ಫೇರ್‌ವರ್ಕ್ ಇಂಡಿಯಾ ವರದಿ 2024 ಪ್ರಕಟ: ಡಿಜಿಟಲ್ ವೇದಿಕೆಯಲ್ಲಿ ಯಾವ ಕಂಪನಿ ಉದ್ಯೋಗಿಗಳಿಗೆ ಉತ್ತಮ? ಬಿಗ್‌ಬಾಸ್ಕೆಟ್‌ನಿಂದ ಜೊಮ್ಯಾಟೊ ತನಕ
Oct 08, 2024 06:01 PM IST
ಗಿಗ್ ಕೆಲಸಗಾರರು (ಸಾಂಕೇತಿಕ ಚಿತ್ರ)
- ಅಮೆಜಾನ್, ಬಿಗ್‌ಬಾಸ್ಕೆಟ್, ಜೊಮ್ಯಾಟೊ, ಸ್ವಿಗ್ಗಿಯಂತಹ ಹಲವು ಆನ್‌ಲೈನ್ ಅಥವಾ ಡಿಜಿಟಲ್ ವೇದಿಕೆಗಳು ನಮ್ಮ ಬದುಕನ್ನ ಸುಲಭವಾಗಿಸಿದ್ದು ಸುಳ್ಳಲ್ಲ. ಆದರೆ ಈ ಕಂಪನಿಗಳು ತನ್ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಎಷ್ಟು ಉತ್ತಮ ಎಂಬುದರ ಸಮೀಕ್ಷೆ ನಡೆಸಿದೆ ಫೇರ್‌ವರ್ಕ್ ಇಂಡಿಯಾ. ಇದರ ವರದಿಯ ಪ್ರಕಾರ ಗಿಗ್ ಕೆಲಸಗಾರರಿಗೆ ಯಾವ ಕಂಪನಿ ಉತ್ತಮ ಎಂದು ನೋಡಿ.
ಬೆಂಗಳೂರು: ಪ್ರತಿವರ್ಷದಂತೆ ಈ ವರ್ಷವೂ ಫೇರ್‌ವರ್ಕ್ ಇಂಡಿಯಾ ತಂಡವು ಡಿಜಿಟಲ್ ವೇದಿಕೆಗಳಲ್ಲಿ ಕೆಲಸ ಮಾಡುವ ಗಿಗ್ ಕೆಲಸಗಾರರ ಸ್ಥಿತಿಗತಿಗಳ ಬಗೆಗಿನ ವರದಿಯನ್ನು ಬಿಡುಗಡೆ ಮಾಡಿದೆ. 2024ನೇ ಸಾಲಿನಲ್ಲಿ ಡಿಜಿಟಲ್ ವೇದಿಕೆ ಆರ್ಥಿಕತೆಯಲ್ಲಿ ಕೆಲಸದ ಗುಣಮಟ್ಟದ ಕುರಿತ ವರದಿಯನ್ನು ಪ್ರಸ್ತುತ ಪಡಿಸಿದೆ. ಅದರ ಪ್ರಕಾರ ಯಾವ ಡಿಜಿಟಲ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂಬುದನ್ನು ನೋಡೋಣ.
ಸೆಂಟರ್ ಫಾರ್ ಐಟಿ ಅಂಡ್ ಪಬ್ಲಿಕ್ ಪಾಲಿಸಿ (ಸಿಐಟಿಎಪಿಪಿ) ಮತ್ತು ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಷನ್ ಟೆಕ್ನಾಲಜಿ, ಬೆಂಗಳೂರು (ಐಐಐಟಿ-ಬಿ) – ಈ ಸಂಸ್ಥೆಗಳ ನೇತೃತ್ವದ ಫೇರ್‌ವರ್ಕ್ ಇಂಡಿಯಾ ತಂಡವು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಈ ವರದಿಯನ್ನು ಸಿದ್ಧಪಡಿಸಿದೆ. ಭಾರತದ ಡಿಜಿಟಲ್ ಆರ್ಥಿಕತೆ ವೇದಿಕೆಗಳಲ್ಲಿ ಕೆಲಸ ಮಾಡುವ ಗಿಗ್ ಕೆಲಸಗಾರರ ದುಡಿಮೆಯ ಸ್ಥಿತಿಗತಿಯನ್ನು ಪರಿಶೀಲಿಸುವ ಈ ದಾಖಲೆಯು ಫೇರ್‌ವರ್ಕ್ ತಂಡದ 6ನೇ ವಾರ್ಷಿಕ ವರದಿಯಾಗಿದೆ. ಅಂದರೆ ಕಳೆದ 6 ವರ್ಷಗಳಿಂದ ಫೇರ್‌ವರ್ಕ್ ಇಂಡಿಯಾ ಸಂಸ್ಥೆ ಈ ವರದಿಯನ್ನು ಬಿಡುಗಡೆ ಮಾಡುತ್ತಿದೆ.
ಇದು ಗೃಹ ಸಂಬಂಧಿ ಕೆಲಸಗಳು, ವೈಯಕ್ತಿಕ ಆರೈಕೆ, ಸರಕು ಸಾಗಣೆ, ಆಹಾರ ಸರಬರಾಜು ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಸ್ಥಳಾಧಾರಿತ ಸೇವೆ ಒದಗಿಸುತ್ತಿರುವ ಭಾರತದ 11 ಡಿಜಿಟಲ್ ವೇದಿಕೆಗಳನ್ನು ಮೌಲ್ಯಮಾಪನ ಮಾಡಿದೆ.
ಗಿಗ್ ಕೆಲಸಗಾರರ ಸ್ಥಿತಿಗತಿ
ಇತ್ತೀಚೆಗೆ ಕೆಲಸಗಾರರು ಯಾವಾಗ ಮತ್ತು ಎಷ್ಟು ಹೊತ್ತು ಸೇವೆ ಅಥವಾ ಗಿಗ್ ಒದಗಿಸಬೇಕು ಎನ್ನುವುದನ್ನು ಡಿಜಿಟಲ್ ವೇದಿಕೆಗಳೇ ನಿಯಂತ್ರಿಸುತ್ತಿರುವ ಹೊತ್ತಿನಲ್ಲಿ ಈ ವರದಿಯು ಡಿಜಿಟಲ್ ವೇದಿಕೆಗಳ ಕೆಲಸದ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಪರಿಶೀಲಿಸುತ್ತದೆ. ಕರ್ನಾಟಕ ಮತ್ತು ಜಾರ್ಖಂಡ್‌ನಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಕಾಯಿದೆಗಳು ಡಿಜಿಟಲ್ ಕೆಲಸಗಾರರ ಮೇಲೆ ಉಂಟುಮಾಡಬಹುದಾದ ಪರಿಣಾಮ ಸಾಧ್ಯತೆಗಳನ್ನೂ ಈ ವರದಿ ಚರ್ಚಿಸುತ್ತದೆ. “ಈ ವರ್ಷ ಗಿಗ್ ಕೆಲಸಗಾರರ ಕಲ್ಯಾಣ ವಿಷಯವು ರಾಜಕೀಯ ಪ್ರಣಾಳಿಕೆಗಳು ಮತ್ತು ಕಾನೂನು ಉಪಕ್ರಮಗಳ ತೀವ್ರ ಗಮನವನ್ನು ಸೆಳೆದಿರುವುದು ವಿಶೇಷವಾಗಿದೆ. ಆದರೆ, ಆ ಪ್ರಯತ್ನಗಳ ಅನುಷ್ಠಾನವು ಅನಿಶ್ಚಿತವಾಗಿ ಉಳಿದಿದ್ದು, ಡಿಜಿಟಲ್ ವೇದಿಕೆಗಳು ಗಿಗ್ ಕೆಲಸದ ಮರುವ್ಯಾಖ್ಯಾನಕ್ಕೆ ಇಳಿದಿವೆ. ಇಂತಹ ಸಂದರ್ಭದಲ್ಲಿ ಗಿಗ್ ಕೆಲಸಗಾರರ ಪರಿಸ್ಥಿತಿಯ ಸುಧಾರಣೆಗಾಗಿ ಸಂಶೋಧನೆ ಮತ್ತು ವಕಾಲತ್ತು ಕೆಲಸಗಳು ಹೆಚ್ಚು ಪ್ರಸ್ತುತವಾಗಿವೆ” ಎನ್ನುತ್ತಾರೆ ಫೇರ್‌ವರ್ಕ್ ಇಂಡಿಯಾ ತಂಡದ ಪ್ರಧಾನ ಸಂಶೋಧಕರಾದ ಫ್ರೊಫೆಸರ್ ಬಾಲಾಜಿ ಪಾರ್ಥಸಾರಥಿ ಮತ್ತು ಜಾನಕಿ ಶ್ರೀನಿವಾಸನ್ ಹಾಗೂ ಅವರ ಸಹೋದ್ಯೋಗಿ ಸಂಶೋಧಕರಾದ ಮೌನಿಕಾ ನೀರುಕೊಂಡ, ಬಿಲಹರಿ ಎಂ, ರಕ್ತಿಮಾ ಕಲಿತಾ, ಟೋನಿ ಮ್ಯಾಥ್ಯೂ, ಮೇಘಶ್ರೀ ಬಾಲರಾಜ್ ಮತ್ತು ಆದಿತ್ಯ ಸಿಂಗ್.
