Fake Toll Plaza: ಗುಜರಾತ್‌ನ ಈ ಟೋಲ್ ಪ್ಲಾಜಾದಲ್ಲಿ ನಿತ್ಯವೂ ಸುಂಕ ಕಟ್ಟಿದ್ರು ಜನ, ಅದು ಫೇಕ್ ಅಂತ ಗೊತ್ತಾಗಿದ್ದು 18 ತಿಂಗಳ ಬಳಿಕ
Dec 10, 2023 11:25 AM IST
ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ ಒಂದೂವರೆ ವರ್ಷದಿಂದ ಕಾರ್ಯಾಚರಿಸುತ್ತಿತ್ತು ಫೇಕ್ ಟೋಲ್ ಪ್ಲಾಜಾ. (ಸಾಂಕೇತಿಕ ಚಿತ್ರ)
ಗುಜರಾತ್‌ನ ಮೊರ್ಬಿ ಜಿಲ್ಲೆಯ ಹೆದ್ದಾರಿಯೊಂದರ ಟ್ರಾಫಿಕ್ ತಪ್ಪಿಸಲು ಸಾಗುವ ಮಾರ್ಗದಲ್ಲಿ ನಿತ್ಯವೂ ಸುಂಕ ಕಟ್ಟಿದ್ರು ಜನ. ಆದರೆ 18 ತಿಂಗಳ ಬಳಿಕ ಈಗ ಆ ಟೋಲ್ ಪ್ಲಾಜಾ ಫೇಕ್ ಅನ್ನೋದು ಬಹಿರಂಗವಾಗಿದೆ!.
ಗುಜರಾತ್‌ನ ಮೊರ್ಬಿ ಜಿಲ್ಲೆಯ ಬೊಮನ್‌ಬೋರ್- ಕಛ್ ರಾಷ್ಟ್ರೀಯ ಹೆದ್ದಾರಿಯಲ್ಲಿ (Bamanbore-Kutch NH) ಕಾರ್ಯಾಚರಿಸುತ್ತಿದ್ದ ಟೋಲ್ ಪ್ಲಾಜಾ ನಕಲಿ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಈ ಟೋಲ್ ಪ್ಲಾಜಾ ಕಳೆದ ಒಂದೂವರೆ ವರ್ಷದಿಂದ ಟೋಲ್ ಶುಲ್ಕ ಸಂಗ್ರಹಿಸುತ್ತ ಜನರನ್ನು, ಸರ್ಕಾರವನ್ನು ವಂಚಿಸಿದೆ ಎಂದು ವರದಿ ಹೇಳಿದೆ.
ವಂಚಕ ಟೋಲ್ ಸಂಗ್ರಹ ಕೇಂದ್ರ ಕಾರ್ಯಾಚರಣೆಯು ಖಾಸಗಿ ಜಮೀನಿನಲ್ಲಿ ನಡೆಯುತ್ತಿತ್ತು. ಈ ಟೋಲ್ ಪ್ಲಾಜಾವನ್ನು ನಡೆಸಿದ ವಂಚಕರು ನಿರಂತರ 18 ತಿಂಗಳ ಕಾಲ ನಾಗರಿಕರನ್ನಷ್ಟೇ ಅಲ್ಲ, ಸರ್ಕಾರವನ್ನೂ ವಂಚಿಸಿದ್ದಾರೆ. ಟೋಲ್ ಶುಲ್ಕದ ಪ್ರಮಾಣಿತ ದರಕ್ಕಿಂತ ಶೇಕಡ 50 ಕಡಿಮೆ ಶುಲ್ಕವನ್ನು ಇಲ್ಲಿ ಸಂಗ್ರಹ ಮಾಡಲಾಗುತ್ತಿತ್ತು.
ಮೊರ್ಬಿಯ ಕೆಲವು ಖಾಸಗಿ ಜಮೀನುದಾರರು ಸಾವಿರಾರು ಪ್ರಯಾಣಿಕರಿಂದ ಟೋಲ್ ಶುಲ್ಕ ಸಂಗ್ರಹಿಸಿ ಸಾವಿರಾರು ಕೋಟಿ ರೂಪಾಯಿ ವಂಚಿಸಿದ್ದಾರೆ.
