Ram mandir Donations: ರಾಮಮಂದಿರ ಉದ್ಘಾಟನೆಗೂ ಮುನ್ನವೇ ಹರಿದು ಬರುತ್ತಿದೆ ಭಾರೀ ಆನ್‌ಲೈನ್ ದೇಣಿಗೆ
Jan 21, 2024 09:30 PM IST
ಅಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ನೀಡುವ ಪ್ರಮಾಣ ಹೆಚ್ಚಿದೆ
- Ram mandir ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ ನೀಡುವವರ ಸಂಖ್ಯೆ ಹೆಚ್ಚಾಗಿದ್ದು, ನಿರೀಕ್ಷೆಗೂ ಮೀರಿ ಆನ್‌ಲೈನ್ ದೇಣಿಗೆ ಹರಿದು ಬಂದಿದೆ.
ಅಯೋಧ್ಯೆ: ಬಹು ವರ್ಷಗಳ ನಿರೀಕ್ಷೆಯ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಇನ್ನೇನಿದ್ದರೂ ದೇಗುಲ ಲೋಕಕ್ಕೆ ಸಮರ್ಪಣೆ ಮಾಡುವ ಕ್ಷಣ. ಇದಕ್ಕಾಗಿ ಕೋಟ್ಯಂತರ ಭಕ್ತರು ಭಾರತ ಮಾತ್ರವಲ್ಲದೇ ಹೊರ ದೇಶಗಳಲ್ಲಿ ಕುತೂಹಲದಿಂದ ಆ ಕ್ಷಣಕ್ಕೆ ಕಾಯುತ್ತಿದ್ದಾರೆ. ದೇಗುಲ ಇನ್ನೂ ಉದ್ಘಾಟನೆಯಾಗುವ ಮುನ್ನವೇ ದೇಣಿಗೆ ಹರಿದು ಬರುತ್ತಲೇ ಇದೆ. ಅದೂ ಎರಡು ಗಂಟೆಗೆ ಒಮ್ಮೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಣಿಗೆ ಮಾಹಿತಿ ಸಂಗ್ರಹಿಸುತ್ತಿದ್ದು. ಅದು ದ್ವಿಗುಣಗೊಳ್ಳುತ್ತಲೇ ಇದೆ.
ಈಗಾಗಲೇ ಲಕ್ಷಾಂತರ ಭಕ್ತರು ದೇಗುಲದ ಅಭಿವೃದ್ದಿ ದೇಣಿಗೆ ನೀಡುತ್ತಲೇ ಇದ್ದಾರೆ. ಈ ಹಿಂದೆಯೇ ಹಲವಾರು ವ್ಯಕ್ತಿಗಳು, ಸಂಘ ಸಂಸ್ಥೆಗಳು, ಸಂಘಟನೆಗಳು, ಕಂಪೆನಿಗಳೂ ಯಥೇಚ್ಛ ನೆರವು ನೀಡಿವೆ. ಇನ್ನೇನು ರಾಮಮಂದಿರ ಉದ್ಘಾಟನೆಯಾಗುವುದು ಕೆಲವೇ ಹೊತ್ತು ಬಾಕಿ ಇರುವಾಗಲೇ ದೇಣಿಗೆ ನೀಡುವವರ ಸಂಖ್ಯೆ ಅಧಿಕವಾಗಿದೆ.
ಅದರಲ್ಲೂ ಆನ್‌ಲೈನ್, ಗೂಗಲ್ ಸಹಿತ ವಿವಿಧ ಪೇ ಸೌಲಭ್ಯಗಳನ್ನು ಬಳಸಿಕೊಂಡು ದೇಣಿಗೆ ನೀಡಲು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅವಕಾಶ ನೀಡಿದೆ. ಇದರಿಂದ ಸಣ್ಣ ಮೊತ್ತದಿಂದ ಹಿಡಿದು ದೊಡ್ಡ ಮೊತ್ತದವರೆಗೂ ಭಕ್ತರು ದೇಣಿಗೆ ನೀಡುತ್ತಲೇ ಇದ್ದಾರೆ. ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡು ದೇಣಿಗೆ ಪಡೆಯಲು ಟ್ರಸ್ಟ್ ಗಮನ ಹರಿಸಿದೆ. ಇದಕ್ಕಾಗಿಯೇ ಪ್ರತ್ಯೇಕ ತಂಡ ಮೇಲುಸ್ತುವಾರಿ ವಹಿಸಿ ಎರಡು ಗಂಟೆಗೆ ಒಮ್ಮೆ ಆನ್‌ಲೈನ್‌ನಲ್ಲಿ ಬಂದ ದೇಣಿಗೆ ಲೆಕ್ಕ ಹಾಕಲಾಗುತ್ತಿದೆ.
ದೇಣಿಗೆ ನೀಡಲು ಕರೆಗಳು ಬರುತ್ತಲೇ ಇವೆ. ಈ ಕಾರಣದಿಂದಲೇ ನೇರವಾಗಿ ದೇಣಿಗೆ ನೀಡುವವರೂ ಅಲ್ಲದೇ ಆನ್‌ಲೈನ್‌ನಲ್ಲೂ ದೇಣಿಗೆ ಸಲ್ಲಿಸಲು ವೆಬ್‌ಸೈಟ್ ಮೂಲಕ ವ್ಯವಸ್ಥೆ ಮಾಡಲಾಗಿದೆ. ಎಷ್ಟು ಬಂದಿದೆ ಎಂದು ನಿಖರವಾಗಿ ಗೊತ್ತಾಗುವುದಿಲ್ಲ. ಆದರೂ ಎರಡು ಗಂಟೆಗೊಮ್ಮೆ ನೋಡಿದರೆ ದೇಣಿಗೆ ದ್ವಿಗುಣವಾಗುತ್ತಿದೆ ಎನ್ನುವುದು ಸಮಿತಿಯ ಪ್ರಮುಖರೊಬ್ಬರ ಹೇಳಿಕೆ.
ಭಾರತ್ ಬಿಲ್ ಪೇಮೆಂಟ್ ಸಿಸ್ಟಂ( BBPS) ಮೂಲಕ ಯುಪಿಐ ಆಪ್ ಬಳಸಿಕೊಂಡು ಗೂಗಲ್ ಪೇಪ್ ಮತ್ತು ಭಾರತ್ ಪೇ ಮೂಲಕ ದೇಣಿಗೆ ಅಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದಲ್ಲದೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನ ವೆಬ್‌ಸೈಟ್‌ನ ಮೂಲಕವೂ ದೇಣಿಗೆ ವಿಭಾಗಕ್ಕೆ ತೆರಳಿ ಅಲ್ಲಿಂದಲೂ ದೇಣಿಗೆ ಸಲ್ಲಿಸಬಹುದು ಎನ್ನುವುದು ಅವರ ವಿವರಣೆ.