logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Eagle 44: ಜಗತ್ತಿಗೆ ತನ್ನ ಮೊದಲ ಭೂಗತ ವಾಯುಪಡೆಯ ನೆಲೆ ಪರಿಚಯಿಸಿದ ಇರಾನ್:‌ ಕೋಡ್‌ನೇಮ್‌ ಏನು ಗೊತ್ತಾ?

Eagle 44: ಜಗತ್ತಿಗೆ ತನ್ನ ಮೊದಲ ಭೂಗತ ವಾಯುಪಡೆಯ ನೆಲೆ ಪರಿಚಯಿಸಿದ ಇರಾನ್:‌ ಕೋಡ್‌ನೇಮ್‌ ಏನು ಗೊತ್ತಾ?

HT Kannada Desk HT Kannada

Feb 08, 2023 03:26 PM IST

google News

ಇರಾನ್‌ ಭೂಗತ ವಾಯುನೆಲೆ

    • ಇರಾನ್ ತನ್ನ ಮೊಟ್ಟ ಮೊದಲ ಭೂಗತ ವಾಯುಪಡೆಯ ನೆಲೆಯನ್ನು ಅನಾವರಣಗೊಳಿಸಿದೆ. ಇದು ದೀರ್ಘ-ಶ್ರೇಣಿಯ ಕ್ರೂಸ್ ಕ್ಷಿಪಣಿಗಳೊಂದಿಗೆ ಶಸ್ತ್ರಸಜ್ಜಿತವಾದ, ಯುದ್ಧವಿಮಾನಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಅಧಿಕೃತ ಸುದ್ದಿ ಸಂಸ್ಥೆ IRNA ಬಿಡುಗಡೆ ಮಾಡಿರುವ ವಾಯು ನೆಲೆಯ ಫೋಟೋಗಳು, ಇದೀಗ ಜಗತ್ತಿನ ಗಮನ ಸೆಳೆದಿವೆ. ಈ ಕುರಿತು ಇಲ್ಲಿದೆ ಮಾಹಿತಿ..
ಇರಾನ್‌ ಭೂಗತ ವಾಯುನೆಲೆ
ಇರಾನ್‌ ಭೂಗತ ವಾಯುನೆಲೆ (AFP)

ಟೆಹ್ರನ್:‌ ಇರಾನ್ ತನ್ನ ಮೊಟ್ಟ ಮೊದಲ ಭೂಗತ ವಾಯುಪಡೆಯ ನೆಲೆಯನ್ನು ಅನಾವರಣಗೊಳಿಸಿದೆ. ಇದು ದೀರ್ಘ-ಶ್ರೇಣಿಯ ಕ್ರೂಸ್ ಕ್ಷಿಪಣಿಗಳೊಂದಿಗೆ ಶಸ್ತ್ರಸಜ್ಜಿತವಾದ, ಯುದ್ಧವಿಮಾನಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಅಧಿಕೃತ ಸುದ್ದಿ ಸಂಸ್ಥೆ IRNA ಬಿಡುಗಡೆ ಮಾಡಿರುವ ವಾಯು ನೆಲೆಯ ಫೋಟೋಗಳು, ವಾಯುಪಡೆ ಸಿಬ್ಬಂದಿ ಮತ್ತು ಅಮೆರಿಕ ನಿರ್ಮಿತ F-4E ಫ್ಯಾಂಟಮ್ II ಫೈಟರ್ ಬಾಂಬರ್‌ಗಳನ್ನು ತೋರಿಸುತ್ತವೆ.

ಈ ಭೂಗತ ವಾಯುನೆಲೆಯಲ್ಲಿರುವ ಯುದ್ಧ ವಿಮಾನಗಳು, 1979ರ ಕ್ರಾಂತಿಯ ಸಮಯದಲ್ಲಿ ವಶಪಡಿಸಿಕೊಂಡ ಅಮೆರಿಕದ ಯುದ್ಧ ವಿಮಾನಗಳಾಗಿವೆ ಎನ್ನಲಾಗಿದೆ. ಈ ಯುದ್ಧ ವಿಮಾನಗಳನ್ನು ಆಗಿನ ಶಾ ಸರ್ಕಾರ ಅಮೆರಿಕದಿಂದ ಖರೀದಿಸಿತ್ತು. ಆದರೆ ಕ್ರಾಂತಿಯ ಬಳಿಕ ಇವು ಖಮೇನಿ ಸರ್ಕಾರದ ಭಾಗವಾಗಿದ್ದವು.

