Job News: ಐದನೇ ತರಗತಿ ಗ್ರೂಪ್ ಡಿ ಹುದ್ದೆಗೆ ಅರ್ಜಿ ಸಲ್ಲಿಸಿದ ಎಂಬಿಎ ಎಂಟೆಕ್ ಸ್ನಾತಕ ಪದವೀಧರರು, 11 ಸಾವಿರ ಜಾಬ್ಸ್‌ಗೆ 55 ಲಕ್ಷ ಅರ್ಜಿ
Jun 08, 2023 10:44 AM IST
Job News: ಐದನೇ ತರಗತಿ ಗ್ರೂಪ್ ಡಿ ಹುದ್ದೆಗೆ ಅರ್ಜಿ ಸಲ್ಲಿಸಿದ ಎಂಬಿಎ ಎಂಟೆಕ್ ಸ್ನಾತಕ ಪದವೀಧರರು, 11 ಸಾವಿರ ಜಾಬ್ಸ್‌ಗೆ 55 ಲಕ್ಷ ಅರ್ಜಿ
- Employment News: ಸಿಬ್ಬಂದಿ ನೇಮಕಾತಿ ಆಯೋಗದ ಜವಾನ, ವಾಚ್‌ಮೆನ್, ತೋಟದ ಮಾಲಿ ಇತ್ಯಾದಿ ಐದನೇ ತರಗತಿ ವಿದ್ಯಾರ್ಹತೆ ಬಯಸುವ ಹುದ್ದೆಗಳಿಗೆ ಉತ್ತರ ಪ್ರದೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆದವರು ಅರ್ಜಿ ಸಲ್ಲಿಸಿದ್ದಾರೆ. ಡಿಪ್ಲೊಮಾ, ಹೈಸ್ಕೂಲ್ ವಿದ್ಯಾರ್ಹತೆಯ ಉದ್ಯೋಗಗಳಿಗೂ ಇದೇ ರೀತಿ ಅರ್ಜಿ ಸಲ್ಲಿಸಿದ್ದಾರೆ.
ಪ್ರಯಾಗ್‌ರಾಜ್: ಭಾರತದಲ್ಲಿ ಯುವ ಜನತೆ ಉದ್ಯೋಗಕ್ಕಾಗಿ ಪರಿತಪಿಸುತ್ತಿದ್ದಾರೆ. ವಿಶೇಷವಾಗಿ ಯಾವ ಕೆಲಸವಾದರೂ ಸರಿ ಸರಕಾರಿ ಕೆಲಸ ಸಿಕ್ಕರೆ ಓಕೆ ಎಂಬ ಮನಸ್ಥಿತಿಯೂ ಇದೆ. ಇದೇ ಕಾರಣಕ್ಕೆ ಪೌರ ಕಾರ್ಮಿಕ ಇತ್ಯಾದಿ ಗ್ರೂಪ್ ಡಿ ಹುದ್ದೆಗಳಿಗೆ ಪದವೀಧರರು ಅರ್ಜಿ ಸಲ್ಲಿಸಿದ ಘಟನೆಗಳು ಈಗಾಗಲೇ ಹಲವು ಬಾರಿ ನಡೆದಿವೆ. ಇದೀಗ ಇದೇ ರೀತಿಯ ಸುದ್ದಿಯೊಂದನ್ನು ಇಂಡಿಯಾ ಟುಡೇ ನೀಡಿದ್ದು, ಜವಾನ, ವಾಚ್‌ಮೆನ್, ಗಾರ್ಡನರ್ ಇತ್ಯಾದಿ ಗ್ರೂಪ್ ಡಿ ಹುದ್ದೆಗಳಿಗೆ ಉತ್ತರ ಪ್ರದೇಶದಲ್ಲಿ 55 ಲಕ್ಷಕ್ಕೂ ಹೆಚ್ಚು ಬಿಟೆಕ್ ಎಂಬಿಎ ಸ್ನಾತಕ ಪದವೀಧರರು ಅರ್ಜಿ ಸಲ್ಲಿಸಿದ್ದಾರೆ. ಈ ರೀತಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಬಹುತೇಕರು ಎಂಬಿಎ, ಬಿಟೆಕ್, ಎಂಟೆಕ್, ಬಿಬಿಎ, ಎಂಎ ಮತ್ತು ಎಂಎಸ್ಸಿ ಇತ್ಯಾದಿ ಉನ್ನತ ವಿದ್ಯಾಭ್ಯಾಸ ಪಡೆದಿದ್ದಾರೆ. ಉತ್ತರ ಪ್ರದೇಶದಲ್ಲಿರುವ ನಿರುದ್ಯೋಗ ಪ್ರಮಾಣವನ್ನು ಈ ಅರ್ಜಿಗಳು ಸೂಚಿಸುತ್ತವೆ ಎಂದು ವಿಶ್ಲೇಷಿಸಲಾಗಿದೆ.
ಐದನೇ ತರಗತಿ ವಿದ್ಯಾರ್ಹತೆ ಬಯಸುವ ಸಿಬ್ಬಂದಿ ನೇಮಕಾತಿ ಆಯೋಗದ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್ ನಾನ್ ಟೆಕ್ನಿಕಲ್) ಮತ್ತು ಹವಾಲ್ದಾರ್ ಹುದ್ದೆಗಳಿಗೆ 55,21,917 ಜನರು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 19,04,139 ಅಭ್ಯರ್ಥಿಗಳು ಉತ್ತರ ಪ್ರದೇಶ ಮತ್ತು ಬಿಹಾರದವರು ಎಂಬ ಮಾಹಿತಿ ಪ್ರಯಾಗ್‌ರಾಜ್‌ನಲ್ಲಿರುವ ಎಸ್‌ಎಸ್‌ಸಿ ಸೆಂಟ್ರಲ್ ರೀಜನ್ ಆಫೀಸ್ ನೀಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಕೆಲವೊಂದು ಹುದ್ದೆಗಳಿಗೆ ಕನಿಷ್ಠ ವಿದ್ಯಾರ್ಹತೆ ಹೈಸ್ಕೂಲ್ ಡಿಪ್ಲೊಮಾ ಆಗಿತ್ತು. ಆದರೆ, ಇದಕ್ಕೆ ಬಿಟೆಕ್, ಎಂಟೆಕ್, ಎಂಬಿಎ ಇತ್ಯಾದಿ ಉನ್ನತ ಶಿಕ್ಷಣ ಪಡೆದವರು ಅರ್ಜಿ ಸಲ್ಲಿಸಿದ್ದಾರೆ. ಉನ್ನತ ಶಿಕ್ಷಣ ಪಡೆದವರು ಇಂತಹ ಉದ್ಯೋಗಾವಕಾಶಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
ಕೆಲವು ವರ್ಷದ ಹಿಂದೆ ತಮಿಳುನಾಡಿನಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ತಮಿಳುನಾಡಿನ ಸ್ವಚ್ಛತಾ ಕಾರ್ಮಿಕ ಮತ್ತು ಜಾಡಮಾಲಿ ಹುದ್ದೆಗೆ ಎಂಜಿನಿಯರ್, ಎಂಬಿಎ, ಎಂಸಿಎ, ಎಂಎ, ಆರ್ಟ್ಸ್ ಕಾಮರ್ಸ್ ಸೈನ್ಸ್ ಪದವೀಧರರು, ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಿದ್ದರು. ಅಚ್ಚರಿಯೆಂದರೆ, ಕೇವಲ 14 ಹುದ್ದೆಗಳಿಗೆ 4,600 ಜನರು ಅರ್ಜಿ ಸಲ್ಲಿಸಿದ್ದರು.
ಛತ್ತಿಸ್‌ಗಢದಲ್ಲಿಯೂ ಇದೇ ರೀತಿಯ ಘಟನೆ ವರದಿಯಾಗಿತ್ತು. ರಾಯ್‌ಪುರದಲ್ಲಿ ಜವಾನ ಸರಕಾರಿ ಹುದ್ದೆಗೆ ಎಂಟನೇ ತರಗತಿ ವಿದ್ಯಾರ್ಹತೆ ಬಯಸಲಾಗಿತ್ತು. ಕೇವಲ 91 ಹುದ್ದೆಗಳಿದ್ದವು. ಇದಕ್ಕೆ 2.25ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪದವಿ ಪಡೆದವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದರು.
ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ ಎಂದು ದೂರಿದೆ. ಉದ್ಯೋಗ ಪಡೆಯಲು ಕೌಶಲ್ಯವೃದ್ಧಿ, ಹೊಸ ಕೋರ್ಸ್‌ಗಳ ಕಲಿಕೆ ಇತ್ಯಾದಿಗಳನ್ನು ಅಭ್ಯರ್ಥಿಗಳು ಮಾಡುತ್ತಿರಬೇಕು. ಈ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರೂ ಸರಕಾರಿ ಉದ್ಯೋಗವೇ ಬೇಕೆಂದು ಕಾಯಬಾರದು. ಖಾಸಗಿ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಪ್ರತಿಭಾನ್ವಿತರನ್ನು ಕೈಬೀಸಿ ಕರೆಯುತ್ತಿದೆ. ಭವಿಷ್ಯದಲ್ಲಿ ಬೇಡಿಕೆಯಲ್ಲಿರುವ ಉದ್ಯೋಗಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳು ಕೋರ್ಸ್ ಮತ್ತು ಸ್ಕಿಲ್‌ಗಳನ್ನು ಕಲಿಯಬೇಕು.
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಶಿಕ್ಷಣ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ. ಇದೇ ರೀತಿ ಸರಕಾರಿ ಮತ್ತು ಖಾಸಗಿ ಉದ್ಯೋಗಗಳ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ.