಸಾಂದರ್ಭಿಕ ಚಿತ್ರ)

  • BJP Strategy 2024: ಲೋಕಸಭೆ ಚುನಾವಣೆ 2024 ಕ್ಕೆ ಎಲ್ಲ ಪಕ್ಷಗಳೂ ತಯಾರಿ ಆರಂಭಿಸಿವೆ. ಬಿಜೆಪಿಯನ್ನು ಎದುರಿಸಲು ಮಹಾಮೈತ್ರಿಯ ಅನಿವಾರ್ಯತೆ ಅರಿತು ವಿಪಕ್ಷಗಳು ಮುಂದಡಿ ಇಟ್ಟಿವೆ. ಇದೇ ವೇಳೆ, ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ 160 ಕ್ಷೇತ್ರಗಳನ್ನು ಬಿಜೆಪಿ ಗೆಲುವಿನ ಟಾರ್ಗೆಟ್‌ ಆಗಿ ಮಾಡಿದೆ. ಏನು ಈ ರಾಜಕೀಯ ತಂತ್ರಗಾರಿಕೆ? ಇಲ್ಲಿದೆ ವಿವರ.

ಬಿಜೆಪಿ ನಾಯಕರಾದ ಪ್ರಲ್ಹಾದ್‌ ಜೋಶಿ, ಅಮಿತ್‌ ಷಾ, ಜೆ ಪಿ ನಡ್ಡಾ (ಸಾಂದರ್ಭಿಕ ಚಿತ್ರ)
ಬಿಜೆಪಿ ನಾಯಕರಾದ ಪ್ರಲ್ಹಾದ್‌ ಜೋಶಿ, ಅಮಿತ್‌ ಷಾ, ಜೆ ಪಿ ನಡ್ಡಾ (ಸಾಂದರ್ಭಿಕ ಚಿತ್ರ) (PTI)

ಪ್ರತಿಪಕ್ಷಗಳ ಒಗ್ಗಟ್ಟಿನ ಕಸರತ್ತಿನ ನಡುವೆ ಬಿಜೆಪಿ (BJP) ಕೂಡ ತನ್ನ ಚುನಾವಣಾ ರಣತಂತ್ರವನ್ನು ಚುರುಕುಗೊಳಿಸುವಲ್ಲಿ ಹಿಂದೆ ಬಿದ್ದಿಲ್ಲ. ಕಳೆದ ಲೋಕಸಭಾ ಚುನಾವಣೆ (Lok Sabha Election) ಯಲ್ಲಿ ತಾನು ಸೋತ ಸುಮಾರು 160 ಸ್ಥಾನಗಳಲ್ಲಿ ಗೆಲ್ಲುವುದಕ್ಕಾಗಿ ಒಂದು ವರ್ಷದ ಹಿಂದೆಯೇ ಭರ್ಜರಿ ತಯಾರಿ ನಡೆಸಿತ್ತು. ಇದರಲ್ಲಿ ಬಿಜೆಪಿ ಕೂಡ ಹಲವೆಡೆ ಬದಲಾವಣೆ ಮತ್ತು ಹೊಸ ಸಮೀಕರಣಗಳನ್ನು ಅಳವಡಿಸಿಕೊಳ್ಳಲಿದೆ. ಹಳೆಯ ಒಡನಾಡಿಗಳ ನಿರ್ಗಮನ ಮತ್ತು ಹೊಸಬರ ಸೇರ್ಪಡೆಯಿಂದ ಅನೇಕ ಸ್ಥಾನಗಳ ಮೇಲೆ ಪರಿಣಾಮ ಬೀರಲಿವೆ. ಆದರೆ ಸಂಖ್ಯೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗುವ ಸಾಧ್ಯತೆ ಕಡಿಮೆ ಎಂಬುದು ಪಕ್ಷದ ನಂಬಿಕೆ.

