ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಗೆ ಭಾರತ ರತ್ನ; ಭಾರತದ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯ ಎಂದ ಪ್ರಧಾನಿ ನರೇಂದ್ರ ಮೋದಿ
Feb 03, 2024 12:54 PM IST
ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಆಡ್ವಾಣಿಗೆ ಭಾರತ ರತ್ನ ಘೋಷಣೆಯಾಗಿದೆ. ಭಾರತದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಸ್ಮರಣೀಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Bharat Ratna for Lal Krishna: ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಗೆ ಭಾರತ ರತ್ನ ಘೋಷಣೆಯಾಗಿದೆ. ಭಾರತದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಸ್ಮರಣೀಯ ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಹೇಳಿದರು.
ನವದೆಹಲಿ: ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು (Bharat Ratna for Lal Krishna) ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದರು.
"ಶ್ರೀ ಎಲ್.ಕೆ. ಅಡ್ವಾಣಿಜಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂಬ ಸುದ್ದಿ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಈ ಗೌರವವನ್ನು ಪಡೆದಿರುವುದಕ್ಕೆ ಅವರನ್ನು ಅಭಿನಂದಿಸಿದೆ. ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜನೀತಿಜ್ಞರಲ್ಲಿ ಒಬ್ಬರಾದ ಅವರು ಭಾರತದ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ" ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.
ಬಿಜೆಪಿಯ ಸ್ಥಾಪಕ ಸದಸ್ಯ ಎಲ್‌ಕೆ ಅಡ್ವಾಣಿ ಅವರು ರಾಮ ಜನ್ಮಭೂಮಿ ಚಳವಳಿಯ ಮುಖವಾಗಿದ್ದರು. ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವುದರಿಂದ ಹಿಡಿದು ಭಾರತದ ಉಪ ಪ್ರಧಾನಿಯಾಗಿ ರಾಷ್ಟ್ರ ಸೇವೆಗೆ, ರಾಷ್ಟ್ರದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಅವರು ನಮ್ಮ ಗೃಹ ಸಚಿವರಾಗಿ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವರಾಗಿಯೂ ಕೆಲಸ ಮಾಡಿದ್ದರು. ಅವರ ಸಂಸದೀಯ ಮಧ್ಯಸ್ಥಿಕೆಗಳು ಯಾವಾಗಲೂ ಅನುಕರಣೀಯ. ಅವುಗಳು ಬಹಳಷ್ಟು ಒಳನೋಟಗಳಿಂದ ತುಂಬಿವೆ ಎಂದು ಪ್ರಧಾನಿ ಹೇಳಿದರು.
ಎಲ್‌ಕೆ ಅಡ್ವಾಣಿ ಅವರ ರಾಜಕೀಯ ಬದುಕಿನ ಪಥ
ಅಡ್ವಾಣಿ ಅವರು 1970 ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ತಮ್ಮ ಸಂಸದೀಯ ಪಟುವಾಗಿ ರಾಜನೀತಿಜ್ಞರಾಗಿ ಕೆಲಸ ಶುರುಮಾಡಿದರು. ಅವರು 1989 ರ ಲೋಕಸಭೆ ಚುನಾವಣೆಯಲ್ಲಿ ನವದೆಹಲಿಯಿಂದ ಸ್ಪರ್ಧಿಸಿ ಮೋಹಿನಿ ಗಿರಿ ಅವರನ್ನು ಸೋಲಿಸಿದರು.
ಅವರು 1991ರಲ್ಲಿ, ಗುಜರಾತ್‌ನ ಗಾಂಧಿ ನಗರ ಮತ್ತು ನವದೆಹಲಿ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡನ್ನೂ ಗೆದ್ದರು. ತರುವಾಯ ಅವರು ಗಾಂಧಿ ನಗರವನ್ನು ಪ್ರತಿನಿಧಿಸಲು ತೀರ್ಮಾನಿಸಿ, ನವದೆಹಲಿಯನ್ನು ಬಿಟ್ಟರು. ಅವರು ಕೊನೆಯದಾಗಿ 2014 ರ ಚುನಾವಣೆಯಲ್ಲಿ ಗಾಂಧಿನಗರದಿಂದಲೇ ತಮ್ಮ ಕೊನೆಯ ಚುನಾವಣೆ ಎದುರಿಸಿದರು.
