Road accidents: ಭಾರತದಲ್ಲಿ ರಸ್ತೆ ಅಪಘಾತ ಹೆಚ್ಚಳ, ಅಪಾಯಕಾರಿ ರಸ್ತೆಗಳೇ ಅಪಘಾತಕ್ಕೆ ಕಾರಣ ಎಂದ ವಿಶ್ವ ಆರೋಗ್ಯ ಸಂಸ್ಥೆ
Jun 27, 2023 01:26 PM IST
ಭಾರತದಲ್ಲಿ ರಸ್ತೆ ಅಪಘಾತ ಹೆಚ್ಚಳ, ಅಪಾಯಕಾರಿ ರಸ್ತೆಗಳೇ ಅಪಘಾತಕ್ಕೆ ಕಾರಣ ಎಂದ ವಿಶ್ವ ಆರೋಗ್ಯ ಸಂಸ್ಥೆ
- How to reduce road accidents: ಭಾರತದಲ್ಲಿ ಪ್ರತಿವರ್ಷ ರಸ್ತೆ ಅಪಘಾತದಿಂದ ಸುಮಾರು 5 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜಗತ್ತಿನಾದ್ಯಂತ ನಡೆಯುವ ರಸ್ತೆ ಅಪಘಾತದ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕಳವಳ ವ್ಯಕ್ತಪಡಿಸಿದ್ದು, ಅಪಘಾತಗಳಿಗೆ ಕಾರಣವಾಗುವ ಅಂಶಗಳ ಕುರಿತು ತಿಳಿಸಿದೆ.
ಜಗತ್ತಿನಾದ್ಯಂತ ನಡೆಯುತ್ತಿರುವ ರಸ್ತೆ ಅಪಘಾತಗಳ (Road Accidents) ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕಳವಳ ವ್ಯಕ್ತಪಡಿಸಿದ್ದು, ಸರಕಾರಗಳು ಅಪಘಾತ ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಿದೆ. "ಕಾರುಗಳಿಗಾಗಿ ನಿರ್ಮಿಸಲಾಗಿರುವ ಅಪಾಯಕಾರಿ ಬೀದಿಗಳೇ ಅಪಘಾತಕ್ಕೆ ಪ್ರಮುಖ ಕಾರಣ" ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ರಸ್ತೆಯಲ್ಲಿ ಪಾದಚಾರಿಗಳಿಗೆ ಮತ್ತು ಸೈಕಲಿಸ್ಟ್‌ಗಳಿಗೆ ಹೆಚ್ಚಿನ ಸ್ಥಳಾವಕಾಶ ನೀಡುವ ಅಗತ್ಯವಿದೆ ಎಂದು ಡಬ್ಲ್ಯುಎಚ್‌ಒ ಒತ್ತಿ ಹೇಳಿದೆ.
ಜಗತ್ತಿನಲ್ಲಿ ಪ್ರತಿವರ್ಷ ರಸ್ತೆ ಅಪಘಾತಗಳಿಂದ ಸುಮಾರು 1.3 ದಶಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುವ ದೇಶಗಳಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ.
ಅಪಘಾತಗಳನ್ನು ಕಡಿಮೆ ಮಾಡಲು ಪರಿಹಾರಗಳ ಮರುಚಿಂತನೆ ಮಾಡುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷತೆ ಮತ್ತು ಮೊಬಿಲಿಟಿ ವಿಭಾಗದ ಮುಖ್ಯಸ್ಥ ನಾನ್ ಟ್ರಾನ್ ಹೇಳಿದ್ದಾರೆ. "ಕಾರುಗಳಿಗಾಗಿ ನಿರ್ಮಿಸಲಾದ ಕೆಟ್ಟ, ಅಪಾಯಕಾರಿ ಹಳೆಯ ರಸ್ತೆಗಳ ಮಾದರಿಯ ಬದಲಾಗಿ ಸುರಕ್ಷಿತ, ಹಸಿರು ರಸ್ತೆಗಳಿಗೆ ಬದಲಾಗಬೇಕು. ಪ್ರಯಾಣವು ಸಾರ್ವಜನಿಕ ಆರೋಗ್ಯ ಮತ್ತು ಅಭಿವೃದ್ಧಿಯ ಅಂಶಗಳೊಂದಿಗೆ ಇರುತ್ತದೆ. ವಾಕಿಂಗ್ ಮತ್ತು ಸೈಕ್ಲಿಂಗ್ ಅನ್ನು ಸುರಕ್ಷಿತವಾಗಿಸುವ ಮೂಲಕ ನಾವು ವಾಯುಮಾಲಿನ್ಯವನ್ನೂ ಕಡಿಮೆ ಮಾಡಬಹುದು, ಹವಾಮಾನ ಬದಲಾವಣೆಯ ವಿರುದ್ಧವೂ ಹೋರಾಡಬಹುದು" ಎಂದು ಅವರು ಹೇಳಿದ್ದಾರೆ.
