Google Blocks Apps: ನಿಮ್ಮ ಮೊಬೈಲ್‌ನಿಂದ ಈ ಅಪಾಯಕಾರಿ ಆಪ್‌ಗಳನ್ನು ಈಗಲೇ ಡಿಲೀಟ್ ಮಾಡಿ
Jul 09, 2022 03:52 PM IST
ನಿಮ್ಮ ಮೊಬೈಲ್‌ನಿಂದ ಈ ಅಪಾಯಕಾರಿ ಆಪ್‌ಗಳನ್ನು ಈಗಲೇ ಡಿಲೀಟ್ ಮಾಡಿ
- ಜೋಕರ್ ಮಾಲ್ವೇರ್ ಮಾತ್ರವಲ್ಲದೆ ಸ್ಮಾರ್ಟ್ ಎಂಎಸ್‌ಎಸ್ ಮೆಸೇಜಸ್, ಬ್ಲಡ್ ಪ್ರೆಷರ್ ಮಾನಿಟರ್, ವಾಯ್ಸ್ ಲ್ಯಾಂಗ್ವೇಜಸ್ ಟ್ರಾನ್ಸ್‌ಲೇಟರ್ ಮತ್ತು ಕ್ವಿಕ್ ಟೆಕ್ಸ್ಟ್ ಎಸ್‌ಎಂಎಸ್ ಎಂಬ ಆಪ್‌ಗಳನ್ನು ಗೂಗಲ್ ಬ್ಲಾಕ್ ಮಾಡಿದೆ.
ಮೊಬೈಲ್ ನಿಮ್ಮದೇ ಕೈನಲ್ಲಿರುತ್ತದೆ. ಆದರೆ, ಮೊಬೈಲ್‌ನ ಸಂಪೂರ್ಣ ಹಿಡಿತ ಎಲ್ಲೋ ದೂರದಲ್ಲಿರುವ ಬೇರೆ ಯಾರದ್ದೋ ಕೈನಲ್ಲಿರುತ್ತದೆ. ಅಲ್ಲೆಲ್ಲೋ ಕುಳಿತ ಅವರು ನಿಮ್ಮ ಮೊಬೈಲ್‌ನಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಸಿ ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡುತ್ತಾರೆ. ನಿಮ್ಮ ಕಾಂಟ್ಯಾಕ್ಟ್‌ನಲ್ಲಿರುವರಿಗೆಲ್ಲ ಅಶ್ಲೀಲ ಸಂದೇಶ ಅಥವಾ ವಿಡಿಯೋ ಕಳುಹಿಸುತ್ತಾರೆ. ಆಮೇಲೆ ಅವರು ನಿಮ್ಮದೇ ಮೊಬೈಲ್‌ಗೆ ಕರೆ ಮಾಡಿ ಈ ರೀತಿ ಮಾಡಬಾರದೆಂದಾದರೆ ಹಣ ನೀಡಿ ಎಂದು ಪೀಡಿಸುತ್ತಾರೆ. ನಿಮ್ಮ ಮೊಬೈಲ್ ಸ್ವಾಧೀನಕ್ಕೆ ತೆಗೆದುಕೊಂಡು ನಿಮ್ಮದೇ ಹೆಸರಿನಲ್ಲಿ ಬ್ಯಾಂಕ್‌ನಿಂದ ಬೃಹತ್ ಮೊತ್ತ ಸಾಲ ಪಡೆದು ತಮ್ಮ ಖಾತೆಗೆ ವರ್ಗಾಯಿಸುತ್ತಾರೆ. ನಿಮ್ಮ ಮೊಬೈಲ್‌ನಲ್ಲಿ ಇಂತಹ ದುರ್ಘಟನೆಗಳು ನಡೆಯಲು ಕಾರಣವಾಗುವುದು ಕೆಲವೊಂದು ದುರುದ್ದೇಶಪೂರಿತ ಆಪ್‌ಗಳು. ನಿಮಗೆ ಗೊತ್ತಿಲ್ಲದೆ ನಿಮ್ಮ ಮೊಬೈಲ್ ಪ್ರವೇಶಿಸುವ ಇಂತಹ ಆಪ್‌ಗಳ ಮೂಲಕ ಸೈಬರ್ ಖದೀಮರು ಏನೂ ಬೇಕಾದರೂ ಮಾಡಬಹುದು.
ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ವಿವಿಧ ಮಾಲ್‌ವೇರ್ ಆಪ್‌ಗಳನ್ನು ಗೂಗಲ್ ಬ್ಲಾಕ್ ಮಾಡಿದೆ. ಅವುಗಳಲ್ಲಿ ಪ್ರಮುಖವಾದದ್ದು Joker Malware. ಮೊದಲ ಬಾರಿಗೆ ೨೦೧೭ರಲ್ಲಿ ಈ ಆಪ್ ಮೊದಲ ಬಾರಿಗೆ ಪತ್ತೆಯಾಗಿತ್ತು. ಆಂಡ್ರಾಯ್ಡ್ ಬಳಕೆದಾರರ ಫೋನ್ ಅನ್ನು ಹೈಜಾಕ್ ಮಾಡಲು ಸೈಬರ್‌ಕ್ರಿಮಿನಲ್‌ಗಳು ಈ ಆಪ್ ಬಳಸುತ್ತಿದ್ದರು. ಈಗ ಮತ್ತೆ ಸೈಬರ್ ಕ್ರಿಮಿನಲ್‌ಗಳು ಇಂತಹ ಆಪ್‌ಗಳ ಮೂಲಕ ಬಳಕೆದಾರರ ಮೊಬೈಲ್ ಅನ್ನು ಸಂಪೂರ್ಣವಾಗಿ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ಈ ಆಪ್ ಮತ್ತೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕಾಣಿಸಿಕೊಂಡಿತ್ತು. ಗೂಗಲ್ ಈಗಾಗಲೇ ಇಂತಹ ನಾಲ್ಕು ಆಪ್‌ಗಳನ್ನು ಬ್ಲಾಕ್ ಮಾಡಿದೆ. ಆದರೆ, ಗೂಗಲ್ ಬ್ಲಾಕ್ ಮಾಡುವ ಮೊದಲೇ ಹಲವು ಲಕ್ಷ ಜನರು ಈ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದಾರಂತೆ.
