Rama Mandira: ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಸಜ್ಜು; ರಾಮದೇಗುಲದಲ್ಲಿ ಭಕ್ತರು ಏನೆಲ್ಲಾ ನೋಡಬಹುದು; ವಿವರ
Jan 17, 2024 09:14 PM IST
ರಾಮಮಂದಿರ
- ಬಹುಕೋಟಿ ಹಿಂದೂಗಳ ಕನಸು ಅಯೋಧ್ಯೆ ರಾಮಮಂದಿರ. ಜನವರಿ 22ಕ್ಕೆ ಲೋಕಾರ್ಪಣೆಗೊಳ್ಳುವ ಮೂಲಕ 700 ವರ್ಷಗಳ ವಿವಾದಕ್ಕೆ ಅಂತ್ಯ ಹಾಡಲಿದೆ. ಹಾಗಾದರೆ ರಾಮಮಂದಿರ ನೋಡಲು ದೂರದ ಅಯೋಧ್ಯೆಗೆ ತೆರಳುವವರಿಗೆ ಏನೆಲ್ಲಾ ನೋಡಲು ಸಿಗಬಹುದು ಎಂಬ ಕುತೂಹಲ ನಿಮಗಿದ್ದರೆ, ಇಲ್ಲಿದೆ ಉತ್ತರ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಹುಕೋಟಿ ಹಿಂದೂಗಳ ಕನಸು. ಸುಮಾರು 700 ವರ್ಷಗಳಿಂದ ರಾಮ ಜನ್ಮಭೂಮಿಯ ವಿವಾದ ಮುಂದುವರಿದುಕೊಂಡೇ ಸಾಗಿತ್ತು. ಆದರೆ ಇದೀಗ ಈ ವಿವಾದಕ್ಕೆ ಕೊನೆ ಹಾಡುವ ಸಂದರ್ಭ ಬಂದಿದೆ. 2024ರ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಿದ್ದಾರೆ.
71 ಎಕರೆ ವಿಸ್ತೀರ್ಣ ಹೊಂದಿರುವ ಈ ದೇವಾಲಯವು ಮೂರು ಮಹಡಿಗಳನ್ನು ಹೊಂದಿದೆ. ಚಿತ್ತಿ ಚಿತ್ರಗಳು, ಕೆತ್ತನೆಗಳನ್ನು ಹೊಂದಿರುವ 360 ಸ್ತಂಭಗಳನ್ನು ರಾಮಮಂದಿರ ಹೊಂದಿರಲಿದೆ. ರಾಮಮಂದಿರ ನಿರ್ಮಾಣ ಯೋಜನೆಯ ಕೊನೆಯ ಹಂತವು ಡಿಸೆಂಬರ್ 2025ರ ಒಳಗೆ ಪೂರ್ಣಗೊಳ್ಳಲಿದೆ. ಪರಿಕ್ರಮ ಮಾರ್ಗ, ಏಳು ದೇವಾಲಯಗಳು, ಸಭಾಂಗಣ ಮತ್ತು ಆಡಳಿತ ಕಟ್ಟಡಗಳನ್ನು ಈ ಇದು ಹೊಂದಿದೆ. ಸದ್ಯದಲ್ಲೇ ಲೋಕಾರ್ಪಣಾ ಕಾರ್ಯವಿದ್ದು, ನಗರದಲ್ಲಿ ಹೊಸ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ಟರ್ಮಿನಲ್ ಹಾಗೂ ಒಳಚರಂಡಿ ವ್ಯವಸ್ಥೆ ಸೇರಿದಂತೆ ಹಲವು ನಿರ್ಮಾಣ ಕಾರ್ಯಗಳು ಅಭಿವೃದ್ಧಿಯಲ್ಲಿದೆ. ಆದರೆ ಈ ಅಭಿವೃದ್ಧಿ ಕಾರ್ಯಗಳಿಂದ ಆದಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ರಾಮ ಮಂದಿರ ನಿರ್ಮಾಣದ ಮೊದಲ ಹಂತದ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ. 2024ರ ಜನವರಿ 24ರಿಂದ ಭಕ್ತರು ರಾಮ್‌ಲಲ್ಲಾನನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಸ್ವಾತಂತ್ರ್ಯದ ನಂತರ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಅತೀ ದೊಡ್ಡ ದೇಗುಲ ಅಯೋಧ್ಯದ ರಾಮಮಂದಿರ ಎಂದು ಹೇಳಲಾಗುತ್ತಿದೆ. ಈ ರಾಮ ದೇಗುಲವು ಹೊಸ ಯುಗದ ತಾಂತ್ರಿಕ ಅನುಕೂಲಗಳೊಂದಿಗೆ ಪ್ರಾಚೀನ ಭಾರತೀಯ ಸಂಸ್ಕೃತಿ, ಸಂಪ್ರದಾಯದ ಸಂಯೋಜನೆಯಾಗಿದೆ.
