Aircraft crash: ತೆಲಂಗಾಣದಲ್ಲಿ ಏರ್‌ಫೋರ್ಸ್ ತರಬೇತಿ ವಿಮಾನ ಪತನ: ಇಬ್ಬರ ದುರ್ಮರಣ
Dec 04, 2023 12:31 PM IST
ತೆಲಂಗಾಣದಲ್ಲಿ ತರಬೇತಿ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.
- Aircraft Crash in Telangana ತರಬೇತಿಯಲ್ಲಿ ನಿರತವಾಗಿದ್ದ ಭಾರತೀಯ ಸೇನಾ ಪಡೆಯ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ದೆಹೆಲಿ: ಭಾರತೀಯ ಸೇನಾ ಪಡೆಗೆ ( Indian Air Force) ಸೇರಿದ ತರಬೇತಿ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ಸೋಮವಾರ ನಡೆದಿದೆ.
ತರಬೇತಿಯಲ್ಲಿ ನಿರತವಾಗಿದ್ದ ವಿಮಾನ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಏಕಾಏಕಿ ಪತನಗೊಂಡು ದುರ್ಘಟನೆ ಸಂಭವಿಸಿದೆ. ಘಟನೆಗೆ ಕಾರಣ ಪತ್ತಗೆ ತನಿಖೆಗೆ ಆದೇಶ ಮಾಡಲಾಗಿದೆ.
ಹೈದರಾಬಾದ್‌ನಲ್ಲಿರುವ ಭಾರತೀಯ ಸೇನಾ ಪಡೆಯ ತರಬೇತಿ ಅಕಾಡೆಮಿಯಲ್ಲಿ(AFA)ಪ್ರತಿ ದಿನ ತರಬೇತಿಗಳು ನಡೆಯುತ್ತಲೇ ಇರುತ್ತವೆ. ಅದರಂತೆ ಸೋಮವಾರವೂ ಎಂದಿನಂತೆ ತರಬೇತುದಾರರೊಬ್ಬರು ಹಾಗೂ ಇನ್ನೊಬ್ಬ ತರಬೇತಿ ಹಂತದಲ್ಲಿದ್ದ ಪ್ರಶಿಕ್ಷಣಾರ್ಥಿಗಳಿದ್ದ ತರಬೇತಿ ವಿಮಾನವು ಹೈದ್ರಾಬಾದ್‌ನಿಂದ ಹೊರಟಿತ್ತು. ತಾಂತ್ರಿಕ ದೋಷದಿಂದ ಏಕಾಏಕಿ ವಿಮಾನ ಪತನಗೊಂಡಿದೆ. ಬೆಂಕಿ ಕಾಣಿಸಿಕೊಂಡು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ಧಾರೆ.
ಪಿಸಿ 7 ಎಂಕೆ ತರಬೇತಿ ವಿಮಾನ ಅಪಘಾತಕ್ಕೀಡಾಗಿದೆ. ಇಬ್ಬರು ನಿಯಮಿತ ತರಬೇತಿಯಲ್ಲಿದ್ದಾಗ ಈ ದುರಂತ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿರುವುದು ಬೇಸರದಾಯಕ ಸಂಗತಿ ಎಂದು ಭಾರತೀಯ ಸೇನಾ ಪಡೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಇದು ಸಿಂಗಲ್ ಎಂಜಿನ್ ವಿಮಾನ, ಇದನ್ನು ಮೂಲ ತರಬೇತಿ ನೀಡಲು ಬಳಕೆ ಮಾಡಲಾಗುತ್ತದೆ. ಘಟನೆ ಕುರಿತು ತನಿಖೆಗೆ ಆದೇಶಿಸಿದೆ. ಘಟನೆಗೆ ಕಾರಣ ಏನು ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ ಎಂದು ಭಾರತೀಯ ಸೇನಾ ಪಡೆ ತಿಳಿಸಿದೆ.
ಘಟನೆ ಕುರಿತು ವಿಷಾದ ವ್ಯಕ್ತಪಡಿಸಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್, ದುರ್ಘಟನೆಯಲ್ಲಿ ಜೀವ ಕಳೆದುಕೊಂಡು ಇಬ್ಬರ ಕುಟುಂಬಗಳಿಗೆ ಸಾಂತ್ವನ ಹೇಳುವೆ. ಹೈದ್ರಾಬಾದ್ ಸಮೀಪದ ಮೇಡಕ್ ಜಿಲ್ಲೆಯಲ್ಲಿ ನಡೆದಿರುವ ಘಟನೆ ಬೇಸರ ತಂದಿದೆ ಎಂದು ಹೇಳಿದ್ಧಾರೆ.