logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ayodhya Ram Mandir: ನಮ್ಮ ಬಾಲರಾಮ ಇನ್ನು ಟೆಂಟ್‌ನಲ್ಲಿರಲ್ಲ, ದಿವ್ಯ ಮಂದಿರದಲ್ಲಿರುತ್ತಾನೆ; ಅಯೋಧ್ಯೆಯಿಂದ ಪ್ರಧಾನಿ ಮೋದಿ ಮಾತು

Ayodhya Ram Mandir: ನಮ್ಮ ಬಾಲರಾಮ ಇನ್ನು ಟೆಂಟ್‌ನಲ್ಲಿರಲ್ಲ, ದಿವ್ಯ ಮಂದಿರದಲ್ಲಿರುತ್ತಾನೆ; ಅಯೋಧ್ಯೆಯಿಂದ ಪ್ರಧಾನಿ ಮೋದಿ ಮಾತು

Umesh Kumar S HT Kannada

Jan 22, 2024 02:54 PM IST

google News

ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠೆ ನೆರವೇರಿಸಿದ ಬಳಿಕ, ದೇಶವಾಸಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

  • PM Modi Speech from Ayodhya Ram Mandir: ಅಯೋಧ್ಯೆಯಲ್ಲಿ ಬಾಲರಾಮ ವಿರಾಜಮಾನನಾದ ಬಳಿಕ ಪ್ರಧಾನಿ ಮೋದಿ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ನಮ್ಮ ಬಾಲರಾಮ ಇನ್ನು ಟೆಂಟ್‌ನಲ್ಲಿ ಇರಲ್ಲ. ದಿವ್ಯ ಮಂದಿರದಲ್ಲಿರಲಿದ್ದಾನೆ ಎಂದು ಹೇಳಿದರು.

ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠೆ ನೆರವೇರಿಸಿದ ಬಳಿಕ, ದೇಶವಾಸಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.
ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠೆ ನೆರವೇರಿಸಿದ ಬಳಿಕ, ದೇಶವಾಸಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

ಅಯೋಧ್ಯೆ: ಸಿಯಾವರ್‌ ರಾಮಚಂದ್ರ ಕೀ ಜೈಕಾರದೊಂದಿಗೆ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಇಂದು ನಮ್ಮ ರಾಮ ಬಂದ. ಎಲ್ಲ ತ್ಯಾಗ ಬಲಿದಾನದ ನಂತರ ರಾಮ ಬಂದ. ಗರ್ಭಗುಡಿಯೊಳಗೆ ದೈವೀ ಸಾನ್ನಿಧ್ಯದಲ್ಲಿ ಪೂಜೆ ನೆರವೇರಿಸಿಕೊಂಡು ನಿಮ್ಮೆದುರು ನಿಂತಿದ್ದೇನೆ ಎಂದು ಹೇಳಿದರು.

ನಮ್ಮ ಬಾಲರಾಮ ಇನ್ನು ಟೆಂಟ್‌ನಲ್ಲಿ ಇರಲ್ಲ. ನಮ್ಮ ಬಾಲರಾಮ ಇನ್ನು ದಿವ್ಯ ಮಂದಿರದಲ್ಲಿ ಇರಲಿದ್ದಾನೆ. ಎಲ್ಲಿ ರಾಮನ ಕಾರ್ಯವಾಗುತ್ತದೋ ಅಲ್ಲಿ ಪವನಪುತ್ರ ಹನುಮಾನ ಇರುತ್ತಾನೆ. ಸೀತಾ ಮಾತೆ, ಲಕ್ಷ್ಮಣ ಎಲ್ಲರಿಗೂ ನಮಿಸುತ್ತೇನೆ.

