logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rahul Gandhi: ಸಂಸದನಾಗಿ ರಾಹುಲ್​ ಗಾಂಧಿ ಕಮ್​ ಬ್ಯಾಕ್​; ನಾಳೆ ಲೋಕಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಬಗ್ಗೆ ಮಾತು

Rahul Gandhi: ಸಂಸದನಾಗಿ ರಾಹುಲ್​ ಗಾಂಧಿ ಕಮ್​ ಬ್ಯಾಕ್​; ನಾಳೆ ಲೋಕಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಬಗ್ಗೆ ಮಾತು

Meghana B HT Kannada

Aug 07, 2023 07:09 PM IST

google News

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

    • No Confidence Motion: ಕೇರಳದ ವಯನಾಡು ಕ್ಷೇತ್ರದ ಲೋಕಸಭಾ ಸಂಸದರಾಗಿರುವ ರಾಹುಲ್ ಗಾಂಧಿ ನಾಳೆ ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಬಗ್ಗೆ ಮಾತನಾಡಲಿದ್ದಾರೆ. ಮಣಿಪುರ ಹಿಂಸಾಚಾರ ಸಂಬಂಧ ಪ್ರಧಾನಿ ಮೋದಿ ಅವರ ಹೇಳಿಕೆಗೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಕೆಲದಿನಗಳ ಹಿಂದೆ ಅವಿಶ್ವಾಸ ನಿರ್ಯಣ ಮಂಡಿಸಿದ್ದವು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ನವದೆಹಲಿ: ಸಂಸದನಾಗಿ ಕಮ್​ ಬ್ಯಾಕ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಳೆ (ಆಗಸ್ಟ್ 8, ಮಂಗಳವಾರ) ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಕುರಿತು ಭಾಷಣ ಮಾಡಲು ಸಿದ್ಧರಾಗಿದ್ದಾರೆ.

2019 ರ 'ಮೋದಿ ಉಪನಾಮ' ಮಾನನಷ್ಟ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಶಿಕ್ಷೆಗೆ ತಡೆ ನೀಡಿದ ಬೆನ್ನಲ್ಲೇ ಸಂಸತ್​ ಸದಸ್ಯತ್ವ ಅನರ್ಹತೆಯನ್ನು ಲೋಕಸಭೆ ಸಚಿವಾಲಯ ರದ್ದುಗೊಳಿಸಿದೆ. ಹೀಗಾಗಿ ಈಗಾಗಲೇ ಆರಂಭವಾಗಿರುವ ಸಂಸತ್​ ಮುಂಗಾರು ಅಧಿವೇಶನದಲ್ಲಿ ರಾಹುಲ್​ ಗಾಂಧಿ ಇಂದಿನಿಂದ ಪಾಲ್ಗೊಂಡಿದ್ದಾರೆ.

ಇಂದು (ಆಗಸ್ಟ್ 7) ಮಧ್ಯಾಹ್ನದ ಸುಮಾರಿಗೆ ಕಲಾಪಕ್ಕೆ ಹಾಜರಾಗಲು ಸದನವನ್ನು ಪ್ರವೇಶಿಸುವ ಮೊದಲು ಮಹಾತ್ಮ ಗಾಂಧಿಯವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಸಂಸತ್ತಿಗೆ ಆಗಮಿಸಿದ ರಾಹುಲ್​ ಗಾಂಧಿಗೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದ ಸಂಸದರಿಂದ ಆತ್ಮೀಯ ಸ್ವಾಗತ ದೊರೆಯಿತು.

ಕೇರಳದ ವಯನಾಡು ಕ್ಷೇತ್ರದ ಲೋಕಸಭಾ ಸಂಸದರಾಗಿರುವ ರಾಹುಲ್ ಗಾಂಧಿ ನಾಳೆ ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಬಗ್ಗೆ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಣಿಪುರ ಹಿಂಸಾಚಾರ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಕೆಲದಿನಗಳ ಹಿಂದೆ ಅವಿಶ್ವಾಸ ನಿರ್ಯಣ ಮಂಡಿಸಿದ್ದವು. ಕಾಂಗ್ರೆಸ್ ಪಕ್ಷದ ಸಂಸದ ಗೌರವ್ ಗೊಗೊಯ್ ಅವರು ಮಂಡಿಸಿದ ಅವಿಶ್ವಾಸ ನಿರ್ಯಣವನ್ನು ಸ್ಪೀಕರ್ ಓಂ ಬಿರ್ಲಾ ಅಂಗೀಕರಿಸಿದ್ದು, ಸದನದಲ್ಲಿ ಚರ್ಚೆಗೆ ಅನುಮತಿ ನೀಡಿದ್ದರು.

ಮೋದಿ ಸರ್​ನೇಮ್​ ಕೇಸ್​

2019ರಲ್ಲಿ ಕೋಲಾರದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ್ದ ರಾಹುಲ್​ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವ ಭರದಲ್ಲಿ, "ಚೌಕೀದಾರ್‌ ಶೇಕಡ 100ರಷ್ಟು ಕಳ್ಳ ಇದ್ದಾನೆ. ಒಂದು ಸಣ್ಣ ಪ್ರಶ್ನೆ ಕೇಳ್ತೇನೆ. ಎಲ್ಲಾ ಕಳ್ಳರು ಹೇಗೆ ಮೋದಿ ಎಂಬ ಸರ್​ನೇಮ್​​ಗಳನ್ನು ಹೊಂದಿದ್ದಾರೆ? ನೀರವ್‌ ಮೋದಿ, ಲಲಿತ್‌ ಮೋದಿ, ನರೇಂದ್ರ ಮೋದಿ, ಇನ್ನೂ ಹುಡುಕಾಡಿದ್ರೆ ಇನ್ನಷ್ಟು ಮೋದಿಗಳು ಬಯಲಾಗಬಹುದು" ಎಂದು ಹೇಳಿಕೆ ನೀಡಿದ್ದರು.

ಇದರ ವಿರುದ್ಧ ಇದನ್ನು ಖಂಡಿಸಿ ಬಿಜೆಪಿ ಶಾಸಕ ಮತ್ತು ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ರಾಹುಲ್‌ ಗಾಂಧಿ ವಿರುದ್ಧ ಮಾನಹಾನಿ ಮೊಕದ್ದಮೆ ಕೇಸ್​ ದಾಖಲಿಸಿದ್ದರು. ಮಾರ್ಚ್​ 23 ರಂದು ಈ ಪ್ರಕರಣದ ಅಂತಿಮ ವಿಚಾರಣೆ ನಡೆಸಿದ್ದ ಸೂರತ್ ಜಿಲ್ಲಾ ನ್ಯಾಯಾಲಯ ರಾಹುಲ್​ ಗಾಂಧಿಯನ್ನು ದೋಷಿ ಎಂದು ತೀರ್ಪು ನೀಡಿತ್ತು. ಅಲ್ಲದೇ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಸೂರತ್​ ಮ್ಯಾಜಿಸ್ಟ್ರೇಟ್ ಕೋರ್ಟ್​ ತೀರ್ಪು ಪ್ರಶ್ನಿಸಿ ಹಾಗೂ ಶಿಕ್ಷೆಗೆ ತಡೆ ಕೋರಿ ಸೂರತ್​​ನ ಸೆಷನ್ಸ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಏಪ್ರಿಲ್​ 20 ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು. ಆನಂತರ ಗುಜರಾತ್ ಹೈಕೋರ್ಟ್​ಗೆ ರಾಹುಲ್​ ಗಾಂಧಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಅಲ್ಲಿಯೂ ಅವರ ಅರ್ಜಿ ವಜಾಗೊಂಡಿತು. ಈ ಹಿನ್ನೆಲೆ ಶಿಕ್ಷೆಗೆ ತಡೆ ನೀಡಲು ಕೋರಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಆಗಸ್ಟ್ 4 ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಶಿಕ್ಷೆಗೆ ತಡೆಯಾಜ್ಞೆ ವಿಧಿಸಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