Automobile Sales: ಮಾರುತಿಯಿಂದ ಟಾಟಾದವರೆಗೆ, ಮಾರ್ಚ್ ತಿಂಗಳಲ್ಲಿ ದೇಶದಲ್ಲಿ ಅತ್ಯಧಿಕ ಮಾರಾಟವಾದ ವಾಹನಗಳು ಯಾವುವು? ಸೇಲ್ಸ್ ರಿಪೋರ್ಟ್
Apr 01, 2023 06:44 PM IST
ಮಾರ್ಚ್ ತಿಂಗಳಲ್ಲಿ ದೇಶದಲ್ಲಿ ಅತ್ಯಧಿಕ ಮಾರಾಟವಾದ ವಾಹನಗಳು ಯಾವುವು? ಸೇಲ್ಸ್ ರಿಪೋರ್ಟ್ Photographer: Chris Ratcliffe/Bloomberg
ಮಾರುತಿ ಸುಜುಕಿ ಮತ್ತು ಕಿಯಾ ಇಂಡಿಯಾ ಸೇರಿದಂತೆ ಕೆಲವು ಕಂಪನಿಗಳ ವಾಹನ ಮಾರಾಟ ತುಸು ಇಳಿಕೆ ಕಂಡಿದೆ. ಟಾಟಾ ಮೋಟಾರ್ಸ್ ಮತ್ತು ಟಿವಿಎಸ್ ಮೋಟಾರ್ ಕಂಪನಿಯ ಮಾರಾಟ ತುಸು ಸುಧಾರಿಸಿದೆ.
ನವದೆಹಲಿ: ಹಣಕಾಸು ವರ್ಷದ ಅಂತ್ಯದ ತಿಂಗಳಲ್ಲಿ ಹಲವು ವಾಹನ ಕಂಪನಿಗಳು ತಮ್ಮ ಕಾರು ಮಾರಾಟದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿವೆ. ಮಾರುತಿ ಸುಜುಕಿ ಮತ್ತು ಕಿಯಾ ಇಂಡಿಯಾ ಸೇರಿದಂತೆ ಕೆಲವು ಕಂಪನಿಗಳ ವಾಹನ ಮಾರಾಟ ತುಸು ಇಳಿಕೆ ಕಂಡಿದೆ. ಟಾಟಾ ಮೋಟಾರ್ಸ್ ಮತ್ತು ಟಿವಿಎಸ್ ಮೋಟಾರ್ ಕಂಪನಿಯ ಮಾರಾಟ ತುಸು ಸುಧಾರಿಸಿದೆ.
ಮಾರುತಿ ಸುಜುಕಿ
ದೇಶದಲ್ಲಿ ಒಟ್ಟಾರೆ ವಾಹನ ಮಾರಾಟವು ಇಳಿಕೆ ಕಂಡಿದೆ ಮಾರುತಿ ಸುಜುಕಿ ತಿಳಿಸಿದೆ. ಕಳೆದ ತಿಂಗಳು ಕಂಪನಿಯು 1,70,071 ಕಾರುಗಳನ್ನು ಮಾರಾಟ ಮಾಡಿದೆ. ಮಾರ್ಚ್‌ನಲ್ಲಿ ಡೀಲರ್‌ಗಳಿಗೆ 1,39,952 ಕಾರು ವಿತರಣೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯ ಕಾರು ಮಾರಾಟವು ಶೇಕಡ 3ರಷ್ಟು ಇಳಿಕೆ ಕಂಡಿದೆ. ಆದರೆ, ಇದೇ ಸಮಯದಲ್ಲಿ ಕಂಪನಿಯು 30,119 ಕಾರುಗಳನ್ನು ರಫ್ತು ಮಾಡಿದೆ. ಇದು ಶೇಕಡ 14ರಷ್ಟು ಏರಿಕೆಯಾಗಿದೆ.
ಕಳೆದ ಹಣಕಾಸು ವರ್ಷದಲ್ಲಿ, ಕಂಪನಿಯು ಅತ್ಯಧಿಕ ಅಂದರೆ 19,66,164 ಕಾರುಗಳ ಮಾರಾಟ ಮಾಡಿತ್ತು. 2021-22ರ 16,52,653 ಕಾರು ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡ 19ರಷ್ಟು ಏರಿಕೆಯಾಗಿದೆ.
