logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pak Indian Love Story: ಆಕೆ ಪಾಕ್‌ಗೆ ಹಿಂದಿರುಗದಿದ್ದರೆ ಭಾರತದ ಮೇಲೆ 26/11 ಮಾದರಿ ದಾಳಿ: ದೇಶ ಗಡಿ ಮೀರಿದ ಪ್ರೇಮ್‌ ಕಹಾನಿ ತಂದ ಬೆದರಿಕೆ

Pak Indian Love Story: ಆಕೆ ಪಾಕ್‌ಗೆ ಹಿಂದಿರುಗದಿದ್ದರೆ ಭಾರತದ ಮೇಲೆ 26/11 ಮಾದರಿ ದಾಳಿ: ದೇಶ ಗಡಿ ಮೀರಿದ ಪ್ರೇಮ್‌ ಕಹಾನಿ ತಂದ ಬೆದರಿಕೆ

Umesha Bhatta P H HT Kannada

Jul 14, 2023 10:59 AM IST

google News

ಭಾರತ ಹಾಗೂ ಪಾಕಿಸ್ತಾನದ ಪ್ರೇಮಿಗಳಾದ ಸಚಿನ್‌ ಮೀನಾ ಸೀಮಾ ಹೈದರ್‌

    • Pak Indian Love Story ಇದು ಪಬ್ಜಿ ತಂದ ಗಡಿ ಮೀರಿದ ಪ್ರೇಮ ಕಹಾನಿ. ಭಾರತ ಹಾಗೂ ಪಾಕಿಸ್ತಾನದ ಪ್ರೇಮಿಗಳ ನಡುವಿನ ಯಾನ ಬೆದರಿಕೆ ಹಾದಿಗೆ ತಿರುಗಿದೆ. ಅದೂ ಮುಂಬೈ ಮಾದರಿಯಲ್ಲಿ ಭಾರತದ ಮೇಲೆ 26/11 ದಾಳಿ. ಏನಿದು. ಇಲ್ಲಿದೆ ಆಸಕ್ತಿದಾಯಕ ಸ್ಟೋರಿ…
ಭಾರತ ಹಾಗೂ ಪಾಕಿಸ್ತಾನದ ಪ್ರೇಮಿಗಳಾದ ಸಚಿನ್‌ ಮೀನಾ ಸೀಮಾ ಹೈದರ್‌
ಭಾರತ ಹಾಗೂ ಪಾಕಿಸ್ತಾನದ ಪ್ರೇಮಿಗಳಾದ ಸಚಿನ್‌ ಮೀನಾ ಸೀಮಾ ಹೈದರ್‌

ಆಕೆಯನ್ನು ಪಾಕಿಸ್ತಾನಕ್ಕೆ ವಾಪಾಸ್‌ ಕಳುಹಿಸದೇ ಇದ್ದರೆ ಭಾರತದ ಮೇಲೆ ದಾಳಿ ಮಾಡುತ್ತೇವೆ. ಅದೂ ಮುಂಬೈ ಮೇಲೆ ನಡೆದ 26/11ರ ಮಾದರಿ ದಾಳಿಯೇ. ಹುಷಾರು.

ಇಂತಹದೊಂದು ಕರೆ ಮುಂಬೈ ಪೊಲೀಸರಿಗೆ ಬಂದಾಗ ನಿಜಕ್ಕೂ ಆತಂಕ. ಮೊದಲೇ ಒಮ್ಮೆ ದಾಳಿ ಎದುರಿಸಿರುವ ಮತ್ತೊಂದು ಕಡೆ ಪಾಕಿಸ್ತಾನದ ಕಡೆಯಿಂದ ಬಂದ ಕರೆ ಎಂದರೆ ಸುಮ್ಮನೇ ಇರುವಂತೆಯೂ ಇಲ್ಲ. ಕೂಡಲೇ ಮುಂಬೈ ಪೊಲೀಸರು ಮಾಹಿತಿ ಕಲೆ ಹಾಕಿದಾಗ ಬಯಲಾಗಿದ್ದು ಭಾರತ ಹಾಗೂ ಪಾಕಿಸ್ತಾನದ ಗಡಿ ಮೀರಿದ ಪ್ರೇಮ್‌ ಕಹಾನಿ.

ಸೀಮಾ- ಸಚಿನ್‌ ಕಹಾನಿ

ಆಕೆಯ ಹೆಸರು ಸೀಮಾ ಹೈದರ್‌. ವಯಸ್ಸು 27 ವರ್ಷ. ಮದುವೆಯಾಗಿ ನಾಲ್ಕು ಮಕ್ಕಳಿವೆ. ಗಂಡ ಸೌದಿ ಅರೆಬಿಯಾದಲ್ಲಿ ಆಟೋ ರಿಕ್ಷಾ ಚಾಲಕ. ಆಕೆಯನ್ನು ಆಕರ್ಷಿಸಿ ಭಾರತಕ್ಕೆ ಬರುವಂತೆ ಮಾಡಿದ 22 ವರ್ಷದ ಯುವಕ ಸಚಿನ್‌ ಮೀನಾ. ದೆಹಲಿ ಮಹಾನಗರಕ್ಕೆ ಹೊಂದಿಕೊಂಡ ಗ್ರೇಟರ್‌ ನೋಯಿಡಾದಲ್ಲಿ ಈತ ಶಾಪ್‌ ಕೀಪಿಂಗ್‌ ಸಹಾಯಕ.

ಪಬ್ಜಿ ತಂದ ಪ್ರೇಮ

ಅದು ಎರಡು ವರ್ಷದ ಹಿಂದಿನ ಕೋವಿಡ್‌ ಸಮಯ. ಮನೆಯಲ್ಲಿ ಸುಮ್ಮನೇ ಕುಳಿತಿದ್ದವರಿಗೆ ಆಸರೆಯಾಗಿದ್ದು ಮೊಬೈಲ್‌ ಗೇಮಿಂಗ್‌. ಪಬ್ಜಿ ಆಡುತ್ತಿದ್ದ ಸೀಮಾ ಹೈದರ್‌ಗೆ ಪರಿಚಯವಾಗಿದ್ದು ಸಚಿನ್‌. ಇದು ಪ್ರೇಮವಾಗಿ ತಿರುಗಲು ಬಹಳ ದಿನ ಹಿಡಿಯಲಿಲ್ಲ. ಪತಿಯ ಹಿಂಸೆಯಿಂದ ಬಳಲಿದ್ದ ಆಕೆಗೂ ಹೊಸ ಸಂಗಾತಿ ಬೇಕಿತ್ತು. ಕೊನೆಗೆ ಪ್ರವಾಸ ಹೊರಡಲು ತೀರ್ಮಾನಿಸಿದಳು. ಅಲ್ಲಿದ್ದ ಮನೆಯನ್ನು ಮಾರಿ ಮಕ್ಕಳೊಂದಿಗೆ ನೇಪಾಳ ಪ್ರವಾಸ ಬಂದಳು ಸೀಮಾ. ಸಚಿನ್‌ ಕೂಡ ನೇಪಾಳಕ್ಕೆ ತೆರಳಿದ. ನಾಲ್ಕು ತಿಂಗಳ ಹಿಂದೆ ಮದುವೆಯನ್ನೂ ಆದರು.

ಅಲ್ಲಿಂದ ವಾಪಾಸಾದ ಆಕೆ ಮತ್ತೆ ನೇಪಾಳಕ್ಕೆ ಆಗಮಿಸಿ ಮಕ್ಕಳೊಂದಿಗೆ ಹಿಂದೂ ಧರ್ಮಕ್ಕೂ ಮತಾಂತರಗೊಂಡಳು. ತನ್ನೂರಿಗೆ ಕರೆದುಕೊಂಡು ಬಂದ ಸಚಿನ್‌ ಆಕೆಗೆ ಒಂದು ಮನೆ ಮಾಡಿ ಇರಿಸಿದ. ಸಚಿನ್‌ ತಂದೆಗೂ ತಮ್ಮದೇಶಗಳ ಗಡಿ ಮೀರಿದ ಪ್ರೇಮ ವಿವಾಹದ ಕುರಿತು ತಿಳಿಸಿದ್ದ. ತಂದೆ ಅದಕ್ಕೆ ಒಪ್ಪಿಗೆಯನ್ನೂ ಸೂಚಿಸಿದ್ದರು. ಇಲ್ಲಿಯವರೆಗೂ ಸಮಸ್ಯೆಯಿಲ್ಲದೇ ಎಲ್ಲವೂ ಸುಸೂತ್ರವಾಗಿಯೇ ಸಾಗಿತ್ತು.

