logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  World Wildlifeday2024: ಜಾಗತಿಕ ವನ್ಯಜೀವಿ ದಿನ ಇಂದು, ಏನಿದರ ಮಹತ್ವ, ಈ ಬಾರಿ ಧ್ಯೇಯವೇನು

World Wildlifeday2024: ಜಾಗತಿಕ ವನ್ಯಜೀವಿ ದಿನ ಇಂದು, ಏನಿದರ ಮಹತ್ವ, ಈ ಬಾರಿ ಧ್ಯೇಯವೇನು

Umesha Bhatta P H HT Kannada

Mar 03, 2024 11:00 AM IST

google News

ಇಂದು ನಮ್ಮ ದಿನ. ಜಾಗತಿಕ ವನ್ಯಜೀವಿಗಳ ದಿನ.

    • Wildlife day ವನ್ಯಜೀವಿಗಳ ಮಹತ್ವವನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಇದರಲ್ಲಿ ಜಾಗತಿಕ ವನ್ಯಜೀವಿಗಳ ದಿನವೂ ಒಂದು. ಪ್ರತಿವರ್ಷದ ಮಾರ್ಚ್‌ 3ರಂದು ವನ್ಯಜೀವಿ ದಿನ ಆಚರಿಸಲಾಗುತ್ತದೆ. ಭಾನುವಾರವೂ ಹಲವು ಕಡೆ ಜಾಗೃತಿ ಚಟುವಟಿಕೆಗಳು ನಡೆದಿವೆ.
ಇಂದು ನಮ್ಮ ದಿನ. ಜಾಗತಿಕ ವನ್ಯಜೀವಿಗಳ ದಿನ.
ಇಂದು ನಮ್ಮ ದಿನ. ಜಾಗತಿಕ ವನ್ಯಜೀವಿಗಳ ದಿನ.

ವರ್ಷದ ಹಿಂದೆ ಭಾರತದಲ್ಲಿ ಹುಲಿಗಳ ಸಂಖ್ಯೆಯನ್ನು ಬಿಡುಗಡೆ ಮಾಡಲಾಯಿತು. ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿತ್ತು. ಮೂರು ದಿನದ ಹಿಂದೆ ಚಿರತೆಗಳ ಎಣಿಕೆ ವಿವರ ಪ್ರಕಟಗೊಂಡಿತು. ಇಲ್ಲಿಯೂ ಆಶಾದಾಯಕ ಬೆಳವಣಿಗೆಯೇ. ಚೀತಾಗಳ ಪುನರುತ್ಥಾನ ಯೋಜನೆ ಭಾರತದಲ್ಲಿ ಏರಿಳಿತದ ನಡುವೆಯೂ ಪ್ರಗತಿ ಕಾಣುತ್ತಿದೆ. ಆನೆಗಳ ಸಂಖ್ಯೆಯಂತೂ ಗಣನೀಯವಾಗಿ ಏರಿದೆ. ವನ್ಯಜೀವಿ ಸಂಘರ್ಷದ ಪ್ರಮಾಣ ಹೆಚ್ಚಿದೆ ಎನ್ನಿಸಿದರೂ ಭಾರತದಲ್ಲಿ ವನ್ಯಜೀವಿಗಳ ಪ್ರಮಾಣವಂತೂ ಹೆಚ್ಚಿರುವುದು ನಿಜ. ಭಾರತ ಮಾತ್ರವಲ್ಲದೇ ಹಲವು ದೇಶಗಳಲ್ಲಿ ವನ್ಯಜೀವಿ ಸಂಘರ್ಷ ಪ್ರಮಾಣ ಹೆಚ್ಚಿದೆ. ಅರಣ್ಯದ ಮೇಲಿನ ಒತ್ತಡವೂ ಇದಕ್ಕೆ ಮುಖ್ಯ ಕಾರಣ.

ವನ್ಯಜೀವಿಗಳು- ಕಾಡು- ಪರಿಸರ- ಮನುಷ್ಯ ಹೀಗೆ ಒಂದಕ್ಕೊಂದು ನಂಟು ಇದ್ದೇ ಇದೆ. ಈ ಸರಪಳಿ ಗಟ್ಟಿಯಾಗಿದ್ದಷ್ಟು ಪರಿಸರವೂ ಸಮತೋಲದಿಂದ ಕೂಡಿರಲು ಸಾಧ್ಯ. ವನ್ಯಜೀವಿಗಳು ಇದ್ದರೆ ಕಾಡು ಸಮೃದ್ದ. ಕಾಡು ಸುಸ್ಥಿರವಾಗಿದೆ. ಪರಿಸರ ಚೆನ್ನಾಗಿದೆ ಎಂದರೆ ಮಳೆ, ಬೆಳೆ ಎಲ್ಲದಕ್ಕೂ ಸಹಕಾರಿ. ಒಂದು ಕಡೆ ಸರಪಳಿ ತಪ್ಪಿದರೆ ಇಡೀ ವ್ಯವಸ್ಥೆಯೇ ಸಮತೋಲನ ಕಳೆದುಕೊಂಡು ಬಿಡುತ್ತದೆ. ಇದೇ ಕಾರಣದಿಂದ ವನ್ಯಜೀವಿಗಳ ಸಂರಕ್ಷಣೆಗೆ ಇನ್ನಿಲ್ಲದ ಆದ್ಯತೆ ನೀಡಲಾಗುತ್ತದೆ. ಭಾರತದಲ್ಲಂತೂ ವನ್ಯಜೀವಿಗಳ ಸಂರಕ್ಷಣೆ ನಿಟ್ಟಿನಲ್ಲಿ ಸಾಕಷ್ಟು ಚಟುವಟಿಕೆಗಳು ನಡೆದಿವೆ.

ಮಹತ್ವವೇನು

ಮಾರ್ಚ್ 3, 1973 ರಂದು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಪ್ರಪಂಚದಾದ್ಯಂತ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸುವ ನಿರ್ಣಯವನ್ನು ತೆಗೆದುಕೊಂಡಿತು.ಸಸ್ಯ ಅಥವಾ ಪ್ರಾಣಿಯಾಗಿರಲಿ, ಪಾಕಶಾಲೆಯಿಂದ ವೈದ್ಯಕೀಯದವರೆಗೆ ಮಾನವ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಈ ಜಾತಿಗಳ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಈ ಸಮಯದಲ್ಲಿ ನೂರಾರು ಅಳಿವಿನಂಚಿನಲ್ಲಿರುವ ಪ್ರಭೇದಗಳು ಪ್ರತಿವರ್ಷ ಬೆದರಿಕೆಗೆ ಒಳಗಾಗುತ್ತಿದ್ದವು ಮತ್ತು ಅಳಿವಿನ ಪ್ರಮಾಣವು ದಿಗ್ಭ್ರಮೆಗೊಳಿಸುವ ಪ್ರಮಾಣಕ್ಕೆ ಏರಿಕೆಯಾಗಿತ್ತು.

ಮಾರ್ಚ್ 3 ಅನ್ನು ವಿಶ್ವಸಂಸ್ಥೆಯ ವಿಶ್ವ ವನ್ಯಜೀವಿ ದಿನ (WWD) ಎಂದು ಘೋಷಿಸಲಾಯಿತು. ಈ ದಿನವು 1973 ರಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿ ಮತ್ತು ಸಸ್ಯವರ್ಗದ (CITES) ಅಂತರಾಷ್ಟ್ರೀಯ ವ್ಯಾಪಾರದ ಸಮಾವೇಶಕ್ಕೆ ಸಹಿ ಹಾಕಲಾಯಿತು. ಯುಎನ್ ಕ್ಯಾಲೆಂಡರ್, ಯುಎನ್ ವಿಶ್ವ ವನ್ಯಜೀವಿ ದಿನವು ಈಗ ವನ್ಯಜೀವಿಗಳಿಗೆ ಮೀಸಲಾಗಿರುವ ಜಾಗತಿಕ ವಾರ್ಷಿಕ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ.

ಆನಂತರ ಡಿಸೆಂಬರ್ 20, 2013 ರಂದು ಜಗತ್ತಿನಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳ ದುರ್ಬಲತೆಯ ಅರಿವನ್ನು ಹರಡಲು ಸಹಾಯ ಮಾಡಲು ಮತ್ತೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ತನ್ನ 68 ನೇ ಅಧಿವೇಶನದಲ್ಲಿ, ವಿಶ್ವ ವನ್ಯಜೀವಿ ದಿನವನ್ನು ಪ್ರತಿ ವರ್ಷವೂ ಹೊಸ ಉದ್ದೇಶ ಮತ್ತು ಕಲ್ಪನೆಗೆ ಸಮರ್ಪಿಸಲಾಗುವುದು ಎಂದು ಯುಎನ್‌ ಘೋಷಿಸಿತು. ಈಗಲೂ ಅದು ಪ್ರತಿ ವರ್ಷ ಮುಂದುವರಿದಿದೆ.