ಟಿವಿಎಸ್ ಮೋಟಾರ್ ಕಂಪನಿ
ಟಿವಿಎಸ್ ಕಂಪನಿಯು ಮಾರ್ಚ್ 2023ರಲ್ಲಿ 3,17,152 ವಾಹನಗಳನ್ನು ಮಾರಾಟ ಮಾಡಿ ಶೇಕಡ 3ರಷ್ಟು ಏರಿಕೆ ದಾಖಲಿಸಿದೆ. ಒಟ್ಟು ದ್ವಿಚಕ್ರ ವಾಹನಗಳ ಮಾರಾಟವು ಕಳೆದ ತಿಂಗಳು ಶೇಕಡ 5 ರಷ್ಟು ಏರಿಕೆಯಾಗಿದ್ದು, 3,07,559 ಯುನಿಟ್‌ಗಳಿಗೆ ತಲುಪಿದೆ. ದೇಶೀಯ ದ್ವಿಚಕ್ರ ವಾಹನಗಳ ಮಾರಾಟವು 2,40,780 ಯೂನಿಟ್‌ಗೆ ತಲುಪಿ ಶೇಕಡ 22ರಷ್ಟು ಏರಿಕೆಯಾಗಿದೆ.
ಇದೇ ಸಂದರ್ಭದಲ್ಲಿ ತನ್ನ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿಯೂ ತುಸುತುಸುವೇ ಪ್ರಗತಿ ಕಾಣುತ್ತಿದೆ. ಟಿವಿಎಸ್ ಕಂಪನಿಯು ತನ್ನ TVS iQube ಎಲೆಕ್ಟ್ರಿಕ್ ಸ್ಕೂಟರ್‌ನ ಮಾರಾಟ ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಕಳೆದ ತಿಂಗಳು ಕಂಪನಿಯು 15,364 ಟಿವಿಎಸ್ ಐಕ್ಯೂಬ್ ಸ್ಕೂಟರ್‌ಗಳನ್ನು ಮಾರಾಟ ಮಾಡಿತ್ತು. ಕಳೆದ ತಿಂಗಳು ಕಂಪನಿಯು 9,593 ಯುನಿಟ್ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು.
ಇದೇ ಸಮಯದಲ್ಲಿ ಕಂಪನಿಯು 75,037 ವಾಹನಗಳನ್ನು ರಫ್ತು ಮಾಡಿದೆ. 2022 ರ 1,09,724 ವಾಹನ ರಫ್ತಿಗೆ ಹೋಲಿಸಿದರೆ ರಫ್ತು ವಹಿವಾಟು ಇಳಿಕೆ ಕಂಡಿದೆ.
ಕಿಯಾ ಇಂಡಿಯಾ
ಕಿಯಾ ಇಂಡಿಯಾ ಮಾರಾಟವೂ ಕಳೆದ ತಿಂಗಳು ತುಸು ಇಳಿಕೆ ಕಂಡಿದೆ. ಮಾರ್ಚ್ 2023ರಲ್ಲಿ ಕಂಪನಿಯು 21,501 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ತಿಂಗಳು ಕಂಪನಿಯು 8,677 ಸೊನೆಟ್, 6,554 ಸೆಲ್ಟೋಸ್, 6,102 ಸರೆನ್ಸ್ ಕಾರುಗಳನ್ನು ಡೀಲರ್‌ಗಳಿಗೆ ವಿಲೇವಾರಿ ಮಾಡಿದೆ. 2022-23 ಹಣಕಾಸು ವರ್ಷದಲ್ಲಿ ಕಂಪನಿಯು ಒಟ್ಟು 2,69,229 ಕಾರುಗಳನ್ನು ಮಾರಾಟ ಮಾಡಿದೆ. 2021-22 ಹೋಲಿಸಿದರೆ 2022-23 ಹಣಕಾಸು ವರ್ಷದಲ್ಲಿ ಕಂಪನಿಯ ವಾಹನ ಮಾರಾಟವು ಶೇಕಡ 44ರಷ್ಟು ಏರಿಕೆ ಕಂಡಿತ್ತು.
ಟಾಟಾ ಮೋಟಾರ್ಸ್
ಕಂಪನಿಯು ದೇಶೀಯವಾಗಿ ಒಟ್ಟು 89,351 ವಾಹನಗಳನ್ನು ಮಾರಾಟ ಮಾಡಿದ್ದು, ಶೇಕಡ 3ರಷ್ಟು ಪ್ರಗತಿ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 86,718 ವಾಹನಗಳನ್ನು ಮಾರಾಟ ಮಾಡಿತ್ತು.
ಕಳೆದ ತಿಂಗಳು ಕಂಪನಿಯು ದೇಶದಲ್ಲಿ 44,044 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. ಇದೇ ಸಂದರ್ಭದಲ್ಲಿ 46,823 ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಿದೆ.