BRS BJP Closeness: ಬಿಜೆಪಿ, ಪ್ರಧಾನಿ ಮೋದಿ ಅವರ ಕಟು ಟೀಕಾಕಾರ ಕೆಸಿಆರ್ ಬದಲಾದರು; ಬಿಆರ್‌ಎಸ್ ಬಿಜೆಪಿ ಗೆಳೆತನದ ಹಿಂದಿನ ಲೆಕ್ಕಾಚಾರ
Jun 25, 2023 06:26 PM IST
ತೆಲಂಗಾಣ ಮುಖ್ಯಮಂತ್ರಿ, ಬಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ (KCR | Facebook)
BRS BJP Closeness: ಕರ್ನಾಟಕದ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿದ್ದ ಬಿಆರ್‌ಎಸ್ ಲೋಕಸಭೆ ಚುನಾವಣೆಗೂ ಮೈತ್ರಿ ಮುಂದುವರಿಯಲಿದೆ ಎಂದು ಹೇಳಿದ್ದರು. ಆದರೆ ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಜೆಡಿಎಸ್ ಮತ್ತು ಬಿಆರ್‌ಎಸ್ ರಾಜಕೀಯದ ನಡೆಗಳಲ್ಲಿ ಬಹಳ ವ್ಯತ್ಯಾಸ ಕಾಣಿಸಿವೆ. ಈ ನಡೆಗಳ ಲೆಕ್ಕಾಚಾರ ಹೀಗಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (Telangana CM K Chandrasekhar Rao) ಅವರು ಬಿಜೆಪಿ (BJP) ಮತ್ತು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಕಟುಟೀಕಾಕಾರರಾಗಿ ಗುರುತಿಸಿಕೊಂಡವರು. ಕೇಂದ್ರ ಸರ್ಕಾರಕ್ಕೆ ಬಹಿಷ್ಕಾರ ಹಾಕಿ ರಾಜ್ಯಾಡಳಿತ ಮಾಡುತ್ತಿದ್ದವರು. ರಾಜಕೀಯವಾಗಿ ಅವರ ನಡವಳಿಕೆ ಬದಲಾಗತೊಡಗಿದೆ. ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಹತ್ತಿರವಾಗುತ್ತಿರುವ ಬಿಆರ್‌ಎಸ್ ಹೊಸ ಮೈತ್ರಿಯ ಸುಳಿವು ನೀಡಿದೆ ಎನ್ನುತ್ತಾರೆ ರಾಜಕೀಯ ಪರಿಣತರು.
ಬಿಜೆಪಿಯೊಂದಿಗೆ ಪಕ್ಷದ ನಿಕಟ ಸಂಬಂಧ ಹೆಚ್ಚುತ್ತಿದೆ ಎಂಬ ಊಹಾಪೋಹಗಳ ನಡುವೆ, ಭಾರತ್ ರಾಷ್ಟ್ರ ಸಮಿತಿಯು ಕೇಂದ್ರವು ಕರೆದಿದ್ದ ತನ್ನ ಎರಡು ವರ್ಷಗಳ ಸಭಾ ಬಹಿಷ್ಕಾರವನ್ನು ಕೊನೆಗೊಳಿಸಿದೆ. ಮಣಿಪುರ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರ ಕರೆದಿದ್ದ ಸರ್ವಪಕ್ಷಗಳ ಸಭೆಗೆ ಪ್ರತಿನಿಧಿಯನ್ನು ಕಳುಹಿಸಿದೆ.
ವಿಪಕ್ಷ ಮೈತ್ರಿ ಸಭೆಯಿಂದ ದೂರ. ನವದೆಹಲಿಗೆ ಸನಿಹದಲ್ಲಿದೆ ಬಿಆರ್‌ಎಸ್
ಬಿಜೆಪಿ ವಿರುದ್ಧ ಸಮಾನ ಮನಸ್ಕ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಮುಂಚೂಣಿಯಲ್ಲಿದ್ದ ತೆಲಂಗಾಣ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಅವರು ಪ್ರತಿಪಕ್ಷಗಳ ಒಗ್ಗಟ್ಟು ಮೂಡಿಸುವ ವಿಚಾರ ಕೈಬಿಟ್ಟು ಇದೀಗ ತಮ್ಮ 'ತೆಲಂಗಾಣ ಅಭಿವೃದ್ಧಿ ಮಾದರಿ'ಯನ್ನು ಪ್ರಸ್ತುತಪಡಿಸುವತ್ತ ಗಮನಹರಿಸಿದ್ದಾರೆ. ಅವರ ರಾಜಕೀಯ ನಡವಳಿಕೆಯೂ ಬದಲಾಗಿದೆ. ಪಾಟ್ನಾದಲ್ಲಿ ಜೂ.23ರಂದು ನಡೆದ 16 ಪಕ್ಷಗಳ ವಿಪಕ್ಷ ಮೈತ್ರಿಯ ಸಭೆಗೂ ಅವರ ಪಕ್ಷ ಗೈರಾಗಿತ್ತು.
ಇನ್ನು ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ಉಡುಪುಗಳಿಂದ ಹಿಡಿದು ಕಾರ್ಯವೈಖರಿ, ಗುಜಾರಾತ್ ಮಾಡೆಲ್ ತನಕ ಒಂದನ್ನೂ ಬಿಡದೆ ಟೀಕೆ ಮಾಡುತ್ತಿದ್ದ ಕೆಸಿಆರ್ ಈಗ ಮೋದಿ ವಿಚಾರದಲ್ಲಿ ಮೃದು ಧೋರಣೆ ತಾಳತೊಡಗಿದ್ದಾರೆ. ನಾಗ್ಪುರದಲ್ಲಿ ಜೂನ್ 15 ರಂದು ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿಯನ್ನು "ಒಳ್ಳೆಯ ಸ್ನೇಹಿತ" ಎಂದು ಕೆಸಿಆರ್ ಸಂಬೋಧಿಸಿದ್ದರು.
ಅಲ್ಲದೆ, ಶುಕ್ರವಾರ ಪಾಟ್ನಾದಲ್ಲಿ ಮೆಗಾ ವಿಪಕ್ಷ ಮೈತ್ರಿಯ ನಡೆಯುತ್ತಿರುವಾಗ, ಕೆ. ಚಂದ್ರಶೇಖರ ರಾವ್ ಅವರ ಪುತ್ರ ಮತ್ತು ತೆಲಂಗಾಣ ಸಚಿವ ಕೆ ಟಿ ರಾಮರಾವ್ ನವದೆಹಲಿಯ ಎರಡು ದಿನಗಳ ಅಧಿಕೃತ ಪ್ರವಾಸ ಶುರುಮಾಡಿದ್ದರು. ಅವರು ಈ ಸಂದರ್ಭದಲ್ಲಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಅವಕಾಶ ಕೇಳಿದ್ದರು.
ಸರ್ವಪಕ್ಷ ಸಭೆಗೆ ಹಾಜರು
ನವದೆಹಲಿಯ ಪಾರ್ಲಿಮೆಂಟ್ ಲೈಬ್ರರಿ ಕಟ್ಟಡದಲ್ಲಿ ನಡೆದ ಮಣಿಪುರದ ಹಿಂಸಾಚಾರದ ಕುರಿತು ಸರ್ವಪಕ್ಷ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ವಹಿಸಿದ್ದರು. ಸಭೆಗೆ ಹಾಜರಾಗಲು ಹಿರಿಯ ನಾಯಕ ಮತ್ತು ಮಾಜಿ ಸಂಸದ ಬಿ ವಿನೋದ್ ಅವರನ್ನು ಕೆಸಿಆರ್ ನಾಮನಿರ್ದೇಶನ ಮಾಡಿದರು. ಇದು 2020ರ ನವೆಂಬರ್ ನಂತರ ಬಿಆರ್‌ಎಸ್ ಭಾಗವಹಿಸಿದ ಮೊದಲ ಕೇಂದ್ರ ಸಭೆಯಾಗಿದೆ.
