logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Telangana Election: ಚುನಾವಣೆ ಇರುವ ತೆಲಂಗಾಣದಲ್ಲಿ ಕರ್ನಾಟಕ ಸರ್ಕಾರದ ಜಾಹೀರಾತು, ನಿಯಮ ಉಲ್ಲಂಘಿಸಿಲ್ಲ ಎಂದ ಉಪಮುಖ್ಯಮಂತ್ರಿ

Telangana Election: ಚುನಾವಣೆ ಇರುವ ತೆಲಂಗಾಣದಲ್ಲಿ ಕರ್ನಾಟಕ ಸರ್ಕಾರದ ಜಾಹೀರಾತು, ನಿಯಮ ಉಲ್ಲಂಘಿಸಿಲ್ಲ ಎಂದ ಉಪಮುಖ್ಯಮಂತ್ರಿ

HT Kannada Desk HT Kannada

Nov 29, 2023 02:56 PM IST

google News

ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಕಡತ ಚಿತ್ರ)

  • ಚುನಾವಣೆ ನಡೆಯುತ್ತಿರುವ ನೆರೆಯ ತೆಲಂಗಾಣದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾಹೀರಾತು ನೀಡಿದ್ದು, ಅದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ದೂರು ದಾಖಲಾಗಿದೆ. ಈ ಕುರಿತು ವಿವರಣೆ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಆಯೋಗ ನೋಟಿಸ್ ಜಾರಿಗೊಳಿಸಿದ್ದು, ನಿಯಮ ಉಲ್ಲಂಘಿಸಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಕಡತ ಚಿತ್ರ)
ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಕಡತ ಚಿತ್ರ) (PTI)

ಬೆಂಗಳೂರು: ಕರ್ನಾಟಕದಲ್ಲಿ ಜಾರಿಗೊಳಿಸಿರುವ ಐದು ಗ್ಯಾರೆಂಟಿ ಯೋಜನೆಗಳ ಸಾಧನೆಯ ವಿವರವನ್ನು ಕರ್ನಾಟಕ ಸರ್ಕಾರ ತೆಲಂಗಾಣದ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರಲ್ಲಿ ತಪ್ಪೇನೂ ಇಲ್ಲ. ನಾವು ಜಾಹೀರಾತಿನ ಮೂಲಕ ಮತಯಾಚನೆ ಮಾಡಿಲ್ಲ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ತೆಲಂಗಾಣದಲ್ಲಿ ಜಾಹೀರಾತು ನೀಡಿದ್ದರಿಂದಾಗಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ. ಚುನಾವಣಾ ಮಾದರಿ ನೀತಿ ಸಂಹಿತೆಯನ್ನೂ ಉಲ್ಲಂಘಿಸಿಲ್ಲ ಎಂದು ಅವರು ಚುನಾವಣಾ ಆಯೋಗ ನೀಡಿದ ನೋಟಿಸ್‌ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಸರ್ಕಾರದ ನಿಲುವು ಸ್ಪಷ್ಟಪಡಿಸಿದರು.

ತೆಲಂಗಾಣದಲ್ಲಿ ನಾಳೆ (ನ.30) ಮತದಾನ ನಡೆಯಲಿದೆ. ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಬೇಕು ಎಂದು ಕರ್ನಾಟಕದ ಕಾಂಗ್ರೆಸ್‌ ಪಕ್ಷದ ಸರ್ಕಾರದ ಜತೆ ಸೇರಿ ಪ್ರಜಾಪ್ರತಿನಿಧಿ ಕಾಯ್ದೆ, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಜಾಹೀರಾತು ಪ್ರಕಟಿಸಿದೆ ಎಂದು ಬಿಜೆಪಿ ಸೋಮವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಬಿಆರ್‌ಎಸ್ ಕೂಡ ಕರ್ನಾಟಕ ಸರ್ಕಾರದ ಜಾಹೀರಾತಿನ ವಿರುದ್ಧ ದೂರು ದಾಖಲಿಸಿದೆ.

ಈ ದೂರನ್ನು ಆಧರಿಸಿ ಅದೇ ದಿನ ಚುನಾವಣಾ ಆಯೋಗವು ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ತೆಲಂಗಾಣದ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿದ್ದಕ್ಕೆ ವಿವರಣೆ ನೀಡುವಂತೆ ನೋಟಿಸ್ ಜಾರಿಗೊಳಿಸಿತ್ತು. ಅಲ್ಲದೆ, ಜಾಹೀರಾತು ಪ್ರಕಟಿಸದಂತೆ ಸೂಚನೆ ನೀಡಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಜಾಹೀರಾತು ಪ್ರಕಟಿಸುವ ಮೊದಲು ಅನುಮತಿ ಪಡೆಯಬೇಕು ಎಂದು ಸೂಚಿಸಿದೆ.

ನಿಯಮ ಉಲ್ಲಂಘಿಸಿಲ್ಲ ಎಂದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್

ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಕರ್ನಾಟಕ ಸರ್ಕಾರವು ತನ್ನ ಯಾವುದೇ 'ಖಾತರಿ ಯೋಜನೆ'ಗಳನ್ನು ಜಾರಿಗೆ ತಂದಿಲ್ಲ ಎಂಬ ವಿರೋಧ ಪಕ್ಷಗಳ ಹೇಳಿಕೆಗಳು ಪ್ರಚಾರದ ನಡುವೆ ಸದ್ದು ಮಾಡಿದ್ದವು. ಹೀಗಾಗಿ ಕರ್ನಾಟಕ ಸರ್ಕಾರ ಮಾಡಿದ ಕೆಲಸವನ್ನು ಬಿಂಬಿಸುವ ಉದ್ದೇಶದಿಂದ ಜಾಹೀರಾತು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ನಾವು ಯಾವುದೇ ಉಲ್ಲಂಘನೆ ಮಾಡಿಲ್ಲ; ಕರ್ನಾಟಕ ಸರ್ಕಾರ ಯಾರನ್ನೂ ಮತ ಕೇಳಿಲ್ಲ... ನಾವೇನು ​​ಉಲ್ಲಂಘನೆ ಮಾಡಿದ್ದೇವೆ?,’’ ಎಂದು ಚುನಾವಣಾ ಆಯೋಗದ ನಿರ್ದೇಶನದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದರು.