ರಾಮಮಂದಿರದ ನೆಲ ಮಹಡಿಯಲ್ಲಿ 5 ಮಂಟಪಗಳಿವೆ. 1ನೇ ಮಹಡಿಯಲ್ಲಿ ಮೂರು ಮಂಟಪಗಳಿದ್ದರೆ, 2ನೇ ಮಹಡಿಯಲ್ಲಿ 2 ಮಂಟಪಗಳಿವೆ.
ಅಯೋಧ್ಯೆ ರಾಮಮಂದಿರಕ್ಕೆ ಪ್ರತಿದಿನ 50000 ಭಕ್ತರು ಭೇಟಿ ನೀಡಬಹುದಾಗಿದೆ. ಒಮ್ಮೆ ಸಂಪೂರ್ಣ ದೇಗುಲ ಲೋಕಾರ್ಪಣೆಗೊಂಡ ಬಳಿಕ 1 ಲಕ್ಷ ಜನರು ಒಮ್ಮೆಗೆ ಭೇಟಿ ನೀಡಬಹುದಾಗಿದೆ. ಈ ದೇಗುಲವು 161 ಅಡಿ ಎತ್ತರ, 235 ಅಡಿ ಅಗಲ ಹಾಗೂ 360 ಅಡಿ ಉದ್ದವಿರುತ್ತದೆ.
ಅಯೋಧ್ಯ ರಾಮಮಂದಿರದ ಪ್ರಸ್ತುತ ಸ್ಥಿತಿ
* 2019ರಲ್ಲಿ ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪಿನ ನಂತರ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಯಿತು.
* 2020 ಆಗಸ್ಟ್ 5 ರಂದು ರಾಮಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು. ಜೈ ಶ್ರೀರಾಮ್ ಎಂದು ಕೆತ್ತಿದ ಇಟ್ಟಿಗೆಗಳಿಂದ ನಿರ್ಮಾಣ ಪ್ರಾರಂಭಿಸಲಾಯಿತು.
* ಇದೀಗ 3 ವರ್ಷಗಳ ಬಳಿಕ 1ನೇ ಹಂತದ ಕಾಮಗಾರಿ ಪೂರ್ಣಗೊಂಡಿದೆ.
* ಜನವರಿ 24 ರಂದು ರಾಮಮಂದಿರವು ಲೋಕಾರ್ಪಣೆಗೆ ಸಜ್ಜಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಅಯೋಧ್ಯೆ ರಾಮಮಂದಿರದ ವೈಶಿಷ್ಟ್ಯಗಳು
* ಒಟ್ಟು 70 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ವಿವಿಧ ದೇವಾಲಯಗಳು ಇರಲಿವೆ.
* ಇದು 2.7 ಎಕರೆ ವಿಸ್ತೀರ್ಣದ ಮುಖ್ಯ ದೇವಾಲಯದ ಸಂಕೀರ್ಣವನ್ನು ಹೊಂದಿದೆ, ಇದರಲ್ಲಿ ಶ್ರೀರಾಮನ ವಿಗ್ರಹವನ್ನು ಇರಿಸಲಾಗುತ್ತದೆ. ಇಲ್ಲಿ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶವಿದೆ.
* ರಾಮಮಂದಿರ ಹೊರತಾಗಿಯೂ ಇಲ್ಲಿಗೆ ಭೇಟಿ ನೀಡಿರುವ ಭಕ್ತರು ಗಣೇಶ, ಶಿವ ಮತ್ತು ಇತರ ದೇವತೆಗಳ ದೇವಾಲಯಗಳಿಗೆ ಭೇಟಿ ನೀಡಬಹುದು.
* ಈ ದೇವಾಲಯವು ಕೂಡು, ನೃತ್ಯ, ರಂಗ್, ಕೀರ್ತನೆ ಮತ್ತು ಪ್ರಾರ್ಥನಾ ಎಂದು ಕರೆಯಲ್ಪಡುವ 5 ಮಂಟಪಗಳನ್ನು ಹೊಂದಿರುತ್ತದೆ.
ರಾಮಮಂದಿರ ದರ್ಶನ ಬುಕ್ಕಿಂಗ್
ರಾಮಮಂದಿರ ಬಗೆಗಿನ ಸಂಪೂರ್ಣ ಮಾಹಿತಿಗೆ https://srjbtkshetra.org/ ಈ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಈ ವೆಬ್‌ಸೈಟ್‌ನಲ್ಲಿ ದರ್ಶನ ಬುಕ್ಕಿಂಗ್ ಆಯ್ಕೆ ಕ್ಲಿಕ್ ಮಾಡಿ. ನಂತರ ದಿನಾಂಕ, ಎಷ್ಟು ಜನ ಭೇಟಿ ನೀಡಲಿದ್ದೀರಿ ಎಂದು ನಮೂದಿಸಿ, ಟೋಕನ್ ಜನರೇಟ್ ಮಾಡಿ. ಈ ಟೋಕನ್ ಅನ್ನು ದರ್ಶನ ಮುಗಿಯುವವರೆಗೂ ಜೋಪಾನವಾಗಿ ಇರಿಸಿಕೊಳ್ಳುವುದು ಮುಖ್ಯವಾಗುತ್ತದೆ.