ಪ್ರಭು ಶ್ರೀರಾಮ ಚಂದ್ರನ ಕ್ಷಮೆ ಕೂಡ ಕೇಳ್ತೇನೆ. ಮಂದಿರ ನಿರ್ಮಾಣಕ್ಕೆ ಬಹಳ ವರ್ಷ ಬೇಕಾಯಿತು. ನಮ್ಮ ಕೆಲಸ ಕಾರ್ಯಗಳಲ್ಲಿ, ನಡವಳಿಕೆಗಳಲ್ಲಿ ಏನಾದರೂ ಲೋಪದೋಷಗಳಿದ್ದರೆ ಅದನ್ನು ಕ್ಷಮಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ನನಗೆ ಇಂದು ಬಹಳ ಖಚಿತವಾದ ವಿಶ್ವಾಸವಿದೆ. ಪ್ರಭು ಶ್ರೀರಾಮಚಂದ್ರ ನಮ್ಮನ್ನು ಕ್ಷಮಿಸುತ್ತಾನೆ ಎಂಬ ನಂಬಿಕೆ ಇಂದು ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಶ್ರೀರಾಮನಿಲ್ಲದೇ ಅನೇಕ ವರ್ಷಗಳಿಂದ ಎದುರಿಸುತ್ತಿದ್ದ ಅಡ್ಡಿ ಆತಂಕಗಳು ನಿವಾರಣೆಯಾಗಲಿದೆ. ರಾಮ ಬಂದಿದ್ದಾನೆ. ಅಯೋಧ್ಯೆ ವಾಸಿಗಳು, ದೇಶವಾಸಿಗಳು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಅದೆಲ್ಲ ನಿವಾರಣೆಯಾಗಲಿದೆ.

ಭಾರತದ ಸಂವಿದಾನದಲ್ಲಿ ಶ್ರೀರಾಮ ವಿರಾಜಮಾನನಾಗಿದ್ದಾನೆ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲೇ ಕಾನೂನು ಹೋರಾಟ ನಡೆಸಿ ಗೆಲುವು ಸಿಕ್ಕಿದೆ. ಪ್ರಭು ರಾಮಚಂದ್ರನ ಮಂದಿರವನ್ನೂ ಕಾನೂನು ಬದ್ಧವಾಗಿಯೇ ನಿರ್ಮಾಣ ಮಾಡಲಾಗಿದೆ ಎಂದು ಮೋದಿ ಹೇಳಿದರು.

ಇಡೀ ದೇಶ ಇಂದು ದೀಪಾವಳಿ ಆಚರಿಸಲಾಗುತ್ತಿದೆ. ಇಂದು ಸಂಜೆ ಮನೆ ಮನೆಗಳಲ್ಲಿ ದೀಪ ಹೊತ್ತಿಸಿ ರಾಮನ ಆಗಮನವನ್ನು ತೋರಿಸುವ ಕೆಲಸ ಮಾಡಲಾಗುತ್ತದೆ. ನಿನ್ನೆ ಧನುಷ್ಕೋಟಿಗೆ ಹೋಗಿದ್ದೆ. ಅಂದು ಕಾಲಚಕ್ರ ಬದಲಾದಂತೆ ಇಂದು ಕೂಡ ಕಾಲಚಕ್ರ ತಿರುಗಲಿದೆ. ದೇಶಕ್ಕೆ ದೇಶವಾಸಿಗಳಿಗೆ ಶುಭವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅಯೋಧ್ಯೆ ರಾಮ ಮಂದಿರದ ಬಾಲರಾಮನ ಕಾರಣ 12 ದಿನಗಳ ವ್ರತಾನುಷ್ಠಾನದ ವೇಳೆ ದೇಶದ ಪ್ರತಿ ಮೂಲೆ ಮೂಲೆಯಲ್ಲಿರುವ ರಾಮನ ಜೊತೆಗೆ ನಂಟು ಹೊಂದಿರುವ ಕ್ಷೇತ್ರ ಭೇಟಿ ಸಾಧ್ಯವಾಯಿತು. ಲೇಪಾಕ್ಷಿ, ಶ್ರೀರಂಗ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಪವಿತ್ರಾತ್ಮಗಳನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ರಾಮಾಯಣವನ್ನು ಪ್ರಾದೇಶಿಕ ಭಾಷೆಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಜನರು ಆರಾಧಿಸುತ್ತಿರುವ ಕೀರ್ತನೆಗಳನ್ನು ಆಲಿಸುವ ಅವಕಾಶ ಸಿಕ್ಕಿತು.

ರಾಮ ಜನಮಾನಸದಲ್ಲಿ ನೆಲೆಸಿದ್ದಾನೆ. ರಾಮರಸವು ಜೀವನ ಪ್ರವಾಹದಂತೆ ನಿರಂತರವಾಗಿ ಹರಿಯುತ್ತಿರುತ್ತದೆ. ಪ್ರಾಚೀನ ಕಾಲದಿಂದಲೂ ಭಾರತೀಯರು ರಾಮರಸವನ್ನು ಸೇವಿಸುತ್ತ ಬಂದಿದ್ದಾರೆ. ರಾಮಕಥೆ ಜನ ಜೀವನದಲ್ಲಿ ಮಿಳಿತವಾಗಿದೆ.

ಈ ಐತಿಹಾಸಿಕ ಸಮಯದಲ್ಲಿ, ರಾಮ ಕೆಲಸದಲ್ಲಿ ಅನೇಕಾನೇಕ ಜನರ ಕಾರಣ ಈ ರಾಮ ಮಂದಿರ ನಿರ್ಮಾಣವಾಯಿತು ಎಂಬುದನ್ನು ಸ್ಮರಿಸಬೇಕು. ಸಂತರು, ಕರಸೇವಕರು ಎಲ್ಲರ ತ್ಯಾಗ ಬಲಿದಾನ ಫಲ ಈ ರಾಮ ಮಂದಿರ. ನಮಗೆ ಈ ಸನ್ನಿವೇಶವು ವಿಜಯದ ಸಂದರ್ಭವಷ್ಟೇ ಅಲ್ಲ, ವಿನಯದ ಸಂದರ್ಭವೂ ಹೌದು.

ಸಂಸ್ಕೃತಿ, ಇತಿಹಾಸವನ್ನು ಮರೆತ ದೇಶಗಳು ಅವನತಿ ಹೊಂದಿವೆ. ಇದು ಇತಿಹಾಸದಲ್ಲಿ ಸಾಬೀತಾಗಿರುವ ವಿಚಾರ. ಭಾರತದ ವಿಚಾರದಲ್ಲಿ ಹಾಗಾಗಿಲ್ಲ. ಈಗ ಭಾರತ ಮತ್ತೆ ಪುಟಿದೇಳಲಿದೆ. ಈ ಮಂದಿರ ನಿರ್ಮಾಣದ ಮೂಲಕ ಭಾರತದ ಭವಿಷ್ಯ ಉಜ್ವಲವಾಗಲಿದೆ.

ಈ ಮಂದಿರ ನಿರ್ಮಾಣದ ಮೂಲಕ ಬೆಂಕಿ ಹತ್ತಿಕೊಳ್ಳುವುದಿಲ್ಲ. ಬದಲಾಗಿ ದೀಪ ಪ್ರಜ್ವಲನವಾಗಲಿದೆ. ರಾಮ ಬೆಂಕಿ ಅಲ್ಲ, ರಾಮ ಜ್ಯೋತಿ. ರಾಮ ವಿವಾದವಲ್ಲ, ರಾಮ ಸಮಾಧಾನ. ರಾಮ ವರ್ತಮಾನವಲ್ಲ, ಅನಂತ ಕಾಲದವನು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.

ಇಂದು ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ಉತ್ಸವ ಕೇವಲ ಭಾರತದ್ದಷ್ಟೇ ಅಲ್ಲ, ದೇಶ ವಿದೇಶಗಳಲ್ಲಿ ಕೂಡ ಅದೇ ಸಂಭ್ರಮ ಸಡಗರವನ್ನು ಕಂಡಿದ್ದೇವೆ. ಇಡೀ ಜಗತ್ತು ರಾಮನ ಪ್ರಭಾವಲಯದಲ್ಲಿದೆ.

ಅಯೋಧ್ಯೆಯ ಗರ್ಭಗುಡಿಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವು ಶಿಲೆಗೆ ನಡೆಸಿದ ಪ್ರಾಣ ಪ್ರತಿಷ್ಠೆಯಷ್ಟೇ ಅಲ್ಲ, ಅದು ಭಾರತೀಯರು ಕಳೆದುಕೊಂಡಿದ್ದ ವಿಶ್ವಾಸದ ಪ್ರಾಣ ಪ್ರತಿಷ್ಠೆ. ಮಾನವೀಯ ಮೌಲ್ಯದ ಪ್ರಾಣ ಪ್ರತಿಷ್ಠೆ. ಇಡೀ ಜಗತ್ತಿಗೆ ಇದು ಅವಶ್ಯ.

ಅಯೋಧ್ಯೆಯ ರಾಮ ಮಂದಿರ ಕೇವಲ ಮಂದಿರವಲ್ಲ. ಅದು ಭಾರತದ ದಿಗ್ಧರ್ಶನದ ಮಂದಿರ. ರಾಮ ಭಾರತದ ಆಧಾರ, ರಾಮ ಭಾರತದ ಆಚಾರ, ವಿಚಾರ. ರಾಮ ಭಾರತದ ಚಿಂತನೆ, ರಾಮ ನೀತಿಯೂ ಹೌದು ಎಂದು ಪ್ರಧಾನಿ ಮೋದಿ ಹೇಳಿದರು.

