ಏನಿದು ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ, ಅನುಕೂಲ ಮತ್ತು ಅನನುಕೂಲಗಳೇನು; ಇಲ್ಲಿದೆ 7 ಅಂಶಗಳ ವಿವರಣೆ
Sep 02, 2023 03:32 PM IST
ಚುನಾವಣೆ (ಸಾಂಕೇತಿಕ ಚಿತ್ರ)
ಭಾರತದಲ್ಲಿ ಒಂದು ದೇಶ ಒಂದು ಚುನಾವಣೆ ವಿಚಾರ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದ ಸಮಿತಿ ರಚನೆಯಾಗಿರುವುದು ಇದಕ್ಕೆ ಕಾರಣ. ಒಂದು ದೇಶ ಒಂದು ಚುನಾವಣೆ ವ್ಯವಸ್ಥೆಯ ಅನುಕೂಲ ಮತ್ತು ಅನನುಕೂಲಗಳ ಕುರಿತು ಏಳು ಅಂಶಗಳ ವಿವರಣೆ ಹೀಗಿದೆ.
'ಒಂದು ರಾಷ್ಟ್ರ, ಒಂದು ಚುನಾವಣೆ' (One Nation One Election) ಸಾಧ್ಯತೆಯನ್ನು ಅನ್ವೇಷಿಸಲು ಕೇಂದ್ರ ಸರ್ಕಾರವು ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ (Former President of India Ram Nath Kovind) ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ ಎಂದು ಮೂಲಗಳು ಉಲ್ಲೇಖಿಸಿ ಪಿಟಿಐ ಇಂದು (ಸೆ.1) ವರದಿ ಮಾಡಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಸೆ.18ರಿಂದ 22ರ ತನಕ 5 ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ ಎಂದು ಹೇಳಿದ ಮಾರನೇ ದಿನ ಈ ಸಮಿತಿ ರಚನೆಯ ವರದಿಯು ಬಹಿರಂಗವಾಗಿದೆ.
ನವದೆಹಲಿಯಲ್ಲಿ ಜಿ 20 ಶೃಂಗಸಭೆಯ (ಸೆ.8ರಿಂದ 10) ಕೆಲವು ದಿನಗಳ ನಂತರ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯಸೂಚಿ ಏನು ಎಂಬುದನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿಲ್ಲ. ಆದಾಗ್ಯೂ, ಸಚಿವ ಪ್ರಲ್ಹಾದ್ ಜೋಶಿ ಅವರು ಎಕ್ಸ್ ಖಾತೆಯಲ್ಲಿ "ಅಮೃತ್ ಕಾಲದ ಸಂಸತ್ತಿನಲ್ಲಿ ಫಲಪ್ರದ ಚರ್ಚೆಗಳು ಮತ್ತು ಚರ್ಚೆಗಳನ್ನು ನಡೆಸಲು ಎದುರು ನೋಡುತ್ತಿರುವುದಾಗಿ ಹೇಳಿ ಕೊಂಡಿದ್ದಾರೆ.
ವಿಶೇಷ ಅಧಿವೇಶದ ವಿಚಾರ ಘೋಷಣೆಯಾದಾಗಿನಿಂದ, ಐದು ದಿನಗಳ ವಿಶೇಷ ಅಧಿವೇಶನದ ಸಂಭವನೀಯ ಕಾರ್ಯಸೂಚಿಯ ಬಗ್ಗೆ ಊಹಾಪೋಹಗಳು ಹುಟ್ಟಿಕೊಂಡಿವೆ. ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದಂತೆ ಪ್ರಸ್ತುತ ಸಂಸತ್ತನ್ನು ವಿಸರ್ಜಿಸುವುದು ಮತ್ತು ಲೋಕಸಭೆಗೆ ಅವಧಿಗೆ ಮುನ್ನವೇ ಚುನಾವಣೆಯನ್ನು ಘೋಷಿಸುವುದು ಊಹಾಪೋಹದ ಕಾರ್ಯಸೂಚಿಗಳಲ್ಲಿ ಒಂದು ಎಂದು ವರದಿ ಮಾಡಿದೆ. ಆದರೆ ಕೆಲವು ರಾಜಕೀಯ ವಲಯಗಳು ಇದು ರಾಷ್ಟ್ರ, ಒಂದು ಚುನಾವಣೆಯ ಸುತ್ತ ಸುತ್ತುತ್ತದೆಯೇ ಎಂದು ಯೋಚಿಸುತ್ತಿವೆ.