5 ತತ್ವಗಳ ಆಧಾರ ಮೇಲೆ ಮೌಲ್ಯಮಾಪನ
ಡಿಜಿಟಲ್ ವೇದಿಕೆಗಳನ್ನು ಐದು ತತ್ವಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗಿದೆ. ನ್ಯಾಯಯುತ ವೇತನ, ನ್ಯಾಯಯುತ ಕೆಲಸದ ಸ್ಥಿತಿಗತಿ, ನ್ಯಾಯಯುತ ಗುತ್ತಿಗೆ ಒಪ್ಪಂದಗಳು, ನ್ಯಾಯಯುತ ಆಡಳಿತ ನಿರ್ವಹಣೆ ಮತ್ತು ನ್ಯಾಯಯುತ ಪ್ರಾತಿನಿಧ್ಯ. ಪ್ರತಿ ತತ್ವವನ್ನು ಎರಡಾಗಿ ವಿಭಾಗಿಸಿ ತಲಾ ಒಂದೊಂದು ಅಂಕವನ್ನು ನಿಗದಿಪಡಿಸಲಾಗಿತ್ತು. ಅಂಕ ಒಂದು ಮತ್ತು ಅಂಕ ಎರಡು; ಮೊದಲ ಅಂಕ ಗಳಿಸಿದರೆ ಮಾತ್ರ ಎರಡನೆ ಅಂಕ ನೀಡಲಾಗುವುದು. ಪ್ರತಿ ವೇದಿಕೆಯು ಒಟ್ಟು 10 ಅಂಕಗಳನ್ನು ಗಳಿಸಲು ಅವಕಾಶ. ತತ್ವವನ್ನು ಅನುಷ್ಠಾನಗೊಳಿಸಿದ್ದರೆ ಅಥವಾ ಅನುಷ್ಠಾನಗೊಳಿಸಲು ಪ್ರಾಮಾಣಿಕ ಬದ್ಧತೆಯನ್ನು ತೋರಿಸಿದ್ದರೆ ಮಾತ್ರ ಅಂಕ ನೀಡಲಾಗುತ್ತದೆ. ಕಚೇರಿ ಅಧ್ಯಯನ, ವೇದಿಕೆಗಳು ಒದಗಿಸಿದ ಮಾಹಿತಿಗಳು ಹಾಗೂ ಬೆಂಗಳೂರು, ಚೆನ್ನೈ, ದೆಹಲಿ, ಕೊಚ್ಚಿ ಮತ್ತು ತಿರುವನಂತಪುರದಲ್ಲಿ ನಡೆಸಿದ ಕಾರ್ಮಿಕರ ಸಂದರ್ಶನಗಳ ಮೂಲಕ 11 ಡಿಜಿಟಲ್ ವೇದಿಕೆಗಳನ್ನು ಮೌಲ್ಯಮಾಪನ ಮಾಡಲಾಯಿತು.
ಯಾವ ಯಾವ ಡಿಜಿಟಲ್ ವೇದಿಕೆಗಳು
ಅಮೆಜಾನ್ ಫ್ಲೆಕ್ಸ್, ಬಿಗ್‌ಬಾಸ್ಕೆಟ್, ಬ್ಲೂಸ್ಮಾರ್ಟ್, ಫ್ಲಿಪ್‌ಕಾರ್ಟ್, ಓಲಾ, ಪೋರ್ಟರ್, ಸ್ವಿಗ್ಗಿ, ಉಬರ್, ಅರ್ಬನ್ ಕಂಪನಿ, ಜೆಪ್ಟೊ ಮತ್ತು ಜೊಮ್ಯಾಟೊ ವೇದಿಕೆಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಲಾಗಿತ್ತು. ಈ ವರ್ಷ 10 ಅಂಕಗಳಿಗೆ 6ಕ್ಕಿಂತ ಹೆಚ್ಚು ಅಂಕವನ್ನು ಯಾವ ವೇದಿಕೆಯೂ ಗಳಿಸಲಿಲ್ಲ ಹಾಗೂ ಯಾವ ವೇದಿಕೆಯೂ ಎಲ್ಲ ಐದು ತತ್ವಗಳಲ್ಲಿ ಮೊದಲ ಅಂಕವನ್ನು ಗಳಿಸಲಿಲ್ಲ. ಈ ಅಧ್ಯಯನದ ಪ್ರಮುಖ ಶೋಧನೆಗಳು ಈ ಕೆಳಗಿನಂತಿವೆ:
ಮುಖ್ಯ ಶೋಧನೆಗಳು:
1. ಬಿಗ್ ಬಾಸ್ಕೆಟ್ ಮತ್ತು ಅರ್ಬನ್ ಕಂಪನಿ ಮಾತ್ರ ಕನಿಷ್ಠ ವೇತನ ಕಾರ್ಯನೀತಿಯನ್ನು ಅಳವಡಿಸಿಕೊಂಡಿದ್ದು, ತನ್ನ ಪ್ರತಿಯೊಬ್ಬ ಕೆಲಸಗಾರರು ಕೆಲಸ ಸಂಬಂಧಿ ವೆಚ್ಚವೂ ಸೇರಿದಂತೆ, ಪ್ರತಿ ಗಂಟೆಗೆ ಇಂತಿಷ್ಟು ಸ್ಥಳೀಯ ಕನಿಷ್ಠ ವೇತನ ಪಡೆಯುವುದನ್ನು ಖಾತ್ರಿ ಪಡಿಸಿರುವುದರಿಂದ ಅವರಿಬ್ಬರಿಗೆ ಮೊದಲ ಅಂಕವನ್ನು ನೀಡಲಾಗಿದೆ. ನ್ಯಾಯಯುತ ವೇತನ ತತ್ವದ ಅಡಿಯಲ್ಲಿ ಯಾವ ವೇದಿಕೆಯೂ ಎರಡನೇ ಅಂಕ ಗಳಿಸಲಿಲ್ಲ. ಎರಡನೇ ಅಂಕವನ್ನು ಗಳಿಸಲು ಬೇಕಾದಂತಹ ಪುರಾವೆಯನ್ನು, ಅಂದರೆ, ಕೆಲಸಗಾರರು ಕೆಲಸ ಸಂಬಂಧಿ ವೆಚ್ಚವನ್ನು ಕಳೆದು ಸ್ಥಳೀಯ ಕನಿಷ್ಠ ವೇತನವನ್ನು ಗಳಿಸುತ್ತಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷಿ ಪುರಾವೆಯನ್ನು ಒದಗಿಸಲಿಲ್ಲ.
2. ಅಮೆಜಾನ್ ಫ್ಲೆಕ್ಸ್, ಬಿಗ್‌ಬಾಸ್ಕೆಟ್, ಬ್ಲೂಸ್ಮಾರ್ಟ್, ಸ್ವಿಗ್ಗಿ, ಅರ್ಬನ್ ಕಂಪನಿ, ಉಬರ್, ಜೆಪ್ಟೊ ಮತ್ತು ಜೊಮ್ಯಾಟೊ ಕಂಪನಿಗಳು ತನ್ನ ಕೆಲಸಗಾರರಿಗೆ ಸಾಕಷ್ಟು ಸುರಕ್ಷತೆ ಸಾಮಗ್ರಿಗಳನ್ನು ಒದಗಿಸಿರುವುದಕ್ಕಾಗಿ ಹಾಗೂ ಸುರಕ್ಷತೆಯ ಬಗ್ಗೆ ನಿಯಮಿತವಾಗಿ ತರಬೇತಿ ನೀಡಿರುವುದಕ್ಕಾಗಿ ಅವರಿಗೆ ಮೊದಲನೆ ಅಂಕವನ್ನು ನೀಡಲಾಯಿತು. ಬಿಗ್‌ಬಾಸ್ಕೆಟ್, ಸ್ವಿಗ್ಗಿ, ಅರ್ಬನ್ ಕಂಪನಿ, ಜೆಪ್ಟೊ ಮತ್ತು ಜೊಮ್ಯಾಟೊ ಕಂಪನಿಗಳು ಅಧಿಕ ಹೊರೆ ಇಲ್ಲದೆ ಅಪಘಾತ ವಿಮೆ ಸೌಲಭ್ಯವನ್ನು, ಅನಾರೋಗ್ಯದ ಸಮಯದಲ್ಲಿ ವೇತನ ಸಹಿತ ರಜೆ ಸೌಲಭ್ಯವನ್ನು ಹಾಗೂ ಅನುಮತಿ ಸಹಿತ ರಜೆ ಪಡೆದವರ ಸೇವೆಯನ್ನು ಯಾವುದೇ ನಷ್ಟವಿಲ್ಲದೆ ಮುಂದುವರೆಸುವ ಸೌಲಭ್ಯವನ್ನು ಒದಗಿಸಿರುವುದಕ್ಕಾಗಿ ಅವರಿಗೆ ಎರಡನೇ ಅಂಕವನ್ನು ನೀಡಲಾಯಿತು.