ಈ ಬಾರಿಯ ಘೋಷ ವಾಕ್ಯ

ವಿಶ್ವ ವನ್ಯಜೀವಿ ದಿನ 2024 ಕ್ಕೆ ಜನರು ಮತ್ತು ಗ್ರಹವನ್ನು ಸಂಪರ್ಕಿಸುವುದು: ವನ್ಯಜೀವಿ ಸಂರಕ್ಷಣೆಯಲ್ಲಿ ಡಿಜಿಟಲ್ ಆವಿಷ್ಕಾರವನ್ನು ಅನ್ವೇಷಿಸುವುದು(Connecting People and Planet: Exploring Digital Innovation in Wildlife Conservation) ಎನ್ನುವ ಘೋಷ ವಾಕ್ಯ ಇಟ್ಟುಕೊಳ್ಳಲಾಗಿದೆ.

ಈಗಂತೂ ನಾವು ಜಾಗತಿಕ ಡಿಜಿಟಲ್ ಕ್ರಾಂತಿಯ ಮಧ್ಯೆ ಇದ್ದೇವೆ. ಬಹುತೇಕರು ಡಿಜಿಟಲ್‌ನ ಭಾಗವಾಗಿಯೇ ಹೋಗಿದ್ದಾರೆ. ಅಷ್ಟರ ಮಟ್ಟಿಗೆ ತಂತ್ರಜ್ಞಾನ ಮಾನವನನ್ನು ಬೆಸೆದುಕೊಂಡಿದೆ. ಉತ್ತಮ ಸಂಪರ್ಕ ಮತ್ತು ಇಂಟರ್ನೆಟ್ ಪ್ರವೇಶವು ನಮ್ಮ ಜಾಗತಿಕ ಜನಸಂಖ್ಯೆಯ 66 ಪ್ರತಿಶತವನ್ನು ತಲುಪುತ್ತದೆ.

ಆದಾಗ್ಯೂ, ನಮ್ಮ ಜಾಗತಿಕ ಜನಸಂಖ್ಯೆಯ ಸುಮಾರು 2.7 ಶತಕೋಟಿ ಜನರು ಇನ್ನೂ ಆನ್‌ಲೈನ್‌ನಲ್ಲಿಲ್ಲ. ಸರಾಸರಿಯಾಗಿ, ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಭೂಕುಸಿತ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಜನಸಂಖ್ಯೆಯ ಕೇವಲ 36 ಪ್ರತಿಶತದಷ್ಟು ಜನರು ಆನ್‌ಲೈನ್‌ನಲ್ಲಿದ್ದಾರೆ.

ಇದರಿಂದ ಡಿಜಿಟಲ್‌ ಮಾಧ್ಯಮ ಬಳಸಿಕೊಂಡು ಜನರಿಗೆ ವನ್ಯಜೀವಿಗಳ ಮಹತ್ವ, ಅವುಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಈ ಬಾರಿಯ ಪ್ರಮುಖಾಂಶ. ಆಹಾರಕ್ಕಾಗಿ ವನ್ಯಜೀವಿಗಳ ಮೇಲೆ ಅವಲಂಬನೆ, ಅವುಗಳ ಅವಯವಗಳ ಮಾರಾಟದಂತ ಚಟುವಟಿಕೆಗಳು ಎಗ್ಗಿಲ್ಲದೇ ನಡೆದಿದೆ. ಅದನ್ನು ತಗ್ಗಿಸುವ ನಿಟ್ಟಿನಲ್ಲಿ ಈ ವರ್ಷ ಜಾಗೃತಿ ಮೂಡಿಸಲಾಗುತ್ತಿದೆ.

ಇದೇ ವಿಷಯದ ಮೇಲೆ ಕೆಲಸ ಮಾಡುತ್ತಿರುವ ಡಿಜಿಟಿಲ್‌ ಸಂಸ್ಥೆಗಳನ್ನು ಒಂದೇ ವೇದಿಕೆಯಡಿ ತಂದು 2030 ರ ವೇಳೆಗೆ ಬದಲಾವಣೆಗೆ ನಾಂದಿ ಹಾಡುವ ಉದ್ದೇಶವನ್ನೂ ಹೊಂದಲಾಗಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