Paytm: 1 ಪ್ಯಾನ್ ನಡಿ 1,000 ಖಾತೆ; ಇದು ಪೇಟಿಎಂ ವಹಿವಾಟಿನ ಜಾಲ, ಇಡಿ ವಿಚಾರಣೆ ಸಾಧ್ಯತೆ, ಗ್ರಾಹಕರ ವಹಿವಾಟಿಗೆ ಇಲ್ಲ ಅಡ್ಡಿ
Feb 04, 2024 10:21 AM IST
ಪೇಟಿಎಂ ಕೆಲ ವಹಿವಾಟಿನ ಮೇಲೆ ನಿರ್ಬಂಧ ಹೇರಲಾಗಿದ್ದು, ತನಿಖೆಯಾಗುವ ಸಾಧ್ಯತೆಗಳಿವೆ.
- ಪೇಟಿಎಂ ವಹಿವಾಟಿನಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದ ನಂತರ ಆರ್‌ಬಿಐ ಕೆಲವು ನಿರ್ಬಂಧಗಳನ್ನು ಹೇರಿದೆ. ಪೇಟಿಎಂ ಅಕ್ರಮ ಹಣ ವಹಿವಾಟಿನಲ್ಲಿ ತೊಡಗಿರುವ ಶಂಕೆ ಹಿನ್ನೆಲೆಯಲ್ಲಿ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಸದ್ಯಕ್ಕೆ ಪೇಟಿಎಂ ಗ್ರಾಹಕರ ವಹಿವಾಟಿಗೆ ಯಾವುದೇ ಅಡ್ಡಿಯಿಲ್ಲ.
ದೆಹಲಿ: ಒಂದೇ ಪ್ಯಾನ್ ಕಾರ್ಡ್‌ನಲ್ಲಿ ಒಂದು ಸಾವಿರ ಬ್ಯಾಂಕ್ ಖಾತೆಗಳ ವಹಿವಾಟು, ಸೂಕ್ತ ಕೆವೈಸಿ ಇಲ್ಲದ ಖಾತೆಗಳು, ಇದರಡಿಯೇ ಕೋಟ್ಯಂತರ ರೂ. ವಹಿವಾಟು ಮಾಡಿರುವ ಆರೋಪ. ಅಸಮರ್ಪಕ ಮಾಹಿತಿಗಳ ಸಲ್ಲಿಕೆ ಕಾರಣದಿಂದ ಕೋಟ್ಯಂತರ ಭಾರತೀಯರ ನಿತ್ಯ ವಹಿವಾಟಿನ ಸಂಗಾತಿ ಪೇಟಿಎಂ ಸಂಕಷ್ಟಕ್ಕೆ ಸಿಲುಕಿದೆ. ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್( RBI) ಕೂಡ ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ. ಈ ಖಾತೆಗಳನ್ನು ಬಳಸಿ ಕೋಟ್ಯಂತರ ರೂ. ಅಕ್ರಮ ಹಣ ವರ್ಗಾವಣೆ ಶಂಕೆ ವ್ಯಕ್ತವಾಗಿದ್ದು, ಜಾರಿ ನಿರ್ದೇಶನಾಲಯ( ED) ವಿಚಾರಣೆ ನಡೆಸುವ ಸಾಧ್ಯತೆಗಳು ದಟ್ಟವಾಗಿವೆ. ಫೆ. 29ರೊಳಗೆ ವಿಚಾರಣೆ ಪ್ರಕ್ರಿಯೆಗಳು ಮುಗಿಯುವ ಸಾಧ್ಯತೆ ಕಡಿಮೆ ಇರುವುದರಿಂದ ಪೇಟಿಎಂನ ಇನ್ನಷ್ಟು ಸೇವೆಗಳ ಮೇಲೆ ನಿರ್ಬಂಧ ಹೇರಬಹುದು ಎನ್ನಲಾಗುತ್ತಿದೆ.
2010 ರಲ್ಲಿ ಆರಂಭಗೊಂಡು 14 ವರ್ಷದೊಳಗೆ ಜನರ ವಹಿವಾಟಿನ ಒಡನಾಡಿಯಾಗಿರುವ ಪೇಟಿಎಂ ಇಡೀ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದೆ. ದೂರುಗಳು ಬಂದ ಹಿನ್ನೆಲೆಯಲ್ಲಿ ಕೆಲವು ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಲಾಗಿದೆ.
