Tirupati Temple: ಪ್ರತಿ ರಾಜ್ಯದಲ್ಲಿ ತಿರುಪತಿ ಬಾಲಾಜಿ ದೇಗುಲ, ಯಾವ್ಯಾವ ರಾಜ್ಯಗಳಲ್ಲಿ ಟಿಟಿಡಿ ಯೋಜನೆ; ವಿವರ ಇಲ್ಲಿದೆ
Jun 25, 2023 08:03 PM IST
ತಿರುಮಲ ತಿರುಪತಿ ದೇವಸ್ಥಾನ. (Nikhil B/Wikimedia Commons)
Tirupati Temple: ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ)ಟ್ರಸ್ಟ್ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಬಾಲಾಜಿ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದೆ. ನವಿಮುಂಬಯಿನಲ್ಲಿ ದೇವಸ್ಥಾನದ ಟ್ರಸ್ಟ್‌ಗೆ ಮಹಾರಾಷ್ಟ್ರ ಸರ್ಕಾರ 600 ಕೋಟಿ ರೂಪಾಯಿ ಮೌಲ್ಯದ 10 ಎಕರೆ ಜಮೀನು ಮಂಜೂರು ಮಾಡಿದೆ.
ವಿಶ್ವದ ಶ್ರೀಮಂತ ದೇವಾಲಯ ಟ್ರಸ್ಟ್ ಎಂದು ಪರಿಗಣಿಸಲ್ಪಟ್ಟಿರುವ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ (Tirumala Tirupati Devasthanams Trust) ಮುಂಬರುವ ವರ್ಷಗಳಲ್ಲಿ ಎಲ್ಲ ರಾಜ್ಯಗಳಲ್ಲಿ ವೆಂಕಟೇಶ್ವರ ದೇವಾಲಯ (Venkateshwara Temple) ಗಳನ್ನು ಸ್ಥಾಪಿಸಲು ನಿರ್ಧರಿಸಿದೆ.
ಇದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಮಲ ತಿರುಪತಿ ದೇವಸ್ಥಾನಮ್ (TTD) ಯ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿದೆ. ಭಾರತದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ತಿರುಪತಿ ದೇವಸ್ಥಾನದ ಕನಿಷ್ಠ ಒಂದು ಪ್ರತಿಕೃತಿ ದೇಗುಲ ನಿರ್ಮಿಸುವ ಮೂಲಕ ದೇಶಾದ್ಯಂತ ಬಾಲಾಜಿ ದೇವರ ಉಪಸ್ಥಿತಿಯನ್ನು ಖಚಿತಪಡಿಸಲು ಮುಂದಾಗಿದೆ.
ಪ್ರಸ್ತುತ, ಜಮ್ಮು, ನವಿ ಮುಂಬೈ, ಗುಜರಾತ್ ಮತ್ತು ಛತ್ತೀಸ್‌ಗಢದಂತಹ ದೇಶಾದ್ಯಂತ ಹಲವಾರು ಸ್ಥಳಗಳಲ್ಲಿ ವೆಂಕಟೇಶ್ವರ ದೇವಾಲಯದ ಪ್ರತಿಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಟಿಟಿಡಿ ಟ್ರಸ್ಟ್ ಗುಜರಾತ್‌ನ ಗಾಂಧಿನಗರ, ಛತ್ತೀಸ್‌ಗಢದ ರಾಯ್‌ಪುರ ಮತ್ತು ಬಿಹಾರದಲ್ಲಿ ದೇವಾಲಯಗಳನ್ನು ನಿರ್ಮಿಸಲು ಪರಿಗಣಿಸುತ್ತಿದೆ. ಪ್ರಸ್ತುತ, ಬಿಹಾರದಲ್ಲಿ ಮಂದಿರ ನಿರ್ಮಾಣದ ಸ್ಥಿತಿ ನಿತೀಶ್ ಕುಮಾರ್ ಸರ್ಕಾರದೊಂದಿಗೆ ಆರಂಭಿಕ ಹಂತದ ಚರ್ಚೆಯಲ್ಲಿದೆ.
