Rajasthan Earthquake: ರಾಜಸ್ಥಾನದ ಜೈಪುರದಲ್ಲಿ ಕೇವಲ ಅರ್ಧ ಗಂಟೆಯಲ್ಲಿ ಮೂರು ಬಾರಿ ಭೂಕಂಪ; ಬೆಚ್ಚಿಬಿದ್ದ ಜನರು
Jul 21, 2023 09:33 AM IST
ರಾಜಸ್ಥಾನದಲ್ಲಿ ಭೂಕಂಪ (ಪ್ರಾತಿನಿಧಿಕ ಚಿತ್ರ)
- Jaipur Earthquake: ಜೈಪುರದಲ್ಲಿ ಬೆಳಗ್ಗೆ 4.09ಕ್ಕೆ 4.4 ತೀವ್ರತೆಯ ಭೂಕಂಪ ಹಾಗೂ ಬೆಳಗ್ಗೆ 4.22ಕ್ಕೆ 3.1 ತೀವ್ರತೆಯ ಭೂಕಂಪ ಸಂಭವಿಸಿದೆ. ಕೊನೆಯದಾಗಿ ಮುಂಜಾನೆ 4.25ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.4 ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ವರದಿ ಮಾಡಿದೆ.
ರಾಜಸ್ಥಾನ (ಜೈಪುರ): ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಇಂದು (ಜುಲೈ 21, ಶುಕ್ರವಾರ) ಮುಂಜಾನೆ ಅರ್ಧ ಗಂಟೆಯ ಅವಧಿಯಲ್ಲಿ ಮೂರು ಬಾರಿ ಲಘು ಭೂಕಂಪವಾಗಿದ್ದು, ಸರಣಿ ಭೂಕಂಪಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.
ಜೈಪುರದಲ್ಲಿ ಬೆಳಗ್ಗೆ 4.09ಕ್ಕೆ 4.4 ತೀವ್ರತೆಯ ಭೂಕಂಪ ಹಾಗೂ ಬೆಳಗ್ಗೆ 4.22ಕ್ಕೆ 3.1 ತೀವ್ರತೆಯ ಭೂಕಂಪ ಸಂಭವಿಸಿದೆ. ಕೊನೆಯದಾಗಿ ಮುಂಜಾನೆ 4.25ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.4 ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ವರದಿ ಮಾಡಿದೆ.
ಮುಂಜಾನೆ 4.09ಕ್ಕೆ ಸಂಭವಿಸಿದ ಭೂಕಂಪ 10 ಕಿಲೋಮೀಟರ್ ಆಳದಲ್ಲಿ, ಬೆಳಗ್ಗೆ 4.22ಕ್ಕೆ 5 ಕಿಲೋಮೀಟರ್ ಆಳದಲ್ಲಿ ಹಾಗೂ 4.25ಕ್ಕೆ 10 ಕಿಲೋಮೀಟರ್ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದೆ.
ಘಟನೆಯಲ್ಲಿ ಯಾವುವೇ ಸಾವು-ನೋವು, ಆಸ್ತಿ-ಪಾಸ್ತಿ ಹಾನಿ ವರದಿಯಾಗಿಲ್ಲ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಟ್ವೀಟ್ ಮಾಡಿ, ಜೈಪುರ ಸೇರಿದಂತೆ ರಾಜ್ಯದ ಇತರ ಸ್ಥಳಗಳಲ್ಲಿ ಭೂಕಂಪನದ ಅನುಭವವಾಗಿದೆ. ನೀವೆಲ್ಲರೂ ಸುರಕ್ಷಿತವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.