Mumbai Airport: ಮುಂಬಯಿ ವಿಮಾನ ನಿಲ್ದಾಣದಲ್ಲಿ ಸ್ಕಿಡ್ ಆಗಿ ಅಪಘಾತಕ್ಕೆ ಒಳಗಾಗಿದೆ 8 ಜನರಿದ್ದ ಖಾಸಗಿ ವಿಮಾನ
Sep 15, 2023 03:53 PM IST
ಮುಂಬಯಿ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿರುವ ಖಾಸಗಿ ವಿಮಾನ
ಮುಂಬಯಿ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ 8 ಪ್ರಯಾಣಿಕರಿದ್ದ ಖಾಸಗಿ ವಿಮಾನ ಸ್ಕಿಡ್ ಆಗಿ ಅಪಘಾತಕ್ಕೆ ಈಡಾಗಿದೆ. ಮೂವರಿಗೆ ಗಾಯವಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಹೇಳಿದೆ.
ಮುಂಬಯಿ: ಎಂಟು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವಿಮಾನ ಒಂದು ಮುಂಬಯಿ ವಿಮಾನ ನಿಲ್ದಾಣದಲ್ಲಿ ಗುರುವಾರ (ಸೆ.14) ಸಂಜೆ 5.02 ಕ್ಕೆ ಲ್ಯಾಂಡಿಂಗ್ ವೇಳೆ ಸ್ಕಿಡ್ ಆಗಿ ಅಪಘಾತಕ್ಕೀಡಾಗಿದೆ.
ಕೆಲವು ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವಿಎಸ್ಆರ್ ವೆಂಚರ್ಸ್ ಲಿಯರ್‌ಜೆಟ್ 45 ವಿಮಾನ ವಿಟಿ - ಡಿಬಿಎಲ್ ವೈಜಾಗ್‌ನಿಂದ ಮುಂಬೈಗೆ ಪ್ರಯಾಣಿಸಿದ್ದು, ಈ ವಿಮಾನವು ಮುಂಬೈ ವಿಮಾನ ನಿಲ್ದಾಣದಲ್ಲಿ ರನ್‌ವೇ 27 ರಲ್ಲಿ ಇಳಿಯುವಾಗ ಸ್ಕಿಡ್ ಆಗಿ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ 06 ಪ್ರಯಾಣಿಕರು ಮತ್ತು 02 ಸಿಬ್ಬಂದಿ ಇದ್ದರು. ಭಾರೀ ಮಳೆ ಬೀಳುತ್ತಿದ್ದ ಕಾರಣ 700 ಮೀಟರ್ ಅಂತರದ ಗೋಚರಿಸುವಿಕೆ ಮಾತ್ರ ಇತ್ತು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಈ ವಿಮಾನವು ದಿಲೀಪ್ ಬಿಲ್ಡ್‌ಕಾನ್ ಎಂಬ ಇನ್‌ಫ್ರಾಸ್ಟ್ರಕ್ಚರ್ ಕಂಪನಿಗೆ ಸೇರಿದ್ದಾಗಿದೆ. ಮುಂಬಯಿ ವಿಮಾನ ನಿಲ್ದಾಣ ಸದ್ಯ ಬಂದ್ ಆಗಿದ್ದು, ಪರಿಶೀಲನೆ ಮುಂದುವರಿದಿದೆ.
ಲಿಯರ್‌ಜೆಟ್ 45 ಅಪಘಾತದ ತನಿಖೆ ಶುರು
ಮುಂಬೈ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಭವಿಸಿದ ಲಿಯರ್‌ಜೆಟ್ 45 ಅಪಘಾತದ ಕುರಿತು ಏರ್‌ಕ್ರಾಫ್ಟ್ ಅಪಘಾತ ತನಿಖಾ ಬ್ಯೂರೋ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶಕರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ವಿಮಾನವು ಜೆಎಂ ಬಾಕ್ಸಿ ಮತ್ತು ಕಂಪನಿಯಿಂದ ಚಾರ್ಟರ್ ಮಾಡಲ್ಪಟ್ಟಿದೆ. ಈ ವಿಮಾನವು ವೈಜಾಗ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿತ್ತು. ವಿಮಾನ ಅಪಘಾತ ತನಿಖಾ ಬ್ಯೂರೋದ ಸಹಾಯಕ ನಿರ್ದೇಶಕ ಕೆ ರಾಮಚಂದ್ರ ಅವರು ಅಪಘಾತದ ತನಿಖೆಗಾಗಿ ಗುರುವಾರ ತಡರಾತ್ರಿ ಮುಂಬೈ ತಲುಪಿದ್ದು, ವಿವಿಧ ಜನರ ಹೇಳಿಕೆಗಳನ್ನೂ ದಾಖಲಿಸಿಕೊಂಡರು.
ವಿಮಾನದ ಮಾಲೀಕ ರೋಹಿತ್ ಸಿಂಗ್, "ಎಎಐಬಿ ತಂಡವು ಮುಂಬೈನಲ್ಲಿದೆ ಮತ್ತು ನಾವು ತನಿಖೆಗೆ ಸಹಕರಿಸುತ್ತಿದ್ದೇವೆ. ನಮ್ಮ ಇಬ್ಬರು ಪೈಲಟ್‌ಗಳು ಮುಂಬೈನಿಂದ ಬಂದವರು ಮತ್ತು ನಮ್ಮ ಸಹ ಪೈಲಟ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಕೆಟ್ಟ ವಾತಾವರಣವೇ ಅಪಘಾತಕ್ಕೆ ಕಾರಣ ಎಂದು ನನಗೆ ಈಗಲೂ ಅನಿಸುತ್ತಿದೆ. ನಾವು ಎಲ್ಲರಿಗೂ ಆಸ್ಪತ್ರೆಯ ವೆಚ್ಚವನ್ನು ಭರಿಸುತ್ತಿದ್ದೇವೆ” ಎಂದು ಹೇಳಿದರು. ವಿಮಾನವು ದೆಹಲಿ ಮೂಲದ ಕಂಪನಿಯಾದ VSR ವೆಂಚರ್ಸ್‌ಗೆ ಸೇರಿದ್ದಾಗಿದೆ.