3. ಹನ್ನೊಂದು ಡಿಜಿಟಲ್ ವೇದಿಕೆಗಳ ಪೈಕಿ ಆರು ವೇದಿಕೆಗಳು ನ್ಯಾಯಯುತ ಒಪ್ಪಂದಗಳನ್ನು ಮಾಡಿಕೊಂಡಿರುವುದಕ್ಕೆ ಅವರಿಗೆ ಮೊದಲ ಅಂಕವನ್ನು ನೀಡಲಾಯಿತು. ಬಿಗ್‌ಬಾಸ್ಕೆಟ್, ಬ್ಲೂಸ್ಮಾರ್ಟ್, ಸ್ವಿಗ್ಗಿ, ಅರ್ಬನ್ ಕಂಪನಿ, ಜೆಪ್ಟೊ ಮತ್ತು ಜೊಮ್ಯಾಟೊ ಕಂಪನಿಗಳ ಒಪ್ಪಂದಗಳು ಸಮಗ್ರವಾಗಿಯೂ, ಕೆಲಸಗಾರರಿಗೆ ಲಭ್ಯವಿರುವಂತೆಯೂ ಕ್ರಮ ವಹಿಸಲಾಗಿದೆ ಹಾಗೂ ಕೆಲಸಗಾರರ ಬಗೆಗಿನ ಮಾಹಿತಿಗಳಿಗೆ ರಕ್ಷಣೆ ಒದಗಿಸಲಾಗಿದ್ದು, ಮಾಹಿತಿ ರಕ್ಷಣೆ ಕ್ರಮಗಳನ್ನು ಪಾಲಿಸುತ್ತಿರುವುದರಿಂದ ಈ ಅಂಕ ನೀಡಲಾಗಿದೆ. ಬಿಗ್‌ಬಾಸ್ಕೆಟ್, ಬ್ಲೂಸ್ಮಾರ್ಟ್, ಸ್ವಿಗ್ಗಿ, ಜೆಪ್ಟೊ ಮತ್ತು ಜೊಮ್ಯಾಟೊ ಕಂಪನಿಗಳು ಎರಡನೆ ಅಂಕ ಗಳಿಕೆಗೆ ಇರುವ ಈ ಕೆಳಗಿನ ಅಗತ್ಯಗಳನ್ನು ಪೂರೈಸಿವೆ: ಒಪ್ಪಂದದಲ್ಲಿ ಬದಲಾವಣೆ ಮಾಡುವ ಮೊದಲು ಕೆಲಸಗಾರರಿಗೆ ಮುನ್ಸೂಚನೆ ನೀಡುವ ಅಂಶವನ್ನು ಅಳವಡಿಸಿಕೊಂಡಿರುವುದು, ನಷ್ಟದ ಹೊಣೆಗಾರಿಕೆಯಲ್ಲಿ ಸಮತೋಲನ ಕಾಯ್ದುಕೊಂಡಿರುವುದು (ಉದಾಹರಣೆಗೆ, ಆ್ಯಪ್‌ನ ತಾಂತ್ರಿಕ ದೋಷದಿಂದ ಕೆಲಸಗಾರರಿಗೆ ನಷ್ಟವಾದಲ್ಲಿ ಅದನ್ನು ಭರಿಸಿಕೊಡುವುದು) ಉಪ-ಗುತ್ತಿಗೆದಾರರಿಗೆ ನೀತಿ ಸಂಹಿತೆಯನ್ನು ರೂಪಿಸಿರುವುದು ಹಾಗೂ ಕ್ರಿಯಾತ್ಮಕ ಬೆಲೆಪದ್ಧತಿ ಅನುಸರಿಸುವಾಗ ದರಪಟ್ಟಿಯ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಪಾರದರ್ಶಕವಾಗಿ ಇಡುವುದು.
