Electricity Rules: ವಿದ್ಯುತ್ ನಿಯಮ 2020 ಪರಿಷ್ಕರಣೆ, ಸ್ಮಾರ್ಟ್ ಮೀಟರಿಂಗ್ ನಿಯಮದಲ್ಲಿ ಬದಲಾವಣೆ, ಹಗಲು ದರ ಇಳಿಕೆ, ರಾತ್ರಿ ದರ ಏರಿಕೆ
Jun 23, 2023 02:46 PM IST
ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳು 2020 ಅನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ. (ಸಾಂಕೇತಿಕ ಚಿತ್ರ)
Electricity Rules: ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳು 2020 ಅನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದ್ದು, ಸ್ಮಾರ್ಟ್ ಮೀಟರಿಂಗ್ ನಿಯಮದಲ್ಲಿ ಬದಲಾವಣೆ ಮಾಡಿದ್ದು, ಟಿಒಡಿ ಟಾರಿಫ್ ಅನ್ನು ಪರಿಚಯಿಸಿದೆ. ಏನಿದು ಟಿಒಡಿ ಟಾರಿಫ್ (ToD Tariff) ಅಥವಾ ಟೈಮ್ ಆಫ್ ಡೇ ಟಾರಿಫ್ (Time of Day Tariff), ಇಲ್ಲಿದೆ ಕಂಪ್ಲೀಟ್ ವಿವರ.
ಕೇಂದ್ರ ಸರ್ಕಾರ (Union Govt) ವು ಚಾಲ್ತಿಯಲ್ಲಿರುವ ವಿದ್ಯುತ್ ದರ (Electricity Tariff) ವ್ಯವಸ್ಥೆಗೆ ಎರಡು ಬದಲಾವಣೆಗಳನ್ನು ತರುವುದಕ್ಕಾಗಿ ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳು 2020 ಅನ್ನು ತಿದ್ದುಪಡಿ ಮಾಡಿದೆ. ವಿದ್ಯುತ್ ಬಳಕೆಗೆ ದಿನದ ಸಮಯ ಆಧರಿತವಾಗಿ ಶುಲ್ಕ (Time of Day Tariff) ವಿಧಿಸುವುದು ಮತ್ತು ಸ್ಮಾರ್ಟ್ ಮೀಟರಿಂಗ್ ನಿಬಂಧನೆಗಳ ತರ್ಕಬದ್ಧಗೊಳಿಸುವಿಕೆ ಆ ಎರಡು ಬದಲಾವಣೆಗಳು. ಈ ಬದಲಾವಣೆ ವಿಚಾರವನ್ನು ಕೇಂದ್ರ ಸರ್ಕಾರ ಇಂದು (ಜೂ.23) ಘೋಷಿಸಿದೆ.
ಈ ಎರಡು ಮಹತ್ವದ ಬದಲಾವಣೆಗಳು ವಿದ್ಯುತ್ ಕ್ಷೇತ್ರದಲ್ಲಿ ಕ್ರಾಂತಿಯನ್ನು ಸೃಷ್ಟಿಸಲಿದೆ ಎಂದು ಸರ್ಕಾರ ಹೇಳುತ್ತಿದೆ. ಈ ಎರಡು ಮಹತ್ವದ ಬದಲಾವಣೆಗಳ ವಿವರಣೆಯನ್ನು ಈ ರೀತಿ ಕೊಟ್ಟಿದೆ. ಟಿಒಡಿ ಟಾರಿಫ್ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡಲು ಗ್ರಾಹಕರನ್ನು ಜಾಗೃತಗೊಳಿಸುತ್ತದೆ. ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಪವರ್ ಸಿಸ್ಟಮ್‌ಗೆ ಸಹಾಯ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ಟೈಮ್ ಆಫ್ ಡೇ ಟಾರಿಫ್ ಅಥವಾ ಟಿಒಡಿ ಟಾರಿಫ್ (ToD Tariff) ಎಂದರೆ..
ಸದ್ಯ ದಿನದ 24 ಗಂಟೆ ವಿದ್ಯುತ್ ಬಳಕೆಗೆ ಒಂದೇ ದರದಲ್ಲಿ ವಿದ್ಯುತ್ ಶುಲ್ಕ ವಿಧಿಸಲಾಗುತ್ತಿದೆ. ಇದರ ಬದಲು, ದಿನದ ನಿರ್ದಿಷ್ಟ ಅವಧಿಯಲ್ಲಿ ವಿದ್ಯುತ್ ಬಳಸಿದರೆ ಇಷ್ಟು ಎಂಬ ಶುಲ್ಕ ವಿಧಿಸುವ ವಿಧಾನವೇ ಟೈಮ್ ಆಫ್ ಡೇ ಟಾರಿಫ್ ಅಥವಾ ಟಿಒಡಿ ಟಾರಿಫ್ (ToD Tariff). ಟೈಮ್ ಆಫ್ ಡೇ ಟಾರಿಫ್ (Time of Day Tariff) ಎಂದರೆ ದಿನದ ಯಾವ ಸಮಯದಲ್ಲಿ ವಿದ್ಯುತ್ ಬಳಕೆ ಮಾಡಲಾಗುತ್ತಿದೆ ಎಂಬುದನ್ನು ಆಧರಿಸಿ ವಿದ್ಯುತ್ ಶುಲ್ಕ ನಿಗದಿಪಡಿಸುವ ವಿಧಾನ.
ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ನಿರ್ದಿಷ್ಟಪಡಿಸಿದಂತೆ ಹಗಲು ಹೊತ್ತಿನ ಎಂಟು ಗಂಟೆ ಅವಧಿಯಲ್ಲಿ ವಿದ್ಯುತ್ ಶುಲ್ಕವು ಸಾಮಾನ್ಯ ಶುಲ್ಕಕ್ಕಿಂತ ಶೇಕಡ 10-20 ರಷ್ಟು ಕಡಿಮೆ ಇರುತ್ತದೆ. ಆದರೆ ಪೀಕ್ ಅವರ್‌ಗಳಲ್ಲಿ ಅಂದರೆ ಎಲ್ಲರೂ ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಸುವ ಅವಧಿಯಲ್ಲಿ ವಿದ್ಯುತ್ ಶುಲ್ಕ ಶೇಕಡ 10ರಿಂದ ಶೇಕಡ 20 ಹೆಚ್ಚಾಗಿರುತ್ತದೆ. ಸರಳವಾಗಿ ಹೇಳುವುದಾದರೆ, ಹಗಲು ಹೊತ್ತಿನ ವಿದ್ಯುತ್ ಬಳಕೆಗೆ ದರ ಶೇಕಡ 20ರ ತನಕ ಕಡಿಮೆ ಇದ್ದರೆ, ರಾತ್ರಿ ಹೊತ್ತಿನ ವಿದ್ಯುತ್ ಬಳಕೆಗೆ ದರ ಶೇಕಡ 20ರ ತನಕ ಏರಿಕೆ ಆಗಲಿದೆ.
ಸರ್ಕಾರದ ಅಧಿಕೃತ ಹೇಳಿಕೆಯ ಪ್ರಕಾರ, 2024 ರ ಏಪ್ರಿಲ್ 1 ರಿಂದ ಗರಿಷ್ಠ 10 KW ಮತ್ತು ಅದಕ್ಕಿಂತ ಹೆಚ್ಚಿನ ಬೇಡಿಕೆಯನ್ನು ಹೊಂದಿರುವ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಮತ್ತು ಕೃಷಿ ಗ್ರಾಹಕರನ್ನು ಹೊರತುಪಡಿಸಿ ಎಲ್ಲಾ ಇತರ ಗ್ರಾಹಕರಿಗೆ ಲೇಟೆಸ್ಟ್ ಆಗಿ 2025ರ ಏಪ್ರಿಲ್ 1 ರಿಂದ ಟಿಒಡಿ ಟಾರಿಫ್ ಅನ್ವಯವಾಗಲಿದೆ. ಸ್ಮಾರ್ಟ್ ಮೀಟರ್‌ಗಳನ್ನು ಹೊಂದಿರುವ ಗ್ರಾಹಕರಿಗೆ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಿದ ತತ್‌ಕ್ಷಣ ದಿನದ ಸುಂಕವನ್ನು ಜಾರಿಗೆ ತರಲಾಗುವುದು ಎಂದು ಸರ್ಕಾರದ ಹೇಳಿಕೆ ವಿವರಿಸಿದೆ.
ಸ್ಮಾರ್ಟ್ ಮೀಟರಿಂಗ್ ನಿಯಮ ಸರಳ
ಕೇಂದ್ರ ಸರ್ಕಾರವು ಮಾಡಿದ ಇನ್ನೊಂದು ಪರಿಷ್ಕರಣೆಯಲ್ಲಿ ಸ್ಮಾರ್ಟ್ ಮೀಟರಿಂಗ್ ನಿಯಮಗಳನ್ನು ಸರಳಗೊಳಿಸಿದೆ.
"ಗ್ರಾಹಕರ ಅನನುಕೂಲತೆ ಮತ್ತು ಕಿರುಕುಳವನ್ನು ತಪ್ಪಿಸಲು, ಗರಿಷ್ಠ ಮಂಜೂರಾದ ಲೋಡ್ / ಬೇಡಿಕೆಯನ್ನು ಮೀರಿ ಗ್ರಾಹಕರ ಬೇಡಿಕೆಯ ಹೆಚ್ಚಳಕ್ಕೆ ಅಸ್ತಿತ್ವದಲ್ಲಿರುವ ದಂಡವನ್ನು ಕಡಿಮೆ ಮಾಡಲಾಗಿದೆ" ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.
ಮೀಟರಿಂಗ್ ನಿಬಂಧನೆಯ ತಿದ್ದುಪಡಿಯ ಪ್ರಕಾರ, ಸ್ಮಾರ್ಟ್ ಮೀಟರ್ ಅಳವಡಿಸಿದ ನಂತರ, ಅನುಸ್ಥಾಪನೆಯ ದಿನಾಂಕದ ಹಿಂದಿನ ಅವಧಿಗೆ ಸ್ಮಾರ್ಟ್ ಮೀಟರ್ ದಾಖಲಿಸಿದ ಗರಿಷ್ಠ ಬೇಡಿಕೆಯ ಆಧಾರದ ಮೇಲೆ ಗ್ರಾಹಕರ ಮೇಲೆ ಯಾವುದೇ ದಂಡ ಶುಲ್ಕವನ್ನು ವಿಧಿಸಲಾಗುವುದಿಲ್ಲ.
ಸ್ಮಾರ್ಟ್ ಮೀಟರ್‌ಗಳನ್ನು ದಿನಕ್ಕೆ ಒಮ್ಮೆಯಾದರೂ ರಿಮೋಟ್‌ನಲ್ಲಿ ಓದಬೇಕು ಮತ್ತು ವಿದ್ಯುಚ್ಛಕ್ತಿಯ ಬಳಕೆಯ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡಲು ಗ್ರಾಹಕರೊಂದಿಗೆ ಡೇಟಾವನ್ನು ಹಂಚಿಕೊಳ್ಳಬೇಕು ಎಂದು ಸರ್ಕಾರದ ಹೇಳಿಕೆ ವಿವರಿಸಿದೆ.