Chandrayaan-3: ಭಾರತದ ಚಂದ್ರಯಾನ ಟೀಕಿಸಿದ ಬಿಬಿಸಿ ನಿರೂಪಕನಿಗೆ ಆನಂದ್ ಮಹೀಂದ್ರ ತೀಕ್ಷ್ಣ ಪ್ರತಿಕ್ರಿಯೆ
Aug 24, 2023 02:31 PM IST
ಭಾರತದ ಚಂದ್ರಯಾನ ಟೀಕಿಸಿದ ಬಿಬಿಸಿ ನಿರೂಪಕನಿಗೆ ಆನಂದ್ ಮಹೀಂದ್ರ ತೀಕ್ಷ್ಣ ಪ್ರತಿಕ್ರಿಯೆ
ISRO Chandrayaan-3: ಚಂದ್ರಯಾನ-3ಯಂತಹ ಬೃಹತ್ ಬಜೆಟ್‌ನ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಭಾರತ ನಿಜವಾಗಿಯೂ ಹಣ ಖರ್ಚು ಮಾಡುವ ಅಗತ್ಯವಿದೆಯೇ ಎಂಬ ಬಿಬಿಸಿ ನಿರೂಪಕಿಯ ಪ್ರಶ್ನೆಗೆ ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು: ಭಾರತದ ಬಾಹ್ಯಾಕಾಶ ಯೋಜನೆಯ ಕುರಿತು ದೇಶ-ವಿದೇಶಗಳಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ. ಭಾರತವು ಈಗ ಚಂದ್ರನ ಮೇಲೆ ಲ್ಯಾಂಡರ್ ಕಳುಹಿಸಿದ ಜಗತ್ತಿನ ನಾಲ್ಕನೇ ರಾಷ್ಟ್ರ. ಈ ಸಾಧನೆ ಕೆಲವರಿಗೆ ಹೊಟ್ಟ ಉರಿಸಿರುವುದು ಸುಳ್ಳಲ್ಲ. ಈ ಯೋಜನೆಯ ಕುರಿತು ಕೆಲವರು ನಕಾರಾತ್ಮಕ ಟೀಕೆಗಳನ್ನು ಮಾಡುತ್ತಿದ್ದಾರೆ. ಚಂದ್ರಯಾನ-3ಯಂತಹ ಬೃಹತ್ ಬಜೆಟ್‌ನ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಭಾರತ ನಿಜವಾಗಿಯೂ ಹಣ ಖರ್ಚು ಮಾಡುವ ಅಗತ್ಯವಿದೆಯೇ ಎಂಬ ಬಿಬಿಸಿ ನಿರೂಪಕಿಯ ಪ್ರಶ್ನೆಗೆ ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದ ಬಹುತೇಕ ಜನಸಂಖ್ಯೆಯು ಬಡತನದಲ್ಲಿದೆ, ಭಾರತದಲ್ಲಿ 700 ದಶಲಕ್ಷಕ್ಕಿಂತಲೂ ಹೆಚ್ಚು ಜನರು ಶೌಚಾಲಯ ಹೊಂದಿಲ್ಲ ಎಂದು ನಿರೂಪಕಿ ವಾದಿಸಿದ್ದರು.
ಚಂದ್ರಯಾನದ ಕುರಿತು ಬಿಬಿಸಿ ನಿರೂಪಕಿ ಹೇಳಿದ್ದೇನು?
"ಈ ಕುರಿತು ಕೆಲವು ಜನರು ಯೋಚನೆ ಮಾಡುತ್ತಿರುವ ಕಾರಣ ನಾನು ಈ ಪ್ರಶ್ನೆ ಕೇಳಬೇಕಿದೆ. ಭಾರತವು ಸಾಕಷ್ಟು ಪ್ರಮಾಣದಲ್ಲಿ ಮೂಲಸೌಕರ್ಯ ಕೊರತೆ ಇರುವ ದೇಶ. ಸಾಕಷ್ಟು ಬಡತನ ಹೊಂದಿರುವ ದೇಶ. ನನ್ನ ಪ್ರಕಾರ ಭಾರತದಲ್ಲಿ 700 ದಶಲಕ್ಷ ಜನರಿಗಿಂತಲೂ ಹೆಚ್ಚು ಜನರು ಶೌಚಾಲಯ ಹೊಂದಿಲ್ಲ. ನಿಜಕ್ಕೂ ಇವರು ಈ ರೀತಿ ಹಣವನ್ನು ಬಾಹ್ಯಾಕಾಶ ಯೋಜನೆಗಳಿಗೆ ಖರ್ಚು ಮಾಡಬೇಕೆ?" ಎಂದು ಅವರು ಹೇಳಿದ್ದರು. ಅವರ ಈ ಹೇಳಿಕೆ ಸಾಕಷ್ಟು ವೈರಲ್ ಆಗಿತ್ತು.
