LIC loss in Adani: ಅದಾನಿ ಸಾಮ್ರಾಜ್ಯದಲ್ಲಿ ತಲ್ಲಣ, ಭಾರತೀಯ ಜೀವ ವಿಮಾ ನಿಗಮಕ್ಕೆ 16,580 ಕೋಟಿ ರೂ. ನಷ್ಟ, ಇಲ್ಲಿದೆ ಸಂಪೂರ್ಣ ಲೆಕ್ಕ
Jan 28, 2023 03:31 PM IST
ಅದಾನಿ ಸಾಮ್ರಾಜ್ಯದಲ್ಲಿ ತಲ್ಲಣ, ಭಾರತೀಯ ಜೀವ ವಿಮಾ ನಿಗಮಕ್ಕೆ 16,580 ಕೋಟಿ ರೂ. ನಷ್ಟ
- LIC loses 16,580 crore: ಭಾರತೀಯ ಜೀವ ವಿಮಾ ನಿಗಮವು ಅದಾನಿ ಗ್ರೂಪ್‌ನ ಬೃಹತ್ ದೇಶೀಯ ಸಾಂಸ್ಥಿಕ ಹೂಡಿಕೆದಾರ ಕಂಪನಿಯಾಗಿದ್ದು, ಕಳೆದ ಎರಡು ದಿನಗಳಲ್ಲಿ ಎಲ್‌ಐಸಿಗೆ 16,580 ಕೋಟಿ ರೂ. ನಷ್ಟವಾಗಿದೆ.
ನವದೆಹಲಿ: ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್‌ನ ಅಧ್ಯಯನ ವರದಿಗೆ ಕಳೆದ ಕೆಲವು ದಿನಗಳಿಂದ ಅದಾನಿ ಷೇರು ಸಾಮ್ರಾಜ್ಯ ಎರಡು ಲಕ್ಷ ಕೋಟಿಗೂ ಅಧಿಕ ನಷ್ಟ ಅನುಭವಿಸಿದ್ದು, ಅದಾನಿ ಗ್ರೂಪ್‌ನಲ್ಲಿ ಹೂಡಿಕೆ ಮಾಡಿರುವ ಎಲ್‌ಐಸಿಗೂ ನಷ್ಟದ ಬಿಸಿ ತಟ್ಟಿದೆ.
ಹಿಂಡನ್‌ಬರ್ಗ್ ರಿಸರ್ಚ್ ವರದಿಯು ಅದಾನಿ ಗ್ರೂಪ್‌ನ ಷೇರುಗಳ ಮೇಲೆ ಗಂಭೀರ ಹೊಡೆತವನ್ನೇ ನೀಡಿದೆ. ದಿನದಿಂದ ದಿನಕ್ಕೆ ಅದಾನಿ ಷೇರು ಮೌಲ್ಯ ಕುಸಿಯುತ್ತಿದೆ. ನಿನ್ನೆ ಒಂದೇ ದಿನ ಅದಾನಿ ಗ್ರೂಪ್‌ನ ಷೇರುಗಳ ಮೌಲ್ಯ ಶೇಕಡ 20ರಷ್ಟು ಕುಸಿದಿದೆ. ಇದರಿಂದ 4.17 ಲಕ್ಷ ಕೋಟಿ ರೂ.ನಷ್ಟು ನಷ್ಟ ಸಂಭವಿಸಿದೆ.
ಅದಾನಿ ಗ್ರೂಪ್‌ನ ರಿಟೇಲ್ ಮತ್ತು ಸಾಂಸ್ಥಿಕ ಹೂಡಿಕೆದಾರರು ನಷ್ಟ ಅನುಭವಿಸುತ್ತಿದ್ದಾರೆ. ಭಾರತೀಯ ಜೀವ ವಿಮಾ ನಿಗಮವು ಅದಾನಿ ಗ್ರೂಪ್‌ನ ಬೃಹತ್ ದೇಶೀಯ ಸಾಂಸ್ಥಿಕ ಹೂಡಿಕೆದಾರ ಕಂಪನಿಯಾಗಿದ್ದು, ಕಳೆದ ಎರಡು ದಿನಗಳಲ್ಲಿ ಎಲ್‌ಐಸಿಗೆ 16,580 ಕೋಟಿ ರೂ. ನಷ್ಟವಾಗಿದೆ. ಈ ಹದಿನಾರುವರೆ ಸಾವಿರ ಕೋಟಿ ರೂ.ಗಳಲ್ಲಿ ಅದಾನಿ ಟೋಟಲ್ ಗ್ಯಾಸ್‌ನಲ್ಲಿ ಮಾಡಿರುವ ಹೂಡಿಕೆಯಿಂದಲೇ ಎಲ್‌ಐಸಿಯು 6,232 ಕೋಟಿ ರೂ. ನಷ್ಟ ಅನುಭವಿಸಿದೆ. ಅದಾನಿ ಟೋಟಲ್ ಗ್ಯಾಸ್‌ನಲ್ಲಿ ಎಲ್‌ಐಸಿಯು ಶೇಕಡ 5.96ರಷ್ಟು ಷೇರು ಹೊಂದಿದೆ.
ಅದಾನಿ ಸಮೂಹದಲ್ಲಿ ಎಲ್‌ಐಸಿ ಹೊಂದಿರುವ ಹೂಡಿಕೆ ಮತ್ತು ಕಳೆದ ಎರಡು ದಿನಗಳಲ್ಲಿ ಅನುಭವಿಸಿದ ನಷ್ಟದ ವಿವರವನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸಹೋದರಿ ಪತ್ರಿಕೆ ಲೈವ್‌ಮಿಂಟ್ (livemint) ನೀಡಿದೆ. ಬನ್ನಿ, ಎಲ್‌ಐಸಿಯು ಅದಾನಿ ಗ್ರೂಪ್‌ನ ವಿವಿಧ ಷೇರುಗಳಲ್ಲಿ ಎಷ್ಟು ಕಳೆದುಕೊಂಡಿದ ಎಂಬ ವಿವರ ಪಡೆಯೋಣ.
1. ಅದಾನಿ ಎಂಟರ್‌ಪ್ರೈಸಸ್ (Adani Enterprises)
ಅದಾನಿ ಸಮೂಹದ ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಎಲ್‌ಐಸಿಯು 4,81,74,654 ಷೇರುಗಳನ್ನು ಹೊಂದಿದೆ. ಕಳೆದ ಎರಡು ದಿನಗಳಲ್ಲಿ ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ)ಯಲ್ಲಿ ಅದಾನಿ ಎಂಟರ್‌ಪ್ರೈಸಸ್ ಷೇರಿನ ಬೆಲೆ 3,442 ರೂ.ನಿಂದ 2,768.50 ರೂ.ಗೆ ಕುಸಿದಿದೆ. ಅಂದರೆ, ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಕಳೆದ ಎರಡು ದಿನಗಳಲ್ಲಿ ₹673.5 ನಷ್ಟ ಅನುಭವಿಸಿದೆ. ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಅಕ್ಟೋಬರ್‌ನಿಂದ ಡಿಸೆಂಬರ್ (2022) ತ್ರೈಮಾಸಿಕದ ವರದಿ ಪ್ರಕಾರ ಎಲ್‌ಐಸಿಯು 4,81,74,654 ಅದಾನಿ ಎಂಟರ್‌ಪ್ರೈಸಸ್ ಷೇರುಗಳನ್ನು ಹೊಂದಿದೆ. ಅಂದ್ರೆ, ಕಳೆದ ಎರಡು ದಿನಗಳ ಷೇರು ಕುಸಿತದಿಂದಾಗಿ ಎಲ್‌ಐಸಿಯು 3,245 ಕೋಟಿ ರೂ. (673.50 ರೂ. x 4,81,74,654 ಷೇರು) ಕಳೆದುಕೊಂಡಿದೆ.
2. ಅದಾನಿ ಪೋರ್ಟ್ಸ್ (Adani Ports)
ಇದರಲ್ಲಿ ಎಲ್‌ಐಸಿಯು 19,75,26,194 ಷೇರುಗಳನ್ನು ಹೊಂದಿದೆ. ಅಂದ್ರೆ, ಅದಾನಿ ಪೋರ್ಟ್ಸ್‌ನಲ್ಲಿ ಎಲ್‌ಐಸಿಯು ಶೇಕಡ 9.14 ಪಾಲು ಹೊಂದಿದೆ. ಕಳೆದ ಎರಡು ದಿನಗಳಲ್ಲಿ ಅದಾನಿ ಪೋರ್ಟ್ ಷೇರಿನ ಬೆಲೆಯು 761.20 ರೂ.ನಿಂದ 604.50 ರೂ.ಗೆ ಕುಸಿದಿದೆ. ಎರಡು ದಿನಗಳಲ್ಲಿ ಪ್ರತಿಷೇರಿನ ಬೆಲೆ 156.70 ರೂ. ನಷ್ಟವಾಗಿದೆ. ಎಲ್‌ಐಸಿಯು ಅದಾನಿ ಪೋರ್ಟ್‌ನಲ್ಲಿ 19,75,26,194 ಷೇರುಗಳನ್ನು ಹೊಂದಿರುವುದರಿಂದ ಈ ಎರಡು ದಿನಗಳಲ್ಲಿ ಎಲ್‌ಐಸಿಯ ನಿವ್ವಳ ನಷ್ಟವು 3,095 ಕೋಟಿ ರೂ. (156.70 ರೂ. x 19,75,26,194 ಷೇರು) ಆಗಿದೆ.
3. ಅದಾನಿ ಟ್ರಾನ್ಸ್‌ಮಿಷನ್ (Adani Transmission)
ಅಕ್ಟೋಬರ್‌ನಿಂದ ಡಿಸೆಂಬರ್ 2022 ತ್ರೈಮಾಸಿಕದ ಅದಾನಿ ಟ್ರಾನ್ಸ್‌ಮಿಷನ್‌ನ ಅಂಕಿಅಂಶಗಳ ಪ್ರಕಾರ, ಅದಾನಿ ಟ್ರಾನ್ಸ್‌ಮಿಷನ್‌ನಲ್ಲಿ ಎಲ್‌ಐಸಿಯು LIC 4,06,76,207 ಷೇರುಗಳನ್ನು ಅಥವಾ ಕಂಪನಿಯಲ್ಲಿ 3.65 ಶೇಕಡಾ ಪಾಲನ್ನು ಹೊಂದಿದೆ. ಕಳೆದ ಎರಡು ದಿನಗಳಲ್ಲಿ, ಅದಾನಿ ಟ್ರಾನ್ಸ್‌ಮಿಷನ್ ಷೇರಿನ ಬೆಲೆ 2,762.15 ರೂ.ನಿಂದ 2,014.20 ರೂ.ಗೆ ಕುಸಿದಿದೆ, ಈ ಎರಡು ದಿನಗಳಲ್ಲಿ ಪ್ರತಿ ಷೇರಿಗೆ 747.95 ರೂ. ನಷ್ಟವಾಗಿದೆ. ಎಲ್‌ಐಸಿಯು 4,06,76,207 ಅದಾನಿ ಟ್ರಾನ್ಸ್‌ಮಿಷನ್ ಷೇರುಗಳನ್ನು ಹೊಂದಿರುವುದರಿಂದ, ಅದಾನಿ ಟ್ರಾನ್ಸ್‌ಮಿಷನ್ ಷೇರುಗಳ ಕಳೆದ ಎರಡು ದಿನಗಳ ಕುಸಿತದಲ್ಲಿ ಎಲ್‌ಐಸಿಯ ನಿವ್ವಳ ನಷ್ಟ ಸುಮಾರು 3,042 ಕೋಟಿ ರೂ. (747.95 ರೂ. x 4,06,76,207 ಷೇರು) ಆಗಿದೆ.
4. ಅದಾನಿ ಗ್ರೀನ್: (Adani Green)
ಡಿಸೆಂಬರ್ 2022ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ಅದಾನಿ ಗ್ರೀನ್ ಎನರ್ಜಿಯು ಷೇರುದಾರರಿಗೆ ನೀಡಿದ ಮಾಹಿತಿ ಪ್ರಕಾರ ಎಲ್‌ಐಸಿಯು ಅದಾನಿ ಗ್ರೀನ್‌ನಲ್ಲಿ 2,03,09,080 ಷೇರುಗಳನ್ನು ಅಥವಾ ಕಂಪನಿಯಲ್ಲಿ 1.28 ಶೇಕಡಾ ಪಾಲನ್ನು ಹೊಂದಿದೆ. ಕಳೆದ ಎರಡು ದಿನಗಳಲ್ಲಿ ಅದಾನಿ ಗ್ರೀನ್‌ನ ಷೇರುಗಳ ಮೌಲ್ಯ 430.55 ರೂ.ನಷ್ಟು ಕುಸಿದಿದೆ. ಇದರಿಂದ ಎಲ್‌ಐಸಿಗೆ ಎರಡು ದಿನದ ವಹಿವಾಟಿನಲ್ಲಿ 875 ಕೋಟಿ ರೂ. ನಷ್ಟವಾಗಿದೆ.
5. ಅದಾನಿ ಟೋಟಲ್ ಗ್ಯಾಸ್ (Adani Total Gas)
ಡಿಸೆಂಬರ್ 2022ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿಅದಾನಿ ಟೋಟಲ್ ಗ್ಯಾಸ್ ಷೇರುದಾರರಿಗೆ ನೀಡಿದ ಮಾಹಿತಿ ಪ್ರಕಾರ ಅದಾನಿ ಟೋಟಲ್ ಗ್ಯಾಸ್‌ನಲ್ಲಿ ಎಲ್‌ಐಸಿಯು 6,55,88,170 ಷೇರುಗಳನ್ನು ಅಥವಾ ಕಂಪನಿಯಲ್ಲಿ 5.96 ಶೇಕಡಾ ಪಾಲನ್ನು ಹೊಂದಿದೆ. ಅದಾನಿ ಗ್ರೀನ್ ಷೇರಿನ ಬೆಲೆ ಕಳೆದ ಎರಡು ದಿನಗಳಲ್ಲಿ963.75 ರೂ.ನಷ್ಟು ಕುಸಿದಿದೆ. ಇದರಿಂದ ಕಳೆದ ಎರಡು ದಿನದ ಷೇರು ವ್ಯವಹಾರದಲ್ಲಿ ಎಲ್‌ಐಸಿಗೆ ನೇರವಾಗಿ 6,323 ಕೋಟಿ ನಷ್ಟ ಉಂಟಾಗಿದೆ.
ಒಟ್ಟಾರೆ ಈ ಐದು ಕಂಪನಿಗಳಲ್ಲಿ ಮಾಡಿರುವ ಹೂಡಿಕೆಗಳಲ್ಲಿ ಕಳೆದ ಎರಡು ದಿನಗಳಲ್ಲಿ ಎಲ್‌ಐಸಿಯು 16,580 ಕೋಟಿ ರೂ.ನಷ್ಟು ಕಳೆದುಕೊಂಡಿದೆ.