South India Rain: ತಮಿಳುನಾಡು, ಪುದುಚೇರಿಯಲ್ಲಿ ಮುಂದಿನ ಒಂದು ವಾರ ಭಾರಿ ಮಳೆಯ ಮುನ್ಸೂಚನೆ; ಈ ರಾಜ್ಯಗಳಲ್ಲಿ ಮುಂಗಾರು ದುರ್ಬಲ
Aug 15, 2023 07:27 PM IST
ನೋಯ್ಡಾದ ಸೆಕ್ಟರ್ 19ರಲ್ಲಿ ಪದಾಚಾರಿಯೊಬ್ಬರು ಸಾಧಾರಣ ಮಳೆಯ ನಡುವೆಯೇ ರಸ್ತೆಯಲ್ಲಿಲ ಸಾಗುತ್ತಿರುವುದು (HT)
ಮಹಾರಾಷ್ಟ್ರ, ಕೇರಳ ಹಾಗೂ ಆಂಧ್ರ ಪ್ರದೇಶ ಬಹುತೇಕ ಕಡೆಗಳಲ್ಲಿ ಮಳೆಯ ಕೊರತೆಯಾಗಿದೆ. ಇದು ವಿದ್ಯುತ್, ಕುಡಿಯುವ ನೀರಿನ ಮೇಲೂ ಪರಿಣಾಮ ಬೀರುತ್ತಿದೆ. ನಾಳೆ ತಮಿಳುನಾಡಿನಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ.
ಬೆಂಗಳೂರು: ತೆಲಂಗಾಣದ (Telangana Rains) ಬಹುತೇಕ ಕಡೆಗಳಲ್ಲಿ ಕಳೆದ 15 ದಿನಗಳಿಂದ ಮಳೆಯಾಗುತ್ತಿಲ್ಲ. ಜುಲೈ ಕೊನೆಯ ವಾರದಲ್ಲಿ ಅಬ್ಬರಿಸಿದ್ದ ವರುಣ ಆಗಸ್ಟ್‌ನಲ್ಲಿ ನಾಪತ್ತೆಯಾಗಿದ್ದಾನೆ. ಬಿತ್ತನೆಗಾಗಿ ಕಾದು ಕುಳಿತಿರುವ ರೈತರು ಕಂಗಾಲಾಗಿದ್ದಾರೆ.
ಕೆಲವೆಡೆ ಈಗಾಗಲೇ ಬಿತ್ತನೆ ಮುಗಿದಿರುವುದರಿಂದ ಮಳೆಯ ಅಗತ್ಯವಿದೆ. ವರುಣ ಯಾವಾಗ ಕೃಪೆ ತೋರುತ್ತಾನೆ ಎಂದು ಅನ್ನದಾತರು ಮುಗಿಲಿನತ್ತ ನೋಡುತ್ತಿರುವ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಮುಂದಿನ ಎರಡು ದಿನ ತೆಲಂಗಾಣದಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಈ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಯದಾದ್ರಿ-ಭುವನಗಿರಿ, ಹೈದರಾಬಾದ್, ಮೇಡ್ಚಲ್ ಮಲ್ಕಾಜಿಗಿರಿ, ಸಿದ್ದಿಪೇಟೆ, ನಲ್ಗೊಂಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಭಾರಿ ಮಳೆ ಸಾಧ್ಯತೆ ಇರುವ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇನ್ನ ಆಂಧ್ರಪ್ರದೇಶದಲ್ಲಿನ (Andhra Pradesh Rains) ಮಳೆಯ ಪರಿಸ್ಥಿತಿಯನ್ನು ನೋಡಿದರೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಉತ್ತರ ಆಂಧ್ರ ಮತ್ತು ಕರಾವಳಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಆಗಸ್ಟ್ 16 ಮತ್ತು ಆಗಸ್ಟ್ 17 ರಂದು ಮಳೆಯಾಗುವ ಮುನ್ಸೂಚನೆ ಇದೆ.
ಆಗಸ್ಟ್ 15ರ ಬೆಳಗ್ಗೆ 8.30ಕ್ಕೆ ದಾಖಲಾಗಿರುವ ಮಾಹಿತಿ ಪ್ರಕಾರ, ಶ್ರೀಕಾಕುಳಂ ಜಿಲ್ಲೆಯ ಮಂದಸ ಹಾಗೂ ವಿಜಯನಗರ ಜಿಲ್ಲೆಯ ಚೀಪುರುಪಲ್ಲಿಯಲ್ಲಿ 5 ಸೆಂಟಿ ಮೀಟರ್ ಮಳೆಯಾಗಿದೆ. ವಿಜಯನಗರ ಜಿಲ್ಲೆಯ ಶೃಂಗವರಪುಕೋಟ 4, ಕಾಕಿನಾಡ ಜಿಲ್ಲೆಯ ಪೆದ್ದಾಪುರಂ 2, ಪಾರ್ವತಿಪುರಮಣ್ಯಂ ಜಿಲ್ಲೆಯ ಸೀತಾನಗರಂ 2, ವಿಶಾಖಪಟ್ಟಣಂ 2, ಗುಂಟೂರು ಜಿಲ್ಲೆಯ ಪ್ರತಿಪಡು, ವಿಜಯನಗರದ ಬೊಬ್ಬಿಲಿ, ಶ್ರೀಕಾಕುಳಂನ ಪಲಾಸದಲ್ಲಿ ತಲಾ 1 ಸೆಂಟಿ ಮೀಟರ್ ಮಳೆಯಾಗಿದೆ.
