Telangana Elections: ತೆಲಂಗಾಣ ಚುನಾವಣೆ, ಕೊಲ್ಲಾಪುರದಲ್ಲಿ ಸಂಚಲನ ಮೂಡಿಸಿರುವ ನಿರುದ್ಯೋಗಿ ಯುವತಿ ಬರ್‍ರೆಲಕ್ಕ ಶಿರಿಷಾ
Nov 21, 2023 07:13 PM IST
ಬರ್‍ರೆಲಕ್ಕ ಶಿರಿಷಾ
ತೆಲಂಗಾಣ ವಿಧಾನಸಭಾ ಚುನಾವಣಾ ಕಣ (Telangana Assembly Elections 2023) ದಲ್ಲಿ ವಿಶೇಷವಾಗಿ ಕೊಲ್ಲಾಪುರದಲ್ಲಿ ನಿರುದ್ಯೋಗಿ ಯುವತಿ ಬರ್‍ರೆಲಕ್ಕ ಶಿರಿಷಾ ಸ್ಪರ್ಧೆ ಸಂಚಲನ ಮೂಡಿಸಿದೆ. ಹಣಬಲ, ಪಕ್ಷ ಬಲ, ಅಧಿಕಾರ ಬಲ ಇದ್ದರೂ, ಶಿರಿಷಾಗೆ ಯುವಜನರ ಬೆಂಬಲ ಸಿಗುತ್ತಿರುವುದು ಪ್ರತಿಸ್ಪರ್ಧಿಗಳ ಕೆಂಗಣ್ಣಿಗೆ ಕಾರಣವಾಗಿದೆ.
ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ (Telangana Elections 2023) ಯ ಕಣ ರಂಗೇರಿದ್ದು, ಪ್ರಚಾರದ ಕಾವು ಮುಗಿಲುಮುಟ್ಟಿದೆ. ಈ ನಡುವೆ, ತೆಲಂಗಾಣದಲ್ಲಿ ಉದ್ಯೋಗ ಭರ್ತಿ ಪ್ರಕ್ರಿಯೆಯನ್ನು ತಮ್ಮದೇ ಶೈಲಿಯಲ್ಲಿ ಟೀಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿರುವ ಬರ್‍ರೆಲಕ್ಕ (ಶಿರಿಷಾ) ಕೊಲ್ಲಾಪುರದಲ್ಲಿ ಚುನಾವಣಾ ಕಣ ( Kollapur Assembly constituency) ಕ್ಕೆ ಇಳಿದಿದ್ದಾರೆ. ನಾಮಪತ್ರ ಸಲ್ಲಿಸಿದಾಗಿನಿಂದ ಅವರು ಮನೆಮಾತಾಗಿದ್ದಾರೆ. ಏಕಕಾಲದಲ್ಲಿ ಪ್ರಮುಖ ಪಕ್ಷಗಳಿಗೆ ಸವಾಲು ಹಾಕುತ್ತಿದ್ದಾರೆ.
“ಬೆದರಿಕೆ ಹಾಕಿದರೂ ಹಿಂದೆ ಸರಿಯಲಿಲ್ಲ... ನಿರುದ್ಯೋಗಿಗಳ ಪರವಾಗಿ ಕಣಕ್ಕಿಳಿದಿದ್ದೇನೆ” ಎಂದು ಹೇಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ ಬರ್‍ರೆಲಕ್ಕ ಖ್ಯಾತಿಯ ಶಿರಿಷಾ.
ಯಾರು ಈ ಬರ್‍ರೆಲಕ್ಕ ಶಿರಿಷಾ
ನಾಗರ್ ಕರ್ನೂಲ್ ಜಿಲ್ಲೆಯ ಪೆದ್ದಕೊತ್ತಪಲ್ಲಿ ಮರಿಕಲ್ ಗ್ರಾಮದ ಕರ್ನೆ ಶಿರಿಷಾ ಕೊಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಎಷ್ಟೇ ಡಿಗ್ರಿ ಓದಿದರೂ ಸರ್ಕಾರಿ ನೌಕರಿ ಸಿಗುತ್ತಿಲ್ಲ ಎಂದು ಕೊರಗುವ ವಿಡಿಯೋ ಮೂಲಕ ಶಿರಿಷಾ ಸುದ್ದಿಯಾದವರು. ಅಷ್ಟೇ ಅಲ್ಲ, ಲಘುದಾಟಿಯಲ್ಲಿ ವ್ಯವಸ್ಥೆಯನ್ನು ಛೇಡಿಸುವ ವಿಡಿಯೋ ಮೂಲಕ ಫೇಮಸ್ ಆದ ಶಿರಿಷಾ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಿದ್ದಾರೆ. ಸಂದರ್ಶನಗಳ ಮೂಲಕವೂ ಸುದ್ದಿಯಾಗಿದ್ದರು. ಒಂದು ಹಂತದಲ್ಲಿ ಆಕೆ ವಿಪರೀತ ಟ್ರೋಲ್‌ಗೂ ಒಳಗಾಗಿದ್ದರು.