ಅಲ್ಲದೆ, ‘‘ನಾವು ಏನೇ ಕೆಲಸ ಮಾಡಿದ್ದರೂ ಅದನ್ನು ವಿವಿಧ ರಾಜ್ಯಗಳಿಗೆ ಪ್ರಸ್ತುತಪಡಿಸಿದ್ದೇವೆ. ಕರ್ನಾಟಕ, ತಮಿಳುನಾಡು ಅಥವಾ ತೆಲಂಗಾಣದಲ್ಲಿ ಪತ್ರಿಕೆ ಓದುಗರಿಗೆ ನಮ್ಮ ಸಾಧನೆಯನ್ನು ತಲುಪಿಸುವುದರಲ್ಲಿ ಯಾವುದೇ ತೊಂದರೆ ಇಲ್ಲ" ಎಂದು ಅವರು ಪ್ರತಿಪಾದಿಸಿದರು.

“ಹಲವು ವಿಷಯಗಳನ್ನು ಒಳಗೊಂಡ ಹಲವಾರು ನಿಯತಕಾಲಿಕೆಗಳು ಅಥವಾ ಪ್ರಕಟಣೆಗಳು ಇರುತ್ತವೆ. ಅವರು (ಇತರ ಸರ್ಕಾರಗಳು) ಸಹ ಸಾಕಷ್ಟು ಇತರ ಜಾಹೀರಾತುಗಳನ್ನು ನೀಡುತ್ತಾರೆ. ನಾವು ನಮ್ಮನ್ನು (ಕರ್ನಾಟಕ ಸರ್ಕಾರ), ನಮ್ಮ ಸಾಧನೆಯನ್ನು ಸರ್ಕಾರವಾಗಿ ಬಿಂಬಿಸಿದ್ದೇವೆಯೇ ಹೊರತು, ನಾವು ಕಾಂಗ್ರೆಸ್ ಪಕ್ಷವನ್ನು ಅಲ್ಲಿ ಬಿಂಬಿಸುತ್ತಿಲ್ಲ. ಈ ಬಗ್ಗೆ ನಾವು ಖಂಡಿತವಾಗಿಯೂ ಚುನಾವಣಾ ಆಯೋಗದ ನೋಟಿಸ್‌ಗೆ ಉತ್ತರಿಸುತ್ತೇವೆ” ಎಂದು ಶಿವಕುಮಾರ್ ಹೇಳಿದರು.

ಕರ್ನಾಟಕದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಸಾಧ್ಯತೆ

ಕರ್ನಾಟಕ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಚುನಾವಣಾ ಆಯೋಗವು, ಜಾಹೀರಾತುಗಳನ್ನು ಪ್ರಕಟಿಸಲು ರಾಜ್ಯ ಸರ್ಕಾರವು ಪೂರ್ವಾನುಮತಿ ಪಡೆದಿಲ್ಲ. ಸರ್ಕಾರದ ಕ್ರಮವು ವರ್ಷಗಳ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀಡಲಾದ ಚುನಾವಣಾ ನೀತಿ ಸಂಹಿತೆ ಸೂಚನೆಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ.

ತೆಲಂಗಾಣದಲ್ಲಿ ಅಂತಹ ಯಾವುದೇ ಜಾಹೀರಾತುಗಳನ್ನು ಪ್ರಕಟಿಸುವುದನ್ನು ನಿಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿರುವ ಆಯೋಗ, ಅಗತ್ಯ ಅನುಮೋದನೆಗಳನ್ನು ಪಡೆಯುವವರೆಗೆ ಜಾಹೀರಾತು ಪ್ರಕಟಿಸಬಾರದು ಎಂದು ಸೂಚಿಸಿದೆ.

ನೀತಿ ಸಂಹಿತೆ ಸೂಚನೆಗಳ ಪ್ರಕಾರ, ಕಾರ್ಯವಿಧಾನದ ಉಲ್ಲಂಘನೆಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರಿ ಕಾರ್ಯದರ್ಶಿ ವಿರುದ್ಧ ಶಿಸ್ತು ಕ್ರಮವನ್ನು ಏಕೆ ತೆಗೆದುಕೊಳ್ಳಬಾರದು ಎಂದು ಆಯೋಗವು ತನ್ನ ಪತ್ರದಲ್ಲಿ ಕೇಳಿದೆ.

ಈ ಹಿಂದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಲ್ಯಾಣ ಯೋಜನೆಗಳು ಮತ್ತು ಸಾಧನೆಗಳನ್ನು ಎತ್ತಿ ತೋರಿಸುವ ಕೆಲವು ಜಾಹೀರಾತುಗಳನ್ನು ಚುನಾವಣೆಗೆ ಒಳಪಡದ ಕೆಲವು ರಾಜ್ಯಗಳು ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿನ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿರುವುದನ್ನು ಚುನಾವಣಾ ಆಯೋಗದ ಸಮಿತಿಯು ಗಮನಿಸಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