ಈ ಭೂಗತ ವಾಯುಪಡೆ ನೆಲೆಗ "ಓಘಾಬ್ 44" (ಈಗಲ್44) ಎಂದು ಹೆಸರಿಸಲಾಗಿದೆ. ಡ್ರೋನ್‌ಗಳ ಜೊತೆಗೆ ಎಲ್ಲಾ ರೀತಿಯ ಫೈಟರ್ ಜೆಟ್‌ಗಳು ಮತ್ತು ಬಾಂಬರ್‌ಗಳಿಗೆ ಈ ಭೂಗತ ನೆಲೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು IRNA ಹೇಳಿದೆ. ಆದರೆ ಈ ಭೂಗತ ವಾಯುಪಡೆ ನೆಲೆಯ ನಿಖರವಾದ ಸ್ಥಳವನ್ನು ಬಹಿರಂಗಪಡಿಸಲಾಗಿಲ್ಲ.

"ಪರ್ವತಗಳ ಅಡಿಯಲ್ಲಿ ನೂರಾರು ಮೀಟರ್ ಆಳದಲ್ಲಿ ಈ "ಓಘಾಬ್ 44" ಭೂಗತ ವಾಯಪಡೆ ನೆಲೆ ಇದೆ.."ಎಂದು INRA ಮಾಹಿತಿ ನೀಡಿದೆ. ಎಂದು ಹೇಳಿದೆ. ವಾಯುನೆಲೆಯಲ್ಲಿನ ಜೆಟ್‌ಗಳು ದೀರ್ಘ-ಶ್ರೇಣಿಯ ಕ್ರೂಸ್ ಕ್ಷಿಪಣಿಗಳಿಂದ ಶಸ್ತ್ರಸಜ್ಜಿತವಾಗಿವೆ ಎಂದೂ ವರದಿ ತಿಳಿಸಿದೆ.

ಶತ್ರುಗಳ ದಾಳಿಯ ಸಂದರ್ಭದಲ್ಲಿ ಹತ್ತಿರದ ಗುರಿಗಳನ್ನು ನಾಶಮಾಡಲು, ಇಸ್ಲಾಮಿಕ್ ಗಣರಾಜ್ಯವಾದ ಇರಾನ್ ತನ್ನ ಹಳೆಯ ಯುದ್ಧ ವಿಮಾನಗಳನ್ನು ಬಳಸಲು ಯೋಜಿಸುತ್ತಿದೆ.‌ "ಇಸ್ರೇಲ್ ಸೇರಿದಂತೆ ನಮ್ಮ ಶತ್ರುಗಳಿಂದ ಇರಾನ್ ಮೇಲೆ ನಡೆಯಬಹುದಾದ ಯಾವುದೇ ದಾಳಿಯು, ಈಗಲ್ 44 ಸೇರಿದಂತೆ ನಮ್ಮ ಅನೇಕ ವಾಯುಪಡೆಯ ನೆಲೆಗಳಿಂದ ಪ್ರತಿಕ್ರಿಯೆಯನ್ನು ನೋಡುತ್ತದೆ.." ಎಂದು ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಮೊಹಮ್ಮದ್ ಬಘೇರಿ ಹೇಳಿದ್ದಾರೆ.