4. ಅಮೆಜಾನ್ ಫ್ಲೆಕ್ಸ್, ಬಿಗ್‌ಬಾಸ್ಕೆಟ್, ಬ್ಲೂಸ್ಮಾರ್ಟ್, ಫ್ಲಿಪ್‌ಕಾರ್ಟ್, ಸ್ವಿಗ್ಗಿ, ಅರ್ಬನ್ ಕಂಪನಿ ಮತ್ತು ಜೊಮ್ಯಾಟೊ ಕಂಪನಿಗಳು ಕೆಲಸಗಾರರಿಗೆ ನೇರವಾಗಿ ಸಂಬಂಧಿಸಿದ ನಿರ್ಧಾರಗಳಲ್ಲಿ ಅಗತ್ಯ ಪ್ರಕ್ರಿಯೆಗಳನ್ನು ಪಾಲಿಸುವುದಕ್ಕಾಗಿ ಹಾಗೂ ಶಿಸ್ತುಕ್ರಮದ ಕುರಿತಾಗಿ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿರುವುದಕ್ಕಾಗಿ ಅವರಿಗೆ ಮೊದಲ ಅಂಕವನ್ನು ನೀಡಲಾಗಿದೆ. ಎರಡನೇ ಅಂಕವನ್ನು ನೀಡಲು ಬೇಕಾದ ಸಾಕಷ್ಟು ಪುರಾವೆಯನ್ನು ಬ್ಲೂಸ್ಮಾರ್ಟ್, ಸ್ವಿಗ್ಗಿ, ಅರ್ಬನ್ ಕಂಪನಿ ಮತ್ತು ಜೊಮ್ಯಾಟೊ ಕಂಪನಿಗಳು ಮಾತ್ರ ಒದಗಿಸಿದವು. ಈ ಸಂಸ್ಥೆಗಳು ಕೆಲಸದ ವಿತರಣೆ ವ್ಯವಸ್ಥೆಯಲ್ಲಿ ತಾರತಮ್ಯ ಆಗದಂತೆ ತಡೆಯಲು ನಿಯಮಿತವಾಗಿ ಬಾಹ್ಯ ಪರಿಶೀಲನೆ ಸಂಸ್ಥೆಯಿಂದ ತಪಾಸಣೆ ನಡೆಸುವುದನ್ನು ಸಾಂಸ್ಥೀಕರಣಗೊಳಿಸಿವೆ ಹಾಗೂ ಡಿಜಿಟಲ್ ವೇದಿಕೆ ಕಾರ್ಮಿಕರ ವಿರುದ್ಧ ತಾರತಮ್ಯ ಆಗದಂತೆ ಕಾರ್ಯನೀತಿಯನ್ನು ಅಳವಡಿಸಿಕೊಂಡಿವೆ.
5. ಉದ್ಯೋಗದ ಸ್ಥಳದಲ್ಲಿ ನ್ಯಾಯಯುತವಾದ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಲು ಕೆಲಸಗಾರರಿಗೆ ಸಂಘಟಿತವಾಗಿ ಅಥವಾ ಯೂನಿಯನ್ ಮೂಲಕ ಪ್ರತಿನಿಧಿಸಲು ಅವಕಾಶ ಇರುವುದು ಬಹಳ ಮುಖ್ಯ. ಕಳೆದ ಆರು ವರ್ಷಗಳಿಂದ ಇಡೀ ದೇಶದಲ್ಲಿ ಡಿಜಿಟಲ್ ವೇದಿಕೆ ಕೆಲಸಗಾರರು ಸಂಘಟಿತರಾಗುವ ಪ್ರಯತ್ನಗಳು ಹೆಚ್ಚಾಗಿದ್ದರೂ, ಕೆಲಸಗಾರರ ಸಂಘಟಿತ ವೇದಿಕೆಯನ್ನು ಮಾನ್ಯ ಮಾಡುವ ಆಶಯವನ್ನು ಯಾವುದೇ ಡಿಜಿಟಲ್ ವೇದಿಕೆಯು ವ್ಯಕ್ತಪಡಿಸದಿರುವುದು ಆತಂಕಕಾರಿಯಾಗಿದೆ. ಹಾಗಾಗಿ, ಈ ತತ್ವದ ಅಡಿಯಲ್ಲಿ ಯಾವುದೇ ಡಿಜಿಟಲ್ ವೇದಿಕೆಗೆ ಅಂಕವನ್ನು ನೀಡಲಾಗಲಿಲ್ಲ.