ಸದ್ಯ ಲೋಕಸಭೆಯಲ್ಲಿ ಬಿಜೆಪಿ 301 ಸ್ಥಾನಗಳನ್ನು ಮತ್ತು ಎನ್‌ಡಿಎ ಒಟ್ಟು ಸದಸ್ಯ ಬಲ 329 ಇದೆ. ರಾಜ್ಯವಾರು ರಾಜಕೀಯ ಪರಿಸ್ಥಿತಿಯಲ್ಲಿ ಪ್ರತಿಪಕ್ಷಗಳ ಒಗ್ಗಟ್ಟು ಮತ್ತು ಸಂಭವನೀಯ ಚುನಾವಣಾ ತಂತ್ರಗಾರಿಕೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈಗಾಗಲೇ ತನ್ನ ತಯಾರಿಯನ್ನು ಆರಂಭಿಸಿದೆ. ಪ್ರತಿಪಕ್ಷಗಳ ಒಗ್ಗಟ್ಟಿನ ಈ ಅಭಿಯಾನ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಪಕ್ಷದ ಮೂಲಗಳು ಹೇಳುತ್ತವೆ ಎಂದು ಲೈವ್‌ ಹಿಂದುಸ್ತಾನ್‌ ವರದಿ ಮಾಡಿದೆ.

ಇದರಿಂದಾಗಿ ಕೆಲವು ರಾಜ್ಯಗಳಲ್ಲಿ ಸ್ಥಾನಗಳ ಸಂಖ್ಯೆ ಕಡಿಮೆಯಾಗಬಹುದು, ಇನ್ನು ಕೆಲವೆಡೆ ಹೆಚ್ಚಾಗಬಹುದು. ಅದೇನೇ ಇರಲಿ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಎದುರಿಸಬಲ್ಲ ಸಮರ್ಥ ನಾಯಕತ್ವದ ಮುಖವೇ ಪ್ರತಿಪಕ್ಷಗಳ ಮೈತ್ರಿಯಲ್ಲಿ ಇಲ್ಲ. ಅವರು ತಮ್ಮ ನಡುವೆಯೇ ಹಲವು ಭಿನ್ನಮತಗಳನ್ನು ಎದುರಿಸುತ್ತಿದ್ದಾರೆ. ವಿವಿಧ ರಾಜ್ಯಗಳಲ್ಲಿ ಪರಸ್ಪರ ವಿರೋಧಿಗಳಾಗಿದ್ದಾರೆ. ಹೀಗಿರುವಾಗ ಎಷ್ಟು ಸಮನ್ವಯತೆ ಇರುತ್ತದೆ ಎಂಬುದು ನಿರ್ಧಾರವಾಗಿಲ್ಲ. ವಿರೋಧ ಪಕ್ಷಗಳಿಗೆ ಸರ್ಕಾರ ಅಥವಾ ಅಭಿವೃದ್ಧಿಗೆ ಯಾವುದೇ ಅಜೆಂಡಾ ಇಲ್ಲ. ಅವರು ಮೋದಿಯನ್ನು ಸೋಲಿಸಿ ಅಧಿಕಾರವನ್ನು ಗಳಿಸಲು ಬಯಸುತ್ತಿದ್ದಾರೆಯೇ ಹೊರತು ಬೇರೇನೂ ಅಲ್ಲ. ಇದನ್ನು ಸಾರ್ವಜನಿಕರೂ ನೋಡುತ್ತಿದ್ದಾರೆ ಎಂದು ಬಿಜೆಪಿಯ ಪ್ರಮುಖ ನಾಯಕರೊಬ್ಬರು ಹೇಳಿದ್ದಾರೆ,

ವಿಪಕ್ಷ ಮಹಾಮೈತ್ರಿಯಲ್ಲಿ ಎಲ್ಲ ಪಕ್ಷಗಳೂ ಸೇರಿಕೊಂಡಿಲ್ಲ, ಯಾರ ಬಲ ಎಷ್ಟು

ಪಾಟ್ನಾದಲ್ಲಿ, ವಿರೋಧ ಪಕ್ಷದಲ್ಲಿ ಒಗ್ಗಟ್ಟಿನ ಸಭೆಯಲ್ಲಿ ಭಾಗವಹಿಸಿದ ಪಕ್ಷಗಳ ಪೈಕಿ 15 ಪಕ್ಷಗಳಿಗೆ ಲೋಕಸಭೆಯಲ್ಲಿ ಸುಮಾರು 136 ಸದಸ್ಯ ಬಲ ಇರುವಂಥದ್ದು. ಈ ಪೈಕಿ ಕಾಂಗ್ರೆಸ್ 49 ಸ್ಥಾನಗಳನ್ನು ಹೊಂದಿದೆ. ಇತರ ಪಕ್ಷಗಳಲ್ಲಿ ಜೆಡಿಯು 16, ತೃಣಮೂಲ ಕಾಂಗ್ರೆಸ್ 23, ಡಿಎಂಕೆ 24, ಶಿವಸೇನೆ (ಯು) 6, ಎನ್‌ಸಿಪಿ 5, ಜೆಎಂಎಂ 1, ನ್ಯಾಷನಲ್ ಕಾನ್ಫರೆನ್ಸ್ 3, ಎಎಪಿ 1, ಸಿಪಿಐ ಎರಡು, ಎಸ್‌ಪಿ ಮೂರು ಮತ್ತು ಸಿಪಿಎಂ ಮೂರು ಸ್ಥಾನಗಳನ್ನು ಹೊಂದಿದೆ.

