logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Explainer: ನೇಪಾಳ-ಭಾರತ ದೇಶಗಳ ನಡುವಿನ ಭೂಕಂಪ ನಂಟು, ಕರ್ನಾಟಕದಲ್ಲಿಯೂ ಅಪಾಯ ಉಂಟೇ

Explainer: ನೇಪಾಳ-ಭಾರತ ದೇಶಗಳ ನಡುವಿನ ಭೂಕಂಪ ನಂಟು, ಕರ್ನಾಟಕದಲ್ಲಿಯೂ ಅಪಾಯ ಉಂಟೇ

Umesha Bhatta P H HT Kannada

Nov 06, 2023 09:23 AM IST

google News

ಭೂಕಂಪದಿಂದ ಜೀವಹಾನಿ ಉಂಟು ಮಾಡುವ ಕಟ್ಟಡಗಳ ಕುಸಿತ.

    • Earth Quake updates ನೇಪಾಳದಲ್ಲಿ( Nepal) ಭೂಕಂಪದಿಂದ ನಿರಂತರ ಜೀವಹಾನಿ ಸಂಭವಿಸುತ್ತಲೇ ಇದೆ. ನೇಪಾಳದಲ್ಲಿ ಭೂಕಂಪದ ಪ್ರಭಾವ ಭಾರತದಲ್ಲೂ( India) ಇರುತ್ತದೆ. ಇದರ ನಂಟು ಹೇಗೆ ಎನ್ನುವ ವಿವರ ಇಲ್ಲಿದೆ.
ಭೂಕಂಪದಿಂದ  ಜೀವಹಾನಿ ಉಂಟು ಮಾಡುವ ಕಟ್ಟಡಗಳ ಕುಸಿತ.
ಭೂಕಂಪದಿಂದ ಜೀವಹಾನಿ ಉಂಟು ಮಾಡುವ ಕಟ್ಟಡಗಳ ಕುಸಿತ.

3 ದಿನದ ಹಿಂದೆ ನೆರೆಯ ನೇಪಾಳದಲ್ಲಿ ಭೀಕರ ಭೂಕಂಪ ಸಂಭವಿಸಿ 150 ಕ್ಕೂ ಅಧಿಕ ಮಂದಿ ಮೃತಪಟ್ಟರು. ಜೀವ ಹಾನಿ ಜತೆಗೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿಯೂ ಹಾನಿಯಾಯಿತು. ನೇಪಾಳಕ್ಕೆ ಭೂಕಂಪ ಹೊಸದೇನೂ ಅಲ್ಲ. ದಶಕದ ಅಂತರದಲ್ಲೇ ನೇಪಾಳದಲ್ಲಿ ಏಳನೇ ಭೂಕಂಪವಿದು. ಈವರೆಗೂ ಸಾವಿರಾರು ಮಂದಿ ಭೂಕಂಪಕ್ಕೆ ನೇಪಾಳದಲ್ಲಿ ಜನ ಜೀವ ಬಿಟ್ಟಿದ್ದಾರೆ. ಇದಕ್ಕಿಂತ ಹಳೆಯ ದಾಖಲೆಗಳನ್ನು ಕೆದಕುತ್ತಾ ಹೋದರೆ ನೇಪಾಳಕ್ಕೂ ಭೂಕಂಪಕ್ಕೂ ಬಿಡಿಸಲಾಗದ ನಂಟು.

ಅಲ್ಲಿ ಭೂಕಂಪ ತಪ್ಪಿಸಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ನಮಗೆ ಎದುರಾಗಬಹುದು. ಇದು ನೈಸರ್ಗಿಕ ಪ್ರಕ್ರಿಯೆ. ನೇಪಾಳವೂ ಒಳಗೊಂಡಂತೆ ಮಧ್ಯ ಹಿಮಾಲಯದ ಪ್ರದೇಶವೂ ವಿಶ್ವದ ತೀವ್ರ ಭೂಕಂಪದ ಪ್ರದೇಶಗಳಲ್ಲಿ ಒಂದು. ಇದರಿಂದ ಅದು ಒಂದು ರೀತಿ ಭೂಕಂಪದ ಹಾಟ್‌ ಸ್ಪಾಟ್‌. ಯಾವಾಗ ಬೇಕಾದರೂ ಭೂಕಂಪ ಸಂಭವಿಸಬಹುದು.