ಆದರೆ, ಇದೀಗ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗಮನಿಸಿದರೆ ಅವರು, ನಿರುದ್ಯೋಗಿಗಳ ಪ್ರತಿನಿಧಿಯಾಗಿ ಕಾಣಿಸಿಕೊಂಡು ಗಮನಸೆಳೆದಿದ್ದಾರೆ. ಇದು ಕೊಲ್ಲಾಪುರ ರಾಜಕೀಯದಲ್ಲಿ ಕುತೂಹಲದ ವಿಚಾರವಾಗಿ ಚರ್ಚೆಗೆ ಒಳಗಾಗಿದೆ.
ಶಿರಿಷಾ ಅವರಿಗೆ ಸಿಕ್ಕ ಚುನಾವಣಾ ಚಿಹ್ನೆ ಬಿಗಿಲು
ಕೊಲ್ಲಾಪುರ ಕ್ಷೇತ್ರದಿಂದ ಬರ್‍ರೆಲಕ್ಕ ಶಿರಿಷಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಆದರೆ ಆಕೆಗೆ ಚುನಾವಣಾ ಆಯೋಗವು ಬಿಗಿಲನ್ನು ಚುನಾವಣಾ ಚಿಹ್ನೆಯಾಗಿ ನೀಡಿದೆ. ನಿರುದ್ಯೋಗಿಗಳ ಪರ ಧ್ವನಿಯಾಗಿ ಶಿರಿಷಾ ಇರುವ ಕಾರಣ ಅನೇಕ ಸಾರ್ವಜನಿಕ ಸಂಘಟನೆಗಳು ಮತ್ತು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಮತ್ತು ನಿರುದ್ಯೋಗಿಗಳು ಸಿರಿಶಾ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಜನಪದ ಕಲಾವಿದರೂ ಬೆಂಬಲ ನೀಡುತ್ತಿದ್ದಾರೆ. ಮಹಿಳೆಯರಿಂದಲೂ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.
ಕೊಲ್ಲಾಪುರದಲ್ಲಿ ಬರಿಗೈಯಲ್ಲಿ ನಿಂತಿರುವ ಬರ್‍ರೆಲಕ್ಕ ಅಲಿಯಾಸ್ ಶಿರಿಷಾ ಅವರನ್ನು ಬೆಂಬಲಿಸಿ ಪ್ರಚಾರ ಗೀತೆಯನ್ನೂ ಬಿಡುಗಡೆ ಮಾಡಲಾಗಿದೆ. ನಿರುದ್ಯೋಗಿಗಳನ್ನು ಎಚ್ಚರಿಸಲು ಮಾಡಿರುವ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.
ಕರ್ನೆ ಶಿರಿಶಾ ಚುನಾವಣಾ ಪ್ರಚಾರಕ್ಕಾಗಿ ಪುದುಚೇರಿ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಮಲ್ಲಾಡಿ ಕೃಷ್ಣ ರಾವ್ ಅವರು ಶನಿವಾರ ದೇಣಿಗೆಯಾಗಿ ಲಕ್ಷ ರೂಪಾಯಿ ನೀಡಿದರು. ಸಾಮಾಜಿಕ ಜಾಲತಾಣಗಳ ಮೂಲಕ ಯುವಕರ ನೆರವಿನಿಂದ ಆಕೆಯನ್ನು ಗೆಲ್ಲಿಸುವಂತೆ ಕೋರಿದರು.
ಶಿರಿಷಾ ಸ್ಪರ್ಧೆಗೆ ನೆಟಿಜನ್‌ಗಳ ಬೆಂಬಲ ವ್ಯಕ್ತ
"ಗೆಲುವು ಮತ್ತು ಸೋತ ನಂತರ, ನಿಮ್ಮ ಧೈರ್ಯವು ಪ್ರತಿಯೊಬ್ಬ ಯುವಕನಿಂದಲೂ ಬರಬೇಕು, ಪ್ರೀತಿಯ ಸಹೋದರಿ" ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
“ಇಂತಹ ಯುವಜನರು ರಾಜ್ಯ ಮತ್ತು ದೇಶಕ್ಕೆ ಬಹಳ ಅವಶ್ಯಕ. ಯುವಜನರ ಸಾಮರ್ಥ್ಯ ಏನೆಂಬುದನ್ನು ಎಲ್ಲರೂ ಅರಿತು ಶಿರಿಷಾ ಅವರಿಗೆ ಮತ ಹಾಕಬೇಕು" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.