ಅಲ್-ಜಜೀರಾ ಪ್ರಕಾರ, ಎರಡು ವಾರಗಳ ಹಿಂದೆ ನಡೆದ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಸಮರಾಭ್ಯಾಸಕ್ಕೆ ಪ್ರತಿಕ್ರಿಯೆಯಾಗಿ, ಇರಾನ್‌ನ ವೈಮಾನಿಕ ಮಿಲಿಟರಿ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಈ ಭೂಗತ ಮಿಲಿಟರಿ ವಾಯುನೆಲೆಯನ್ನು ಅನಾವರಣಗೊಳಿಸಲಾಗಿದೆ. ಅಲ್ಲದೇ ಯಾವುದೇ ರೀತಿಯ ಸಂಭಾವ್ಯ ದಾಳಿಯನ್ನು ಎದುರಿಸಲು ತಾನು ಸಿದ್ಧ ಎಂಬ ಸಂದೇಶನ್ನು ಇರಾನ್‌ ಈ ಮೂಲಕ ರವಾನಿಸಿದ ಎನ್ನಲಾಗಿದೆ.

ಅಮೆರಿಕ ಹಾಗೂ ಇಸ್ರೇಲ್‌ ನಡೆಸಿದ ಜಂಟಿ ಸಮರಾಭ್ಯಾಸದಲ್ಲಿ, ಆಧುನಿಕ ಯುದ್ಧ ವಿಮಾನಗಳು, ನೌಕಾಪಡೆಯ ಹಡಗುಗಳು, ಫಿರಂಗಿ ವ್ಯವಸ್ಥೆಗಳ ಪ್ರದರ್ಶನ ನಡೆದಿದೆ. ಇದು ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಇರಾನ್‌ಗೆ ಎಚ್ಚರಿಕೆಯ ಸಂದೇಶವನ್ನು ಕಳುಹಿಸಲೆಂದೇ ನಡೆಸಲಾದ ಜಂಟಿ ಸಮರಾಭ್ಯಾಸ ಎಂದು ವ್ಯಾಖ್ಯಾನ ಮಾಡಲಾಗಿದೆ.

ರಾಯಿಟರ್ಸ್ ಪ್ರಕಾರ, ಕಳೆದ ವರ್ಷ ಮೇ ತಿಂಗಳಲ್ಲಿ ಇರಾನ್‌ನ ಸೇನೆಯು ಡ್ರೋನ್‌ಗಳನ್ನು ಹೊಂದಿರುವ ಮತ್ತೊಂದು ಭೂಗತ ನೆಲೆಯ ಬಗ್ಗೆ ವಿವರಗಳನ್ನು ನೀಡಿತ್ತು. ತನ್ನ ಪ್ರಾದೇಶಿಕ ವೈರಿ ಇಸ್ರೇಲ್‌ನ್‌ ಸಂಭಾವ್ಯ ವಾಯುದಾಳಿಗಳಿಂದ, ಮಿಲಿಟರಿ ಸ್ವತ್ತುಗಳನ್ನು ರಕ್ಷಿಸಲು ಇರಾನ್‌ ಪ್ರಯತ್ನಿಸುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.

ಇರಾನ್‌ನ ಪರಮಅಣು ಯೋಜನೆಗಳು ಅಮೆರಿಮ ಮತ್ತು ಇಸ್ರೇಲ್‌ನ ನಿದ್ದೆಗೆಡೆಸಿದ್ದು, ಹಲವು ಆರ್ಥಿಕ ದಿಗ್ಬಂಧನಗಳನ್ನು ಹೇರುವ ಮೂಲಕ ಇರಾನ್‌ನ ಕೈಕಟ್ಟಿಹಾಕಲು ಪ್ರಯತ್ನಿಸುತ್ತಿವೆ. ಅಲ್ಲದೇ ತನ್ನ ಹಲವು ಪರಮಾಣು ವಿಜ್ಞಾನಿಗಳ ಕೊಲೆಯಲ್ಲಿ ಇಸ್ರೇಲ್‌ ಪಾತ್ರವಿದೆ ಎಂದು ಇರಾನ್‌ ನೇರವಾಗಿ ಆರೋಪಿಸುತ್ತಿದೆ.

ಒಟ್ಟಿನಲ್ಲಿ ಇರಾನ್‌ನ ಭೂಗತ ವಾಯುನೆಲೆಯ ಫೋಟೋಗಳು, ಅಮೆರಿಕ ಮತ್ತು ಇಸ್ರೇಲ್‌ನ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿವೆ ಎಂದು ಹೇಳಬಹುದು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