logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತಮಿಳು ನೆಲದಲ್ಲಿ ಪತ್ತೆಯಾಯ್ತು 500 ವರ್ಷಗಳಷ್ಟು ಪುರಾತನ ಕನ್ನಡ ಶಾಸನ; ತೇಣಿ ವಿನಾಯಕ ದೇಗುಲದಲ್ಲಿ ಸಿಕ್ಕ ಶಾಸನದಲ್ಲೇನಿದೆ?

ತಮಿಳು ನೆಲದಲ್ಲಿ ಪತ್ತೆಯಾಯ್ತು 500 ವರ್ಷಗಳಷ್ಟು ಪುರಾತನ ಕನ್ನಡ ಶಾಸನ; ತೇಣಿ ವಿನಾಯಕ ದೇಗುಲದಲ್ಲಿ ಸಿಕ್ಕ ಶಾಸನದಲ್ಲೇನಿದೆ?

Reshma HT Kannada

Jan 01, 2024 01:44 PM IST

google News

ಕನ್ನಡ ಶಾಸನ (ಎಡಚಿತ್ರ), ತಮಿಳುನಾಡಿನ ತೇಣಿ ವಿನಾಯಕ ದೇವಸ್ಥಾನ (ಬಲಚಿತ್ರ)

    • ತಮಿಳುನಾಡಿನ ತೇಣಿ ಜಿಲ್ಲೆಯ ಪೆರಿಯಾಕುಲಂ ಬಳಿಯ ಸಿಲ್ವರ್‌ಪಟ್ಟಿಯಲ್ಲಿ 16ನೇ ಶತಮಾನದ ಅಂದರೆ 500 ವರ್ಷಗಳಷ್ಟು ಹಳೆಯದಾದ ಕನ್ನಡ ಶಾಸನವೊಂದು ಪತ್ತೆಯಾಗಿದೆ.
ಕನ್ನಡ ಶಾಸನ (ಎಡಚಿತ್ರ), ತಮಿಳುನಾಡಿನ ತೇಣಿ ವಿನಾಯಕ ದೇವಸ್ಥಾನ (ಬಲಚಿತ್ರ)
ಕನ್ನಡ ಶಾಸನ (ಎಡಚಿತ್ರ), ತಮಿಳುನಾಡಿನ ತೇಣಿ ವಿನಾಯಕ ದೇವಸ್ಥಾನ (ಬಲಚಿತ್ರ)

ದೇಶದ ವಿವಿಧ ಭಾಗಗಳಲ್ಲಿ ಪುರಾತತ್ತ್ವಶಾಸ್ತ್ರಜ್ಞರು ಹುಡುಕಾಟ ನಡೆಸಿದಾಗ ಶಾಸನಗಳು ಪತ್ತೆಯಾಗುವುದು ಸಹಜ. ಈಗಾಗಲೇ ಕನ್ನಡ ಹಲವು ಶಾಸನಗಳು ವಿವಿಧೆಡೆ ಪತ್ತೆಯಾಗಿವೆ. ಇದೀಗ ತಮಿಳುನಾಡಿನಲ್ಲಿ ಕನ್ನಡ ಶಾಸನವೊಂದು ಪತ್ತೆಯಾಗಿದೆ. ಇಲ್ಲಿನ ತೇಣಿ ಜಿಲ್ಲೆಯ ವಿನಾಯಕ ದೇವಸ್ಥಾನವೊಂದರಲ್ಲಿ ಈ ಶಾಸನ ಪತ್ತೆಯಾಗಿದೆ.

ಮದುರೈನಲ್ಲಿ ತಮಿಳುನಾಡು ಶಾಲಾ ಶಿಕ್ಷಣ ಇಲಾಖೆಯು ನಡೆಸಿದ ಮೊದಲ ಹಂತದ ಪುರಾತತ್ವ ತರಬೇತಿಗೆ ಹಾಜರಾದ ಸಿಲ್ವರ್‌ಪಟ್ಟಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ಕೆ.ಭಾರತಿರಾಜ ಬಿ.ಟಿ. ಅವರು ಕೆಲವು ಪ್ರದೇಶಗಳಲ್ಲಿ ಪುರಾತತ್ತ್ವ ಶಾಸ್ತ್ರದ ಪುರಾವೆಗಳನ್ನು ಹುಡುಕಲು ಆರಂಭಿಸಿದರು. ಇದರ ಫಲವಾಗಿ ಇವರಿಗೆ ದೇವಾಲಯದಲ್ಲಿ ಕನ್ನಡ ಶಾಸನ ಲಭ್ಯವಾಗಿದೆ.

ಭಾರತಿರಾಜ ಅವರು ನೀಡಿರುವ ಮಾಹಿತಿ ಮೇರೆಗೆ ರಾಮನಾಥಪುರಂ ಪುರಾತತ್ವ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷ ವಿ. ರಾಜಗುರು, ನೂರಸಾಹಿಪುರಂ ಶಿವಕುಮಾರ್, ಬ್ಲಾಕ್ ಸಂಪನ್ಮೂಲ ಶಿಕ್ಷಕ ಮುರುಗೇಶ ಪಾಂಡಿಯನ್ ಮತ್ತು ಅರುಪ್ಪುಕೊಟ್ಟೈ ಎಸ್‌ಬಿಕೆ ಕಾಲೇಜು ಇತಿಹಾಸ ಪ್ರಾಧ್ಯಾಪಕ ರಾಜಪಾಂಡಿ ಶಾಸನವನ್ನು ಪರಿಶೀಲನೆ ನಡೆಸಿದರು.

ರಾಮನಾಥಪುರ ಪುರಾತತ್ವ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷ ವಿ ರಾಜಗುರು ಅವರ ಪ್ರಕಾರ ʼವಿನಾಯಕ ದೇವಸ್ಥಾನದ ನೆಲಮಾಳಿಗೆಯಲ್ಲಿ 3 ಅಡಿ ಎತ್ತರ, 2½ ಅಡಿ ಅಗಲ ಮತ್ತು ½ ಅಡಿ ದಪ್ಪವಿರುವ ಕಲ್ಲಿನ ಚಪ್ಪಡಿ ಇದೆ. ಇದು ದೇವಾಲಯದ ಗೋಡೆಯೊಂದಿಗೆ ಸೇರಿಕೊಂಡಿದೆ. ಕಲ್ಲಿನ ಚಪ್ಪಡಿಯ ಮೇಲ್ಭಾಗದಲ್ಲಿ ಶಿವಲಿಂಗ, ಸೂರ್ಯ ಮತ್ತು ಚಂದ್ರರನ್ನು ರೇಖೆಗಳಾಗಿ ಕತ್ತರಿಸಲಾಗಿದೆ. ಅದರ ಕೆಳಭಾಗದಲ್ಲಿ ನಾಲ್ಕು ಸಾಲುಗಳಿರುವ ಕನ್ನಡ ಶಾಸನವಿದೆʼ ಎಂದಿದ್ದಾರೆ.

ಇದನ್ನೂ ಓದಿ: ಜಪಾನ್‌ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ; ಸುನಾಮಿಯ ಎಚ್ಚರಿಕೆ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಚೆನ್ನೈ ವಿಭಾಗದ ಶಿಲಾಶಾಸನಕಾರ ಯೇಸು ಬಾಬು ಈ ಶಾಸನವನ್ನು ಓದಿದರು. ಈ ಶಾಸನವನ್ನು ಕನ್ನಡ ಭಾಷೆ ಹಾಗೂ ಲಿಪಿಯಲ್ಲಿ ಬರೆಯಲಾಗಿದ್ದು, 'ಶ್ರೀ ಹಾಲಪಯ್ಯ ಗೌಡರ ಗ್ರಾಮ ವೇಲ್ಪರರ ಪಟ್ಟ' ಎಂದು ಬರೆಯಲಾಗಿದೆಯಂತೆ. ಅಂದರೆ ಇದು 16ನೇ ಶತಮಾನದಲ್ಲಿ ಶ್ರೀ ಹಾಲಪಯ್ಯಗೌಡರ ಆಳ್ವಿಕೆಯೊಳಗಿನ ಗ್ರಾಮದ ಗಡಿ ಕಲ್ಲು ಎಂದು ಗುರುತಿಸಲಾಗಿದೆ.

ವಿಜಯನಗರ ಸಾಮ್ರಾಜ್ಯ ಹಾಗೂ ನಾಯಕರ ಆಳ್ವಿಕೆಯ ಕಾಲದಲ್ಲಿ ಗ್ರಾಮದ ಆಡಳಿತಕಾರರನ್ನು ನಟ್ಟನ್ಮಾಯಿ ಎಂದು ಕರೆಯಲಾಗುತ್ತಿತ್ತು. ಇವರನ್ನು ರಾಜ ಅಥವಾ ಪಾಳೆಗಾರರು ನೇಮಿಸುತ್ತಿದ್ದರು. ಇವರು 1 ರಿಂದ 5 ಹಳ್ಳಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅಂದು ವಿಜಯನಗರ ಅರಸರ ಕಾಲದಲ್ಲಿ ಶ್ರೀ ಹಾಲಪಯ್ಯಗೌಡರು ಇಲ್ಲಿಯ ದೊರೆಯಾಗಿದ್ದಿರಬಹುದು. ಕರ್ನಾಟಕದಿಂದ ತೇಣಿಗೆ ಹೋಗಿ ನೆಲೆಸಿರಬಹುದು. ಆ ಸಮಯದಲ್ಲಿ, ಈ ಸ್ಥಳದಲ್ಲಿ ವಿನಾಯಕ, ಕಥಿರ್ ನರಸಿಂಹ ಪೆರುಮಾಳ್ ಮತ್ತು ಚೆನ್ರಾಯ ಪೆರುಮಾಳ್ ದೇವಾಲಯಗಳನ್ನು ನಿರ್ಮಿಸಲಾಗಿತ್ತು. ʼಪಾಳುಬಿದ್ದ ಸ್ಥಳದಲ್ಲಿ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ, ಹೊಸದಾಗಿ ನಿರ್ಮಿಸಿ ಪೂಜೆ ಸಲ್ಲಿಸಲಾಗುತ್ತಿದೆʼ ಎಂದು ದೇವಾಲಯಗಳ ಆಡಳಿತಾಧಿಕಾರಿ ಗಣೇಶನ್ ಸ್ವಾಮಿ ಹೇಳಿದ್ದಾರೆ.

ʼವಿನಾಯಕ ದೇವಾಲಯ ಮತ್ತು ಶಿಲ್ಪಗಳು ವಿಜಯನಗರ ರಾಜರ ಕಾಲದ ಕಲಾಪ್ರಕಾರದಲ್ಲಿವೆ. ದೇವಾಲಯದ ಕಂಬಗಳಲ್ಲಿ ನಿಂತಿರುವ ದ್ವಾರಪಾಲಕರ ಶಿಲ್ಪಗಳಿವೆ ಎಂಬುದು ಗಮನಿಸಬಹುದುʼ ಎನ್ನುತ್ತಾರೆ ಪುರಾತತ್ತ್ವಶಾಸ್ತ್ರಜ್ಞ ರಾಜಗುರು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