logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Parliament Attack: ಸಂಸತ್ ದಾಳಿ ದಿನ ಲೋಕಸಭೆಯಲ್ಲಿ ಭದ್ರತಾ ಲೋಪ ಇಬ್ಬರ ಬಂಧನ, ಈ ಕೃತ್ಯದಲ್ಲಿ ಭಾಗಿಯಾದವರೆಷ್ಟು, ಏನು ನಡೆಯಿತು

Parliament Attack: ಸಂಸತ್ ದಾಳಿ ದಿನ ಲೋಕಸಭೆಯಲ್ಲಿ ಭದ್ರತಾ ಲೋಪ ಇಬ್ಬರ ಬಂಧನ, ಈ ಕೃತ್ಯದಲ್ಲಿ ಭಾಗಿಯಾದವರೆಷ್ಟು, ಏನು ನಡೆಯಿತು

HT Kannada Desk HT Kannada

Dec 13, 2023 03:12 PM IST

google News

ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪ ನಡೆದ ಸಂದರ್ಭ

  • ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದಾಗ ಭದ್ರತಾ ಲೋಪ ನಡೆಸಿದ ಪ್ರಕರಣದಲ್ಲಿ ಭಾಗಿಯಾದವರು ಎಷ್ಟು ಜನ ಎಂದು ಇನ್ನೂ ಬಹಿರಂಗವಾಗಿಲ್ಲ. ನಾಲ್ವರು ಪೊಲೀಸರ ವಶದಲ್ಲಿದ್ದು ವಿಚಾರಣೆ ನಡೆದಿದೆ. 

ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪ ನಡೆದ ಸಂದರ್ಭ
ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪ ನಡೆದ ಸಂದರ್ಭ

ನವದೆಹಲಿ: ಲೋಕಸಭೆ ಕಲಾಪ ನಡೆಯುತ್ತಿರುವಾಗಲೇ ಇಂದು (ಡಿ.13) ವೀಕ್ಷಕರ ಗ್ಯಾಲರಿಯಿಂದ ಒಬ್ಬ ಯುವಕ ಕಲಾಪ ಸ್ಥಳಕ್ಕೆ ನುಗ್ಗಿ ಹಳದಿ ಗ್ಯಾಸ್ ಚೆಲ್ಲಿ ಗದ್ದಲ ಉಂಟುಮಾಡಿದ ಕೃತ್ಯ ಯೋಜಿತ ಕೃತ್ಯವಾಗಿದ್ದು ಭಾಗಿಯಾದವರು ಯಾರೆಲ್ಲ ಎಂಬ ಕುತೂಹಲ ಕೆರಳಿಸಿದೆ.

ಬಂಧಿತ ಅಮೋಲ್ ಶಿಂಧೆ (25) ಕಲಾಪ ಸ್ಥಳಕ್ಕೆ ನುಗ್ಗಿ ದಾಂದಲೆ ನಡೆಸಿದ್ದ. ಈತನ ಜತೆಗಿದ್ದ ಮಹಿಳೆ ನೀಲಂ ಕೌರ್‌ (42) ಕೂಡ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಗಮನಸೆಳೆದಿದ್ದರು.

ಏನು ನಡೆಯಿತು ಲೋಕಸಭೆಯಲ್ಲಿ…

ಸದನದವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರತ್ಯಕ್ಷ ದರ್ಶಿಗಳು ಮಾಧ್ಯಮಗಳಿಗೆ ನೀಡಿದ ಹೇಳಿಕೆ ಪ್ರಕಾರ, ನಾಲ್ವರು ಜತೆಗೆ ಕುಳಿತಿದ್ದರು. ಈ ಪೈಕಿ ಇಬ್ಬರು ಯುವಕರು ಬಿಳಿ ಶೂ ಧರಿಸಿದ್ದರು. ಒಬ್ಬ ಯುವಕ 15 ಅಡಿ ಎತ್ತರದ ವೀಕ್ಷಕರ ಗ್ಯಾಲರಿಯಿಂದ ಲೋಕಸಭೆ ಕಲಾಪ ಸ್ಥಳಕ್ಕೆ ಜಿಗಿದು ಹೋಗಿದ್ದ.

