Ayodhya Ram Mandir: ಬಾಲರಾಮ ಪ್ರಾಣ ಪ್ರತಿಷ್ಠೆಗೆ ಕರ್ನಾಟಕದ ವೀಣೆ ಸೇರಿ 50 ವಾದ್ಯಗಳ ಧ್ವನಿಯ ಮುನ್ನುಡಿ
Jan 22, 2024 09:33 AM IST
ಅಯೋಧ್ಯೆ ರಾಮ ಮಂದಿರ ಬಾಲರಾಮ ಪ್ರಾಣ ಪ್ರತಿಷ್ಠೆ ಇಂದು ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಮಂಗಳ ಧ್ವನಿಯೊಂದಿಗೆ ಕಾರ್ಯಕ್ರಮ ಶುರುವಾಗಲಿದೆ. ಇದಕ್ಕೂ ಮುನ್ನ ಭಾನುವಾರ ಅಯೋಧ್ಯೆ ರಾಮ ಮಂದಿರದ ಮೇಲೆ ಭಾರತೀಯ ವಾಯು ಪಡೆ ಹೆಲಿಕಾಪ್ಟರ್ ಹೂಮಳೆಗೆರೆಯಿತು.
Ayodhya Ram Mandir Pran Pratishtha: ಅಯೋಧ್ಯೆ ರಾಮ ಮಂದಿರ ಬಾಲರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆ ಮಂಗಳ ಧ್ವನಿಯೊಂದಿಗೆ ಶುರುವಾಗಲಿದೆ. ಎರಡು ಗಂಟೆ ಕಾಲ ಮಂಗಳ ಧ್ವನಿ ಮೊಳಗಲಿದೆ. ಏನಿದು ಮಂಗಳ ಧ್ವನಿ ಇಲ್ಲಿದೆ ವಿವರಣೆ.
ಲಖನೌ: ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಇಂದು ಮಧ್ಯಾಹ್ನ ನಡೆಯಲಿದೆ. ಶ್ರೀ ರಾಮ ಜನ್ಮಭೂಮಿ ರಾಮ ಮಂದಿರದ ಬಾಲರಾಮ ವಿಗ್ರಹದಲ್ಲಿ ದೇವರ ದೈವಿಕ ಉಪಸ್ಥಿತಿಯನ್ನು ಕೋರುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಲಿದೆ. ಇದಕ್ಕೂ ಎರಡು ಗಂಟೆ ಮೊದಲು ಅಂದರೆ ಬೆಳಗ್ಗೆ 10 ಗಂಟೆಗೆ ಮಂಗಳ ಧ್ವನಿ ಮೊಳಗಲಿದೆ.
ಬಾಲರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವು ಮಂಗಳ ಧ್ವನಿಯೊಂದಿಗೆ ಬೆಳಗ್ಗೆ 10 ಗಂಟೆಗೆ ಶುರುವಾಗಲಿದೆ. 12 ಗಂಟೆ ತನಕ ಮಂಗಳ ಧ್ವನಿ ಮೊಳಗಲಿದೆ. ಕರ್ನಾಟಕದ ವೀಣೆ ಸೇರಿ ವಿವಿಧ ರಾಜ್ಯಗಳ 50 ಸಂಗೀತೋಪಕರಣಗಳ ವಾದನವೇ ಮಂಗಳ ಧ್ವನಿ. ರಾಮ ಮಂದಿರದ ಆವರಣದಲ್ಲಿ ದೈವೀ ರಾಗದ ಅಲೆಗಳನ್ನು ಸೃಷ್ಟಿಸುವ ಮಂಗಳ ಧ್ವನಿ ಅಲ್ಲಿನ ವಾತಾವರಣದಲ್ಲಿ ಭಕ್ತಿ ಭಾವ ಸ್ಫುರಿಸುವಂತೆ ಮಾಡಲಿದೆ.
ಉತ್ತರ ಪ್ರದೇಶದ ಪಖ್ವಾಜ್, ಕೊಳಲು ಮತ್ತು ಧೋಲಕ್ ರಾಮ ಮಂದಿರದಲ್ಲಿ ಪ್ರತಿಧ್ವನಿಸಲಿದ್ದು, ಕರ್ನಾಟಕದ ವೀಣೆ, ಮಹಾರಾಷ್ಟ್ರದ ಸುಂದರಿ, ಪಂಜಾಬ್ನ ಅಲ್ಗೋಜಾ ಮತ್ತು ಒಡಿಶಾದ ಮರ್ದಾಲ್ ಪ್ರತಿಧ್ವನಿಸಲಿವೆ. ಭಾರತೀಯ ಸಂಗೀತ ಸಂಪ್ರದಾಯದಲ್ಲಿ ಬಳಸುವ ಎಲ್ಲಾ ವಾದ್ಯಗಳನ್ನು ದೇವಾಲಯದ ಅಂಗಳದಲ್ಲಿ ನುಡಿಸಲಾಗುತ್ತದೆ.
ಮಧ್ಯಪ್ರದೇಶದ ಸಂತೂರ್, ಮಣಿಪುರದ ಪುಂಗ್, ಅಸ್ಸಾಂನ ನಾಗಡಾ ಮತ್ತು ಕಾಳಿ, ಛತ್ತೀಸ್ಗಢದ ತಂಬುರಾ, ಬಿಹಾರದ ಪಖ್ವಾಜ್, ದೆಹಲಿಯ ಶೆಹನಾಯಿ, ರಾಜಸ್ಥಾನದ ರಾವಣನಾಥ, ಶ್ರೀಖೋಲ್, ಬಂಗಾಳದ ಸರೋದ್, ಆಂಧ್ರಪ್ರದೇಶದ ಘಟಮ್, ಜಾರ್ಖಂಡ್ನ ಸಿತಾರ್, ಗುಜರಾತ್ನ ಸಂತರ್, ಉತ್ತರಾಖಂಡದ ನಾಗಸ್ವರಂ, ತವಿಲ್, ಮೃದಂಗ ಮತ್ತು ಹುಡ್ಕಾ ವಾದ್ಯಗಳು ಸೇರಿವೆ.
ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಸಹಯೋಗದೊಂದಿಗೆ ಅಯೋಧ್ಯೆಯ ಸ್ವಂತ ಯತೀಂದ್ರ ಮಿಶ್ರಾ ಈ ಭವ್ಯ ಸಂಗೀತ ನಿರೂಪಣೆ ಮಂಗಳ ಧ್ವನಿಯನ್ನು ಆಯೋಜಿಸಿದ್ದಾರೆ.
"ಈ ಭವ್ಯ ಸಂಗೀತ ಕಾರ್ಯಕ್ರಮವು ಪ್ರತಿಯೊಬ್ಬ ಭಾರತೀಯನಲ್ಲೂ ಸಾಂದರ್ಭಿಕ ಮಹತ್ವದ ಅರಿವನ್ನು ಮೂಡಿಸುತ್ತದೆ. ಪ್ರಭು ಶ್ರೀ ರಾಮನ ಪ್ರತಿಷ್ಠಾಪನೆ ಮತ್ತು ಆ ಭಗವಂತನ ಮೇಲಿನ ಭಕ್ತಿಯು ವೈವಿಧ್ಯಮಯ ಸಂಪ್ರದಾಯಗಳನ್ನು ಒಟ್ಟುಗೂಡಿಸುತ್ತದೆ" ಎಂದು ಅಯೋಧ್ಯೆಯ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದೆ.
ಮಂಗಳ ಧ್ವನಿ ವಿವಿಧ ಸಂಪ್ರಾಯಗಳ ಏಕತೆಯ ಪ್ರತಿರೂಪ
"ಈ ಭವ್ಯ ಸಂಗೀತ ಕಾರ್ಯಕ್ರಮ ಮಂಗಳ ಧ್ವನಿಯು ಪ್ರತಿಯೊಬ್ಬ ಭಾರತೀಯನ ಪಾಲಿಗೆ ಮಹತ್ವದ ಸಂದರ್ಭವಾಗಲಿದೆ. ಭಗವಾನ್ ರಾಮನ ಗೌರವಾರ್ಥ ವೈವಿಧ್ಯಮಯ ಸಂಪ್ರದಾಯಗಳ ಏಕತೆಯನ್ನು ಸಂಕೇತಿಸುತ್ತದೆ. ಈ ಶುಭ ಸಂಗೀತ ಕಾರ್ಯಕ್ರಮವನ್ನು ಲೇಖಕ, ಕಲಾವಿದ ಮತ್ತು ಅಯೋಧ್ಯೆಯ ಸಾಂಸ್ಕೃತಿಕ ತಜ್ಞ ಯತೀಂದ್ರ ಮಿಶ್ರಾ ರೂಪಿಸಿದ್ದಾರೆ. ಅವರು ಕಾರ್ಯಕ್ರಮದ ಸಂಯೋಜಕರೂ ಆಗಿದ್ದಾರೆ. ಈ ಕೆಲಸದಲ್ಲಿ ಅವರಿಗೆ ನವದೆಹಲಿಯ ಕೇಂದ್ರೀಯ ಸಂಗೀತ ನಾಟಕ ಅಕಾಡೆಮಿ ಬೆಂಬಲ ನೀಡಿದೆ. ಪ್ರತಿಭಾವಂತರು ಸ್ವಯಂಪ್ರೇರಿತರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ." ಎಂದು ಸರ್ಕಾರ ತಿಳಿಸಿದೆ.
ಬಾಲರಾಮ ಪ್ರಾಣ ಪ್ರತಿಷ್ಠಾ ಮುಹೂರ್ತಕ್ಕೆ ಮುಂಚಿತವಾಗಿ ಮಂಗಳ ಧ್ವನಿ ಕಾರ್ಯಕ್ರಮ ಶುರುವಾಗುತ್ತದೆ. ಪ್ರತಿಷ್ಠಾಪನಾ ಮಂತ್ರಗಳ ಪಠಣ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕೆ ಮುಂಚಿತವಾಗಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಶುಭ ಸಂದರ್ಭದ ಸಂಕೇತ ಮಂಗಳ ಧ್ವನಿ
ಭಾರತೀಯ ಸಂಸ್ಕೃತಿಯಲ್ಲಿ ಸಂತೋಷವನ್ನು ಉಂಟುಮಾಡಲು ಮತ್ತು ಒಂದು ಶುಭ ಸಂದರ್ಭವನ್ನು ಗುರುತಿಸುವ ಸಂಕೇತವಾಗಿ ಮಂಗಳ ಧ್ವನಿ ನುಡಿಸಲಾಗುತ್ತದೆ. ಮಂಗಳ ಧ್ವನಿಯನ್ನು ದೇವರ ಸನ್ನಿಧಿಯಲ್ಲಿ ನುಡಿಸಲಾಗುತ್ತದೆ. ಬಹುತೇಕ ಮಂಗಳ ಧ್ವನಿಯನ್ನು ಮುಹೂರ್ತ ಸಮಯಕ್ಕೆ ಸ್ವಲ್ಪ ಮೊದಲು ನುಡಿಸಲಾಗುತ್ತದೆ ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದರು.
ಭಗವಾನ್ ಶ್ರೀ ರಾಮನ ಪ್ರತಿಷ್ಠಾಪನೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣವಾಗಿದೆ. ಈ ಸಂದರ್ಭದಲ್ಲಿ, ಬಾಲರಾಮನ ಮುಂದೆ ಮಂಗಳ ಧ್ವನಿಯನ್ನು ನುಡಿಸಲು ಭಾರತದ ವಿವಿಧ ಪ್ರದೇಶಗಳು ಮತ್ತು ರಾಜ್ಯಗಳ ಸಾಂಪ್ರದಾಯಿಕ ಸಂಗೀತ ವಾದ್ಯ ವಾದಕರು ಸ್ವಯಂ ಪ್ರೇರಿತರಾಗಿ ಸೇರಿಕೊಂಡಿದ್ದಾರೆ ಎಂದು ಅವರು ಹೇಳಿದರು.
-----------------
ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಲೈವ್ ಅಪ್ಡೇಟ್ಸ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ…