Uddhav Thackeray: ಬಿಜೆಪಿಯ ಹಿಂದುತ್ವದ ಮಾಡೆಲ್ ಚೂರು ಇಷ್ಟ ಇಲ್ಲ: ಪರ್ಯಾಯ ದಾರಿ ಹೇಳಿದ ಉದ್ಧವ್ ಠಾಕ್ರೆ
Feb 13, 2023 06:32 AM IST
ಉದ್ಧವ್ ಠಾಕ್ರೆ
- ಬಿಜೆಪಿ ಪ್ರತಿಪಾದಿಸುತ್ತಿರುವ ಹಿಂದುತ್ವದ ಮಾದರಿ ಮೇಲೆ ತಮಗೆ ನಂಬಿಕೆ ಇಲ್ಲ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗುಡುಗಿದ್ದಾರೆ. ಮುಂಬೈನಲ್ಲಿ ಮಾತನಾಡಿದ ಅವರು, ಬಿಜಪಿಯ ಹಿಂದುತ್ವ ಅಸಲಿ ಹಿಂದುತ್ವವೇ ಅಲ್ಲ ಎಂದು ಕಿಡಿಕಾರಿದ್ದಾರೆ. ಈ ಕುರಿತು ವಿಸ್ತೃತ ಮಾಹಿತಿ ಇಲ್ಲಿದೆ..
ಮುಂಬೈ: ಬಿಜೆಪಿ ಪ್ರತಿಪಾದಿಸುತ್ತಿರುವ ಹಿಂದುತ್ವದ ಮಾದರಿ ಮೇಲೆ ತಮಗೆ ನಂಬಿಕೆ ಇಲ್ಲ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗುಡುಗಿದ್ದಾರೆ. ಮುಂಬೈನಲ್ಲಿ ಮಾತನಾಡಿದ ಅವರು, ಬಿಜಪಿಯ ಹಿಂದುತ್ವ ಅಸಲಿ ಹಿಂದುತ್ವವೇ ಅಲ್ಲ ಎಂದು ಕಿಡಿಕಾರಿದ್ದಾರೆ.
ಶಿವಸೇನೆ ಸಂಸ್ಥಾಪಕ ಹಾಗೂ ತಮ್ಮ ತಂದೆ ಭಾಳ್ ಸಾಹೇಬ್ ಠಾಕ್ರೆ ಎಂದಿಗೂ ಹಿಂದೂ ಮತ್ತು ಮುಸ್ಲಿಮರನ್ನು ಪ್ರತ್ಯೇಕಿಸಲಿಲ್ಲ. ದೇಶದ ವಿರುದ್ಧ ಕೆಲಸ ಮಾಡುವವರು ಯಾವುದೇ ಧರ್ಮದವರಾದರೂ, ಅವರಿಗೆ ಶಿಕ್ಷೆಯಾಗಬೇಕು ಎಂದು ಎಂದು ಅವರು ನಂಬಿದ್ದರು. ಇದು ಶಿವಸೇನೆಯ ಹಿಂದುತ್ವ. ಬಿಜೆಪಿಯು ನಕಲಿ ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದು, ಅವರ ಹಿಂದುತ್ವದ ಆವೃತ್ತಿಯಲ್ಲಿ ನನಗೆ ನಂಬಿಕೆ ಇಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ನಾವು (ಉದ್ಧವ್ ಠಾಕ್ರೆ ಬಣ) ಹಿಂದುತ್ವದಿಂದ ಹಿಂದೆ ಸರಿದಿದ್ದೇವೆ ಎಂದು ಬಿಜೆಪಯವರು ಆಪಾದಿಸುತ್ತಾರೆ. ಆದರೆ ಅವರು ಪ್ರತಿಪಾದಿಸುವ ಹಿಂದುತ್ವ ಅಸಲಿ ಹಿಂದುತ್ವವೇ ಅಲ್ಲ. ಮುಸ್ಲಿಮರನ್ನು ಪ್ರತ್ಯೇಕವಾಗಿ ನೋಡುವ ಸಿದ್ಧಾಂತ ನೈಜ ಹಿಂದುತ್ವ ಅಲ್ಲ ಎಂದು ಉದ್ಧವ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.
ಭಾಳ್ ಸಾಹೇಬ್ ಠಾಕ್ರೆ ಅವರ ಹಿಂದುತ್ವದ ಸಿದ್ಧಾಂತದಲ್ಲಿ ಸ್ಪಷ್ಟತೆ ಇತ್ತು. ಅವರು ಎಂದಿಗೂ ಹಿಂದೂ ಹಾಗೂ ಮುಸ್ಲಿಮರ ನಡುವೆ ವ್ಯತ್ಯಾಸ ಕಾಣಲಿಲ್ಲ. ಮುಸ್ಲಿಮರು ಕೂಡ ಭಾಳ್ ಸಾಹೇಬ್ ಠಾಕ್ರೆ ಅವರನ್ನು ಗೌರವಿಸುತ್ತಿದ್ದರು. ಆದರೆ ಇಂದು ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಮುಸ್ಲಿಮರ ಬಗ್ಗೆ ದ್ವೇಷ ಭಾವನೆಯನ್ನು ಕೆರಳಿತ್ತಿದೆ ಎಂದು ಉದ್ಧವ್ ಠಾಕ್ರೆ ಆರೋಪಿಸಿದರು.