ಅಲ್ಲಿ ಸದಸ್ಯರು ಕುಳಿತಿದ್ದ ಕುರ್ಚಿ, ಟೇಬಲ್‌ಗಳ ಮೇಲೆ ಜಿಗಿದು ಮುನ್ನುಗ್ಗಲು ಪ್ರಯತ್ನಿಸಿದಾಗ ಸದಸ್ಯರು ಆತನನ್ನು ತಡೆದು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಈತನ ಜತೆಗಿದ್ದ ಮಹಿಳೆಯನ್ನೂ ವೀಕ್ಷಕರ ಗ್ಯಾಲರಿಯಿಂದ ಭದ್ರತಾ ಸಿಬ್ಬಂದಿ ಕರೆದೊಯ್ದಿದ್ದಾರೆ. ಆ ಸಂದರ್ಭದಲ್ಲಿ ಆಕೆ ಡಿಕ್ಟೇಟರ್ ಶಿಪ್‌ ನಡೆಯಲ್ಲ ಎಂದು ಹಿಂದಿಯಲ್ಲಿ ಘೋಷಣೆ ಕೂಗುತ್ತ ಹೋದ ದೃಶ್ಯ ಬಹಿರಂಗವಾಗಿದೆ. ನೀಲಂ ಕೌರ್ ಹರಿಯಾಣದ ಹಿಸ್ಸಾರ್‌ ನಿವಾಸಿ. ಅಮೋಲ್ ಶಿಂಧೆ ಮಹಾರಾಷ್ಟ್ರದ ಲಾತೋರ್‌ನ ನಿವಾಸಿ.

ಘಟನೆಯಲ್ಲಿ ಭಾಗಿಯಾದವರು ಎಷ್ಟು ಜನ

ಅಮೋಲ್ ಶಿಂಧೆ ಮತ್ತು ನೀಲಂ ಕೌರ್ ಹೊರತಾಗಿ ಇನ್ನೂ ಕೆಲವರು ಈ ತಂಡದಲ್ಲಿದ್ದರು ಎಂದು ಹೇಳಲಾಗುತ್ತಿದೆ. ನಾಲ್ವರು ಸಂಸತ್ ಒಳಗೆ ಹೋಗಿದ್ದರೆ, ಇನ್ನು ಕೆಲವರು ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು ಎಂದು ವರದಿಗಳು ಹೇಳುತ್ತಿವೆ.

ಈ ನಡುವೆ, ಸಾಗರ್ ಶರ್ಮಾ ಮತ್ತು ಮೈಸೂರಿನ ಮನೋರಂಜನ್‌ ಇನ್ನಿಬ್ಬರು ಎಂದು ಮಾಧ್ಯಮ ವರದಿ ಹೇಳಿವೆ.

ಪ್ರತಿಭಟಿಸುತ್ತಿದ್ದವರನ್ನು ಮತ್ತು ಇನ್ನೂ ಕೆಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರು ಮತ್ತು ವಶಕ್ಕೆ ತೆಗೆದುಕೊಂಡವರ ಸಂಖ್ಯೆ ಇನ್ನೂ ಬಹಿರಂಗವಾಗಿಲ್ಲ.

ಭದ್ರತಾ ಲೋಪ ಕುರಿತು ಚರ್ಚೆ ಬೇಡ, ತನಿಖೆ ನಡೆಯುತ್ತಿದೆ ಎಂದ ಸ್ಪೀಕರ್, ಕಲಾಪ ಮುಂದುವರಿಕೆ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅಪರಾಹ್ನ 2 ಗಂಟೆಗೆ ಮತ್ತೆ ಕಲಾಪ ಶುರುಮಾಡಿದ್ದು, ಕಲಾಪದಲ್ಲಿ ಭದ್ರತಾ ಲೋಪದ ಕುರಿತು ಚರ್ಚೆ ಮಾಡುವ ಅಗತ್ಯ ಇಲ್ಲ. ತನಿಖೆ ನಡೆಯುತ್ತಿದೆ ಎಂದು ಹೇಳಿ ಕಲಾಪ ಮುಂದುವರಿಸಿದೆ.

ಅಲ್ಲದೆ, ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಸಂಸತ್‌ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂಸದರ ಸಭೆ ಕರೆದು ಎಲ್ಲರ ಅಹವಾಲು ಆಲಿಸುವುದಾಗಿ ಸ್ಪೀಕರ್ ಓಂ ಬಿರ್ಲಾ ಹೇಳಿದರು. ಸಂಸತ್‌ ಕಡೆಯಿಂದಲೇ ಈ ಪ್ರಕರಣದ ತನಿಖೆ ನಡೆಯಲಿದೆ ಎಂದು ಭರವಸೆ ನೀಡಿದರು.

2001ರ ಡಿಸೆಂಬರ್ 13ರಂದು ನಡೆದಿತ್ತು ಸಂಸತ್ ಮೇಲೆ ದಾಳಿ

ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳ ಭಯೋತ್ಪಾದಕರು 2001 ರಲ್ಲಿ ಇದೇ ದಿನ ಸಂಸತ್ತಿನ ಸಂಕೀರ್ಣದ ಮೇಲೆ ದಾಳಿ ಮಾಡಿ ಒಂಬತ್ತು ಜನರನ್ನು ಕೊಂದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