India Bharat Rename: ಇಂಡಿಯಾ ಭಾರತವಾಗುವ ಸಮಯ; ಇದೇ ರೀತಿ ಹೆಸರು ಬದಲಾಯಿಸಿಕೊಂಡ 9 ರಾಷ್ಟ್ರಗಳು, ಕಾರಣ ಆಸಕ್ತಿದಾಯಕ
Sep 06, 2023 05:15 PM IST
ಜಿ20 ಸಭೆಯ ಔತಣಕೂಟದ ಆಮಂತ್ರಣದಲ್ಲಿ ಪ್ರಸಿಡೆಂಟ್ ಆಫ್ ಭಾರತ್ (ಪ್ರಸಿಡೆಂಟ್ ಆಫ್ ಇಂಡಿಯಾ ಬದಲಾಗಿ) ಎಂದು ಇರುವುದು ಕೂಡ ಸಾಕಷ್ಟು ಚರ್ಚೆಯನ್ನು ಉಂಟು ಮಾಡಿದೆ.
- India name change Bharat news: ಇಂಡಿಯಾದ ಹೆಸರು ಭಾರತ ಎಂದು ಬದಲಾಗುವ ಕುರಿತು ಚರ್ಚೆಗಳು ನಡೆಯುತ್ತಿವೆ. ಇದೇ ಸಮಯದಲ್ಲಿ ಈ ರೀತಿ ತಮ್ಮ ಹೆಸರನ್ನು ಬದಲಾಯಿಸಿಕೊಂಡ ನೆದರ್‌ಲೆಂಡ್, ಟರ್ಕಿ, ಜೆಕ್ ರಿಪಬ್ಲಿಕ್, ಇರಾನ್ ಇತ್ಯಾದಿ ರಾಷ್ಟ್ರಗಳ ವಿವರ ಇಲ್ಲಿದೆ.
ಬೆಂಗಳೂರು: ಭಾರತ ಮತ್ತು ಇಂಡಿಯಾ ಎಂಬೆರಡು ಪದಗಳು ಕಳೆದ ಕೆಲವು ದಿನಗಳಿಂದ ಚರ್ಚೆಯಲ್ಲಿದೆ. ಭಾರತದ ಇನ್ನೊಂದು ಹೆಸರಾದ ಇಂಡಿಯಾದ ಬದಲು ಎಲ್ಲೆಡೆ ಭಾರತ್ ಎಂದು ಬಳಕೆ ಮಾಡಲು ಕೇಂದ್ರ ಯೋಜಿಸಿದೆ ಎನ್ನುವುದು ಸುದ್ದಿ. ಇತ್ತೀಚೆಗೆ ಕಾಂಗ್ರೆಸ್ ನೇತೃತ್ವದ ಮಿತ್ರಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟಿದ್ದವು. ಇದೇ ಸಮಯದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಇಂಡಿಯಾ ಎಂಬ ಪದವನ್ನೇ ತೆಗೆಯಲು ಹೊರಟಿದೆ ಎಂಬ ಚರ್ಚೆಯಿದೆ. ಭಾರತ ಸರಕಾರವು ಅಧಿಕೃತವಾಗಿ ಪಾರ್ಲಿಮೆಂಟ್‌ನಲ್ಲಿ ಮುಂದಿನ ತಿಂಗಳಲ್ಲಿ ವಿಶೇಷ ಅಧಿವೇಶನ ಕರೆದು ಇಂಡಿಯಾವನ್ನು ಅಧಿಕೃತವಾಗಿ ಭಾರತ್ ಎಂದು ಬದಲಾಯಿಸಲಿದೆ ಎನ್ನಲಾಗಿದೆ. ಜಿ20 ಸಭೆಯ ಡಿನ್ನರ್ ಆಮಂತ್ರಣದಲ್ಲಿ ರಾಷ್ಟ್ರಪತಿ ಭವನದಿಂದ ಕಳುಹಿಸಲಾದ ಆಮಂತ್ರಣದಲ್ಲಿ ಪ್ರಸಿಡೆಂಟ್ ಆಫ್ ಭಾರತ್ (ಪ್ರಸಿಡೆಂಟ್ ಆಫ್ ಇಂಡಿಯಾ ಬದಲಾಗಿ) ಎಂದು ಇರುವುದು ಕೂಡ ಸಾಕಷ್ಟು ಚರ್ಚೆಯನ್ನು ಉಂಟು ಮಾಡಿದೆ. ಇಂಡಿಯಾ ಹೆಸರನ್ನು ಭಾರತ್ ಆಗಿ ಬದಲಾಯಿಸಬೇಕೆಂದು ಸಾಕಷ್ಟು ಕೂಗು ಈ ಸಂದರ್ಭದಲ್ಲಿ ಕೇಳಿಬಂದಿದೆ. ಈ ಸಮಯದಲ್ಲಿ ಇದೇ ರೀತಿ ತಮ್ಮ ಹೆಸರನ್ನು ಬದಲಾಯಿಸಿಕೊಂಡ ಇತರೆ 9 ದೇಶಗಳ ವಿವರ ಪಡೆಯೋಣ.
