logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lightning: ಒಂದೇ ದಿನ ಸಿಡಿಲು ಬಡಿದು ಉತ್ತರಪ್ರದೇಶದಲ್ಲಿ 38 ಮಂದಿ ದುರ್ಮರಣ, ಬಿಹಾರದಲ್ಲೂ ದುರಂತ

Lightning: ಒಂದೇ ದಿನ ಸಿಡಿಲು ಬಡಿದು ಉತ್ತರಪ್ರದೇಶದಲ್ಲಿ 38 ಮಂದಿ ದುರ್ಮರಣ, ಬಿಹಾರದಲ್ಲೂ ದುರಂತ

Umesha Bhatta P H HT Kannada

Jul 11, 2024 06:01 PM IST

google News

ಸಿಡಿಲು ಬಡಿದು ಉತ್ತರ ಭಾರತದಲ್ಲಿ 50 ಮಂದಿ ಮೃತಪಟ್ಟಿದ್ದಾರೆ.

  • Monsoon ಮುಂಗಾರು ಮಳೆ ಆರಂಭಗೊಂಡು ಉತ್ತರ ಭಾಗದಲ್ಲಿ ಅಬ್ಬರಿಸುತ್ತಿದೆ. ಸಿಡಿಲು ಬಡಿದು 50 ಮಂದಿ ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಜೀವ ಕಳೆದುಕೊಂಡಿದ್ದಾರೆ.

ಸಿಡಿಲು ಬಡಿದು ಉತ್ತರ ಭಾರತದಲ್ಲಿ  50 ಮಂದಿ ಮೃತಪಟ್ಟಿದ್ದಾರೆ.
ಸಿಡಿಲು ಬಡಿದು ಉತ್ತರ ಭಾರತದಲ್ಲಿ 50 ಮಂದಿ ಮೃತಪಟ್ಟಿದ್ದಾರೆ.

ದೆಹಲಿ: ಉತ್ತರ ಭಾರತದಲ್ಲಿ ಮಳೆಗಿಂತ ಸಿಡಿಲಿನ ಅಬ್ಬರವೇ ಜೋರಾಗಿದೆ. ಸಿಡಿಲು ಬಡಿದು ಎರಡು ರಾಜ್ಯಗಳಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿರುವ ವರದಿಯಾಗಿದೆ. ಉತ್ತರ ಪ್ರದೇಶದಲ್ಲಿ ಒಂದೇ ದಿನ ಭಾರೀ ಸಿಡಿಲಿಗೆ 38 ಮಂದಿ ಜೀವ ಕಳೆದುಕೊಂಡಿದ್ದರೆ, ಬಿಹಾರದಲ್ಲೂ 12 ಮಂದಿ ಸಿಡಿಲಿನಿಂದ ಪ್ರಾಣ ಬಿಟ್ಟಿದ್ದಾರೆ. ಈಗಾಗಲೇ ಉತ್ತರ ಭಾರತದಲ್ಲಿ ಮುಂಗಾರು ಪ್ರವೇಶಿಸಿ ಗುಡುಗು ಸಿಡಿಲಿನ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಜಮೀನಿನಲ್ಲಿ ಕೆಲಸ ಮಾಡುವವರು, ಹೊರಗಡೆ ಬರುವವರು ಸಿಡಿಲಿಗೆ ಸಿಲುಕಿ ಜೀವ ಕಳೆದುಕೊಂಡು ಸನ್ನಿವೇಶ ಎದುರಾಗಿದೆ. ಮೃತರ ಕುಟುಂಬಗಳಿಗೆ ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯ ಸರ್ಕಾರಗಳು ಪರಿಹಾರವನ್ನು ಘೋಷಿಸಿವೆ.

ಉತ್ತರ ಪ್ರದೇಶ ರಾಜ್ಯದ ನಾನಾ ಭಾಗಗಳಲ್ಲಿ ಬುಧವಾರ ಹಾಗೂ ಗುರುವಾರದಂದು ಸಿಡಿಲು ಬಡಿದು 38 ಮಂದಿ ಮೃತಪಟ್ಟಿರುವ ವರದಿಯಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆಯಿದ್ದು, ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ಧಾರೆ.

ಈಗಾಗಲೇ ಉತ್ತರ ಪ್ರದೇಶದಲ್ಲಿ ಕೆಲ ದಿನಗಳಿಂದ ಅಲ್ಲಲ್ಲಿ ಭಾರೀ ಮಳೆಯಾಗುತ್ತಿದೆ. ಅಷ್ಟೇ ಅಲ್ಲದೇ ಗುಡುಗು ಸಿಡಿಲಿನ ವಾತಾವರಣವೂ ಕಂಡು ಬಂದಿದೆ. ಇದರ ನಡುವೆ ಸಿಡಿಲು ಬಡಿದು ಪ್ರತಾಪಗಢ ಜಿಲ್ಲೆಯಲ್ಲಿ 11ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುಲ್ತಾನ್‌ ಪುರಿ ಜಿಲ್ಲೆಯಲ್ಲಿ 7, ಚಂದೌಲಿ ಜಿಲ್ಲೆಯಲ್ಲಿ 5, ಮೈನ್‌ ಪುರಿ ಹಾಗೂ ಪ್ರಯಾಗ್‌ ರಾಜ್‌ನಲ್ಲಿ ಕ್ರಮವಾಗಿ 5 ಹಾಗೂ 4 ಮಂದಿ ಮೃತಪಟ್ಟಿದ್ದಾರೆ. ವಾರಣಾಸಿ. ಡಿಯೋರಿಯಾ, ಹತ್ರಾಸ್‌ ಸಹಿತ ವಿವಿಧ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಹಲವು ಕಡೆ ಸಿಡಿಲಿನಿಂದ ಗಾಯಗೊಂಡು ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಅಧಿಕವಾಗಿದೆ.

ಅದರಲ್ಲೂ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದವರು, ಮಳೆ ಬಂದ ಕಾರಣದಿಂದ ಮರಗ ಕೆಳಗೆ ನಿಲ್ಲಲು ಹೋದವರು ನೇರವಾಗಿ ಸಿಡಿಲ ಹೊಡೆತಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ಮುಂದಿನವಾರದವರೆಗೂ ಭಾರೀ ಮಳೆ, ಗುಡುಗು ಹಾಗೂ ಸಿಡಿಲಿನ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯು ನೀಡಿದೆ. ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಘಟಕದವರು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ.

ಬಿಹಾರ ರಾಜ್ಯದಲ್ಲೂ ಎರಡು ದಿನದಲ್ಲಿ 12 ಮಂದಿ ಸಿಡಿಲಿಗೆ ಪ್ರಾಣ ಬಿಟ್ಟಿದ್ದಾರೆ. ಬಿಹಾರದಲ್ಲಿ ಕಳೆದ ತಿಂಗಳು ಇದೇ ರೀತಿ ಸಿಡಿಲಿಗೆ ಭಾರೀ ಪ್ರಮಾಣದಲ್ಲಿ ಪ್ರಾಣ ಹಾನಿಯಾಗಿತ್ತು. ಈಗ ಮತ್ತೆ ಸಿಡಿಲು ಅಬ್ಬರಿಸಿರುವುದು ಕಂಡುಬಂದಿದೆ. ಬಿಹಾರ ಏಳು ಜಿಲ್ಲೆಗಳಾದ ಸರ್‌,ಕೈಮೂರ್‌, ಜಮುಯಿ, ಭೋಜ್‌ಪುರ್‌, ಗೋಪಾಲಗಂಜ್‌, ರೋಹ್ಟಾಸ್‌ನಲ್ಲಿ ದುರಂತದ ವರದಿಯಾಗಿದೆ. ಕೈಮೂರ್‌ ಹಾಗೂ ಜಮುಯಿ ಜಿಲ್ಲೆಯಲ್ಲಿ ತಲಾ ಮೂವರು ಮೃತಪಟ್ಟಿದ್ದರೆ, ರೋಹ್ಟಾಸ್‌ನಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇತರೆಡೆ ತಲಾ ಒಬ್ಬರು ಮೃತಪಟ್ಟಿರುವ ಮಾಹಿತಿ ಲಭಿಸಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