ರಸ್ತೆ ಅಪಘಾತದ ಹತ್ತು ಸಾವುಗಳಲ್ಲಿ ಒಂಬತ್ತು ಸಾವುಗಳು ಮಧ್ಯಮ ಆದಾಯದ ದೇಶಗಳಲ್ಲಿ ಸಂಭವಿಸುತ್ತಿವೆ ಎಂದು ಅವರು ಹೇಳಿದ್ದಾರೆ. ಇವರು ಸ್ವೀಡನ್‌ನಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಪಟ್ಟ ಕಾನ್ಪರೆನ್ಸ್‌ನಲ್ಲಿ ಮಾತನಾಡುತ್ತಿದ್ದರು. "ಪಾದಚಾರಿಗಳು ಮತ್ತು ಸೈಕಲ್ ಸವಾರರಂತಹ ದುರ್ಬಲ ರಸ್ತೆ ಬಳಕೆದಾರರ ಸುರಕ್ಷತೆಗೆ ಆದ್ಯತೆ ನೀಡಬೇಕು. ಇದರಿಂದ ಬಡತನ, ನಿರುದ್ಯೋಗ, ಲಿಂಗಾ ಸಮಾನತೆ ಮುಂತಾದ ಅಸಮಾನತೆಗಳನ್ನು ನಿಭಾಯಿಸಬಹುದು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಪ್ರತಿವರ್ಷ ಸುಮಾರು ಐದು ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಹೆಚ್ಚಿನ ಸಾವುನೋವುಗಳಿಗೆ ಅತಿವೇಗದ ವಾಹನ ಚಾಲನೆಯು ಕಾರಣವಾಗಿದೆ. ಕುಡಿದು ವಾಹನ ಚಲಾಯಿವುದು, ರಾಂಗ್ ಸೈಡ್‌ನಲ್ಲಿ ವಾಹನ ಚಾಲನೆ ಮಾಡುವುದು ಭಾರತದಲ್ಲಿ ಅಪಘಾತ ಮತ್ತು ಅಪಘಾತದ ಸಾವು ನೋವು ಹೆಚ್ಚಳಕ್ಕೆ ಕಾರಣವಾಗಿದೆ. 2021 ರ ರಸ್ತೆ ಅಪಘಾತದ ಅಂಕಿಅಂಶಗಳ ಪ್ರಕಾರ ರಸ್ತೆ ಅಪಘಾತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ 18 ವರ್ಷದಿಂದ 45 ವರ್ಷ ವಯಸ್ಸಿನವರು ಬಲಿಯಾಗುತ್ತಿದ್ದಾರೆ.
ಭಾರತದಲ್ಲಿ ರಸ್ತೆ ಅಪಘಾತದ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗದೆ ಇರುವುದು ನನ್ನ ಸಚಿವಾಲಯದ ದೊಡ್ಡ ವೈಫಲ್ಯ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಒಂದೊಮ್ಮೆ ಹೇಳಿದ್ದರು. 2024ರ ವೇಳೆಗೆ ರಸ್ತೆ ಅಪಘಾತದ ಸಂಖ್ಯೆಯನ್ನು ಶೇಕಡ 50ರಷ್ಟು ಕಡಿಮೆ ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅವರು ಃಏಳಿದ್ದಾರೆ.
ಭಾರತದ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಕಳೆದ ವರ್ಷ ಪ್ರತಿಗಂಟೆಗೆ 46 ತೀವ್ರ ರಸ್ತೆ ಅಪಘಾತಗಳು ನಡೆದಿವೆ. ಭಾರತದಲ್ಲಿ 46 ಅಪಘಾತದಲ್ಲಿ 18 ಸಾವು ಪ್ರತಿಗಂಟೆಗೆ ನಡೆಯುತ್ತದೆ ಎಂದು ಎನ್‌ಸಿಆರ್‌ಬಿ ಅಂಕಿಅಂಶಗಳಿಂದ ತಿಳಿದುಬಂದಿದೆ.