logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi: ಅಯೋಧ್ಯೆಯ ರಾಮಲಲಾ ಪ್ರಾಣಪ್ರತಿಷ್ಠೆಗೆ ಪ್ರಧಾನಿ ಮೋದಿ 11 ದಿನಗಳ ವಿಶೇಷ ಅನುಷ್ಠಾನ ಶುರು

PM Modi: ಅಯೋಧ್ಯೆಯ ರಾಮಲಲಾ ಪ್ರಾಣಪ್ರತಿಷ್ಠೆಗೆ ಪ್ರಧಾನಿ ಮೋದಿ 11 ದಿನಗಳ ವಿಶೇಷ ಅನುಷ್ಠಾನ ಶುರು

Umesh Kumar S HT Kannada

Jan 17, 2024 09:29 PM IST

google News

ಪ್ರಧಾನಿ ನರೇಂದ್ರ ಮೋದಿ (ಕಡತ ಚಿತ್ರ)

  • ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ (ರಾಮಲಲಾ) ಪ್ರಾಣ ಪ್ರತಿಷ್ಠೆಯಲ್ಲಿ ಭಾಗವಹಿಸುವ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು 11 ದಿನಗಳ ವಿಶೇಷ ಅನುಷ್ಠಾನವನ್ನು ಇಂದಿನಿಂದ (ಜ.12) ಶುರುಮಾಡಿದ್ದಾರೆ. ಈ ವಿಚಾರವನ್ನು ಅವರ ಧ್ವನಿ ಸಂದೇಶದ ಮೂಲಕ ನೀಡಿದ್ದು, ಅದರ ವಿವರ ಇಲ್ಲಿದೆ. 

ಪ್ರಧಾನಿ ನರೇಂದ್ರ ಮೋದಿ (ಕಡತ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಕಡತ ಚಿತ್ರ) (AFP File Photo)

ನವದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀ ರಾಮಲಲಾ (ಬಾಲರಾಮ)ನ ಪ್ರಾಣ ಪ್ರತಿಷ್ಠಾ ಮಹೋತ್ಸವ ಜ.22ರಂದು ನಡೆಯಲಿದ್ದು, ಅದಕ್ಕೆ ದಿನಗಣನೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜ.12) ಧ್ವನಿ ಮುದ್ರಿಕೆಯೊಂದನ್ನು ಶೇರ್ ಮಾಡಿಕೊಂಡಿದ್ದು, ಇಂದಿನಿಂದ 11 ದಿನಗಳ ವ್ರತಾಚರಣೆ ನಡೆಸುವುದಾಗಿ ಹೇಳಿಕೊಂಡಿದ್ದಾರೆ.

ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, ತಾವು ವಿಶೇಷ ಅನುಷ್ಠಾನ ನಡೆಸುತ್ತಿರುವ ಕುರಿತು ವಿಶೇಷ ಸಂದೇಶವನ್ನು ನೀಡಿದ್ದಾರೆ.

"ಅಯೋಧ್ಯೆಯ ರಾಮಲಲಾನ ಪ್ರಾಣಪ್ರತಿಷ್ಠೆಗೆ ಇನ್ನು ಕೇವಲ 11 ದಿನಗಳು ಬಾಕಿ ಇವೆ. ಈ ಪುಣ್ಯ ಸಂದರ್ಭಕ್ಕೆ ನಾನೂ ಸಾಕ್ಷಿಯಾಗುತ್ತಿರುವುದು ನನ್ನ ಅದೃಷ್ಟ. ಪ್ರಾಣಪ್ರತಿಷ್ಠೆಯ ಸಂದರ್ಭದಲ್ಲಿ ದೇಶದ ಎಲ್ಲ ನಾಗರಿಕರ ಪ್ರತಿನಿಧಿಯಾಗಿ ಭಾಗವಹಿಸುವುದಕ್ಕೆ ಪ್ರಭು ಶ್ರೀರಾಮಚಂದ್ರನು ನನಗೆ ಅವಕಾಶ ಮಾಡಿಕೊಟ್ಟಿದ್ದಾನೆ. ಇದನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದ (ಶುಕ್ರವಾರ) 11 ದಿನಗಳ ವಿಶೇಷ ಅನುಷ್ಠಾನವನ್ನು ಶುರುಮಾಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

“ದೇವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ಶಾಸ್ತ್ರಗಳಲ್ಲಿ ವಿವರಿಸಿರುವಂತೆ ವಿಸ್ತೃತ ಮತ್ತು ಸಮಗ್ರ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ಅನುಸರಿಸಬೇಕಾದ ವಿಸ್ತೃತ ನಿಯಮಾನುಷ್ಠಾನಗಳನ್ನು ಶಾಸ್ತ್ರಗಳಲ್ಲಿ ನೀಡಲಾಗಿದೆ. ಇದನ್ನು ಪ್ರಾಣಪ್ರತಿಷ್ಠಾನ ಮಹೋತ್ಸವದ ಹಲವು ದಿನಗಳ ಮೊದಲೇ ಶುರುಮಾಡಬೇಕು. ರಾಮ ಭಕ್ತನಾಗಿ ರಾಮ ಮಂದಿರವನ್ನು ನಿರ್ಮಿಸುವ ಮತ್ತು ಜೀವನವನ್ನು ಪವಿತ್ರಗೊಳಿಸುವ ಆಧ್ಯಾತ್ಮದ ಕೆಲಸಕ್ಕಾಗಿ ಸಮರ್ಪಿಸಿದ್ದೇನೆ. ಎಲ್ಲ ಕಾರ್ಯಗಳು ಮತ್ತು ಜವಾಬ್ದಾರಿಗಳ ಹೊರತಾಗಿಯೂ, ರಾಮಲಲಾನ ಪ್ರಾಣ ಪ್ರತಿಷ್ಠೆಗಾಗಿ ಅಗತ್ಯವಾದ ಎಲ್ಲ ನಿಯಮಗಳನ್ನು ಪಾಲಿಸಲು ಮುಂದಾಗಿದ್ದೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಧ್ವನಿ ಸಂದೇಶದಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರಿಂದ 11 ದಿನಗಳ ವಿಶೇಷ ವ್ರತಾನುಷ್ಠಾನ

ಇದಕ್ಕಾಗಿ ಪ್ರಾಣ ಪ್ರತಿಷ್ಠೆಗೂ ಮುನ್ನ 11 ದಿನಗಳ ಯಮ-ನಿಯಮಗಳನ್ನು ಅನುಸರಿಸುವ ಆಚರಣೆಗೆ ಪ್ರಧಾನಿ ಚಾಲನೆ ನೀಡಿದ್ದಾರೆ. ದೇವಪ್ರತಿಷ್ಠೆಯು ದೇವರ ಮೂರ್ತಿಗೆ ದೈವಿಕ ಪ್ರಜ್ಞೆಯನ್ನು ತುಂಬುವ ಆಚರಣೆ ಎಂದು ಬಣ್ಣಿಸಲಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಇದಕ್ಕಾಗಿ, ಆಚರಣೆಯ ಮೊದಲು ಉಪವಾಸದ ನಿಯಮಗಳನ್ನು ಧರ್ಮಗ್ರಂಥಗಳಲ್ಲಿ ನೀಡಲಾಗಿದೆ. ಪ್ರಧಾನಮಂತ್ರಿ ಮೋದಿಯವರು ತಮ್ಮ ದಿನಚರಿಯಲ್ಲಿ, ಬ್ರಹ್ಮ ಮುಹೂರ್ತ ಜಾಗರಣ, ಸಾಧನ ಮತ್ತು ಸಾತ್ವಿಕ್ ಆಹಾರದಂತಹ ನಿಯಮಗಳನ್ನು ನಿರಂತರವಾಗಿ ಅನುಸರಿಸುತ್ತಾರೆ. ಆದರೆ, ಈಗ ಇಂದಿನಿಂದ (ಜ.12) 11 ದಿನಗಳ ಕಾಲ ಶಾಸ್ತ್ರೋಕ್ತವಾಗಿ ಕಠಿಣ ತಪಸ್ಸಿನೊಂದಿಗೆ ಉಪವಾಸವನ್ನು ಆಚರಿಸಲು ಪ್ರಧಾನಿ ನಿರ್ಧರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಧ್ವನಿ ಸಂದೇಶವಿದೆ. ಅದರಲ್ಲಿ ಅವರು ಹೇಳಿರುವುದರ ಸಾರ ಇಷ್ಟು-