ಹಾಗಾದರೆ, ಏನಿದು ಒಂದು ದೇಶ ಒಂದು ಚುನಾವಣೆ
ಭಾರತದಲ್ಲಿ "ಒಂದು ರಾಷ್ಟ್ರ, ಒಂದು ಚುನಾವಣೆ" ಪರಿಕಲ್ಪನೆಯು ಲೋಕಸಭೆಗೆ ಮತ್ತು ಎಲ್ಲ ರಾಜ್ಯ ಅಸೆಂಬ್ಲಿಗಳಿಗೆ ಚುನಾವಣೆಗಳನ್ನು ಹೊಂದಿಸುವ ಗುರಿಯನ್ನು ಹೊಂದಿದೆ. ಈ ಚುನಾವಣೆಗಳನ್ನು ಒಂದೇ ದಿನ ಅಥವಾ ನಿರ್ದಿಷ್ಟ ಕಾಲಮಿತಿಯೊಳಗೆ ಏಕಕಾಲದಲ್ಲಿ ನಡೆಸುವ ಆಲೋಚನೆ ಇದೆ. ಕಾಲಾನುಕ್ರಮದ ವರ್ಷಗಳಲ್ಲಿ ಪಿಎಂ ಮೋದಿ ಅವರು ಏಕಕಾಲದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಯ ಕಲ್ಪನೆಯನ್ನು ಬಲವಾಗಿ ಒತ್ತಾಯಿಸುತ್ತ ಬಂದಿದ್ದಾರೆ. ಈಗ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಇದಕ್ಕೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿರುವುದು ಲೋಕಸಭೆ ಚುನಾವಣೆ ಸಮೀಪದಲ್ಲಿರುವಾಗ ಸರ್ಕಾರ ಅದಕ್ಕೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಬಿಂಬಿಸಿದೆ.
ಐದು ರಾಜ್ಯಗಳಲ್ಲಿ ಈ ವರ್ಷ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ನಂತರ ಲೋಕಸಭೆ ಚುನಾವಣೆ 2024ರ ಮೇ-ಜೂನ್‌ನಲ್ಲಿ ನಡೆಯಲಿದೆ. ಆದರೆ, ಸರ್ಕಾರದ ಇತ್ತೀಚಿನ ನಡೆಗಳು ಲೋಕಸಭೆ ಚುನಾವಣೆಯನ್ನು ಮುಂಚಿತವಾಗಿ ನಡೆಸುವ ಸಾಧ್ಯತೆಯನ್ನು ತೆರೆದಿಟ್ಟಿವೆ. ಪಿಟಿಐ ವರದಿ ಮಾಡಿರುವಂತೆ ಲೋಕಸಭೆಯ ಸ್ಪರ್ಧೆಯ ನಂತರ ಮತ್ತು ಅದರೊಂದಿಗೆ ನಿಗದಿಯಾಗಿರುವ ಸಾರ್ವತ್ರಿಕ ಚುನಾವಣೆಗಳು ಮತ್ತು ಕೆಲವು ರಾಜ್ಯಗಳ ಚುನಾವಣೆಗಳನ್ನು ಸೇರಿಸಿ ಒಟ್ಟಿಗೆ ಚುನಾವಣೆ ನಡೆಸುವ ಚಿಂತನೆ ಅದು.
ಒಂದು ದೇಶ ಒಂದು ಚುನಾವಣೆಯ ಅನುಕೂಲಗಳು
- 'ಒಂದು ರಾಷ್ಟ್ರ, ಒಂದು ಚುನಾವಣೆ'ಯ ಪ್ರಾಥಮಿಕ ಪ್ರಯೋಜನ- ಪ್ರತಿಯೊಂದು ಚುನಾವಣೆಗೂ ಭಾರಿ ಪ್ರಮಾಣದ ಹಣಕಾಸು ಸಂಪನ್ಮೂಲ, ಶ್ರಮ ಬೇಕು. ಹಣಕಾಸಿನ ವೆಚ್ಚ ಮತ್ತು ಶ್ರಮ ತಗ್ಗಿಸುವ ಉದ್ದೇಶ ಸಾಕಾರಗೊಳಿಸುವುದೇ ಮೊದಲ ಪ್ರಯೋಜನ.
- ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಆಡಳಿತಾತ್ಮಕ ಮತ್ತು ಭದ್ರತಾ ಪಡೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ಹಾಗೆ ಮಾಡದೇ ಇದ್ದರೆ ಚುನಾವಣಾ ಕರ್ತವ್ಯಗಳಲ್ಲಿ ಹಲವು ಸಲ ಆಡಳಿತ ಮತ್ತು ಭದ್ರತಾ ವ್ಯವಸ್ಥೆ ಕೆಲಸ ಮಾಡಬೇಕಾಗುತ್ತದೆ. ಇದನ್ನು ತಪ್ಪಿಸುವುದು ಸಾಧ್ಯವಾದರೆ ಅದುವೇ ಆಡಳಿತ ಪ್ರಗತಿಗೆ ಬಹುದೊಡ್ಡ ಅನುಕೂಲವಾಗಲಿದೆ.
- ಒಂದು ದೇಶ ಒಂದು ಚುನಾವಣೆ ಅನುಷ್ಠಾನಗೊಂಡರೆ ಸರ್ಕಾರ ಸದಾ ಚುನಾವಣೆ ಮೂಡ್‌ನಲ್ಲಿರವುದು ತಪ್ಪುವುದಲ್ಲದೆ, ಆಡಳಿತದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಬಹುದು. ನೀತಿ ಅನುಷ್ಠಾನಕ್ಕೂ ಉಂಟಾಗುವ ಅಡ್ಡಿ ಕಡಿಮೆಯಾಗುತ್ತದೆ.
- ಕಾನೂನು ಆಯೋಗದ ಪ್ರಕಾರ ಏಕಕಾಲದಲ್ಲಿ ನಡೆಯುವ ಚುನಾವಣೆಗಳು ಮತದಾನದ ಪ್ರಮಾಣವನ್ನು ಹೆಚ್ಚಿಸುತ್ತವೆ. ಏಕೆಂದರೆ ಮತದಾರರು ಒಮ್ಮೆ ಮತಗಟ್ಟೆಗೆ ಬಂದರೆ ರಾಜ್ಯ ಮತ್ತು ಲೋಕಸಭೆ ಚುನಾವಣೆಗೆ ಮತಚಲಾಯಿಸಿ ಹಿಂದಿರುಗಬಹುದು. ಇದು ಅವರ ಸಮಯವನ್ನೂ ಉಳಿಸುತ್ತದೆ.
ಒಂದು ದೇಶ ಒಂದು ಚುನಾವಣೆಯ ಅನನುಕೂಲಗಳು
- ಒಂದು ರಾಷ್ಟ್ರ, ಒಂದು ಚುನಾವಣೆಯನ್ನು ಜಾರಿಗೆ ತರಲು, ಸಂವಿಧಾನ ಮತ್ತು ಇತರ ಕಾನೂನು ಚೌಕಟ್ಟುಗಳಲ್ಲಿ ಬದಲಾವಣೆಗಳ ಅಗತ್ಯವಿದೆ. ಒಂದು ರಾಷ್ಟ್ರ - ಒಂದು ಚುನಾವಣೆಗೆ ಸಾಂವಿಧಾನಿಕ ತಿದ್ದುಪಡಿಯ ಅಗತ್ಯವಿದೆ ಮತ್ತು ನಂತರ ಅದನ್ನು ರಾಜ್ಯ ಅಸೆಂಬ್ಲಿಗಳಲ್ಲೂ ಮಂಡಿಸಿ ಅನುಮೋದನೆ ಪಡೆಯಬೇಕು. ಒಂದು ದೇಶ ಒಂದು ಚುನಾವಣೆ 1950 ಮತ್ತು 60 ರ ದಶಕದಲ್ಲಿ ನಾಲ್ಕು ಬಾರಿ ಪ್ರಯತ್ನವಾಗಿರುವ ಪರಿಕಲ್ಪನೆ. ಇದು ಹೊಸ ಪರಿಕಲ್ಪನೆಯಲ್ಲ. ಭಾರತದಲ್ಲಿ ಕಡಿಮೆ ರಾಜ್ಯಗಳು ಮತ್ತು ಮತದಾರರ ಸಂಖ್ಯೆ ಆ ಸಂದರ್ಭದಲ್ಲಿ ಕಡಿಮೆ ಇತ್ತು ಎಂದು ಎಎನ್‌ಐ ವರದಿ ವಿವರಿಸಿದೆ.
- ಪ್ರಾದೇಶಿಕ ಸಮಸ್ಯೆಗಳು ರಾಷ್ಟ್ರೀಯ ಸಮಸ್ಯೆಗಳನ್ನೂ ಮೀರಿ ರಾಜ್ಯ ಮಟ್ಟದಲ್ಲಿ ಲೋಕಸಭೆ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವೂ ಇದೆ.
- ಎಲ್ಲ ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ಒಮ್ಮತಕ್ಕೆ ಬರಬೇಕಾದ್ದು ಅಗತ್ಯ. ಈಗಾಗಲೇ ಒಂದು ದೇಶ ಒಂದು ಚುನಾವಣೆಯ ಪರಿಕಲ್ಪನೆಯನ್ನು ವಿರೋಧ ಪಕ್ಷಗಳು ವಿರೋಧಿಸಿವೆ ಎಂಬುದು ಕೂಡ ಸವಾಲಿನ ಭಾಗವೇ ಆಗಿದೆ.