ಜೋಕರ್ ಮಾಲ್ವೇರ್ ಮಾತ್ರವಲ್ಲದೆ ಸ್ಮಾರ್ಟ್ ಎಂಎಸ್‌ಎಸ್ ಮೆಸೇಜಸ್, ಬ್ಲಡ್ ಪ್ರೆಷರ್ ಮಾನಿಟರ್, ವಾಯ್ಸ್ ಲ್ಯಾಂಗ್ವೇಜಸ್ ಟ್ರಾನ್ಸ್‌ಲೇಟರ್ ಮತ್ತು ಕ್ವಿಕ್ ಟೆಕ್ಸ್ಟ್ ಎಸ್‌ಎಂಎಸ್ ಎಂಬ ಆಪ್‌ಗಳನ್ನು ಗೂಗಲ್ ಬ್ಲಾಕ್ ಮಾಡಿದೆ. ನಿಮ್ಮ ಮೊಬೈಲ್‌ನಲ್ಲಿ ಈ ಆಪ್ ಇದ್ದರೆ ಈಗಲೇ ಡಿಲೀಟ್ ಮಾಡಿ. ಈಗಾಗಲೇ ಹಲವು ಲಕ್ಷ ಜನರು ಈ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿರುವುದರಿಂದ ಅವರೆಲ್ಲರೂ ಅಪಾಯದಲ್ಲಿದ್ದಾರೆ. ಈ ರೀತಿ ಡೌನ್‌ಲೋಡ್ ಮಾಡಿರುವವರ ಮೊಬೈಲ್‌ನಿಂದ ನಿಮ್ಮ ಮೊಬೈಲ್‌ಗೂ ಯಾವುದಾದರೂ ಲಿಂಕ್ ಬಂದು ಇಂತಹ ಮಾಲ್‌ವೇರ್‌ಗಳು ನಿಮ್ಮ ಮೊಬೈಲ್ ಪ್ರವೇಶಿಸಬಹುದು.
ಜೋಕರ್ ಮಾಲ್ವೇರ್ ಆಪ್ ಆರಂಭದಲ್ಲಿ ಎಸ್‌ಎಂಎಸ್ ಫೀಚರ್ ನೀಡುತ್ತದೆ. ಬಳಿಕ ಬಳಕೆದಾರರಿಗೆ ತಿಳಿಯದಂತೆ ಅವರ ಸ್ಮಾರ್ಟ್‌ಫೋನ್ ಅನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತದೆ. ಸೈಲೆಂಟ್ ಆಗಿ ಬಳಕೆದಾರರ ಫೋನ್‌ನ ನೋಟಿಫಿಕೇಷನ್ ಟ್ರ್ಯಾಕ್ ಮಾಡುವುದು, ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದು, ನಿಮ್ಮ ಫೋನ್ ಮೂಲಕ ಇತರರಿಗೆ ಕರೆ ಮಾಡುವುದು, ಎಂಎಸ್‌ಎಸ್ ಕಳುಹಿಸುವುದು ಇತ್ಯಾದಿಗಳನ್ನು ಮಾಡುತ್ತದೆ. ಈ ರೀತಿಯ ಕೆಲಸಗಳು ನಿಮಗೆ ಅರಿವಿಲ್ಲದಂತೆ ನಡೆಯುತ್ತವೆ.
ಆಂಡ್ರಾಯ್ಡ್ ಬಳಕೆದಾರರು ಏನು ಮಾಡಬೇಕು?
ಆಂಡ್ರಾಯ್ಡ್ ಫೋನ್ ಬಳಕೆದಾರರು ತಾವು ಡೌನ್‌ಲೋಡ್ ಮಾಡಿಕೊಂಡಿರುವ ಆಪ್‌ಗಳೆಲ್ಲವನ್ನೂ ಒಮ್ಮೆ ಪರಿಶೀಲಿಸಿಕೊಳ್ಳಬಹುದು. ಅನಗತ್ಯ ಮತ್ತು ಅಪಾಯಕಾರಿ ಎಂದೆನಿಸಿದ ಆಪ್‌ಗಳನ್ನು ಡಿಲೀಟ್ ಮಾಡಿ. ಕೆಲವೊಮ್ಮೆ ಮಕ್ಕಳ ಕೈಗೆ ಮೊಬೈಲ್ ನೀಡಿದರೆ ಅವರು ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಗೇಮ್ಸ್ ಅಥವಾ ಇತರೆ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಇಂತಹ ಆಪ್‌ಗಳನ್ನು ತಕ್ಷಣ ಡಿಲೀಟ್ ಮಾಡಿ. ಇಲ್ಲವಾದರೆ ನಿಮ್ಮ ಫೋನ್‌ಗೆ ಹ್ಯಾಕರ್‌ಗಳು ಪ್ರವೇಶಿಸಿ ತೊಂದರೆ ನೀಡಬಹುದು.