'ಪ್ರಾಣ ಪ್ರತಿಷ್ಠೆಯ ಶುಭ ಕ್ಷಣ, ಜೀವಂತ ಸೃಷ್ಟಿಯ ಆ ಜಾಗೃತ ಕ್ಷಣ, ಆ ಆಧ್ಯಾತ್ಮಿಕ ಅನುಭವದ ಅವಕಾಶ... ಗರ್ಭಗುಡಿಯಲ್ಲಿ ಆ ಕ್ಷಣದಲ್ಲಿ ಏನೂ ಆಗುವುದಿಲ್ಲ. ದೈಹಿಕವಾಗಿ ಆ ಪವಿತ್ರ ಕ್ಷಣಕ್ಕೆ ನಾನು ಸಾಕ್ಷಿಯಾಗುತ್ತೇನೆ, ಆದರೆ ನನ್ನ ಮನಸ್ಸಿನಲ್ಲಿ, ನನ್ನ ಪ್ರತಿ ಹೃದಯ ಬಡಿತದಲ್ಲಿ140 ಕೋಟಿ ಭಾರತೀಯರು ಜೊತೆಗಿರುತ್ತಾರೆ. ನೀವು ನನ್ನೊಂದಿಗೆ ಇರುತ್ತೀರಿ. ಪ್ರತಿಯೊಬ್ಬ ರಾಮಭಕ್ತನೂ ನನ್ನೊಂದಿಗಿರುತ್ತಾನೆ. ಆ ಪ್ರಜ್ಞಾಪೂರ್ವಕ ಕ್ಷಣವು ನಮಗೆಲ್ಲರಿಗೂ ಹಂಚಿಕೊಂಡ ಅನುಭವವಾಗಿರುತ್ತದೆ. ರಾಮಮಂದಿರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅಸಂಖ್ಯ ವ್ಯಕ್ತಿಗಳ ಪ್ರೇರಣೆ ನನ್ನೊಂದಿಗೆ ಇರಲಿದೆ. ಆ ತ್ಯಾಗ ಮತ್ತು ತಪಸ್ಸಿನ ಫಲಗಳು, 500 ವರ್ಷಗಳ ತಾಳ್ಮೆ, ದೀರ್ಘ ತಾಳ್ಮೆಯ ಅವಧಿ, ತ್ಯಾಗ ಮತ್ತು ತಪಸ್ಸಿನ ಅಸಂಖ್ಯಾತ ಘಟನೆಗಳು, ಈ ದಾನಿಗಳ ಮತ್ತು ತ್ಯಾಗದ ಕಥೆಗಳು. ಯಾರ ಹೆಸರೂ ಗೊತ್ತಿಲ್ಲದ ಎಷ್ಟೋ ಜನರಿದ್ದಾರೆ. ಅದೆಲ್ಲ ಏನೇ ಇದ್ದರೂ, ಅವರ ಜೀವನದ ಶ್ರೇಯಸ್ಸು ರಾಮಮಂದಿರ ನಿರ್ಮಾಣ ಮಾತ್ರ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ".

ಜ.22ರಂದು ರಾಮಲಲಾ ಪ್ರಾಣಪ್ರತಿಷ್ಠೆ

ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ಜ.22ರಂದು ಶ್ರೀ ರಾಮಲಲಾ (ಬಾಲರಾಮ) ಪ್ರಾಣ ಪ್ರತಿಷ್ಠೆ ನಡೆಯಲಿದೆ. ಇದರ ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮಗಳು ಜನವರಿ 16ರಿಂದ ಶುರುವಾಗುತ್ತವೆ. ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲೇ ನಡೆದಿತ್ತು. ಈಗ ಶ್ರೀರಾಮಲಲಾನ ಪ್ರಾಣ ಪ್ರತಿಷ್ಠೆಯೂ ಅವರಿಂದಲೇ ನಡೆಯಲಿದೆ. ಹೀಗಾಗಿ ಅವರು ಇಂದಿನಿಂದ ವ್ರತಾನುಷ್ಠಾನ ಶುರುಮಾಡಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