ಅಯೋಧ್ಯೆಯ ರಾಮ ಮಂದಿರ ಚಳುವಳಿಯಲ್ಲಿ ಶಿವಸೇನೆ ಸಕ್ರಿಯವಾಗಿ ಪಾಲ್ಗೊಂಡಿತ್ತು. ಹಿಂದುತ್ವ ಮತ್ತು ಮರಾಠಿ ಅಸ್ಮಿತೆಯ ರಕ್ಷಣೆಗಾಗಿ ಶಿವಸೇನೆ ಅಪಾರ ತ್ಯಾಗ ಬಲಿದಾನಗಳನ್ನು ಮಾಡಿದೆ. ಆದರೆ ಇಂದು ಅಧಿಕಾರಕ್ಕಾಗಿ ಬಿಜೆಪಿ ನಮ್ಮನ್ನು ಹಿಂದೂ ವಿರೋಧಿಗಳಂತೆ ಬಿಂಬಿಸುತ್ತಿದೆ ಎಂದು ಉದ್ಧವ್ ಠಾಕ್ರೆ ಹರಿಹಾಯ್ದರು.
ಕಾಂಗ್ರೆಸ್ ಹಾಗೂ ಎನ್‌ಸಿಪಿ ಪಕ್ಷಗಳ ಜೊತೆ ಕೈ ಜೋಡಿಸಿದ ಕಾರಣಕ್ಕೆ ನಮ್ಮನ್ನು ಹಿಂದೂ ವಿರೋಧಿಗಳು ಎನ್ನುವುದು ಸರಿಯಲ್ಲ. ಅಧಿಕಾರದಲ್ಲಿದ್ದಾಗಲೂ ನಾವು ಹಿಂದುತ್ವದ ತತ್ವ ಸಿದ್ಧಾಂತಗಳನ್ನು ಬಿಟ್ಟು ಕೊಟ್ಟಿರಲಿಲ್ಲ. ಆದರೆ ಬಿಜೆಪಿಯವರಂತೆ ನಾವು ಅನ್ಯಧರ್ಮೀಯರನ್ನು ದ್ವೇಷಿಸಲಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದರು.
ನಮ್ಮ ಹಿಂದುತ್ವವು ಎಲ್ಲರನ್ನೂ ಒಳಗೊಳ್ಳುವ ರಾಷ್ಟ್ರೀಯತಾ ವಾದವನ್ನು ಪ್ರತಿಪಾದಿಸುತ್ತದೆ. ಇದರಲ್ಲಿ ಹಿಂದೂ, ಮುಸ್ಲಿ, ಕ್ರಿಶ್ಚಿಯನ್ ಎಂಬ ವ್ಯತ್ಯಾಸವಿಲ್ಲ. ದೇಶ ವಿರೋಧಿ ಚಟುವಟಿಕೆ ನಡೆಸುವ ಯಾರೇ ಆಗಲಿ, ಅವರು ಹಿಂದುತ್ವ ಮತ್ತು ಭಾರತದ ವಿರೋಧಿಗಳು ಎಂದು ನಾವು ನಂಬಿದ್ದೇವೆ. ಶಿವಸೇನೆ ಭಾಳ್ ಸಾಹೇಬ್ ಠಾಕ್ರೆ ಅವರ ಅಸಲಿ ಹಿಂದುತ್ವ ಸಿದ್ಧಾಂತವನ್ನು ಪಾಲಿಸುತ್ತದೆ ಎಂದು ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದರು.
ಅಧಿಕಾರಕ್ಕಾಗಿ ಶಿವಸೇನೆಯನ್ನು ತುಂಡರಿಸಿರುವ ಏಕನಾಥ್ ಶಿಂಧೆ ಬಣ, ಬಿಜೆಪಿ ಜೊತೆ ಕೈಜೋಡಿಸಿ ತಪ್ಪು ಮಾಡಿದೆ. ಬಿಜೆಪಿ ಕೇವಲ ಅಧಿಕಾರಕ್ಕಾಗಿ ಹಿಂದುತ್ವ ಸಿದ್ಧಾಂತವನ್ನು ಬಳಸಿಕೊಳ್ಳುತ್ತದೆಯೇ ಹೊರತು, ಅದಕ್ಕೆ ಹಿಂದುತ್ವದ ರಕ್ಷಣೆಯ ಬಗ್ಗೆ ಯಾವುದೇ ಬದ್ಧತೆ ಇಲ್ಲ. ಮಹಾರಾಷ್ಟ್ರದ ಜನತೆ ಈ ಸತ್ಯವನ್ನು ಈಗ ಅರಿತಿದ್ದಾರೆ ಎಂದು ಉದ್ಧವ್ ಠಾಕ್ರೆ ತೀವ್ರ ತರಾಟೆಗೆ ತೆಗೆದುಕೊಂಡರು.
ರಾಜ್ಯಪಾಲರ ಬದಲಾವಣೆ ವಿಚಾರವಾಗಿ ಮಾತನಾಡಿದ ಉದ್ಧವ್ ಠಾಕ್ರೆ, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಮರಾಠಿಗರ ವಿಶ್ವಾಸ ಗೆಲ್ಲಲು ಬಿಜೆಪಿ ಮುಂದಾಗಿದೆ ಎಂದು ಕಿಡಿಕಾರಿದರು.ಶಿವಾಜಿಯ ಬಗ್ಗೆ ಅಷ್ಟೊಂದು ಮಮಕಾರ ಇದ್ದಿದ್ದರೆ, ರಾಜ್ಯಪಾಲರನ್ನು ಬದಲಾಯಿಸಲು ಇಷ್ಟು ದಿನಗಳು ಏಕೆ ಬೇಕಾಯಿತು ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.
ವಿಭಾಗ