ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆ; ಉತ್ತರಾಖಂಡ, ಹಿಮಾಚಲದಲ್ಲಿ ದಿಢೀರ್ ಪ್ರವಾಹದ ಎಚ್ಚರಿಕೆ
Jul 27, 2023 05:30 AM IST
ಹಿಮಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಭಾಗ ಸೇರಿ ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯ ಮುನ್ಸೂಚನೆ. (ಸಾಂಕೇತಿಕ ಚಿತ್ರ)
North India Rains: ಹಿಮಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಭಾಗ ಸೇರಿ ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ದಿಢೀರ್ ಪ್ರವಾಹ, ಭೂಕುಸಿತ ಸಂಭವಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ನವದೆಹಲಿ: ಮುಂದಿನ ಮೂರು ದಿನಗಳಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಭಾಗ ಸೇರಿ ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಭಾರೀ ಮಳೆ (North India Rains)ಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಲೆಟಿನ್ (IMD Weather bulletin) ಮುನ್ಸೂಚನೆ ನೀಡಿದೆ.
ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳಲ್ಲಿ ಹಠಾತ್ ಪ್ರವಾಹ ಮತ್ತು ಉಕ್ಕಿ ಹರಿಯುತ್ತಿರುವ ಬಿಯಾಸ್ ನದಿಯ ಕಾರಣದಿಂದಾಗಿ ವಾಯುವ್ಯ ಭಾರತದಲ್ಲಿ ಈ ಭಾರೀ ಮಳೆಯ ಮುನ್ಸೂಚನೆಯನ್ನು ಇಲಾಖೆ ನೀಡಿದೆ.
ಮಾನ್ಸೂನ್ ಜೂನ್ 24 ರಂದು ಪ್ರಾರಂಭವಾದಾಗಿನಿಂದ, ಹಿಮಾಚಲ ಪ್ರದೇಶದಲ್ಲಿ ಸುಮಾರು 652 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ, 236 ಅಂಗಡಿಗಳು ಮತ್ತು 2,037 ಗೋಶಾಲೆಗಳ ಜೊತೆಗೆ 6,686 ಭಾಗಶಃ ಹಾನಿಗೊಳಗಾಗಿವೆ ಎಂದು ಅಲ್ಲಿನ ತುರ್ತು ಪ್ರತಿಕ್ರಿಯೆ ಕೇಂದ್ರದ ಡೇಟಾವನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಹಿಮಾಚಲದ 12 ಜಿಲ್ಲೆಗಳಲ್ಲಿ ಜುಲೈ 26 ಮತ್ತು 27ರಂದು ಭಾರಿ ಮಳೆ ಆಗಲಿದ್ದು, ಈ ಪೈಕಿ 8 ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮತ್ತು ಅತಿ ಭಾರೀ ಮಳೆಗಾಗಿ 'ಆರೆಂಜ್ ಅಲರ್ಟ್' ಅನ್ನು ನೀಡಿದೆ ಮತ್ತು ಭೂಕುಸಿತ, ಹಠಾತ್ ಪ್ರವಾಹ, ಮಣ್ಣಿನ ಕುಸಿತ ಮತ್ತು ನದಿಗಳಲ್ಲಿ ಹೆಚ್ಚಿದ ಹರಿವಿನ ಬಗ್ಗೆ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.
ದೆಹಲಿ ಮಾನ್ಸೂನ್ ಅಪ್‌ಡೇಟ್
ದೆಹಲಿಯ ಕೆಲವು ಭಾಗಗಳು ಮತ್ತು ನೋಯ್ಡಾ ಮತ್ತು ಗಾಜಿಯಾಬಾದ್ ಸೇರಿದಂತೆ ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ಜುಲೈ 26 ರಂದು ಮುಂಜಾನೆ ಭಾರೀ ಮಳೆಯನ್ನು ಕಂಡಿತು. ಐಟಿಒ ರಸ್ತೆಯಲ್ಲೂ ಜಲಾವೃತಗೊಂಡ ಪರಿಸ್ಥಿತಿ ಕಂಡುಬಂದಿತು. ದೆಹಲಿಯಲ್ಲಿ ಜುಲೈ 27 ರವರೆಗೆ ಲಘುವಾಗಿ ಸಾಧಾರಣ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದು ತಾಪಮಾನದ ಮೇಲೆ ಪರಿಣಾಮ ಬೀರಲಿದೆ.
ಇದರ ಮಧ್ಯೆ, ಮಳೆ ಮತ್ತು ನೀರಿನ ಕಾರಣದಿಂದಾಗಿ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ 12 ನೇ ತರಗತಿಯವರೆಗಿನ ಎಲ್ಲಾ ಶಾಲೆಗಳನ್ನು ಇಂದು ಮುಚ್ಚಲಾಗುವುದು ಎಂದು ಗೌತಮ್ ಬುದ್ಧ ನಗರ ಜಿಲ್ಲಾಡಳಿತ ತಿಳಿಸಿದೆ.
"ಮಳೆ ಮತ್ತು ನೀರಿನ ಬವಣೆಯಿಂದಾಗಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೀಶ್ ಕುಮಾರ್ ವರ್ಮಾ ಅವರು 12 ನೇ ತರಗತಿಯವರೆಗಿನ ಎಲ್ಲಾ ಶಾಲೆಗಳನ್ನು ಇಂದಿನವರೆಗೆ ಮುಚ್ಚುವಂತೆ ಆದೇಶಿಸಿದ್ದಾರೆ" ಎಂದು ಜಿಲ್ಲಾ ಶಾಲೆಗಳ ಇನ್ಸ್‌ಪೆಕ್ಟರ್ ಧರ್ಮವೀರ್ ಸಿಂಗ್ ತಿಳಿಸಿದ್ದಾರೆ.