South India Rain: ತೆಲಂಗಾಣದಲ್ಲಿ ಇಂದು ಭಾರಿ ಮಳೆ ಮುನ್ಸೂಚನೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ; ಈ ರಾಜ್ಯಗಳಲ್ಲೂ ಅಲರ್ಟ್
Jul 28, 2023 08:21 AM IST
ಭಾರಿ ಮಳೆಯಿಂದಾಗಿ ಮುಂಬೈನ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. (HT)
ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಇಂದು ಕೂಡ ವರುಣ ಆರ್ಭಟಿಸಲಿದ್ದಾರೆ. ವಿಶೇಷವಾಗಿ ತೆಲಂಗಾಣದಲ್ಲಿ ಅತಿ ಭಾರಿ ಮಳೆಯ ಮುನ್ಸೂಚನೆ ಇದ್ದು, ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ದೆಹಲಿ: ನೆರೆಯ ತೆಲಂಗಾಣದಲ್ಲಿ (Telangana Rains) ಕಳೆದ 10 ದಿನಗಳಿಂದ ದಾಖಲೆಯ ಮಟ್ಟದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇಂದು (ಜುಲೈ 28, ಶುಕ್ರವಾರ) ಕೂಡ ಅತಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.
ಹಲವು ಜಿಲ್ಲೆಗಳಲ್ಲಿ ರೆಡ್, ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ ಎರಡು ದಿನ ಅಂದರೆ ಜುಲೈ 29 (ಶನಿವಾರ), ಜುಲೈ 30 (ಭಾನುವಾರ) ರವರೆಗೂ ಭಾರಿ ಮಳೆಯಾಗುವ ಸಂಭವಿದೆ ಎಂದು ಹವಾಮಾನ ಇಲಾಖೆ (Meteorological Department) ಎಚ್ಚರಿಕೆ ನೀಡಿದೆ.
ನಿಜಾಮಾಬಾದ್, ನಿರ್ಮಲ್, ಜಗಿತ್ಯಾಲ, ರಾಜಣ್ಣಸಿರಿಸಿಲ್ಲ, ಕರೀಂನಗರ, ಪೆದ್ದಪಲ್ಲಿ, ವಿಕಾರಾಬಾದ್, ಸಂಗಾರೆಡ್ಡಿ, ಮೇದಕ್ ಹಾಗೂ ಕಾಮರೆಡ್ಡಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉಳಿದಂತೆ ಆದಿಲಾಬಾದ್, ಕುಮುರಂಭೀಮ್ ಆಸಿಫಾಬಾದ್, ಮಂಚಿರ್ಯಾಲ, ಜಯಶಂಕರ್ ಭೂಪಾಲಪಲ್ಲಿ, ಮುಲುಗು, ಭದ್ರಾದ್ರಿಕೊತ್ತಗೂಡಂ, ಖಮ್ಮಂ, ನಲ್ಗೊಂಡ, ಸೂರ್ಯಪೇಟ್, ಮೆಹಬೂಬಾಬಾದ್, ವರಂಗಲ್, ಹನುಮಕೊಂಡ, ಜನಗಾರಂ, ಸಿದ್ದಿಪೇಟ್ ಹಾಗೂ ಯಾದಾದ್ರಿ ಭುವನಗರಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಹೈದರಾಬಾದ್, ರಂಗಾರೆಡ್ಡಿ, ಮಲ್ಕಜ್‌ಗಿರಿ, ನಾಗರ್ ಕರ್ನೂಲ್, ವನಪರ್ತಿ, ನಾರಾಯಣಪೇಟ್, ಗದ್ವಾಲಾದಲ್ಲಿ ಯೆಲ್ಲೋ ಅಲರ್ಟ್ ಇದೆ. ವರುಣನ ಆರ್ಭಟದಿಂದಾಗಿ ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಹಳ್ಳ, ಕೊಳ್ಳ, ಹೊಳೆಗಳು ತುಂಬಿ ಹರಿಯುತ್ತಿವೆ. ಪ್ರಮುಖ ನದಿಗಳ ತುಂಬಿ ಹರಿಯುತ್ತಿದ್ದು, ಕೆಲವು ಜಲಾಶಯಗಳ ಗೇಟ್‌ಗಳನ್ನು ತೆರೆದು ಹೊರ ಹರಿವನ್ನು ಹೆಚ್ಚಿಸಲಾಗಿದೆ.