ಮಹಾರಾಷ್ಟ್ರದಲ್ಲೂ ನಾಳೆ (Maharashtra Rains) ಮಳೆಯಾಗುವ ಮುನ್ಸೂಚನೆ ಇದೆ. ಕೊಂಕಣ-ಗೋವಾ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಆಗಸ್ಟ್ 16 ರಂದು ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮಧ್ಯ ಮಹಾರಾಷ್ಟ್ರ, ಮರಾಠವಾಡ ಜಿಲ್ಲೆಗಳಲ್ಲೂ ಮಳೆ ಬೀಳುವ ಸಂಭವವಿದೆ.
ನೆರೆಯ ಮಹಾರಾಷ್ಟ್ರದಲ್ಲಿ ಹಲವು ದಿನಗಳಿಂದ ನೈಋತ್ಯ ಮುಂಗಾರು ದುರ್ಬಲವಾಗಿದೆ. ಇದರ ಹೊರತಾಗಿ ಕಳೆದ 24 ಗಂಟೆಗಳಲ್ಲಿ ಉತ್ತರ ಕೊಂಕಣದ ಕೆಲವು ಸ್ಥಳಗಳು, ದಕ್ಷಿಣ ಕೊಂಕಣ-ಗೋವಾ, ಮಧ್ಯ ಮಹಾರಾಷ್ಟ್ರದ ಪ್ರತ್ಯೇಕ ಸ್ಥಗಳಲ್ಲಿ ಮಳೆಯಾಗಿದೆ. ಥಾಣೆಯಲ್ಲಿ 2 ಹಾಗೂ ರಾಯಗಡ ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ 1 ಸೆಂಟಿ ಮೀಟರ್ ಮಳೆಯಾಗಿದೆ ಎಂದು ಮುಂಬೈ ಹವಾಮಾನ ಕೇಂದ್ರ ದೈನಂದಿನ ಬುಲೆಟಿನ್‌ನಲ್ಲಿ ತಿಳಿಸಿದೆ.
ತಮಿಳುನಾಡು (Tamil nadu Rains), ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಮುಂದಿನ 1 ವಾರ ಮಳೆಯಾಗುವ ಸಾಧ್ಯತೆ ಎಂದು ಚೆನ್ನೈ ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ರಾಜಧಾನಿ ಚೆನ್ನೈನ ಕೆಲವು ಭಾಗಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿ ಗರಿಷ್ಠ ತಾಪಮಾನ 36-37 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 25-26 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಐಎಂಡಿ ಹೇಳಿದೆ.
ಕಳೆದ 24 ಗಂಟೆಗಳಲ್ಲಿ ತಮಿಳುನಾಡು, ಪುದುಚೇರಿಯ ಒಂದೆರಡು ಕಡೆಗಳಲ್ಲಿ ಗುಡುಗು, ಮಿಂಚು ಸಹಿತ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಿದೆ. ವಿಶೇಷವಾಗಿ ತಂಜಾವೂರು, ಪುದುಕೊಟ್ಟೈ, ಶಿವಗಂಗೈ, ರಾಮನಾಥಪುರಂ, ತಿರುವರೂರ್, ನಾಗಪಟ್ಟಣಂ, ಮೈಲಾಡುತುರೈ ಹಾಗೂ ಕಾರೈಕಲ್‌ನಲ್ಲಿ ಮಳೆಯಾಗಿದೆ.
ಕೇರಳದ (Kerala Rains) ಒಂದೆರಡು ಸ್ಥಳಗಳಲ್ಲಿ ಆಗಸ್ಟ್ 16 ರಂದು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಆಗಸ್ಟ್ 21 ರವರೆಗೆ ರಾಜ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕೇರಳದಲ್ಲಿ ಮಳೆಯ ಕೊರತೆಯಿಂದಾಗಿ ಈಗಾಗಲೇ ವಿದ್ಯುತ್ ಬಿಕ್ಕಟ್ಟು ಶುರುವಾಗಿದೆ. ಆಗಸ್ಟ್‌ನಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆ ಬಾರದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ವರದಿಯಾಗಿದೆ. ಆಗಸ್ಟ್ 15ರ ಬೆಳಗ್ಗೆ 8.30ರವರೆಗೆ ದಾಖಲಾಗಿರುವ ಮಾಹಿತಿ ಪ್ರಕಾರ ಇಡುಕ್ಕಿ ಜಿಲ್ಲೆಯ ವಟ್ಟವಾಡದಲ್ಲಿ 5 ಸೆಂಟಿ ಮೀಟರ್ ಮಳೆಯಾಗಿದೆ. ಕಣ್ಣೂರು ಜಿಲ್ಲೆಯ ಚೆಂಬೇರಿಯಲ್ಲಿ 4.5, ಇಡುಕ್ಕಿ ಜಿಲ್ಲೆಯ ಕುಂಡಲ ಅಣೆಕ್ಟಟ್ಟುನಲ್ಲಿ 4 ಸೆಂಟಿ ಮೀಟರ್ ಮಳೆಯಾಗಿದೆ.
ಸಂಬಂಧಿತ ಲೇಖನ