ಮದ್ಯನೀತಿ ಹಗರಣದಲ್ಲಿ ಕವಿತಾ ಹೆಸರು
ಮೂಲಗಳು ಹೇಳುವಂತೆ ದೆಹಲಿ ಮದ್ಯ ನೀತಿ ಹಗರಣದಲ್ಲಿ ಕೆಸಿಆರ್ ಅವರ ಪುತ್ರಿ ಕೆ.ಕವಿತಾ ಅವರ ಹೆಸರು ಕೂಡ ಇತ್ತು. ಇದೇ ಕಾರಣಕ್ಕೆ ಬಿಜೆಪಿಯ ಕುರಿತಾದ ತನ್ನ ದೃಷ್ಟಿಕೋನವನ್ನು ಬಿಆರ್‌ಎಸ್ ಬದಲಾಯಿಸುವಲ್ಲಿ ಪಾತ್ರ ವಹಿಸಿದೆ. ಆಕೆಯನ್ನು ಜಾರಿ ನಿರ್ದೇಶನಾಲಯವು ಎರಡು ಬಾರಿ ವಿಚಾರಣೆಗೊಳಪಡಿಸಿತು ಮತ್ತು ಎರಡು ಆರೋಪಪಟ್ಟಿಗಳಲ್ಲಿ ಹೆಸರಿಸಲಾಗಿತ್ತು. ಬಂಧನ ಸಾಧ್ಯತೆಯ ವರದಿಗಳೂ ಬಂದಿದ್ದವು. ಆದಾಗ್ಯೂ, ಏಪ್ರಿಲ್‌ನಲ್ಲಿ ಸಲ್ಲಿಸಲಾದ ಮೂರನೇ ಆರೋಪಪಟ್ಟಿಯಲ್ಲಿ ಆಕೆಯ ಹೆಸರನ್ನು ಕೈಬಿಡಲಾಗಿತ್ತು.
ವರ್ಷದ ಕೊನೆಗೆ ತೆಲಂಗಾಣ ಚುನಾವಣೆ
ವರ್ಷಾಂತ್ಯದಲ್ಲಿ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಆರ್‌ಎಸ್ ಜತೆಗಿನ ನಿಕಟತೆಯೂ ಬಿಜೆಪಿಗೆ ಸಂಕಷ್ಟ ತಂದಿದೆ. ಇತ್ತೀಚೆಗಷ್ಟೇ ತೆಲಂಗಾಣ ಬಿಜೆಪಿಗೆ ಸೇರ್ಪಡೆಯಾಗಿರುವ ಪಕ್ಷದ ನಾಯಕರಾದ ಕೋಮಟಿರೆಡ್ಡಿ ರಾಜ್‌ಗೋಪಾಲ್ ರೆಡ್ಡಿ ಮತ್ತು ಈಟಾಲ ರಾಜೇಂದರ್ ಅವರು ಕಾಂಗ್ರೆಸ್‌ಗೆ ತೆರಳಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ಬಗ್ಗೆ ಬಿಆರ್‌ಎಸ್‌ನ ನಿಲುವು ಬದಲಾಗುತ್ತಿರುವುದನ್ನು ಮತದಾರರು ಗಮನಿಸಿದರೆ, ಅದು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಹಾಯ ಮಾಡಬಹುದು ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು ನೆರೆಯ ಕರ್ನಾಟಕದಲ್ಲಿ ತನ್ನ ಗೆಲುವಿನ ಮೇಲೆ ಸವಾರಿ ಮಾಡುತ್ತಿರುವ ಪಕ್ಷವು ಆಡಳಿತ ವಿರೋಧಿ ಮತಗಳನ್ನು ಪಡೆಯಬಹುದು, ಇಲ್ಲದಿದ್ದರೆ ನೇರ ತ್ರಿಕೋನ ಸ್ಪರ್ಧೆಯಲ್ಲಿ ಬಿಜೆಪಿಗೆ ಹೋಗಬಹುದು. 2014ರಲ್ಲಿ ರಚನೆಯಾದಾಗಿನಿಂದ ತೆಲಂಗಾಣದಲ್ಲಿ ಬಿಆರ್‌ಎಸ್ ಅಧಿಕಾರದಲ್ಲಿದೆ.