ಇದೇ ಸಮಯದಲ್ಲಿ ಭಾರತದ ರಾಜಧಾನಿ ದೆಹಲಿಯಲ್ಲೂ ಭೂಮಿ ಕಂಪಿಸಿತು. ಅದು ಒಂದು ಬಾರಿಯಲ್ಲ. 1 ತಿಂಗಳಿಂದ ದೆಹಲಿಯಲ್ಲಿ 3ನೇ ಬಾರಿ ಭೂಕಂಪದ ಸನ್ನಿವೇಶ ಎದುರಾಗಿದ್ದು ಆತಂಕವನ್ನು ಸೃಷ್ಟಿಸಿತು. ನೇಪಾಳದ ಭೂಕಂಪಕ್ಕೂ ದೆಹಲಿಗೂ ಸಂಬಂಧ ಇರುವುದರಿಂದ ಇಲ್ಲಿಯೂ ಭೂಮಿ ಕಂಪಿಸಿ ಜನ ಭಯಭೀತರಾಗಿದ್ದರು.

ಭೂಕಂಪವು ವ್ಯಕ್ತಿಯು ಅನುಭವಿಸಬಹುದಾದ ಭಯಾನಕ ನೈಸರ್ಗಿಕ ವಿಪತ್ತುಗಳಲ್ಲಿ ಒಂದು. ಭೂಕಂಪಗಳು ಸಾಮಾನ್ಯವಾಗಿ ಭೂಮಿಯ ಹೊರಪದರದಲ್ಲಿನ ವ್ಯತ್ಯಯಗಳಿಂದ ಉಂಟಾಗುತ್ತವೆ. ಅವು ಭೂಮಿಯ ಮೇಲೆ ಎಲ್ಲಿಯಾದರೂ ಸಂಭವಿಸಬಹುದು. ಆದರೆ ಜೀವಹಾನಿ ಮತ್ತು ಆಸ್ತಿ ಹಾನಿಯೇ ನಿಜವಾದ ಆತಂಕದ ಮೂಲ.

ನಂಟು ಹೇಗಿದೆ

ಭೂಕಂಪದ ವಿಚಾರದಲ್ಲಿ ನೇಪಾಳ ಹಾಗೂ ಭಾರತಕ್ಕೂ ನಂಟಿದೆ. ಏಕೆಂದರೆ ಇದನ್ನು ಬೇರ್ಪಡಿಸಿರುವುದು ಹಿಮಾಲಯ ಪ್ರದೇಶ. ಹಿಮಾಲಯದ ನಂಟು ಹೊಂದಿರುವ ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ ಸಹಿತ ಹಲವು ರಾಜ್ಯಗಳ ಹಲವು ಭಾಗಗಳೂ ಭೂಕಂಪಕ್ಕೆ ಒಳಗಾಗಬಹುದಾದ ಪ್ರದೇಶಗಳೇ. ಏಕೆಂದರೆ ಇಲ್ಲಿಯೂ ಹಿಂದೆಲ್ಲಾ ಭೀಕರ ಭೂಕಂಪಗಳೇ ಸಂಭವಿಸಿವೆ.