ಪೊಲೀಸರ ಪ್ರವೇಶ

ಪಾಕಿಸ್ತಾನದ ಮಹಿಳೆ ತನ್ನ ಮಕ್ಕಳೊಂದಿಗೆ ಇಲ್ಲಿ ನೆಲೆಸಿದ್ದಾಳೆ ಎನ್ನುವ ಮಾಹಿತಿ ಗ್ರೇಟರ್‌ ನೋಯಿಡಾ ಪೊಲೀಸರಿಗೆ ತಿಳಿಯುತ್ತಿದ್ದಂತೆ ಇಬ್ಬರನ್ನೂ ವಶಕ್ಕೆ ಪಡೆದರು. ಬಂಧನವೂ ಆಯಿತು. ಹದಿನೈದು ದಿನದ ನಂತರ ಇಬ್ಬರ ಬಿಡುಗಡೆಯೂ ಆಯಿತು. ಈಗ ಪ್ರಕರಣದ ವಿಚಾರಣೆಯೂ ನಡೆದಿದೆ.

ವಾಪಾಸಾಗಲ್ಲ ಎಂದ ಸೀಮಾ

ನಾನು ಸಚಿನ್‌ ಪಬ್ಜೀಯಿಂದ ಸ್ನೇಹಿತರಾದೆವು. ಅದು ಪ್ರೇಮಕ್ಕೆ ತಿರುಗಿ ಮದುವೆ ತೀರ್ಮಾನ ಮಾಡಿಕೊಂಡು ನೇಪಾಳದಲ್ಲಿ ಎಲ್ಲಾ ಪ್ರಕ್ರಿಯೆ ಮುಗಿಸಿಕೊಂಡೆವು. ಇಲ್ಲಿ ನನಗೆ ಹಾಗೂ ನನ್ನ ಮಕ್ಕಳಿಗೆ ಒಳಿತಾಗುತ್ತದೆ ಎಂದು ಎಲ್ಲವನ್ನೂ ಬಿಟ್ಟು ಬಂದೆ. ಹಿಂದೂವಾಗಿ ಪರಿವರ್ತನೆಯೂ ಆಗಿ ಬದುಕು ನಡೆಸುತ್ತಿದ್ದೇನೆ. ಇಲ್ಲಿಯೇ ಸಚಿನ್‌ ಜತೆಗೆ ಸಾಯುತ್ತೇನೆಯೇ ವಿನಃ ಯಾವುದೇ ಕಾರಣಕ್ಕೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ. ನನ್ನನ್ನು ವಾಪಾಸ್‌ ಕಳುಹಿಸಬೇಡಿ. ನನಗೆ ಭಾರತೀಯ ಪೌರತ್ವವನ್ನು ಇಲ್ಲಿನ ಸರ್ಕಾರ ನೀಡಿ ಸಹಕರಿಸಬೇಕು ಎನ್ನುವ ವಿನಂತಿಯನ್ನು ಮಾಡುವಾಗ ಸೀಮಾ ಹೈದರ್‌ ಕಣ್ಣೀರು ಹರಿಯುತ್ತಲೇ ಇತ್ತು.

ಮೋದಿ ಮಧ್ಯೆ ಪ್ರವೇಶಿಸಲಿ

ನಾವು ಆಕೆ ಹಾಗೂ ಆಕೆಯ ಮಕ್ಕಳನ್ನು ನಮ್ಮವರು ಎಂದೇ ತಿಳಿದುಕೊಂಡು ಬದುಕುತ್ತಿದ್ದೇವೆ. ಆರಂಭದಲ್ಲಿದ್ದ ತೊಡಕು ಬಗೆಹರಿದು ಕುಟುಂಬದವರು, ಊರವರೂ ಒಪ್ಪಿಕೊಂಡಿದ್ದಾರೆ. ಕಾನೂನಿನ ತೊಡಕು ಇದ್ದು ಅದನ್ನು ಬಗೆಹರಿಸಿಕೊಳ್ಳುವ ವಿಶ್ವಾಸವಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಈ ವಿಚಾರವಾಗಿ ಮಧ್ಯಪ್ರವೇಶಿಸಬೇಕು ಎನ್ನುವುದು ಸಚಿನ್‌ ಮೀನಾ ಮನವಿ.

ವಕೀಲರು ಹೇಳುವುದೇನು

ದಂಪತಿ ವಕೀಲ ಹೇಮಂತ್‌ ಕೃಷ್ಣ ಪರಾಶರ್‌ ಹೇಳುವ ಪ್ರಕಾರ, ಇಬ್ಬರೂ ಮಾರ್ಚ್‌ನಲ್ಲೇ ನೇಪಾಳದಲ್ಲಿ ಮದುವೆಯಾಗಿದ್ಧಾರೆ. ಸೀಮಾ ಪಾಕಿಸ್ತಾನಕ್ಕೆ ನೇಪಾಳಕ್ಕೆ ತೆರಳಿ ಅಲ್ಲಿಂದ ಭಾರತಕ್ಕೆ ಬಂದಿದ್ದಾಳೆ. ನೇಪಾಳದಿಂದ ಭಾರತಕ್ಕೆ ಬರುವವರಿಗೆ ಯಾವುದೇ ಪಾಸ್‌ಪೋರ್ಟ್‌ ಅಥವಾ ವೀಸಾ ಬೇಡ. ಕಾನೂನು ಚೌಕಟ್ಟಿನಡಿ ಅವರಿಗೆ ಸಹಾಯ ಮಾಡುವಂತೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆದಿದೆ.

ಆದರೆ ಈ ಕುರಿತು ಮೊಕದ್ದಮೆ ದಾಖಲಿಸಿಕೊಂಡಿರುವ ಗ್ರೇಟರ್‌ ನೋಯಿಡಾ ಪೊಲೀಸರು ಮಾತ್ರ ಆಕೆ ಇಲ್ಲಿ ಹೆಚ್ಚು ದಿನ ಇರಲು ಕಾನೂನಿನಲ್ಲಿ ಅವಕಾಶವಿಲ್ಲ. ಪಾಕಿಸ್ತಾನಕ್ಕೆ ವಾಪಾಸಾಗಬೇಕು ಎನ್ನುವ ಒತ್ತಡ ಹೇರುತ್ತಲೇ ಇದ್ದಾರೆ.

ಆನ್‌ಲೈನ್‌ ಬೆದರಿಕೆ

ಈಗ ಈ ಇಬ್ಬರ ಪ್ರೇಮ ಕಹಾನಿ ಬರೀ ಇಬ್ಬರು, ಕುಟುಂಬದ ನಡುವೆ ಉಳಿದಿಲ್ಲ. ಭಾರತ ಹಾಗೂ ಪಾಕಿಸ್ತಾನ ಎನ್ನುವ ಬದ್ದವೈರಿ ದೇಶಗಳ ನಡುವಿನ ವಿಷಯವಾಗಿಯು ತಿರುವು ಪಡೆದುಕೊಳ್ಳುತ್ತಿದೆ.

‌ಇಬ್ಬರ ಪ್ರೇಮವಿವಾಹದ ಕುರಿತು ವರದಿಗಳು ಎರಡೂ ದೇಶದ ಟಿವಿಗಳಲ್ಲೂ ಪ್ರಸಾರವಾಗಿದೆ. ಆನಂತರ ಆಕೆಗೆ ಸಾಕಷ್ಟು ಆನ್‌ಲೈನ್‌ ಬೆದರಿಕೆ ಕರೆಗಳೂ ಬಂದಿವೆ. ಆದರೂ ಆಕೆ ಜಗ್ಗುತ್ತಿಲ್ಲ.

ಸೀಮಾ ವಿವಾಹವಾಗಿ ಭಾರತೀಯ ವ್ಯಕ್ತಿಯೊಂದಿಗೆ ನೆಲೆಸಿರುವುದು ಆಕೆಯ ಮೂಲ ಪಾಕಿಸ್ತಾನದ ಪೂರ್ವ ಕರಾಚಿಯ ಧನಿ ಭಕ್ಷ್‌ ಗ್ರಾಮಕ್ಕೂ ತಿಳಿದಿದೆ. ಪತಿಗೂ ಮಾಹಿತಿ ಗೊತ್ತಾಗಿದೆ. ಊರಲ್ಲಿ ಪತಿಗೆ ದಂಡವನ್ನೂ ವಿಧಿಸಲಾಗಿದೆ.

ಪತಿಯಿಂದಲೂ ಮನವಿ

ಆಗಲೇ ಪ್ರೇಮ ವಿವಾಹವಾಗಿದ್ದೆವು. ಉದ್ಯೋಗ ಅರಸಿ ಸೌದಿ ಅರೆಬಿಯಾಕ್ಕೆ ನಾನು ಹೊರಟೆ. ಮಕ್ಕಳೊಂದಿಗೆ ಸೀಮಾ ಇಲ್ಲಿಯೇ ಇದ್ದಳು. ಈಗ ಆಕೆ ಮಕ್ಕಳೊಂದಿಗೆ ಹಿಂದಿರುಗಿದರೆ ಸಾಕು. ಭಾರತ ಹಾಗೂ ಪಾಕಿಸ್ತಾನದ ಆಡಳಿತ ನನ್ನ ಪತಿ ಹಾಗೂ ಮಕ್ಕಳನ್ನು ವಾಪಾಸ್‌ ಕರೆಯಿಸಿಕೊಳ್ಳಲು ಸಹಕರಿಸಬೇಕು ಎನ್ನುವ ಮನವಿಯನ್ನು ಪತಿ ಗುಲಾಮ್‌ ಹೈದರ್‌ ಮಾಡುತ್ತಿದ್ದಾನೆ.

ಬೆದರಿಕೆ ಕರೆ ಬಂತು

ಸೀಮಾ- ಸಚಿನ್‌ ನೆಲೆಸಿರುವ ಪ್ರದೇಶದಲ್ಲಿ ಇಬ್ಬರೂ ಜನಪ್ರಿಯರೂ ಆಗಿದ್ದಾರೆ. ಅವರಿಬ್ಬರೊಂದಿಗೆ ಸ್ಥಳೀಯರು ಸೆಲ್ಫಿ ತೆಗೆಸಿಕೊಂಡು ಖುಷಿ ಹಂಚಿಕೊಳ್ಳುತ್ತಿದ್ದಾರೆ. ಪಾಕಿಸ್ತಾನದಲ್ಲಿರುವ ಸೀಮಾ ತವರಿನಲ್ಲಿ ಕೆಲವರು ಆಕೆ ವಾಪಾಸ್‌ ಬರುವುದು ಬೇಡ ಎನ್ನುವ ಅಭಿಪ್ರಾಯವನ್ನೇ ವ್ಯಕ್ತಪಡಿಸುತ್ತಿದ್ದಾರೆ.

ಇಷ್ಟೆಲ್ಲಾ ಸನ್ನಿವೇಶಗಳನ್ನು ಸೃಷ್ಟಿಸಿರುವ ಸೀಮಾ-ಸಚಿನ್‌ ಪ್ರೇಮ್‌ ಕಹಾನಿಗೆ ಈಗ ಬಾಂಬ್‌ ಕರೆಯ ತಿರುವು ಸಿಕ್ಕಿದೆ. ಪಾಕಿಸ್ತಾನದಿಂದ ಮುಂಬೈ ಪೊಲೀಸರಿಗೆ ಕರೆ ಮಾಡಿರುವವರು ಬೆದರಿಕೆ ಹಾಕಿದ್ದಾರೆ. ಚಲನಚಿತ್ರದಂತೆಯೇ ತಿರುವು ಪಡೆದುಕೊಳ್ಳುತ್ತಿರುವ ಈ ರಿಯಲ್‌ ಸ್ಟೋರಿಯಲ್ಲಿ ಮುಂದೇನಾಗುತ್ತದೋ.. ನೋಡೋಣ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