ಫೇರ್‌ವರ್ಕ್ ಯೋಜನೆ ಕುರಿತು
ಡಿಜಿಟಲ್ ಆರ್ಥಿಕತೆಯಲ್ಲಿ ಕಂಡುಬರುತ್ತಿರುವ ಅತ್ಯುತ್ತಮವಾದ ಹಾಗೂ ನಿಕೃಷ್ಟವಾದ ಅಭ್ಯಾಸಗಳನ್ನು ಎತ್ತಿತೋರಿಸುವುದು ಫೇರ್‌ವರ್ಕ್ ಸಂಸ್ಥೆಯ ಬದ್ಧತೆಯಾಗಿದೆ. ಅಂಕಗಳನ್ನು ನೀಡಲು ಬಳಸಿರುವ ಐದು ತತ್ವಗಳನ್ನು ರೂಪಿಸಲು ಬಹುಮುಖಿ ಆಕರಗಳನ್ನು ಬಳಸಿಕೊಳ್ಳಲಾಯಿತು. ಉದ್ಯೋಗದ ಗುಣಮಟ್ಟ ಕುರಿತು ಪ್ರಕಟಿಸಲಾಗಿರುವ ಅನೇಕ ಸಂಶೋಧನಾ ಕೃತಿಗಳ ಪರಿಶೀಲನೆ, UNCTAD ಮತ್ತು ಜಿನೀವಾದಲ್ಲಿರುವ ಅಂತಾರಾಷ್ಟ್ರೀಯ ಕಾರ್ಮಿಕರ ಸಂಘಟನೆಗಳಲ್ಲಿ ಸಹಭಾಗಿಗಳ (ಡಿಜಿಟಲ್ ವೇದಿಕೆ ಮುಖ್ಯಸ್ಥರು, ಕಾರ್ಯನೀತಿ ನಿರೂಪಕರು, ಕಾರ್ಮಿಕ ಸಂಘಟನೆಗಳು ಮತ್ತು ವಿಷಯ ತಜ್ಞರು) ಜೊತೆಗೆ ಹಾಗೂ ಸ್ಥಳೀಯ ಭಾಗಿದಾರರ ಜೊತೆ ಆಯಾ ದೇಶಗಳಲ್ಲಿ ಸಭೆಗಳನ್ನು ನಡೆಸಲಾಯಿತು. ಈ ತತ್ವಗಳನ್ನು ಆಧರಿಸಿ ಪ್ರತಿ ಡಿಜಿಟಲ್ ವೇದಿಕೆಯ ‘ನ್ಯಾಯಪರತೆಗೆ’ ಒಂದು ಅಂಕವನ್ನು ನೀಡಲಾಗುತ್ತದೆ. ಫೇರ್‌ವರ್ಕ್ ಎಂದರೆ, ಈಗಿರುವುದಕ್ಕಿಂತಲೂ ಭಿನ್ನವಾದ, ನ್ಯಾಯಯುತವಾದ ಡಿಜಿಟಲ್ ಆರ್ಥಿಕತೆಯನ್ನು ಕಲ್ಪಿಸಿಕೊಳ್ಳುವುದಾಗಿದೆ. ನ್ಯಾಯಪರತೆಯ ಮಾನದಂಡದಿಂದ ಡಿಜಿಟಲ್ ವೇದಿಕೆಗಳನ್ನು ಮೌಲ್ಯಮಾಪನ ಮಾಡುವ ಮೂಲಕ ಡಿಜಿಟಲ್ ಆರ್ಥಿಕತೆ ಇಂದು ಏನಾಗಿದೆ ಎಂದು ತೋರಿಸುವುದು ಮಾತ್ರವಲ್ಲದೆ ಮುಂದೆ ಹೇಗಿದ್ದರೆ ಚೆನ್ನ ಎನ್ನುವುದರ ಮೇಲೆ ಬೆಳಕು ಚೆಲ್ಲುವುದು ಫೇರ್‌ವರ್ಕ್‌ನ ಪ್ರಧಾನ ಆಶಯವಾಗಿದೆ.