ಹಿಮಾಲಯವನ್ನು ವಿಶ್ವದಲ್ಲೇ ಅತ್ಯಂತ ಭೂಕಂಪನಕ್ಕೆ ಒಳಗಾಗಬಹುದಾದ ಪ್ರದೇಶ ಎಂದು ಗುರುತಿಸಲಾಗಿದೆ. ಹಿಮಾಲಯ ಪ್ರದೇಶದಲ್ಲಿ ಆಗಾಗ ಭಾರೀ ಹಿಮಪಾತವಾಗುವ ಪ್ರಕ್ರಿಯೆಗಳ ಹಿಂದೆ ಭೂಕಂಪವೂ ಒಂದು ಕಾರಣವಾಗಿರಬಹುದು.

ಇನ್ನು ದೆಹಲಿಯು ಮೂರು ಸಕ್ರಿಯ ಭೂಕಂಪನ ದೋಷ ರೇಖೆಗಳ ಸಮೀಪದಲ್ಲಿದೆ: ಸೋಹ್ನಾ, ಮಥುರಾ ಮತ್ತು ದೆಹಲಿ-ಮೊರಾದಾಬಾದ್. ದೆಹಲಿ-ಎನ್‌ಸಿಆರ್‌ನಲ್ಲಿ ಗುರುಗ್ರಾಮ್ ಅತ್ಯಂತ ಅಪಾಯಕಾರಿ ಪ್ರದೇಶ ಎಂದು ಗುರುತಿಸಲಾಗಿದೆ.

ಭಾರತದ ಪ್ರಮುಖ ಭೂಕಂಪ

ಭಾರತದಲ್ಲು ಒಂದು ಶತಮಾನದ ಅವಧಿಯಲ್ಲಿ ಸಾಕಷ್ಟು ಭೂಕಂಪಗಳು ಆಗಿವೆ. 1905 ರಲ್ಲಿ ಹಿಮಾಚಲ ಪ್ರದೇಶದ ಕಂಗರದಲ್ಲಿ ಭಾರೀ ಭೂಕಂಪ ಸಂಭವಿಸಿ ಸಾಕಷ್ಟು ಜೀವ ಹಾನಿಯಾಗಿತ್ತು. 1934 ರಲ್ಲಿ ಬಿಹಾರ-ನೇಪಾಳ ಭಾಗದಲ್ಲಿ ಭೂಕಂಪ ಸಂಭವಿಸಿತು, ಇದು 8.2ರ ತೀವ್ರತೆಯಲ್ಲಿದ್ದು 10,000 ಜನರನ್ನು ಬಲಿ ತೆಗೆದುಕೊಂಡಿತು. 1991 ರಲ್ಲಿ ಉತ್ತರಕಾಶಿಯಲ್ಲಿ 6.8 ತೀವ್ರತೆಯ ಭೂಕಂಪವು 800 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು. 2005 ರಲ್ಲಿ ಕಾಶ್ಮೀರದಲ್ಲಿ 7.6 ತೀವ್ರತೆಯ ಭೂಕಂಪದಲ್ಲಿ 80,000ಕ್ಕೂ ಅಧಿಕ ಜನರು ಸಾವನ್ನಪ್ಪಿದರು. ಇದು ಭಾರತದ ಅತಿ ದೊಡ್ಡ ದುರಂತ.

ಕೆಲ ವರ್ಷಗಳ ಹಿಂದೆ ಭೂಕಂಪವು ಮೌಂಟ್ ಎವರೆಸ್ಟ್‌ನಲ್ಲಿ ಹಿಮಪಾತವನ್ನು ಉಂಟುಮಾಡಿತು. ಇದು ಕನಿಷ್ಠ 19 ಪರ್ವತಾರೋಹಿಗಳ ಜೀವ ತೆಗೆದುಕೊಂಡಿತ್ತು. ಆಗ ಎವರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿ ಮತ್ತು ಪರ್ವತದ ಶಿಬಿರಗಳಲ್ಲಿ ನೂರಾರು ಮಂದಿ ಸಿಲುಕಿಕೊಂಡಿದ್ದರು. ಉನ್ನತ ಶಿಬಿರಗಳಲ್ಲಿದ್ದವರನ್ನು ಶೀಘ್ರದಲ್ಲೇ ಬೇಸ್ ಕ್ಯಾಂಪ್‌ಗೆ ಹೆಲಿಕಾಪ್ಟರ್‌ಗಳ ಮೂಲಕ ಸಾಗಿಸಲಾಗಿತ್ತು.

ತಜ್ಞರ ಸಲಹೆ

ಭೂಕಂಪ ಏಕಾಏಕಿ ಆಗುವುದಿಲ್ಲ. ಅದೊಂದು ರೀತಿ ಹೃದಯಾಘಾತದ ರೀತಿ. ಮೊದಲು ನಾಲ್ಕೈದು ಬಾರಿ ಸೂಚನೆ ನೀಡಿಯೇ ದೊಡ್ಡ ಕಂಪನವನ್ನೇ ಸೃಷ್ಟಿಸುತ್ತದೆ.

ಭೂಕಂಪದಿಂದ ಆಗುವ ಅನಾಹುತ ಕಟ್ಟಡಗಳ ಕುಸಿತದಿಂದ ಹೊರತು ಭೂಕಂಪನದಿಂದ ಅಲ್ಲ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ ನಿಜವೂ ಹೌದು.

ಭೂಕಂಪದ ಪ್ರದೇಶದಲ್ಲಿರುವವರು ಭಾರೀ ಕಟ್ಟಡಗಳಿಗೆ ಒತ್ತು ನೀಡುವ ಬದಲು ಭೂಕಂಪ ಸ್ನೇಹಿ ಕಟ್ಟಡ ನಿರ್ಮಿಸಬೇಕು ಎನ್ನುವ ಸಲಹೆಯನ್ನು ಜಾರಿಗೊಳಿಸಬೇಕು ಅಷ್ಟೇ.

ನೇಪಾಳದಲ್ಲಿ ಇದ್ದು ಭೂಕಂಪದ ತೀವ್ರತೆ ದೆಹಲಿಯಲ್ಲಿ ಇರಲಿಲ್ಲ. ನೇಪಾಳದ ಮೊದಲೇ ಭೂಕಂಪ ಪೀಡಿತ ಪ್ರದೇಶ ಎಂದು ಗೊತ್ತಿದ್ದರೂ ಮತ್ತಷ್ಟು ಕಟ್ಟಡಗಳ ನಿರ್ಮಾಣವನ್ನು ತಡೆಯಲೇಬೇಕು. ಇಲ್ಲದೇ ಇದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ದೆಹಲಿಯಲ್ಲೂ ಇಂತಹುದೇ ಎಚ್ಚರಿಕೆ ಅತ್ಯಗತ್ಯ ಎನ್ನುವುದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ನಿರ್ದೇಶಕ(National Center for Seismology) ಡಾ.ಒ.ಪಿ.ಮಿಶ್ರ ಅವರ ಸಲಹೆ.

ಕರ್ನಾಟಕದಲ್ಲೂ ಭೂಕಂಪ

ಕರ್ನಾಟಕದ ವಿಜಯಪುರ ಸೇರಿದಂತೆ ಹಲವು ಪ್ರದೇಶದಲ್ಲಿ ಆಗಾಗ ಭೂಮಿ ಕಂಪಿಸುವುದನ್ನು ಜನ ಅನುಭವಿಸುತ್ತಲೇ ಇರುತ್ತಾರೆ. ಆದರೆ ಜೀವಹಾನಿಯಾದ ಉದಾಹರಣೆಯೇನೂ ಇಲ್ಲ. ಕರ್ನಾಟಕದಲ್ಲಿ ಅಂತಹ ಆತಂಕದ ಸಂದರ್ಭವಂತೂ ಇಲ್ಲ.

ಭಾರತದಲ್ಲಿ ಭೂಕಂಪ ವಲಯಗಳು..

ಎರಡು ವರ್ಷದ ಹಿಂದೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್‌ ಲೋಕಸಭೆಗೆ ಹೇಳಿಕೆ ನೀಡಿದ್ದರು. ಅದರಲ್ಲಿ ಭಾರತದ ಭೂಕಂಪದ ಸ್ಥಿತಿಗತಿ, ಭೂಕಂಪ ಪ್ರದೇಶಗಳು, ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರಣೆ ನೀಡಿದ್ದರು.

ಭಾರತದ ಒಟ್ಟು ಶೇ.59 ಭೂಪ್ರದೇಶವು ವಿವಿಧ ಭೂಕಂಪಗಳಿಗೆ ಗುರಿಯಾಗುವ ಸಾಧ್ಯತೆ ಇರುವುದನ್ನು ಅಧ್ಯಯನ ವರದಿಗಳು ತಿಳಿಸಿವೆ. ಇದಕ್ಕಾಗಿ ನಾಲ್ಕು ವಲಯಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದರು. ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ನಗರಗಳು ಮತ್ತು ಪಟ್ಟಣಗಳು ​​ವಲಯ-5 ರಲ್ಲಿವೆ ಮತ್ತು ಹೆಚ್ಚಿನ ತೀವ್ರತೆಯ ಭೂಕಂಪಗಳ ಅಪಾಯದಲ್ಲಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶವು ಸಹ ವಲಯ-4 ರಲ್ಲಿದೆ, ಇದು ಎರಡನೇ ಅತಿ ಹೆಚ್ಚು ತೀವ್ರತೆಯ ವರ್ಗದಲ್ಲಿದೆ ಎನ್ನುವುದು ಸಚಿವರ ಹೇಳಿಕೆಯಾಗಿತ್ತು.

ವಲಯ 2: ಆಂಧ್ರಪ್ರದೇಶದ ಆಗ್ನೇಯ ಭಾಗಗಳು, ಪೂರ್ವ ಗುಜರಾತ್, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಕರ್ನಾಟಕ, ನೈಋತ್ಯ ರಾಜಸ್ಥಾನ, ತೆಲಂಗಾಣ, ತಮಿಳುನಾಡು ಮತ್ತು ಉತ್ತರ ಪ್ರದೇಶ.

ವಲಯ 3: ಕೇರಳ, ಗೋವಾ, ಲಕ್ಷದ್ವೀಪ ದ್ವೀಪಗಳು, ಆಗ್ನೇಯ ಯುಪಿ, ಗುಜರಾತ್‌ನ ಕೆಲವು ಭಾಗಗಳು, ಪಂಜಾಬ್, ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಪಶ್ಚಿಮ ರಾಜಸ್ಥಾನ, ಬಿಹಾರ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳು, ಉತ್ತರ ಜಾರ್ಖಂಡ್ ಮತ್ತು ಛತ್ತೀಸ್‌ಗಢ.

ವಲಯ 4 : ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ, ದೆಹಲಿ, ಸಿಕ್ಕಿಂ, ಉತ್ತರ ಉತ್ತರ ಪ್ರದೇಶ, ಬಿಹಾರದ ಕೆಲವು ಭಾಗಗಳು ಮತ್ತು ಪಶ್ಚಿಮ ಬಂಗಾಳ, ಗುಜರಾತ್, ಮತ್ತು ಪಶ್ಚಿಮ ಮಹಾರಾಷ್ಟ್ರ ಮತ್ತು ರಾಜಸ್ಥಾನ.

ವಲಯ 5: ಕಾಶ್ಮೀರ ಕಣಿವೆ, ಪಶ್ಚಿಮ ಹಿಮಾಚಲ ಪ್ರದೇಶ, ಪೂರ್ವ ಉತ್ತರಾಖಂಡ, ಗುಜರಾತ್‌ನ ಕಚ್, ಉತ್ತರ ಬಿಹಾರ, ಈಶಾನ್ಯ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು.

-----------------

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