Love Story: ಗಡಿ ಮೀರಿದ ಮತ್ತೊಂದು ಪ್ರೇಮ್ ಕಹಾನಿ, ಪಾಕಿಸ್ತಾನದಿಂದ ಭಾರತಕ್ಕೆ ಬಂದ ವಿವಾಹಿತ ಮಹಿಳೆ
Jul 29, 2024 06:36 PM IST
ರೆಹಮಾನ್ ಹಾಗೂ ಮೆಹ್ವಿಶ್ ಅವರನ್ನು ಗಡಿ ಮೀರಿದ ಪ್ರೇಮ ಕಹಾನಿ
- Pak India Prem Kahani ಪಾಕಿಸ್ತಾನದ ವಿವಾಹಿತ ಮಹಿಳೆ ಭಾರತದ ಯುವಕನ್ನು ಪ್ರೀತಿಸಿ ಆನ್‌ಲೈನ್‌ನಲ್ಲಿಯೇ ಮದುವೆಯಾಗಿ ಆನಂತರ ಈಗ ಭಾರತ ಪ್ರವೇಶಿಸಿದ್ದಾಳೆ. ಗಡಿ ಮೀರಿದ ಆಸಕ್ತಿದಾಯಕ ಪ್ರೇಮ ಕಥನ ಇಲ್ಲಿದೆ.
ಇಸ್ಲಾಮಾಬಾದ್: ಭಾರತ ಹಾಗೂ ಪಾಕಿಸ್ತಾನದ ನಡುವೆ ರಾಜತಾಂತ್ರಿಕ ಸಮಸ್ಯೆಗಳು ಏನೇ ಇರಬಹುದು. ಆದರೆ ಪ್ರೇಮ ಸಂಬಂಧಗಳಿಗೆ ಮಾತ್ರ ಇದ್ಯಾವುದು ಅಡ್ಡಿಯಿಲ್ಲ.ಗಡಿ ಮೀರಿದ ಪ್ರೇಮಕಥಾನಕಗಳು ಮುಂದುವರೆದೇ ಇವೆ. ಈ ಬಾರಿ ವಿವಾಹಿತ ಮಹಿಳೆಯೊಬ್ಬರು ಭಾರತ ಮೂಲದ ಯುವಕನ್ನು ಆನ್‌ಲೈನ್‌ನಲ್ಲಿಯೇ ವಿವಾಹವಾಗಿ ಈಗ ಭಾರತ ಪ್ರವೇಶಿಸಿದ್ಧಾಳೆ. ತಾನು ಪ್ರೀತಿಸಿ ವಿವಾಹವಾಗಿದ್ದ ಯುವಕನನ್ನು ಸೇರಿಕೊಂಡಿದ್ದಾಳೆ. ಪ್ರವಾಸಿ ವೀಸಾ ಮೇಲೆ ಆಕೆ ಭಾರತಕ್ಕೆ ಒಂದೂವರೆ ತಿಂಗಳ ಕಾಲ ಆಗಮಿಸಿದ್ದು. ಅಲ್ಲಿವರೆಗೂ ಸಮಸ್ಯೆ ಇಲ್ಲ. ಆನಂತರ ಇಬ್ಬರ ಪ್ರೇಮಕಥೆ ಯಾವ ತಿರುವು ಪಡೆದುಕೊಳ್ಳುವುದೋ ಎನ್ನುವುದು ಮಾತ್ರ ಗೊತ್ತಿಲ್ಲ.
ಆಕೆಯ ಹೆಸರು ಮೆಹ್ವಿಶ್. ಪಾಕಿಸ್ತಾನದ ಇಸ್ಮಾಮಾಬಾದ್ ನಿವಾಸಿ. ವಯಸ್ಸು ಮೂವತ್ತರ ಆಜುಬಾಜು. ಆಕೆಗೆ ಮದುವೆಯಾಗಿ 12 ಮತ್ತು 7 ವರ್ಷದ ಎರಡು ಮಕ್ಕಳು ಇದ್ದವು. ಹದಿಮೂರು ವರ್ಷ ಕಾಲ ಪತಿ ಹಾಗೂ ಮಕ್ಕಳೊಂದಿಗೆ ಇದ್ದರು. ಆನಂತರ ಪತಿಯಿಂದ ಬೇರ್ಪಡುವ ತೀರ್ಮಾನಕ್ಕೆ ಮೆಹ್ವಿಶ್ ಬಂದಿದ್ದಳು. ಮಕ್ಕಳು ಪತಿಯ ಬಳಿಯೇ ಉಳಿದರು.
ಇಸ್ಮಾಬಾದ್‌ನಲ್ಲಿಯೇ ನೆಲೆಸಿದ್ದ ಮೆಹ್ವಿಶ್‌ಗೆ ಆನ್‌ಲೈನ್‌ನಲ್ಲಿ ಪರಿಚಯವಾದವನು ಭಾರತದ ರಾಜಸ್ತಾನ ರಾಜ್ಯದ ರೆಹಮಾನ್. ಈತ ರಾಜಸ್ತಾನದ ಬಿಕಾನೇರ್ ಜಿಲ್ಲೆಯವನು. ಸದ್ಯ ಕುವೈತ್‌ನಲ್ಲಿ ಖಾಸಗಿ ಉದ್ಯೋಗಿ.
ಆನ್ ಲೈನ್‌ನಲ್ಲಿ ಕೆಲವು ತಿಂಗಳಿನಿಂದಲೇ ಸಂಪರ್ಕ ಮುಂದುವರೆದಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಸಂವಹನಗಳ ನಂತರ, ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಬಿದ್ದರು. ಇದು ಮಾರ್ಚ್ 13,2022 ರಂದು ಮದುವೆಯ ಪ್ರಸ್ತಾಪಕ್ಕೆ ಕಾರಣವಾಯಿತು. ಇದಾದ ಮೂರು ದಿನಗಳ ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ಮದುವೆ ಆದರು ಮೆಹ್ವಿಶ್ ಹಾಗೂ ರೆಹಮಾನ್.
ಆದರೂ ಅವರ ಮುಖತಃ ಭೇಟಿಗೆ ಅಡ್ಡಿಯಾಗಿದ್ದು ದೇಶಗಳ ನಡುವಿನ ನಿಯಮಗಳು. ನಂತರ 2023 ರಲ್ಲಿ ಮೆಹ್ವಿಶ್ ಅವರ ಮೆಕ್ಕಾಕ್ಕೆ ಉಮ್ರಾ ತೀರ್ಥಯಾತ್ರೆಗೆ ಹೊರಟರು. ಇಲ್ಲಿಗೆ ರೆಹಮಾನ್ ಕೂಡ ಬಂದಿದ್ದರು. ಈ ಸಮಯದಲ್ಲಿ ಇಬ್ಬರೂ ಔಪಚಾರಿಕವಾಗಿ ಭೇಟಿಯಾಗಿದ್ದೂ ಅಲ್ಲದೇ ವೈಯಕ್ತಿಕ ವಿವಾಹ ಸಮಾರಂಭವನ್ನು ನಡೆಸಿಕೊಂಡಿದ್ದರು.
ಇದಾದ ನಂತರ ಮುಂದೆ ಮತ್ತೆ ಸೇರುವ ಮಾತುಕತೆಯೊಂದಿಗೆ ಆಕೆ ಇಸ್ಮಾಮಾಬಾದ್‌ಗೆ ತೆರಳಿದರೆ, ರೆಹಮಾನ್ ಕುವೈತ್‌ಗೆ ಉದ್ಯೋಗಕ್ಕೆ ತೆರಳಿದ್ದ. ಮಾತುಕತೆಗಳ ಬಳಿಕ ಆಕೆ ಭಾರತಕ್ಕೆ ಬರುವ ತೀರ್ಮಾನವನ್ನು ಕೆಲ ದಿನಗಳ ಹಿಂದೆ ಕೈಗೊಂಡಳು. ಇದಕ್ಕೆ ಆಕೆಯ ಮುಂದೆ ಇದ್ದ ಆಯ್ಕೆ ಪ್ರವಾಸಿ ವೀಸಾ. ಯಾವುದೇ ದೇಶಕ್ಕೆ 45 ದಿನಗಳ ಪ್ರವಾಸಿ ದೇಶಕ್ಕೆ ಹೋಗಬಹುದು. ಆನಂತರ ಅವರ ಅಲ್ಲಿನ ನಡವಳಿಕೆ, ಹಿನ್ನೆಲೆ ನೋಡಿಕೊಂಡು ಮತ್ತೆ ವೀಸಾ ವಿಸ್ತರಣೆ ಮಾಡಲಾಗುತ್ತದೆ. ಸದ್ಯಕ್ಕೆ ನೋಡೋಣ. ಮುಂದಿನದ್ದು ಮುಂದೆ ಎಂದು ಇಬ್ಬರೂ ತೀರ್ಮಾನಕ್ಕೆ ಬಂದರು. ಮೆಹ್ವಿಶ್ ಈಗ ಭಾರತವನ್ನು ಪ್ರವೇಶಿಸಿದ್ದಾಳೆ.
ಮೆಹ್ವಿಶ್ ಇಸ್ಲಾಮಾಬಾದ್‌ನಿಂದ ಲಾಹೋರ್ ಗೆ ಪ್ರಯಾಣಿಸಿ ಜುಲೈ 25 ರಂದು ವಾಘಾ ಗಡಿಯ ಮೂಲಕ ಭಾರತಕ್ಕೆ ಪ್ರವೇಶಿಸಿದ್ದಾಳೆ ಎಂದು ಮೂಲಗಳು ಹೇಳುತ್ತವೆ. ಪಾಕಿಸ್ತಾನಿ ಮತ್ತು ಭಾರತೀಯ ಅಧಿಕಾರಿಗಳು ಸಂಪೂರ್ಣ ದಾಖಲೆಗಳು ತಪಾಸಣೆಯ ನಂತರ 45 ದಿನಗಳ ಪ್ರವಾಸಿ ವೀಸಾಗೆ ಅನುಮತಿ ನೀಡಿ ಭಾರತ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ.
ಈ ವೇಳೆ ಮೆಹ್ವಿಶ್ ಅವರನ್ನು ರೆಹಮಾನ್ ಅವರ ಕುಟುಂಬವು ಪ್ರೀತಿಯಿಂದಲೇ ಬರ ಮಾಡಿಕೊಂಡಿತು. ಅಲ್ಲಿಂದ ಇಡೀ ಕುಟುಂಬ ಮೆಹ್ವಿಶ್ ಜತೆಯಲ್ಲಿ ರಾಜಸ್ಥಾನದ ಬಿಕಾನೇರ್ ಸಮೀಪದ ಚುರುದ ಪಿಥಿಸರ್ ಗ್ರಾಮಕ್ಕೆ ಪ್ರಯಾಣಿಸಿತು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಭಾರತಕ್ಕೆ ಪಾಕಿಸ್ತಾನದ ಗಡಿ ಮೀರಿ ಬಂದ ಪ್ರೇಮ ಕಥೆಗಳು ಹಲವು ಇವೆ. ಇತ್ತೀಚಿನ ಪ್ರಕರಣವೆಂದರೆ ಸೀಮಾ ಹೈದರ್ ತನ್ನ ಗಂಡನನ್ನು ತೊರೆದು ತನ್ನ ಪ್ರೇಮಿಯನ್ನು ಭೇಟಿಯಾಗಲು ಮತ್ತು ಮದುವೆಯಾಗಲು ಗಡಿ ದಾಟಿ ಭಾರತಕ್ಕೆ ಬಂದಿದ್ದಳು.
ತನ್ನ ಪ್ರೇಮಿಯಾದ ನಸ್ರುಲ್ಲಾನೊಂದಿಗೆ ಇರಲು ಒಂದು ತಿಂಗಳ ವೀಸಾದಲ್ಲಿ ಪಾಕಿಸ್ತಾನಕ್ಕೆ ಬಂದ ಅಂಜು ಎಂಬ ಭಾರತೀಯ ಮಹಿಳೆಯ ಪ್ರಕರಣವೂ ಗಮನ ಸೆಳೆದಿದೆ.
ಮತ್ತೊಂದು ಪ್ರಕರಣವೆಂದರೆ 21 ವರ್ಷದ ಭಾರತೀಯ ಪ್ರಜೆ ಮುಲಾಯಂ ಸಿಂಗ್ ಯಾದವ್, ತನ್ನ 19 ವರ್ಷದ ಪಾಕಿಸ್ತಾನಿ ಪತ್ನಿ ಇಕ್ರಾ ಜೀವಾನಿಯನ್ನು ನಕಲಿ ಗುರುತಿನ ಚೀಟಿಯನ್ನು ಪಡೆಯಲು ಮತ್ತು ಅಕ್ರಮವಾಗಿ ಭಾರತವನ್ನು ಪ್ರವೇಶಿಸಲು ಸಹಾಯ ಮಾಡಿದ. ಲುಡೋ ಆಡುವಾಗ ಇಬ್ಬರೂ ಸ್ನೇಹ ಬೆಳೆಸಿ ಪ್ರೀತಿಯಲ್ಲಿ ಬಿದ್ದರು. ಆದಾಗ್ಯೂ, ಭಾರತೀಯ ಅಧಿಕಾರಿಗಳಿಂದ ಬಂಧಿಸಲ್ಪಟ್ಟ ನಂತರ, ಇಕ್ರಾ ಅವರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಯಿತು ಮತ್ತು ಮುಲಾಯಂ ಯಾದವ್ ನನ್ನು ಜೈಲಿಗೆ ಕಳುಹಿಸಲಾಗಿತ್ತು.