ಫೇಕ್ ಟೋಲ್ ಪ್ಲಾಜಾ ವಿಚಾರ ಬಹಿರಂಗವಾದುದು ಹೇಗೆ
ಮೊರ್ಬಿ ಜಿಲ್ಲಾಧಿಕಾರಿ ಜಿಟಿ ಪಾಂಡ್ಯ ಅವರು ಈ ಕುರಿತು ಎನ್‌ಡಿಟಿವಿ ಜತೆಗೆ ಮಾತಾನಾಡಿದ್ದು, ವರ್ಗಾಸಿಯಾ ಟೋಲ್ ಪ್ಲಾಜಾದ ನಿಜವಾದ ಮಾರ್ಗದಿಂದ ಕೆಲವು ವಾಹನಗಳನ್ನು ತಿರುಗಿಸಲಾಗುತ್ತಿತ್ತು. ಆ ರಸ್ತೆ ಮೂಲಕ ಸಾಗುವ ವಾಹನಗಳಿಂದ ಟೋಲ್ ತೆರಿಗೆಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಮಾಹಿತಿ ಜಿಲ್ಲಾಡಳಿತಕ್ಕೆ ಲಭ್ಯವಾಗಿತ್ತು ಎಂದು ತಿಳಿಸಿದ್ದಾರೆ.
ಕೂಡಲೇ ಪೊಲೀಸರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಅಲರ್ಟ್ ಮಾಡಿದ್ದು, ಪ್ರಕರಣದ ತನಿಖೆ ನಡೆಸಲು ಸೂಚಿಸಲಾಗಿತ್ತು. ವಿವರವಾದ ದೂರು ಸ್ವೀಕರಿಸಿಕೊಂಡು ಪೊಲೀಸರು ಪ್ರಕರಣದ ತನಿಖೆ ಶುರು ಮಾಡಿದ್ದರು. ತನಿಖೆ ವೇಳೆ ಮುಖ್ಯ ಹೆದ್ದಾರಿಯಿಂದ ವಾಹನಗಳನ್ನು ಬೇರೆ ರಸ್ತೆಗೆ ತಿರುಗಿಸಿ ಅಲ್ಲಿ ಕೂಡ ಶುಲ್ಕ ಸಂಗ್ರಹಿಸುತ್ತಿರುವ ವಿಚಾರ ಬೆಳಕಿಗೆ ಬಂತು ಎಂದು ವಿವರಿಸಿದ್ದಾರೆ.
ಫೇಕ್ ಟೋಲ್ ಪ್ಲಾಜಾ ಕೇಸ್‌ನ ಆರೋಪಿಗಳು ಯಾರು?
ಈಗ ಮುಚ್ಚಿರುವಂತಹ ವೈಟ್ ಹೌಸ್ ಸೆರಾಮಿಕ್ ಕಂಪನಿಯ ಒಡೆತನದ ಆಸ್ತಿಯನ್ನು ಆರೋಪಿಗಳು ಉದ್ದೇಶಿತ ಮಾರ್ಗದಿಂದ ಟ್ರಾಫಿಕ್ ಅನ್ನು ತಿರುಗಿಸಲು ಬಳಸಿದ್ದರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಕಾರ್ಖಾನೆಯ ಮಾಲೀಕ ಅಮರ್ಷಿ ಪಟೇಲ್ ಮತ್ತು ಇತರ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ. ಹರ್‌ವಿಜಯ್ ಸಿಂಗ್ ಝಾಲಾ, ಯುವರಾಜ್ ಸಿಂಗ್ ಝಾಲಾ, ವನರಾಜ್ ಸಿಂಗ್ ಝಾಲಾ ಮತ್ತು ಧರ್ಮೇಂದ್ರ ಸಿಂಗ್ ಝಾಲಾ ಇತರ ನಾಲ್ವರು ಎಂದು ಪೊಲೀಸರು ತಿಳಿಸಿದ್ದಾಗಿ ವರದಿ ಹೇಳಿದೆ.
ಗುಜರಾತ್‌ನಲ್ಲಿ ಸುಮಾರು 3 ವರ್ಷಗಳಿಂದ ಕಾಲ್ಪನಿಕ ಸರ್ಕಾರಿ ಕಚೇರಿಯನ್ನು ಸೃಷ್ಟಿಸಿ 4 ಕೋಟಿ ರೂಪಾಯಿಗೂ ಹೆಚ್ಚು ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಕೇಸ್ ದಾಖಲಾದ ಕೆಲವೇ ತಿಂಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ.