Odisha Train Crash: ಬಾಲಸೋರ್ ರೈಲು ದುರಂತ ಪ್ರಕರಣ ತನಿಖೆ ಚುರುಕು; ಮೂವರು ರೈಲ್ವೆ ಅಧಿಕಾರಿಗಳ ಬಂಧಿಸಿದ ಸಿಬಿಐ
Jan 09, 2024 07:57 PM IST
ಬಾಲಸೋರ್ ರೈಲು ಅಪಘಾತದಿಂದ ಹಳಿತಪ್ಪಿದ ಕೋಚ್‌ಗಳ ಡ್ರೋನ್ ದೃಶ್ಯದ ಸಂಗ್ರಹ ಚಿತ್ರ (REUTERS)
- Balasore Train Accident: ಒಡಿಶಾ ರೈಲು ದುರಂತ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಮೂವರು ರೈಲ್ವೆ ಅಧಿಕಾರಿಗಳನ್ನು ಬಂಧಿಸಿದೆ. ಆದರೆ, ಬಂಧನಕ್ಕೆ ನಿಖರ ಕಾರಣ ಬಹಿರಂಗವಾಗಿಲ್ಲ.
ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತಕ್ಕೆ (Odisha Train Accident) ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI Central Bureau of Investigation)ವು ಜುಲೈ 7ರ ಶುಕ್ರವಾರ ಮೂವರು ರೈಲ್ವೆ ಅಧಿಕಾರಿಗಳನ್ನು ಬಂಧಿಸಿದೆ. 290ಕ್ಕೂ ಹೆಚ್ಚು ಪ್ರಯಾಣಿಕರ ಸಾವಿಗೆ ಕಾರಣವಾದ ಬಾಲಸೋರ್ ರೈಲು ಅಪಘಾತವು, ದೇಶದಲ್ಲಿ ನಡೆದ ಮಹಾ ದುರಂತಗಳಲ್ಲಿ ಒಂದು.
ಹಿರಿಯ ವಿಭಾಗ ಇಂಜಿನಿಯರ್ ಅರುಣ್ ಕುಮಾರ್ ಮಹಂತ, ವಿಭಾಗ ಎಂಜಿನಿಯರ್ ಮೊಹಮ್ಮದ್ ಅಮೀರ್ ಖಾನ್, ಮತ್ತು ಟೆಕ್ನೀಷಿಯನ್ ಪಪ್ಪು ಕುಮಾರ್ ಬಂಧಿತ ರೈಲ್ವೇ ನೌಕರರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಮತ್ತು 201ರ ಅಡಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ. ‘ಘಟನೆಗೆ ಕಾರಣವಾದ ಅವರ ನಡೆ’ಯಿಂದಾಗಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಈ ಮೂವರು ಮಾಡಿರುವ ತಪ್ಪು ಏನು ಎಂಬುದನ್ನು ನಿಖರವಾಗಿ ವಿವರಿಸಿಲ್ಲ.
ಜೂನ್ 6ರಂದು ರೈಲು ದುರಂತ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಲಾಗಿತ್ತು. ಪ್ರಕರಣ ಸಂಬಂಧ ಸುಮಾರು ಒಂದು ತಿಂಗಳಿನಿಂದ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಸುದೀರ್ಘ ತನಿಖೆಯ ಬಳಿಕ ತನಿಖಾ ಸಂಸ್ಥೆಯು ಈ ಪ್ರಕರಣದೊಂದಿಗೆ ನರಹತ್ಯೆ ಮತ್ತು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಎರಡು ಸೆಕ್ಷನ್‌ಗಳನ್ನು ಸೇರಿಸಿದೆ. ಕಳೆದ ತಿಂಗಳು ಸಿಬಿಐ ಸಲ್ಲಿಸಿದ ಎಫ್‌ಐಆರ್‌ನಲ್ಲಿ ಈ ಸೆಕ್ಷನ್‌ಗಳನ್ನು ನಮೂದಿಸಿರಲಿಲ್ಲ ಎಂಬುದು ಗಮನಾರ್ಹ ಅಂಶ.
ಅಪಘಾತಕ್ಕೆ ಸಿಗ್ನಲಿಂಗ್ ದೋಷ ಕಾರಣ
ರೈಲ್ವೆ ಸುರಕ್ಷತಾ ಆಯುಕ್ತರು (Commissioner of Railways Safety) ಬುಧವಾರ (ಜುಲೈ 5)ರಂದು ಒಡಿಶಾದ ಬಾಲಸೋರ್ ರೈಲು ಅಪಘಾತದ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿದ್ದರು. ಅಪಘಾತಕ್ಕೆ ಸಿಗ್ನಲಿಂಗ್ ದೋಷ ಕಾರಣ ಎಂದು ಹೇಳಲಾಗಿದೆ. ಅಪಘಾತಕ್ಕೂ ಒಂದು ಗಂಟೆಯ ಮೊದಲು, ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತೊಂದು ಟ್ರ್ಯಾಕ್‌ನಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಡಿಕ್ಕಿ ಹೊಡೆದಿರುವುದರ ಹಿಂದೆ ದೋಷಯುಕ್ತ ದುರಸ್ತಿ ಕಾರ್ಯಗಳಿವೆ. ಇದು ಮತ್ತು 2018ರಲ್ಲಿಯೂ ನಡೆದ ದೋಷಯುಕ್ತ ದುರಸ್ತಿ ಕಾರ್ಯದಿಂದಾಗಿ ದೋಷಯುಕ್ತ ಸಿಗ್ನಲಿಂಗ್ ಸಮಸ್ಯೆ ಉಂಟಾಗಿದೆ.
ಕೋರಮಂಡಲ್ ಎಕ್ಸ್‌ಪ್ರೆಸ್‌ನ ಹಿಂಭಾಗದ ಘರ್ಷಣೆಯು ಸಿಗ್ನಲಿಂಗ್-ಸರ್ಕ್ಯೂಟ್-ಬದಲಾವಣೆಯಲ್ಲಿನ ಲೋಪಗಳಿಂದಾಗಿ ಸಂಭವಿಸಿದೆ ಎಂದು ವರದಿ ಹೇಳಿದೆ.
ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರೀಯ ತನಿಖಾ ದಳ ಕಳೆದ ಜೂನ್ 19ರಂದು ಜೂನಿಯರ್ ಇಂಜಿನಿಯರ್ ಆಮೀರ್ ಖಾನ್ ಅವರ ಬಾಡಿಗೆ ಮನೆಯನ್ನು ಸೀಲ್ ಮಾಡಿತ್ತು. ಸೋರೋದ ಅನ್ನಪೂರ್ಣ ರೈಸ್ ಮಿಲ್ ಬಳಿ ಇರುವ ಆಮೀರ್ ಖಾನ್ ಅವರ ಮನೆ ಬಳಿಗೆ ನಿನ್ನೆ ಸಿಬಿಐ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಬೀಗ ಹಾಕಲಾಗಿದ್ದ ಮನೆಯನ್ನು ಅಧಿಕಾರಿಗಳು ಸೀಲ್ ಮಾಡಿದ್ದರು. ಅದಕ್ಕೂ ಮುನ್ನ ಅಧಿಕಾರಿಗಳು ಆಮೀರ್ ಖಾನ್‌ನನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದರು. ಆ ಬಳಿಕ ಖಾನ್ ಮತ್ತವರ ಕುಟುಂಬದವರು ಬಾಡಿಗೆ ಮನೆಯಿಂದ ನಾಪತ್ತೆಯಾಗಿದ್ದರೆ ಎಂದು ವರದಿಯಾಗಿದೆ.
ಏನಾಗಿತ್ತು?
ಕಳೆದ ಜೂನ್ 2ರಂದು ಒಡಿಶಾದ ಬಾಲಸೋರ್‌ನ ಬಹನಾಗಾ ಬಜಾರ್ ನಿಲ್ದಾಣದ ಸಮೀಪ ರಾತ್ರಿ 7.15ರ ಸುಮಾರಿಗೆ ಮೂರು ರೈಲುಗಳ ನಡುವೆ ಅಪಘಾತ ಸಂಭವಿಸಿತ್ತು. ಈ ದುರಂತದಲ್ಲಿ 290ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಸಾವಿರಾರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗೂಡ್ಸ್ ರೈಲು ಮತ್ತು ಎರಡು ಎಕ್ಸ್‌ಪ್ರೆಸ್ ರೈಲುಗಳ ಬೋಗಿಗಳು ಹಳಿ ತಪ್ಪಿದ್ದು, ಭಾರಿ ಅನಾಹುತಕ್ಕೆ ಕಾರಣವಾಗಿದೆ. ಈ ಅಪಘಾತದಲ್ಲಿ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್‌ನ ಬೋಗಿಗಳು ಬಾಲೇಶ್ವರ ಬಳಿ ಹಳಿತಪ್ಪಿ ಎದುರಿನ ಹಳಿಯಲ್ಲಿ ಬಿದ್ದಿದ್ದವು.