Jaishankar on Modi: 'ಕ್ಯಾಪ್ಟನ್ ಮೋದಿ' ನಾಯಕತ್ವದಲ್ಲಿ ವಿದೇಶಾಂಗ ನೀತಿ ಹೇಗೆ ರೂಪಿಸಲ್ಪಡುತ್ತದೆ?: ಓವರ್ ಟು ಜೈಶಂಕರ್..
Mar 04, 2023 07:53 AM IST
ಡಾ. ಎಸ್. ಜೈಶಂಕರ್
- ಭಾರತದ ವಿದೇಶಾಂಗ ನೀತಿಯು 'ಕ್ಯಾಪ್ಟನ್ ಮೋದಿ' ನಾಯಕತ್ವದಲ್ಲಿ ರೂಪಿಸಲ್ಪಡುತ್ತಿದ್ದು, ದೇಶವು ಅತ್ಯುತ್ತಮ ವಿದೇಶಾಂಗ ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಹೇಳಿದ್ದಾರೆ. ಸರ್ಕಾರ ಹೇಗೆ ವಿದೇಶಾಂಗ ನೀತಿಯನ್ನು ರೂಪಿಸುತ್ತದೆ ಎಂಬುದಕ್ಕೆ, ಜೈಶಂಕರ್ ಕ್ರಿಕೆಟ್ ಆಟದ ವೈಖರಿಯ ಉದಾಹರಣೆಯಾಗಿ ನೀಡಿದ್ದಾರೆ.
ನವದೆಹಲಿ: ಭಾರತದ ವಿದೇಶಾಂಗ ನೀತಿಯು 'ಕ್ಯಾಪ್ಟನ್ ಮೋದಿ' ನಾಯಕತ್ವದಲ್ಲಿ ರೂಪಿಸಲ್ಪಡುತ್ತಿದ್ದು, ದೇಶವು ಅತ್ಯುತ್ತಮ ವಿದೇಶಾಂಗ ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಹೇಳಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಸಹಭಾಗಿತ್ವದಲ್ಲಿ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ORF) ಆಯೋಜಿಸಿದ್ದ ಪ್ರಮುಖ ಥಿಂಕ್-ಟ್ಯಾಂಕ್ ಕಾರ್ಯಕ್ರಮವಾದ ರೈಸಿನಾ ಡೈಲಾಗ್‌ನಲ್ಲಿ ಮಾತನಾಡಿದ ಜೈಶಂಕರ್, 'ಕ್ಯಾಪ್ಟನ್ ಮೋದಿ' ನಾಯಕತ್ವದಲ್ಲಿ ಭಾರತದ ವಿದೇಶಾಂಗ ನೀತಿ ಮುನ್ನಡೆಯುತ್ತಿದೆ ಎಂದು ಹೇಳಿದರು.
ಸರ್ಕಾರ ಹೇಗೆ ವಿದೇಶಾಂಗ ನೀತಿಯನ್ನು ರೂಪಿಸುತ್ತದೆ ಎಂಬುದಕ್ಕೆ ಕ್ರಿಕೆಟ್ ಆಟದ ವೈಖರಿಯ ಉದಾಹರಣೆ ನೀಡಿದ ಜೈಶಂಕರ್, "ಕ್ಯಾಪ್ಟನ್ ಮೋದಿಯವರೊಂದಿಗೆ ನೆಟ್ ಅಭ್ಯಾಸವು ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗುತ್ತದೆ. ಈ ಅಭ್ಯಾಸ ಸುದೀರ್ಘ ಸಮಯದವರೆಗೆ ಮುಂದುವರಿಯುತ್ತದೆ.." ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
''ನಾಯಕ ಮೋದಿ ಅವರು ತಮ್ಮ ಬೌಲರ್‌ಗಳಿಗೆ ಒಂದು ನಿರ್ದಿಷ್ಟ ಪ್ರಮಾಣದ ಸ್ವಾತಂತ್ರ್ಯವನ್ನು ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ನಿಮಗೆ ಅವಕಾಶ ನೀಡಿದರೆ, ನೀವು ಆ ವಿಕೆಟ್ ಅನ್ನು ತೆಗೆದುಕೊಳ್ಳುತ್ತೀರಿ ಎಂದು ಅವರು ನಿರೀಕ್ಷಿಸುತ್ತಾರೆ. ಆದರೆ ಅದರಲ್ಲಿ ಕೆಲವರು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ನಾನು ಹೇಳುತ್ತೇನೆ. ಲಾಕ್‌ಡೌನ್ ನಿರ್ಧಾರವು ತುಂಬಾ ಕಠಿಣ ನಿರ್ಧಾರವಾಗಿತ್ತು. ನಾವು ಈಗ ಹಿಂತಿರುಗಿ ನೋಡಿದರೆ, ನಾವು ಆ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸುವುದೂ ಕಷ್ಟ.." ಎಂದು ಜೈಶಂಕರ್ ಹೇಳಿದ್ದಾರೆ.
''ಪ್ರಧಾನಿ ಮೋದಿ ಕೇವಲ ಇತರ ಸಚಿವರಿಗೆ ಮಾತ್ರವಲ್ಲ, ಬದಲಿಗೆ ತಮಗೂ ನಿರ್ದಿಷ್ಟ ಕಾರ್ಯಸೂಚಿಗಳನ್ನು ಹಾಕಿಕೊಳ್ಳುತ್ತಾರೆ. ನಿರ್ದಿಷ್ಟ ಸಮಯದಲ್ಲೇ ಈ ಕಾರ್ಯಗಳು ಪೂರ್ಣಗೊಳ್ಳುವಂತೆ ನೋಡಿಕೊಳ್ಳುವ ಅಪರೂಪದ ವ್ಯಕ್ತಿ ಅವರು. ಪ್ರಧಾನಿ ಮೋದಿ ನಾಯಕತ್ವದಡಿ ಭಾರತದ ವಿದೇಶಾಂಗ ನೀತಿಯನ್ನು ರೂಪಿಸುವ ಅವಕಾಶ ನನಗೆ ಲಭಿಸಿರುವುದು ನಿಜಕ್ಕೂ ಸಂತಸದ ಸಂಗತಿ..'' ಎಂದು ಜೈಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
''ಜಾಗತಿಕ ವೇದಿಕೆಯಲ್ಲಿ ಭಾರತದ ಗೌರವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ನಾಯಕತ್ವದಡಿ ನಾವು ಜಾರಿಗೊಳಿಸಿರುವ ವಿದೇಶಾಂಗ ನೀತಿಗಳೇ ಮುಖ್ಯ ಕಾರಣ. ಜಗತ್ತು ಇಂದು ಭಾರತವನ್ನು ಆಲಿಸುತ್ತಿದೆ. ಭಾರತದ ಸಖ್ಯ ಬಯಸದ ಯಾವ ರಾಷ್ಟ್ರವೂ ಸದ್ಯ ವಿಶ್ವ ಭೂಪಟದಲ್ಲಿ ಇಲ್ಲ. ಭಾರತದ ವಿದೇಶಾಂಗ ನೀತಿಯು ಅನಿವಾರ್ಯತೆಯಿಂದ ಆಯ್ಕೆಗೆ ಹೊರಳಿರುವುದು ಈ ಕ್ಷಣದ ಸತ್ಯ..'' ಎಂದು ಜೈಶಂಕರ್ ಹೆಮ್ಮೆ ವ್ಯಕ್ತಪಡಿಸಿದರು.
'' ಜಾಗತಿಕ ರಾಜಕೀಯ, ಆರ್ಥಿಕ ಕ್ಷೇತ್ರದಲ್ಲಿ ಭಾರತ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತಿದೆ. ಭಾರತವನ್ನು ಒಂದು ಸ್ನೇಹಶೀಳ ರಾಷ್ಟ್ರವನ್ನಾಗಿ ನೋಡುವ ದೇಶಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಭಾರತಕ್ಕೂ ಹಾಗೂ ಜಗತ್ತಿಗೂ ಒಳ್ಳೆಯ ಸಂದೇಶ ರವಾನಿಸುತ್ತಿದೆ ಎಂದು ಜೈಶಂಕರ್ ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ.
"ಜಗತ್ತು ಕಷ್ಟಕರವಾದ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಈ ಸಮಯದಲ್ಲಿ ಜಾಗತಿಕ ಒಳಿತಿಗಾಗಿ ಭಾರತ ನಿರ್ವಹಿಸುತ್ತಿರುವ ಪಾತ್ರವನ್ನು ಎಲ್ಲರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಲ್ಲದೇ ಕ್ರಿಕೆಟ್ ತಂಡದಂತೆ ನಾವು ಸ್ವದೇಶದಲ್ಲಿ ಮಾತ್ರವಲ್ಲದೆ, ವಿದೇಶದಲ್ಲಿಯೂ ಪಂದ್ಯಗಳನ್ನು ಗೆಲ್ಲಲು ಬಯಸುವುದಿಲ್ಲ.." ಎಂದು ವಿದೇಶಾಂಗ ಸಚಿವರು ಹೇಳಿರುವುದು ಗಮನ ಸೆಳೆದಿದೆ.
ಇನ್ನು ಭಾರತವು ಬ್ರಿಟನ್‌ಗಿಂತ ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, "ನಾನು ಇದನ್ನು ಮರುಸಮತೋಲನ ಎಂದು ಕರೆಯುತ್ತೇನೆ. ಇದು ಇತಿಹಾಸದ ಸ್ಥಾನಪಲ್ಲಟವಲ್ಲದೇ ಮತ್ತೇನೂ ಅಲ್ಲ. ಭಾರತ ಇಂದು ಅತ್ಯಂತ ಅಸಾಮಾನ್ಯ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ.ನಿರ್ಣಾಯಕವಾಗಿ ಹಾಗೂ ಮೇಲ್ಮುಖವಾಗಿ ಚಲಿಸುವ ಸಹಜ ನಡುವಳಿಕೆಯನ್ನು ಭಾರತ ಅಳವಡಿಸಿಕೊಂಡಿದೆ.." ಎಂದು ಜೈಶಂಕರ್ ನುಡಿದರು.