Vasundhara wins in Rajasthan 2023: ರಾಜಸ್ಥಾನದಲ್ಲಿ ವಸುಂಧರಾ ರಾಜೇ ಜಯ: ಪುಟಿದೆದ್ದು ಬರಲು ಕಾರಣ ಇಲ್ಲಿವೆ
Dec 03, 2023 02:39 PM IST
ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ ಭಾರೀ ಅಂತರದಿಂದ ಜಯ ಸಾಧಿಸಿದ್ದಾರೆ.
- Rajasthan Elections ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ( Vasundhara raje) ಅವರು ವಿರೋಧದ ನಡುವೆಯೂ ಟಿಕೆಟ್ ಗಿಟ್ಟಿಸಿ ಭಾರೀ ಅಂತರದಲ್ಲಿ ಗೆದ್ದು ಬಂದಿದ್ದಾರೆ. ಈ ಮೂಲಕ ತಾವೇ ಮುಂದಿನ ಸಿಎಂ ಎಂದು ಸಾರಿದ್ದಾರೆ.
ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಭಾರೀ ಅಂತರದಿಂದ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಈ ಮೂಲಕ ತಾವು ಸಿಎಂ ಸ್ಥಾನಕ್ಕೆ ಮತ್ತೊಮ್ಮೆ ಪ್ರಬಲ ಆಕಾಂಕ್ಷಿ ಎನ್ನುವ ಸಂದೇಶ ಸಾರಿದ್ದಾರೆ.
ಸಾಕಷ್ಟು ಹೊಯ್ದಾಟದ ನಡುವೆ ಈ ಬಾರಿ ವಿಧಾನಸಭೆ ಚುನಾವಣೆಗೆ ವಸುಂಧರಾ ರಾಜೇ ಟಿಕೆಟ್ ಗಿಟ್ಟಿಸಿಕೊಂಡಿದ್ದರು.ತಮ್ಮ ಸಾಂಪ್ರದಾಯಿಕ ಕ್ಷೇತ್ರ ಜಲರಾ ಪಠಾಣ್ ಕ್ಷೇತ್ರದಿಂದ ಸುಮಾರು 53,000 ಮತಗಳ ಅಂತರಿಂದ ಜಯಭೇರಿ ಬಾರಿಸಿ ಆರನೇ ಬಾರಿಗೆ ವಿಧಾನ ಸಭೆ ಪ್ರವೇಶಿಸಿದ್ಧಾರೆ. ಈ ಮೂಲಕ ಮೂರನೇ ಬಾರಿಗೆ ರಾಜಸ್ಥಾನದ ಸಿಎಂ ಆಗಲು ಅಣಿಯಾಗುತ್ತಿದಾರೆ.
ಕಾಂಗ್ರೆಸ್‌ನ ರಾಮ್ ಲಾಲ್ ಚೌಹಾಣ್ ಅವರನ್ನು ಮಣಿಸಿದ ರಾಜವಂಶಸ್ಥೆಯೂ ಆಗಿರುವ ಹಿರಿಯ ನಾಯಕಿ ವಸುಂಧರಾ ರಾಜೇ ಈ ಕ್ಷೇತ್ರವನ್ನು 2003ರಿಂದ ಪ್ರತಿನಿಧಿಸುತ್ತಿದ್ದಾರೆ.
ಮೊದಲಿನಿಂದಲೂ ಗೆಲುವಿನ ಅಂತರವನ್ನೇ ಕಾಯ್ದುಕೊಂಡ ಬಂದ ವಸುಂಧರಾ ರಾಜೇ ಅವರು ಕೊನೆಗೂ ಜಯದ ನಗೆ ಬೀರಿದರು. ಅವರ ಬೆಂಬಲಿಗರು ಸಂಭ್ರಮ ಆಚರಿಸಿ ಸಿಹಿ ತಿನ್ನಿಸಿದರು.
ವಸುಂಧರಾ ರಾಜಕೀಯ ಏರಿಳಿತ
- ರಾಜಸ್ಥಾನ ರಾಜವಂಶಸ್ಥರ ರಾಜ್ಯವೂ ಹೌದು. ಇಲ್ಲಿ ಹಲವಾರು ಕುಟುಂಬಗಳು ರಾಜಸ್ಥಾನವನ್ನು ಆಳಿವೆ. ಅವರಲ್ಲಿ ಸಿಂಧಿಯಾ ಕುಟುಂಬ ಪ್ರಮುಖವಾದದ್ದು. ಈ ಕುಟುಂಬದ ಕುಡಿ ವಸುಂಧರ ರಾಜೇ.
- ಆಕೆಯ ತಂದೆ ಜಿವಾಜಿರಾವ್ ಸಿಂಧಿಯಾ ತೀರಿಕೊಂಡಾಗ ರಾಜೇ ಚಿಕ್ಕವರು. ಆಕೆಯ ತಾಯಿ, ವಿಜಯರಾಜೆ ಸಿಂಧಿಯಾ, ಭಾರತೀಯ ಜನಸಂಘ ಮತ್ತು ಬಿಜೆಪಿ ಎರಡರಲ್ಲೂ ಹಿರಿಯ ನಾಯಕಿಯಾಗಿದ್ದರು. ನಂತರ ಮಗಳಿಗೆ ಬಿಜೆಪಿಯಲ್ಲಿಯೇ ಅಧಿಕಾರ ಸಿಕ್ಕಿದೆ. ಹಿರಿಯನಾಯಕಿಯಾಗಿ ಬೆಳೆದಿದ್ದಾರೆ. ಈಗ ಅಮ್ಮನ ನಂತರ ಮಗ ದುಷ್ಯಂತ್ ಸಿಂಗ್ ಬಿಜೆಪಿ ಸಂಸದ. ಅಮ್ಮ ಶಾಸಕಿ.
- ಐದು ಬಾರಿ ಸಂಸದೆ, ಕೇಂದ್ರದಲ್ಲಿ ಸಚಿವೆ, ಆರು ಬಾರಿ ಶಾಸಕರಾಗಿರುವ ವಸುಂಧರಾ ರಾಜೇ ತಮ್ಮದೇ ಪ್ರಭಾವವನ್ನು ಹೊಂದಿದ್ದಾರೆ. ವಾಜಪೇಯಿ ಹಾಗೂ ಅಡ್ವಾಣಿ ಅವರೊಂದಿಗೆ ಉತ್ತಮ ರಾಜಕೀಯ ಸಂಬಂಧ ಹೊಂದಿದ್ದರು.
- ವಸುಂಧರಾ ಎರಡು ಬಾರಿ ಸಿಎಂ ಆಗಿ 2003, 2013ರಲ್ಲಿ ಕಾರ್ಯನಿರ್ವಹಿಸಿದ್ದರು. ಆ ಚುನಾವಣೆಗಳಲ್ಲಿ ನೇತೃತ್ವ ವಹಿಸಿದ್ದ ಅವರಿಗೆ ಅಧಿಕಾರ ಒಲಿದಿತ್ತು.
- ಆನಂತರ ಬಿಜೆಪಿಯಲ್ಲಿ ಮೋದಿ ಪರ್ವ ಶುರುವಾದ ನಂತರ ವಸುಂಧರಾ ಹಾಗೂ ಅವರ ಬೆಂಬಲಿಗರಿಗೆ ಅಷ್ಟಾಗಿ ಮಾನ್ಯತೆ ದೊರೆತಿರಲಿಲ್ಲ. ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನವನ್ನೂ ಬದಲಾಯಿಸಲಾಗಿತ್ತು.
- ಈ ಚುನಾವಣೆಯಲ್ಲೂ ವಸುಂಧರಾ ಹಾಗೂ ಅವರ ಬೆಂಬಲಿಗರಿಗೆ ಟಿಕಟ್ ದೊರೆಯುವುದಿಲ್ಲ ಎನ್ನುವ ವಾತಾವರಣವಿತ್ತು. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಹಿನ್ನೆಡೆ ನಂತರ ಹಿರಿಯ ನಾಯಕರಿಗೆ ಆಗುತ್ತಿದ್ದ ಕಿರಿಕಿರಿ ಬಿಜೆಪಿಯಲ್ಲಿ ತಪ್ಪಿದೆ. ವಸುಂಧರಾ ಟಿಕೆಟ್ ಪಡೆದು ತಮ್ಮ ಬೆಂಬಲಿಗರಿಗೂ ಟಿಕೆಟ್ ಸಿಗುವಂತೆ ನೋಡಿಕೊಂಡಿದ್ದರು.
- ವಸುಂಧರಾ ಕೂಡ ಪ್ರಬಲವಾದ ವಿರೋಧವನ್ನು ಕೇಂದ್ರ ನಾಯಕರಿಗೆ ವ್ಯಕ್ತಪಡಿಸಿ ಚುನಾವಣೆಯಲ್ಲಿ ಹಿನ್ನಡೆ ಆಗುವ ಸಂದೇಶ ಸಾರಿದ್ದರು.
- ಈ ಬಾರಿ ಬಿಜೆಪಿ ಕೆಲವು ಲೋಕಸಭಾ ಸದಸ್ಯರನ್ನು ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಸಿದೆ. ಅವರಲ್ಲಿ ರಾಜ್ಯನಾಥ ಸಿಂಗ್ ರಾಥೋರ್. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸಹಿತ ಹಲವರು ಸಿಎಂ ಆಕಾಂಕ್ಷಿಗಳಾಗಿದ್ದಾರೆ.
- ಮುಂದಿನ ವರ್ಷ ಲೋಕಸಭೆ ಚುನಾವಣೆ ಇರುವುದರಿಂದ ಬಿಜೆಪಿ ಎಷ್ಟು ತೊಂದರೆ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ. ಲೋಕಸಭೆ ಚುನಾವಣೆ ಮುಗಿದ ನಂತರ ನೋಡೋಣ ಎಂದು ಹಿರಿಯರಾದ ವಸುಂಧರಾ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
- ಈ ಬಾರಿ ವಸುಂಧರಾ ಸಿಎಂ ಆದರೆ ಮೂರು ಬಾರಿ ಸಿಎಂ ಆದ, ಅಶೋಕ್ ಗೆಹ್ಲೋಟ್ ಅವರ ರೀತಿಯಲ್ಲಿ ಒಮ್ಮೆ ಬಿಟ್ಟು ಮತ್ತೊಮ್ಮೆ ಬಾರಿ ಸಿಎಂ ಗಾದಿ ಏರಿದ ಸಿಎಂ ಎನ್ನಿಸಲಿದ್ದಾರೆ. ಇದಕ್ಕೆ ಇನ್ನು ಎರಡು ದಿನ ಕಾಯಬೇಕು.