ರಾಮ ಮಂದಿರ ನಿರ್ಮಾಣ ಆಗಿದೆ. ಮುಂದೇನು?. ಹೌದು, ಕಾಲಚಕ್ರ ಉರುಳಿ ಹೋಗುತ್ತಿದೆ. ನಮ್ಮ ತಲೆಮಾರಿಗೆ ಈ ಅವಕಾಶ ಸಿಕ್ಕಿದೆ. ಇದುವೇ ಸರಿಯಾದ ಸಮಯ. ಮುಂದಿನ 1000 ವರ್ಷದ ಸಮರ್ಥ, ಸಕ್ಷಮ, ಭವ್ಯ, ದಿವ್ಯ ಭಾರತ ನಿರ್ಮಾಣದ ಬೀಜ ಬಿತ್ತನೆ ಮಾಡಲಾಗಿದೆ. ದೇವರಿಂದ ದೇಶದ ತನಕ, ರಾಮನಿಂದ ರಾಷ್ಟ್ರದ ತನಕ ನಮ್ಮ ಭಾವ ಜಾಗೃತವಾಗಬೇಕು. ಹನುಮಂತನ ಭಕ್ತಿ, ಶ್ರದ್ಧೆ ನಮ್ಮದಾಗಬೇಕು.

ಶಬರಿ ಕೂಡ ಕಾಯುತ್ತಿದ್ದಳು ರಾಮ ಬರುವನೆಂದು. ನಾವು ಕೂಡ ಕಾಯುತ್ತಿದ್ದೆವು. ಶಬರಿಯ ನಂಬಿಕೆ ಎಷ್ಟು ಬಲವಾದುದು ಎಂಬುದನ್ನು ನಾವು ಗಮನಿಸಬೇಕು. ಇದುವೇ ದೇವರಿಂದ ದೇಶ, ರಾಮನಿಂದ ರಾಷ್ಟ್ರದ ತನಕದ ವಿಸ್ತರಣೆ. ಇಂದು ದೇಶದಲ್ಲಿ ನಿರಾಶೆಗೆ ಜಾಗವಿಲ್ಲ.

ಜಟಾಯುವನ್ನು ಗಮನಿಸಿ, ವಯಸ್ಸಾಗಿದ್ದರೂ, ತನ್ನ ಕೆಲಸ ತಾನು ಮಾಡಿ ಕರ್ತವ್ಯದ ಪರಾಕಾಷ್ಠೆಯನ್ನು ತೋರಿಸಿಕೊಟ್ಟಿದ್ದಾರೆ. ಹಾಗಾಗಿ, ತಮ್ಮ ತಮ್ಮ ಸಾಮರ್ಥ್ಯಗಳನ್ನು ಕಡಿಮೆ ಅಂದಾಜಿಸಬಾರದು. ಅಂತಹ ಕೆಳಮಟ್ಟದ ಆಲೋಚನೆಗಳಿಂದ ಹೊರಬಂದು ದೇಶಕ್ಕಾಗಿ, ದೇಶದ ಅಭಿವೃದ್ಧಿಗಾಗಿ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಬೇಕಾದ ಸಮಯ ಬಂದಿದೆ. ಸ್ವ ಹಿತದಿಂದ ಸಮಷ್ಠಿಯ ಹಿತದ ಕಡೆಗೆ ಗಮನಹರಿಸಬೇಕಾದ ಸಮಯ. ಅಹಂನಿಂದ ವಯಂ ಕಡೆಗೆ ಹೋಗಬೇಕು.

ಯುವಜನರು ಗಮನಿಸಬೇಕು. ಶತಮಾನಗಳ ಶ್ರಮದ ಕಾರಣ ನಾವಿಲ್ಲಿ ತಲುಪಿದ್ದೇವೆ. ನಿರಾಶರಾಗುವ ಸಮಯ ಇದಲ್ಲ. ಮುಂಬರುವ ಸಮಯ ಫಲ ಸಿಗುವ ಕಾಲ, ಭಾರತದ ಉದಯ ಕಾಲ, ವಿಕಸಿತ ಬಾರತದ ಕಾಲ, ಪ್ರಯತ್ನ ಕೈಬಿಡಬೇಡಿ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಏನನ್ನಾದರೂ ಸಾಧಿಸಬಹುದು. ನವಭಾರತ ನಿರ್ಮಾಣ ಮಾಡಿ ತೋರಿಸೋಣ ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