1990 ರ ದಶಕದ ಆರಂಭದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕಾಗಿ ರಥಯಾತ್ರೆ ನಡೆಸುವ ಮೂಲಕ ಅಡ್ವಾಣಿ ಬಿಜೆಪಿಯನ್ನು ರಾಷ್ಟ್ರೀಯ ರಾಜಕಾರಣದ ಮುಂಚೂಣಿಗೆ ತಂದರು. ಬಿಜೆಪಿಯ ಕಟ್ಟರ್ ಸೈದ್ಧಾಂತಿಕ ಬಣವನ್ನು ಪ್ರತಿನಿಧಿಸುತ್ತಾರೆ ಎಂದೇ ಬಿಂಬಿತರಾಗಿದ್ದ ಆಡ್ವಾಣಿ ಅವರು ಹವಾಲಾ ಡೈರಿಗಳಿಗೆ ಸಂಬಂಧಿಸಿ ಅವರ ಹೆಸರು ಪ್ರಸ್ತಾಪವಾದಾಗ ಅವರು ರಾಜೀನಾಮೆ ನೀಡಬೇಕಾಯಿತು.
ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತಕ್ಕೆ ಬದ್ಧರಾಗಿದ್ದರೂ, 2005 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಅಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಹೊಗಳಿದರು. ಇದರಿಂದಾಗಿ ಸಂಘ ಪರಿವಾರದ ಕೋಪ ಎದುರಿಸಬೇಕಾಗಿ ಬಂತು. ಕರಾಚಿಯಲ್ಲಿ ಜನಿಸಿದ ಅಡ್ವಾಣಿ ಅವರು ಬಿಜೆಪಿಯಲ್ಲಿ ಹೊಣೆಗಾರಿಕೆಗಳಿಂದ ದೂರ ಉಳಿಯಬೇಕಾಗಿ ಬಂತು. ಆದಾಗ್ಯೂ ಅವರ ಕೊಡುಗೆಗಳನ್ನು ಬಿಜೆಪಿ ಸದಾ ಸ್ಮರಿಸುತ್ತ ಬಂದಿತ್ತು.
ಭಾರತ ರತ್ನ ಎಂಬುದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಭಾರತದ ರತ್ನ ಎಂಬುದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಚಕ್ರವರ್ತಿ ರಾಜಗೋಪಾಲಾಚಾರಿ, ಚಂದ್ರಶೇಖರ ವೆಂಕಟ ರಾಮನ್ ಅವರಿಗೆ 1954ರಲ್ಲಿ ಭಾರತ ರತ್ನವನ್ನು ಮೊದಲ ಬಾರಿ ನೀಡಲಾಗಿತ್ತು. ಸಾರ್ವಜನಿಕ ಸೇವೆ, ಸಾಹಿತ್ಯ, ವಿಜ್ಞಾನ ಮತ್ತು ಕಲೆಯಂತಹ ಕ್ಷೇತ್ರಗಳಲ್ಲಿ ಅಸಾಧಾರಣ ಕೆಲಸ ಮಾಡಿದವರಿಗೆ ಭಾರತ ರತ್ನ ನೀಡಲಾಗುತ್ತದೆ. ಒಂದು ವರ್ಷದಲ್ಲಿ ಗರಿಷ್ಠ 3 ಜನರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು ಭಾರತದ ರಾಷ್ಟ್ರಪತಿಗಳು ನೀಡುತ್ತಾರೆ. ಇದುವರೆಗೆ 48 ಸಾಧಕ ಗಣ್ಯರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.