ಕೇಂದ್ರ ಸಚಿವ ಅಮಿತ್ ಶಾ, ಪ್ರಿಯಾಂಕಾ ಗಾಂಧಿ ಭೇಟಿ ರದ್ದು
ಡ್ಯಾಂಗಳಿಂದ ನೀರು ಬಿಟ್ಟ ಪರಿಣಾಮ ತಗ್ಗು ಪ್ರದೇಶಗಳಲ್ಲಿನ ಜನ ವಸತಿ ಪ್ರದೇಶಗಳು ಜಲಾವೃತಗೊಂಡಿವೆ ಭಾರಿ ಮಳೆಯಿಂದಾಗಿ ಕೇಂದ್ರ ಸಚಿವ ಅಮಿತ್ ಶಾ ಅವರ ಜುಲೈ 29ರ ತೆಲಂಗಾಣ ಭೇಟಿಯನ್ನು ರದ್ದು ಮಾಡಲಾಗಿದೆ. ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿಯಾಗಿ ಕಾಂಗ್ರೆಸ್ ನಾಯಕರಿ ಪ್ರಿಯಾಗಾಂಧಿ ಅವರ ತೆಲಂಗಾಣ ಭೇಟಿಯೂ ಮುಂದೂಡಲಾಗಿದೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಸೂಚನೆ ಮೇರೆಗೆ ಶಿಕ್ಷಣ ಸಚಿವೆ ಸಬಿತಾ ರೆಡ್ಡಿ ಅವರ ಆದೇಶದ ಮೇರೆಗೆ ಇಂದು (ಜುಲೈ 29, ಶುಕ್ರವಾರ) ತೆಲಂಗಾಣದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕೇರಳದಲ್ಲಿ ಸಾಧಾರಣ ಮಳೆಯ ಮುನ್ಸೂಚನೆ
ಕೇರಳದಲ್ಲಿ ಮಳೆ (Kerala Rains) ಪ್ರಮಾಣ ಕಡಿಮೆಯಾಗುತ್ತಿದ್ದು, ಇಂದು (ಜುಲೈ 28, ಶುಕ್ರವಾರ) ಸೇರಿದಂತೆ ಮುಂದಿನ ನಾಲ್ಕು ದಿನಗಳ ಕಾಲ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕೆಲವು ಜಿಲ್ಲೆಗಳಿಗೆ ನೀಡಿದ್ದ ಯೆಲ್ಲೋ ಅಲರ್ಟ್ ಅನ್ನು ಹಿಂಪಡೆಯಲಾಗಿದೆ. ಆದರೂ ಮಲಪ್ಪುರಂ, ಕೋಝಿಕ್ಕೋಡ್, ವಯನಾಡು, ಕಣ್ಣೂರು ಹಾಗೂ ಕಾಸರಗೋಡಿನ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಆದರೆ ಭಾರಿ ಮಳೆಯಾಗುವ ಸಂಭವ ಇಲ್ಲ ಎಂದು ಐಎಂಡಿ ಸ್ಪಷ್ಟಪಡಿಸಿದೆ. ಭಾರಿ ಮಳೆ ಎಂದರೆ 24 ಗಂಟೆಗಳಲ್ಲಿ 64.5 ರಿಂದ 115.5 ಮಿಲಿ ಮೀಟರ್ ಮಳೆಯಾಗುತ್ತೆ. ಸದ್ಯ ಕೇರಳದಲ್ಲಿ ಮುಂಗಾರು ದುರ್ಬಲಗೊಳ್ಳುವ ಸಾಧ್ಯತೆ ಇದೆ
ಮುಂಬೈನಲ್ಲಿ ಭಾರಿ ಮಳೆಯ ಮುನ್ಸೂಚನೆ: ಮಹಾರಾಷ್ಟ್ರದಲ್ಲಿ (Maharashtra Rains) ಭಾರಿ ಮಳೆಯ ಮುನ್ಸೂಚನೆ. ವಾಣಿಜ್ಯ ನಗರಿ ಮುಂಬೈ ಮತ್ತು ಅದರ ಉಪನಗರಗಳಲ್ಲಿ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನಿನ್ನೆ (ಜುಲೈ 27, ಗುರುವಾರ) ಮುಂಬೈನಲ್ಲಿ ಭಾರಿ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ರಸ್ತೆಗಳ ತುಂಬೆಲ್ಲಾ ನೀರು ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ.
ತಮಿಳುನಾಡಿನಲ್ಲೂ ಸಾಧಾರಣ: ಮಳೆ ಮತ್ತೊಂದು ನೆರೆಯ ರಾಜ್ಯವಾದ ತಮಿಳುನಾಡಿನಲ್ಲಿ (Tamilnadu Rains) ಇಂದಿನಿಂದ ಒಂದು ವಾರ ಸಾಧಾರಣ ಮಳೆ ಬೀಳಬಹುದು ಎಂದು ಚೆನ್ನೈ ಹವಾಮಾನ ಅಧ್ಯಯನ ಕೇಂದ್ರ ಮಾಹಿತಿ ನೀಡಿದೆ. ಚೆನ್ನೈ, ಪುಂಡೀವಾರಿ, ಕಾರೈಕ್ಕಲ್ ಪ್ರದೇಶಗಳಲ್ಲಿ ಮುಂದಿನ 2 ದಿನಗಳ ಕಾಲ ಸ್ವಲ್ಪ ಮಟ್ಟಿಗೆ ಮಳೆಯಾಗಲಿದೆ ಅಂತ ದೈನಂದಿನ ವರದಿಯಲ್ಲಿ ತಿಳಿಸಿದೆ.
ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಇವತ್ತು (ಜುಲೈ 28, ಶುಕ್ರವಾರ) ಮಳೆಯಾಗುವ ಮುನ್ಸೂಚನೆ (Andhra Pradesh Rains) ಇದೆ. ನಿರಂತರ ಮಳೆಯಿಂದಾಗಿ ರಾಜ್ಯದ ಹಲವಾರು ನದಿಗಳು ತುಂಬಿ ಹರಿಯುತ್ತಿವೆ. ಹಲವು ಪ್ರದೇಶಗಳಲ್ಲಿ ಹೆಚ್ಚಿನ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಧಾರಾಕಾರ ಮಳೆಯಿಂದಾಗಿ ಹಲವೆಡೆ ವಾಹನ ಸಂಚಾರ ಸ್ಥಗಿತಗೊಂಡಿದೆ. ರಸ್ತೆಗಳು ಕೆರೆಗಳಂತಾಗಿವೆ.
-----------------------------------------------------------------------------------
ಸಂಬಂಧಿತ ಲೇಖನ