ಹಲವಾರು ಅನುಮಾನಗಳು
ದೂರುಗಳ ಹಿನ್ನೆಲೆಯಲ್ಲಿ ಮಾಹಿತಿಯನ್ನು ಕಲೆ ಹಾಕಿದಾಗ ಸಾಕಷ್ಟು ಚಟುವಟಿಕೆಗಳು ಅನಧಿಕೃತವಾಗಿ ನಡೆದಿರುವುದು ಕಂಡು ಬಂದಿದೆ. ಆರ್‌ಬಿಐ ಹಾಗೂ ಆಡಿಟರ್‌ಗಳು ಕೂಡ ಮಾಹಿತಿ ಕಲೆ ಹಾಕಿದ್ದು, ಸಾಕಷ್ಟು ಅಕ್ರಮದ ವಿಚಾರ ಬಯಲಾಗಿದೆ. ಒಂದು ಪ್ಯಾನ್ ಕಾರ್ಡ್ ಬಳಸಿ ಒಂದು ಸಾವಿರ ಖಾತೆಗಳನ್ನು ನಿರ್ವಹಿಸಿರುವುದು. ಕೆಲವಷ್ಟು ಖಾತೆಗಳ ಕೆವೈಸಿ ಮಾಹಿತಿಯೇ ಇಲ್ಲದಿರುವುದು ಕಂಡು ಬಂದಿದೆ. ಇದರಿಂದ ಪೇಟಿಎಂ ಅಕ್ರಮ ಹಣ ವಹಿವಾಟಿಗೆ ಈ ಖಾತೆಗಳನ್ನು ಬಳಸಿಕೊಂಡಿರುವ ಶಂಕೆ ಎದುರಾಗಿದೆ.
ಈ ಕುರಿತು ಆರ್‌ಬಿಐ ಈಗಾಗಲೇ ಜಾರಿ ನಿರ್ದೇಶನಾಲಯ, ಕೇಂದ್ರ ಗೃಹ ಸಚಿವಾಲಯ ಹಾಗೂ ಪ್ರಧಾನಮಂತ್ರಿಗಳ ಕಚೇರಿಗೂ ವಿವರವಾದ ವರದಿಯನ್ನು ಸಲ್ಲಿಸಿದ್ದು, ಹಣ ವಹಿವಾಟಿನ ಕುರಿತು ಇರುವ ಅನುಮಾನಗಳನ್ನು ಉಲ್ಲೇಖಿಸಿದೆ ಎನ್ನಲಾಗುತ್ತಿದೆ.
ವಹಿವಾಟು ಮುಚ್ಚಿಟ್ಟ ಶಂಕೆ
ಪೇಟಿಎಂ ನಡೆಸಿರುವ ಕೆಲವು ದೊಡ್ಡ ಮೊತ್ತ ವಹಿವಾಟಿನ ಮಾಹಿತಿಯನ್ನೇ ಬಹಿರಂಗಪಡಿಸಿಲ್ಲ. ಪೇಟಿಎಂ ಸಮೂಹ ಹಾಗೂ ಅದರೊಂದಿಗೆ ಒಡನಾಟ ಹೊಂದಿರುವ ಹಲವು ಸಂಸ್ಥೆಗಳೊಂದಿಗೆ ಹಣದ ವಹಿವಾಟು ನಡದಿದ್ದರೂ ಅದರ ಮಾಹಿತಿಯನ್ನು ನೀಡಿಲ್ಲ ಎನ್ನುವ ಅಂಶವನ್ನು ಆರ್‌ಬಿಐ ವರದಿಯಲ್ಲಿ ಉಲ್ಲೇಖಿಸಿದೆ. ಅದೂ ಅಲ್ಲದೇ ಕೆಲವು ಶಿಷ್ಟಾಚಾರಗಳು, ಸರ್ಕಾರದ ಸೂಚನೆಗಳನ್ನು ಪಾಲಿಸಿಲ್ಲ. ಅದರಲ್ಲೂ ಪೇಟಿಎಂ ಹಾಗೂ ಅದರ ಮಾತೃ ಸಂಸ್ಥೆ ಒನ್ 97 ಕಮ್ಯುನಿಕೇಷನ್ ಲಿಮಿಟೆಡ್ ನಡುವಿನ ಸಂಪರ್ಕಗಳಲ್ಲಿ ವ್ಯತ್ಯಾಸಗಳು ಕಂಡು ಬರುತ್ತಿವೆ ಎನ್ನುವುದನ್ನು ವರದಿಯಲ್ಲಿ ತಿಳಿಸಲಾಗಿದೆ.
