Booster Dose: ಜುಲೈ 15 ರಿಂದ ಮುಂದಿನ 75 ದಿನಗಳವರೆಗೆ ಉಚಿತ ಕೋವಿಡ್ ಬೂಸ್ಟರ್ ಡೋಸ್
Jul 13, 2022 05:41 PM IST
ಸಾಂದರ್ಭಿಕ ಚಿತ್ರ
- ಜುಲೈ 15 ರಿಂದ ಮುಂದಿನ 75 ದಿನಗಳವರೆಗೆ ಎಲ್ಲಾ ವಯಸ್ಕರಿಗೆ ಉಚಿತ ಕೋವಿಡ್ ಬೂಸ್ಟರ್ ಡೋಸ್ ವಿತರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ನವದೆಹಲಿ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜುಲೈ 15 ರಿಂದ ಮುಂದಿನ 75 ದಿನಗಳವರೆಗೆ ಎಲ್ಲಾ ವಯಸ್ಕರಿಗೆ ಉಚಿತ ಕೋವಿಡ್ ಬೂಸ್ಟರ್ ಡೋಸ್ ವಿತರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದ ಆರು ತಿಂಗಳ ಬಳಿಕ ಫಲಾನುಭವಿಗಳು ಮುನ್ನೆಚ್ಚರಿಕೆ ಡೋಸ್ ಪಡೆದುಕೊಳ್ಳಬಹುದಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, "ಭಾರತವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿದೆ. ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಜುಲೈ 15, 2022 ರಿಂದ ಮುಂದಿನ 75 ದಿನಗಳವರೆಗೆ 18 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಬೂಸ್ಟರ್ ಡೋಸ್‌ಗಳನ್ನು ಉಚಿತವಾಗಿ ನೀಡಲು ಎಂದು ನಿರ್ಧರಿಸಲಾಗಿದೆ. ಈ ಸೌಲಭ್ಯವು ಎಲ್ಲಾ ಸರ್ಕಾರಿ ಕೇಂದ್ರಗಳಲ್ಲಿ ಲಭ್ಯವಿರುತ್ತದೆ" ಎಂದು ತಿಳಿಸಿದ್ದಾರೆ.
ಇಡೀ ಪ್ರಪಂಚವನ್ನೇ ಸಂಕಷ್ಟಕ್ಕೆ ದೂಡಿದ್ದ ಮಹಾಮಾರಿ ಕೊರೊನಾಗೆ ಭಾರತದಲ್ಲೇ ಲಸಿಕೆಗಳು ಸಿದ್ಧವಾಗಿದ್ದವು. ಮೇಡ್ ಇನ್ ಇಂಡಿಯಾ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಅನ್ನು ಜನರಿಗೆ ನೀಡಲು ನಿರ್ಧರಿಸಲಾಯಿತು. 2021ರ ಜನವರಿ 16 ರಂದು ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಭಾರತದಲ್ಲಿ ಚಾಲನೆ ನೀಡಲಾಯಿತು.
ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರು, ಕೋವಿಡ್ ವಿರುದ್ಧದ ಮುಂಚೂಣಿ ಕಾರ್ಮಿಕರು, 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿತ್ತು. ಬಳಿಕ ಒಂದೊಂದೇ ಹಂತದಲ್ಲಿ ಲಸಿಕೆಯ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಹೋಗಲಾಗಿದ್ದು, 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಹಾಕಲಾಯಿತು. ಹಳ್ಳಿ ಹಳ್ಳಿಗೂ ಆರೋಗ್ಯ ಸಿಬ್ಬಂದಿ ಹೋಗಿ ಲಸಿಕೆ ಹಾಕಿದ್ದರು.
2022ರ ಮಾರ್ಚ್ 16 ರಂದು 12 ರಿಂದ 14 ವರ್ಷದ ಮಕ್ಕಳಿಗೂ ವ್ಯಾಕ್ಸಿನ್ ನೀಡಲು ಆರಂಭಿಸಲಾಯಿತು. ಹಾಗೆಯೇ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಅನ್ನೂ ನೀಡುತ್ತಾ ಬರಲಾಗಿತ್ತು. 2021ರ ಜನವರಿ 16 ರಿಂದ ಇಲ್ಲಿಯವರೆಗೆ ಒಟ್ಟು 1,99,12,79,010 (199.12 ಕೋಟಿ) ಡೋಸ್ ವ್ಯಾಕ್ಸಿನ್ ಅನ್ನು ವಿತರಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 11,15,068 ಲಸಿಕೆಗಳನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.