ಬಿಬಿಸಿ ನಿರೂಪಕಿಯ ವಿಡಿಯೋಗೆ ಮಹೀಂದ್ರ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. "ನಿಜವೇ?, ಸತ್ಯ ಏನೆಂದರೆ, ನಮ್ಮ ಬಡತನಕ್ಕೆ ಕಾರಣ, ನಮ್ಮ ಇಡೀ ಉಪಖಂಡದ ಸಂಪತ್ತನ್ನು ವ್ಯವಸ್ಥಿತವಾಗಿ ದಶಕಗಳ ಕಾಲ ವಸಾಹತುಶಾಹಿ ಆಡಳಿತ ಲೂಟಿ ಮಾಡಿದ ಪರಿಣಾಮವಾಗಿದೆ. ದೋಚಲಾದ ಅತ್ಯಮೂಲ್ಯ ಆಸ್ತಿ ಕೊಹಿನೂರು ವಜ್ರವಲ್ಲ. ನಮ್ಮ ಹೆಮ್ಮೆ ಮತ್ತು ಸ್ವಂತ ಸಾಮರ್ಥ್ಯಗಳ ಮೇಲಿನ ನಂಬಿಕೆ" ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
"ವಸಾಹತುಶಾಯಿಯ ಗುರಿ, ಅದರ ಕಪಟ ಪ್ರಭಾವ ಏನೆಂದರೆ ಬಲಿಪಶುಗಳಿಗೆ ಕೀಳರಿಮೆ ಉಂಟುಮಾಡುವುದು. ಇಂತಹ ಕೀಳರಿಮೆ ಹೋಗಲಾಡಿಸಲು ಮನವರಿಕೆ ಮಾಡುವಂತಹ ಕಾರ್ಯ ನಡೆಯುತ್ತದೆ. ಶೌಚಾಲಯ ಮತ್ತು ಬಾಹ್ಯಾಕಾಶ ಪರಿಶೋಧಣೆ ಎರಡರಲ್ಲೂ ಹೂಡಿಕೆ ಮಾಡುವುದು ವಿರೋಧಾಭಾಸವಲ್ಲ. ಚಂದ್ರನಲ್ಲಿಗೆ ಹೋಗುವುದು ನಮಗೆ ಹೆಮ್ಮೆ ಮತ್ತು ಆತ್ಮವಿಶ್ವಾಸವನ್ನು ಪುನರ್‌ಸ್ಥಾಪಿಸಲು ಸಹಾಯ ಮಾಡುತ್ತದೆ. ವಿಜ್ಞಾನದ ಮೂಲಕ ಪ್ರಗತಿಯ ನಂಬಿಕೆಯನ್ನು ಸೃಷ್ಟಿಸುತ್ತದೆ. ಆಕಾಂಕ್ಷೆಯ ಬಡತನದಿಂದ ಹೊರಬರಲು ಉತ್ತೇಜನ ನೀಡುತ್ತದೆ" ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ವಿದೇಶಿಗರು ಮಾತ್ರವಲ್ಲದೆ ಭಾರತದಲ್ಲಿಯೂ ಚಂದ್ರಯಾನದ ಕುರಿತು ಹಲವು ಪ್ರತಿಕ್ರಿಯೆಗಳು ಬಂದಿವೆ. ಚಂದ್ರಯಾನದ ಬಗ್ಗೆ ಟೀಕೆ ಮಾಡುತ್ತಲೇ ಬಂದಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ ಸಹ ಟ್ವಿಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ, ನಟ ಚೇತನ್ ಅಹಿಂಸಾ, ಚಂದ್ರಯಾನವನ್ನು ಲೇವಡಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚಂದ್ರಯಾನ 3 ಮಿಷನ್‌ನ ರಾಕೆಟ್ ಫೋಟೋ ಮತ್ತು ಮಲ ಹೊರುವ ಪದ್ಧತಿಯ ಮತ್ತೊಂದು ಮುಖವನ್ನು ಕೊಲಾಜ್ ಮಾಡಿ, "ವಾಸ್ತವ" ಎಂಬ ಕ್ಯಾಪ್ಶನ್ ನೀಡಿ ಪೋಸ್ಟ್ ಮಾಡಿದ್ದಾರೆ. ಇವರ ಪೋಸ್ಟ್ ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತ ವರದಿ ಇಲ್ಲಿದೆ.