ಈ ಕುರಿತು ಸುದ್ದಿಸಂಸ್ಥೆ ರಾಯಿಟರ್ ಜತೆ ಮಾತನಾಡಿರುವ ಕೇಂದ್ರ ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರ, ಪೇಟಿಎಂ ವಹಿವಾಟಿನಲ್ಲಿ ಅಕ್ರಮ ಚಟುವಟಿಕೆಗಳು ಇರುವುದು ಸಾಕ್ಷಿ ಸಿಕ್ಕರೆ ಖಂಡಿತವಾಗಿಯೂ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಆರ್‌ಬಿಐ ಆದೇಶ ಏನು
ಫೆ.29ರ ನಂತರ ಆನ್‌ಲೈನ್ ಪಾವತಿ ಸೇವಾ ಸಂಸ್ಥೆ ಪೇಟಿಎಂ ಪೇಮೆಂಟ್ ಬ್ಯಾಂಕ್‌ನ ಎಲ್ಲ ಸೇವೆಗಳು ರದ್ದುಗೊಳ್ಳಲಿವೆ ಎಂದು ಆರ್‌ಬಿಐ ಈಗಾಗಲೇ ತಿಳಿಸಿದೆ. ವಾಲೆಟ್ ಹಾಗೂ ಫಾಸ್ಟ್‌ಟ್ಯಾಗ್ ಒಳಗೊಂಡು ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಪೇಟಿಎಂಗೆ ಆರ್‌ಬಿಐ ಆದೇಶಿಸಿದೆ. 2022 ಮಾರ್ಚ್ 11ರಲ್ಲೇ ನೂತನ ಗ್ರಾಹಕರನ್ನು ಹೊಂದುವುದನ್ನು ನಿಲ್ಲಿಸಬೇಕು ಎಂದು ಪೇಟಿಎಂ ಪೇಮೆಂಟ್ ಬ್ಯಾಂಕ್ ಸಂಸ್ಥೆಗೆ ತಿಳಿಸಿರುವುದನ್ನು ಆರ್‌ಬಿಐ ಉಲ್ಲೇಖಿಸಿದೆ.
ಬ್ಯಾಂಕ್‌ನಲ್ಲಿ ನಿರಂತರ ಉಲ್ಲಂಘನೆಗಳು ಮುಂದುವರೆದ ಕಾರಣದಿಂದ ಮಹತ್ವದ ಮೇಲ್ವಿಚಾರಣಾ ಕಾಳಜಿಗಳಿಗಾಗಿ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಲಾಗಿದೆ. ಬಾಹ್ಯ ಸಂಸ್ಥೆಗಳಿಂದ ಸಮಗ್ರ ಲೆಕ್ಕಪರಿಶೋಧನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೇಟಿಎಂನ ಪೇಮೆಂಟ್ ಬ್ಯಾಂಕ್‌ನ ಪಾವತಿ ಸೇವಾ ಕಾರ್ಯಚಟುವಟಿಕೆಗಳ ಬಗ್ಗೆ ಆರ್‌ಬಿಐಆತಂಕ ವ್ಯಕ್ತಪಡಿಸಿದೆ.
ಪೇಟಿಎಂನ ಪೇಮೆಂಟ್ಸ್ ಬ್ಯಾಂಕ್ಗೆ ಮಾತ್ರ ಹಾಕಲಾಗಿರುವ ನಿರ್ಬಂಧ. ಪೇಟಿಎಂ ಆ್ಯಪ್ನಲ್ಲಿರುವ ಬೇರೆಲ್ಲಾ ಯುಪಿಐ ವಹಿವಾಟು ಸೇವೆಗಳನ್ನು ಪಡೆಯಬಹುದಾಗಿದೆ. ಪೇಟಿಎಂ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು. ವಿದ್ಯುತ್, ನೀರು ಇತ್ಯಾದಿ ಬಿಲ್ಗಳನ್ನು ಮಾಮೂಲಿಯಾಗಿ ನೀವು ಪಾವತಿಸಬಹುದು.ಬಡ್ಡಿ ಭತ್ಯೆ, ಕ್ಯಾಶ್‌ಬ್ಯಾಕ್ ಅಥವಾ ಮರುಪಾವತಿ ಪಡೆಯುವ ಸೇವೆಗಳನ್ನು ಒಳಗೊಂಡು ಲಭ್ಯವಿರುವ ಬಾಕಿಯನ್ನು ಬಳಸಲು ವಿನಾಯಿತಿ ನೀಡಲಾಗಿದೆ.
ಎಲ್ಲ ಸರಿ ಹೋಗಲಿದೆ: ವಿಜಯಶೇಖರ್
ಇಡೀ ಪ್ರಕ್ರಿಯೆಗಳ ಕುರಿತು ಪ್ರತಿಕ್ರಿಯಿಸಿರುವ ಪೇಟಿಎಂ ಸಂಸ್ಥಾಪಕ ವಿಜಯಶೇಖರ್ ಶರ್ಮ, ಪೇಟಿಎಂ ಸಹಜವಾಗಿ ಕೆಲಸ ಮಾಡುತ್ತಿದೆ. ಕೆಲವು ವಹಿವಾಟಿನ ವಿಚಾರವಾಗಿ ಮಾಹಿತಿ ವಿನಿಮಯ ನಡೆದಿದ್ದು, ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ. ಫೆ. 29ರ ನಂತರವೂ ಯಥಾರೀತಿ ವಹಿವಾಟು ಮುಂದುವರಿಯಲಿದೆ ಎಂದು ಹೇಳಿದ್ದಾರೆ.