ವಿರೋಧ ಪಕ್ಷದ ಈ ಪಾಳಯದಿಂದ ದೂರ ನಿಂತಿರುವ ಬಿಜೆಡಿ12, ವೈಎಸ್‌ಆರ್‌ಸಿಪಿ 22, ಬಿಆರ್‌ಎಸ್‌ 9, ಶಿರೋಮಣಿ ಅಕಾಲಿದಳ 2, ಬಿಎಸ್‌ಪಿ 9, ತೆಲುಗುದೇಶಂ 3, ಮುಸ್ಲಿಂ ಲೀಗ್ 3, ಎಐಎಂಎಇಎಂ 2, ಎಐಯುಡಿಎಫ್‌ 1, ಜೆಡಿಎಸ್‌ 1 , ಕೇರಳ ಕಾಂಗ್ರೆಸ್- 1, ಆರ್‌ಎಲ್‌ಪಿ 1, ಆರ್‌ಎಸ್‌ಪಿ 1, ಎಸ್‌ಎಡಿ ಮಾನ್ 1 ಸೇರಿ ಒಟ್ಟು 68 ಸ್ಥಾನಗಳನ್ನು ಹೊಂದಿವೆ.

ಟಾರ್ಗೆಟ್‌ 160+ ಸ್ಥಾನಗಳ ಹೆಚ್ಚುವರಿ ಗೆಲುವಿಗಾಗಿ ವರ್ಷದಿಂದ ತಯಾರಿ

ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ 160 ಸ್ಥಾನಗಳಿಗೆ ಬಿಜೆಪಿ ವರ್ಷದ ಹಿಂದಿನಿಂದಲೇ ಭರ್ಜರಿ ತಯಾರಿ ನಡೆಸಿದೆ. ಈ ಕ್ಷೇತ್ರಗಳಲ್ಲಿ, ಬಿಜೆಪಿ ಎರಡನೇ ಸ್ಥಾನದಲ್ಲಿದೆ ಅಥವಾ ಕಡಿಮೆ ಅಂತರದ ಗೆಲುವು ಕಂಡ ಕೆಲವು ಕ್ಷೇತ್ರಗಳು ಸೇರಿಕೊಂಡಿವೆ. ತಾನು ಮಾಡಿರುವ ತಯಾರಿಯಿಂದ ಈ ಪೈಕಿ ಅರ್ಧದಷ್ಟು ಸ್ಥಾನಗಳನ್ನು ಗೆಲ್ಲಬಹುದು.

ವಿಪಕ್ಷಗಳ ಮಹಾಮೈತ್ರಿಯ ಪರಿಣಾಮ ಸೀಟುಗಳ ಕೊರತೆಯಾದರೆ ಅದನ್ನು ಈ 160+ ಸ್ಥಾನಗಳ ಮೂಲಕ ಸರಿದೂಗಿಸಬಹುದು. ಇದಲ್ಲದೆ, ಈ ವಿರೋಧದ ಪಾಳೆಯದಿಂದ ದೂರ ನಿಂತಿರುವ ಪ್ರಾದೇಶಿಕ ಪಕ್ಷಗಳು ತಮ್ಮದೇ ಆದ ಶಕ್ತಿಯನ್ನು ಹೊಂದಿವೆ, ಅವುಗಳು ಸಹ ಸಾಕಷ್ಟು ಪ್ರಭಾವ ಬೀರುತ್ತವೆ ಎಂಬುದು ಪಕ್ಷದ ನಾಯಕರ ಲೆಕ್ಕಾಚಾರ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