ಹೆಸರು ಬದಲಾಯಿಸಿಕೊಂಡ 9 ದೇಶಗಳು
ಟರ್ಕಿ ಬದಲು ಟರ್ಕಿಯೆ (Turkiye)
2022ರಲ್ಲಿ ವಿಶ್ವಸಂಸ್ಥೆಗೆ ಟರ್ಕಿ ದೇಶವು ತನ್ನ ಹೆಸರನ್ನು ಎಲ್ಲಾ ಭಾಷೆಗಳಲ್ಲಿ Turkiye ಎಂದು ಬದಲಾಯಿಸಲು ಬಯಸಿರುವುದಾಗಿ ತಿಳಿಸಿತ್ತು. ಈ ಹೆಸರು ಸಂಸ್ಕೃತಿ, ನಾಗರಿಕತೆ, ಮೌಲ್ಯ ಇತ್ಯಾದಿಗಳನ್ನು ಪ್ರತಿನಿಧಿಸುತ್ತಿದೆ ಎಂದು ಟರ್ಕಿ ತಿಳಿಸಿದೆ.
ಹಾಲೆಂಡ್ ಬದಲು ನೆದರ್‌ಲೆಂಡ್
ಡಚ್ ಸರಕಾರ ತನ್ನ ಜಾಗತಿಕ ಚಿತ್ರಣ ಬದಲಾಯಿಸುವ ಉದ್ದೇಶದಿಂದ ಹಾಲೆಂಡ್ ಹೆಸರನ್ನು ನೆದರ್‌ಲೆಂಡ್ ಎಂದು ಬದಲಾಯಿಸಲು ಉದ್ದೇಶಿಸಿತ್ತು.
ಜೆಕ್ ರಿಪಬ್ಲಿಕ್ ಬದಲು ಜೆಕಿಯಾ
ಜೆಕ್ ಗಣರಾಜ್ಯದ ಹೆಸರನ್ನು ಜೆಕಿಯಾ ಎಂದು ಬದಲಾಯಿಸಲಾಗಿದೆ. ಆದರೆ, ಈಗಲೂ ಜೆಕಿಯಾ ಮತ್ತು ಜೆಕ್ ರಿಪಬ್ಲಿಕ್ ಎಂಬ ಎರಡು ಹೆಸರನ್ನು ಅಧಿಕೃತವಾಗಿ ಬಳಸಲಾಗುತ್ತಿದೆ. ಕ್ರೀಡಾ ತಂಡಗಳಿಗೆ ಉತ್ಪನ್ನಗಳು ಮತ್ತು ಬಟ್ಟೆಗಳ ಮೇಲೆ ಸುಲಭವಾಗಿ ಬರೆಯಲು ಅನುಕೂಲವಾಗಲು ಈ ರೀತಿ ಹೆಸರು ಬದಲಾಯಿಸಲಾಗಿದೆ.
ಬರ್ಮಾ ಬದಲು ಮಯನ್ಮಾರ್
ಮಯನ್ಮಾರ್ ದೇಶಕ್ಕೆ ಬರ್ಮಾ ಎಂದು ಹೆಸರಿತ್ತು. 1989ರಲ್ಲಿ ಪ್ರಜಾಪ್ರಭುತ್ವದ ಉದಯವಾಗುವ ಸೂಚನೆ ಇರುವ ಸಂದರ್ಭದಲ್ಲಿ ಮಿಲಿಟರಿ ನಾಯಕರು ಬರ್ಮಾದ ಹೆಸರನ್ನು ಮಯನ್ಮಾರ್ ಎಂದು ಬದಲಾಯಿಸಿದರು.
ಸಿಲೋನ್ ಬದಲು ಶ್ರೀಲಂಕಾ
1972ರಲ್ಲಿ ಸಿಲೋನ್ ಹೆಸರನ್ನು ಶ್ರೀಲಂಕಾವಾಗಿ ಬದಲಾಯಿಸಿತ್ತು. ಬ್ರಿಟನ್ ಆಡಳಿತದಿಂದ ಸ್ವಾತಂತ್ರ್ಯ ಪಡೆದ ಬಳಿಕ ಈ ರೀತಿ ಹೆಸರು ಬದಲಾಯಿಸಿಕೊಳ್ಳಲಾಯಿತು.
ಸ್ವಾಜಿಲ್ಯಾಂಡ್ ಬದಲು ಇಸ್ವಾಟಿನಿ
ಏಪ್ರಿಲ್ 2018ರಲ್ಲಿ ಕಿಂಗ್ ಎಂಸ್ವಾತಿ III ಸ್ವಾಜಿಲ್ಯಾಂಡ್ ಸಾಮ್ರಾಜ್ಯವನ್ನು ಇಸ್ವಾಟಿನಿ ಸಾಮ್ರಾಜ್ಯ ಎಂದು ಮರುನಾಮಕರಣ ಮಾಡಿದರು. ಸ್ವಿಡ್ಜರ್‌ಲೆಂಡ್ ಹೆಸರನ್ನು ಹೋಲಿಸಿ ಗೊಂದಲವಾಗುವುದನ್ನು ತಪ್ಪಿಸಲು ಹೀಗೆ ಹೆಸರು ಬದಲಾಯಿಸಲಾಯಿತು.
ರಿಪಬ್ಲಿಕ್ ಆಫ್ ಮ್ಯಾಸಿಡೋನಿಯಾ ಬದಲು ರಿಪಬ್ಲಿಕ್ ಆಫ್ ನಾರ್ತ್ ಮ್ಯಾಸಿಡೋನಿಯಾ
2019ರಲ್ಲಿ ರಿಪಬ್ಲಿಕ್ ಆಫ್ ಮ್ಯಾಸಿಡೋನಿಯಾ ಬದಲು ರಿಪಬ್ಲಿಕ್ ಆಫ್ ನಾರ್ತ್ ಮ್ಯಾಸಿಡೋನಿಯಾ ಎಂದು ಹೆಸರು ಬದಲಾಯಿಸಲಾಯಿತು.
ಪರ್ಷಿಯಾ ಬದಲು ಇರಾನ್
ಈಗಿನ ಇರಾನ್ ದೇಶವು ಪರ್ಷಿಯಾ ಎಂಬ ಹೆಸರು ಹೊಂದಿತ್ತು. 1935ರಲ್ಲಿ ರೆಜಾ ಶಾ ರಾಜನಾದ ಸಂದರ್ಭದಲ್ಲಿ ಪರ್ಷಿಯಾ ಹೆಸರನ್ನು ಇರಾನ್ ಎಂದು ಬದಲಾಯಿಸಿದ್ದ.
ಕಂಪೂಚಿಯಾ ಬದಲು ಕಾಂಬೋಡಿಯಾ
ಕಾಂಬೋಡಿಯಾ ತನ್ನ ಹೆಸರನ್ನು ಕಂಪೊಚಿಯಾದ ಬದಲು ಕಾಂಬೋಡಿಯಾ ಎಂದು ಬದಲಾಯಿಸಿಕೊಂಡಿದೆ. 1976ರಲ್ಲಿ ಅಲ್ಲಿನ ಕಮ್ಯುನಿಸ್ಟ್ ಸರಕಾರ ತನ್ನ ಹೆಸರನ್ನು ಅಧಿಕೃತವಾಗಿ ಕಾಂಬೋಡಿಯಾ ಎಂದು ಘೋಷಿಸಿಕೊಂಡಿದೆ.