ಟಿಟಿಡಿ ಟ್ರಸ್ಟ್ ಅನ್ನು 1933 ರಲ್ಲಿ ಸ್ಥಾಪಿಸಲಾಯಿತು. ಟ್ರಸ್ಟ್ ನಂತರ ತಿರುಮಲದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಾಲಯ, ತಿರುಚಾನೂರಿನ ಶ್ರೀ ಪದ್ಮಾವತಿ ಅಮ್ಮವಾರಿ ದೇವಾಲಯ ಮತ್ತು ತಿರುಪತಿಯ ಶ್ರೀ ಗೋವಿಂದರಾಜ ಸ್ವಾಮಿ ದೇವಾಲಯ ಸೇರಿ ಕೆಲವು ದೇವಾಲಯಗಳನ್ನು ಮಾತ್ರ ನಿರ್ವಹಿಸುತ್ತಿತ್ತು. ನಂತರ ಈ ಟ್ರಸ್ಟ್ ಸ್ಥಾಪನೆಯಾದ ಒಂಬತ್ತು ದಶಕಗಳಲ್ಲಿ ಭಾರತದಾದ್ಯಂತ ವೆಂಕಟೇಶ್ವರನಿಗೆ ಸಮರ್ಪಿತವಾದ 58 ದೇವಾಲಯಗಳನ್ನು ಸ್ಥಾಪಿಸಿತು. ಆದಾಗ್ಯೂ, ಇವುಗಳಲ್ಲಿ ಹೆಚ್ಚಿನವು ದಕ್ಷಿಣದ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿವೆ. ಇದೀಗ ಉತ್ತರ ಮತ್ತು ಪೂರ್ವ ಭಾರತ ಸೇರಿ ದೇಶದಾದ್ಯಂತ ವೆಂಕಟೇಶ್ವರನ ದೇವಾಲಯವನ್ನು ಸ್ಥಾಪಿಸಲು ಟ್ರಸ್ಟ್ ನಿರ್ಧರಿಸಿದೆ.
ಉತ್ತರಾಖಂಡದ ಋಷಿಕೇಶದಲ್ಲಿ 1969 ರಲ್ಲಿ ಬಾಲಾಜಿ ದೇವಾಲಯವನ್ನು ಸ್ಥಾಪಿಸಿತು. ಕನ್ಯಾಕುಮಾರಿಯಲ್ಲಿ 2019 ರಲ್ಲಿ ವೆಂಕಟೇಶ್ವರ ದೇವಾಲಯವನ್ನು ಸ್ಥಾಪಿಸುವ ಮೂಲಕ ಭಾರತದ ದಕ್ಷಿಣ ತುದಿಯಲ್ಲಿ ತನ್ನ ಹೆಜ್ಜೆಗುರುತನ್ನು ಸ್ಥಾಪಿಸಿದೆ. ಇತ್ತೀಚೆಗೆ, ಜೂನ್ 8 ರಂದು ಜಮ್ಮುವಿನಲ್ಲಿ ಭಗವಾನ್ ವೆಂಕಟೇಶ್ವರ ಬಾಲಾಜಿ ದೇವಾಲಯವನ್ನು ಉದ್ಘಾಟಿಸಲಾಗಿದೆ.
ಟ್ರಸ್ಟ್ ಇತ್ತೀಚೆಗೆ ಮಹಾರಾಷ್ಟ್ರದ ಬಾಲಾಜಿ ದೇವಾಲಯದ ಪ್ರತಿಕೃತಿಯ ಅಡಿಪಾಯವನ್ನು ಹಾಕಿದೆ. ಇದಕ್ಕಾಗಿ ರಾಜ್ಯ ಸರ್ಕಾರವು ನವಿ ಮುಂಬೈನಲ್ಲಿರುವ ದೇವಸ್ಥಾನದ ಟ್ರಸ್ಟ್‌ಗೆ ಸುಮಾರು 600 ಕೋಟಿ ರೂಪಾಯಿ ಮೌಲ್ಯದ 10 ಎಕರೆ ಪ್ರಧಾನ ಭೂಮಿಯನ್ನು ಮಂಜೂರು ಮಾಡಿದೆ. ಅಲ್ಲಿ ಮಂದಿರ ನಿರ್ಮಾಣಕ್ಕೆ ಟಿಟಿಡಿ 70 ಕೋಟಿ ರೂ. 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಗವಾನ್ ವೆಂಕಟೇಶ್ವರ ಸ್ವಾಮಿ ದೇವಾಲಯಗಳ ನಿರ್ಮಾಣವು ಭಗವಂತನನ್ನು ಭಕ್ತರ ಮನೆ ಬಾಗಿಲಿಗೆ ಕೊಂಡೊಯ್ಯುವ ಪ್ರಯತ್ನವಾಗಿದೆ ಎಂದು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾಗಿ ವರದಿ ಹೇಳಿದೆ.
ಆಂಧ್ರ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸೂಚನೆಗಳನ್ನು ಅನುಸರಿಸಿ, ಟಿಟಿಡಿ ದಕ್ಷಿಣ ಭಾರತದ ರಾಜ್ಯಗಳ ದೂರದ ಮತ್ತು ಹಿಂದುಳಿದ ಹಳ್ಳಿಗಳಲ್ಲಿ ಸಣ್ಣ ದೇವಾಲಯಗಳನ್ನು ನಿರ್ಮಿಸುತ್ತದೆ ಎಂದು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಮಾಹಿತಿ ನೀಡಿದರು.
ಗಮನಿಸಬಹುದಾದ ಸುದ್ದಿಗಳು
Science News: ದಿನಕ್ಕೆಷ್ಟು ಸಲ ಪವರ್ಕಟ್ ಮಾಡ್ತಾರಪ್ಪ ಎಂಬ ಚಿಂತೆ ಬಿಡಿ; 24X7 ವೈರ್ಲೆಸ್ ಪವರ್ ಸಪ್ಲೈ ಪ್ರಯೋಗ ಶುರುವಾಗಿದೆ