India-China Border Clash: ಮತ್ತೆ ಹಿಮಾಲಯ ಇಣುಕಿದ ಚೀನಿ ಡ್ರ್ಯಾಗನ್: ಭಾರತೀಯ ಫೈಟರ್ ಜೆಟ್ ಶಬ್ಧಕ್ಕೆ ಬೆಚ್ಚಿದ ಚೀನಿ ಸೈನಿಕರು!
Dec 13, 2022 02:32 PM IST
ಸಾಂದರ್ಭಿಕ ಚಿತ್ರ
- ಅರುಣಾಚಲ ಪ್ರದೇಶದ ತವಾಂಗ್ ಗಡಿ ಬಳಿ ಭಾರತ-ಚೀನಾ ಯೋಧರ ನಡುವೆ ಘರ್ಷಣೆ ನಡೆದ ಬಳಿಕ, ಗಡಿ ಪ್ರದೇಶಗಳಲ್ಲಿ ಚೀನಿ ವಾಯುಸೇನೆ ತನ್ನ ಚಟುವಟಿಕೆಯನ್ನು ಹೆಚ್ಚಿಸಿದೆ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ, ಭಾರತೀಯ ವಾಯುಸೇನೆ ಕೂಡ ಗಡಿ ಪ್ರದೇಶದಲ್ಲಿ ತನ್ನ ಗಸ್ತು ಚಟುವಟಿಕೆಯನ್ನು ದ್ಗಿಗುಣಗೊಳಿಸಿದೆ. ಭಾರತೀಯ ಫೈಟರ್ ಜೆಟ್‌ಗಳು ನಿರಂತರ ಗಸ್ತು ತಿರುಗುವ ಮೂಲಕ, ನಿಗಾ ಇರಿಸಿವೆ.
ನವದೆಹಲಿ: ಲಡಾಖ್ ಗಡಿ ಘರ್ಷಣೆ ಬಳಿಕ ಭಾರತದತ್ತ ತಿರುಗಿ ನೋಡಲು ಭಯಪಡುತ್ತಿದ್ದ ಚೀನಿ ಡ್ರ್ಯಾಗನ್, ಇದೀಗ ಅರುಣಾಚಲ ಪ್ರದೇಶದಲ್ಲಿ ಮತ್ತೆ ಕಿರಿಕ್ ಆರಂಭಿಸಿದೆ. ಅರುಣಾಚಲ ಪ್ರದೇಶದ ತವಾಂಗ್ ಬಳಿಯ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ಭಾರತೀಯ ಸೈನಿಕರೊಂದಿಗೆ ಜಟಾಪಟಿ ನಡೆಸಿರುವ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಸೈನಿಕರು, ಮತ್ತೊಂದು ಸುತ್ತಿನ ಗಡಿ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಈ ಮಧ್ಯೆ ಅರುಣಾಚಲ ಪ್ರದೇಶದ ಗಡಿ ಪ್ರದೇಶಗಳಲ್ಲಿ ಚೀನಿ ವಾಯುಸೇನೆ ಚಟುವಟಿಕೆ ಹೆಚ್ಚಾಗಿದ್ದು, ಇದಕ್ಕೆ ಪ್ರತಿಕ್ರಿಯೆ ಎಂಬಂತೆ, ಭಾರತೀಯ ವಾಯುಸೇನೆ ಕೂಡ ಗಡಿ ಪ್ರದೇಶದಲ್ಲಿ ತನ್ನ ಗಸ್ತು ಚಟುವಟಿಕೆಯನ್ನು ದ್ಗಿಗುಣಗೊಳಿಸಿದೆ.
ಭಾರತೀಯ ಫೈಟರ್ ಜೆಟ್‌ಗಳು ಅರುಣಾಚಲ ಪ್ರದೇಶದ ಎಲ್‌ಎಸಿಗೆ ಹೊಂದಿಕೊಂಡಂತೆ ಗಸ್ತು ಆರಂಭಿಸಿದ್ದು, ಆಗಸದಲ್ಲಿ ಭಾರತೀಯ ವಾಯಪಡೆಯ ಫೈಟರ್ ಜೆಟ್‌ಗಳ ಶಬ್ಧ ಕೇಳಿ ಚೀನಿ ಸೈನಿಕರು ಬೆಚ್ಚಿ ಬಿದ್ದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಭಾರತೀಯ ವಾಯುಸೇನೆ ವಕ್ತಾರರು, ಅರುಣಾಚಲ ಪ್ರದೇಶದಲ್ಲಿ ಚೀನಿ ವಾಯುಸೇನೆಯ ಚಟುವಟಿಕೆಗಳ ಮೇಲೆ ನಿಗಾ ಇಡಲು ಭಾರತೀಯ ವಾಯುಪಡೆ ಕೂಡ ತನ್ನ ಫೈಟರ್ ಜೆಟ್‌ಗಳನ್ನು ನಿಯೋಜಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಚೀನಾದ ಪಡೆಗಳು ಅರುಣಾಚಲ ಪ್ರದೇಶದ ಗಡಿ ಭಾಗಚಾದ ಯಾಂಗ್ಟ್ಸೆ ಮತ್ತು ತವಾಂಗ್‌ನಲ್ಲಿ ಎಲ್‌ಎಸಿ ದಾಟಿ ಒಳನುಸುಳಲು ಪ್ರಯತ್ನಿಸಿವೆ. ಚೀನಾದ ಈ ಪ್ರಚೋದಿತ ದಾಳಿಗೆ ತಕ್ಕ ಉತ್ತರ ನೀಡಿರುವ ಭಾರತೀಯ ಸೇನೆ, ಗಡಿ ನುಸುಳಲು ಯತ್ನಿಸಿದ ಚೀನಿ ಸೈನಿಕರನ್ನು ಹೊರದಬ್ಬುವಲ್ಲಿ ಯಶಸ್ವಿಯಾಗಿದೆ.
ಭಾರತೀಯ ಸೇನಾ ಕಮಾಂಡರ್‌ಗಳ ಸಮಯೋಚಿತ ಹಸ್ತಕ್ಷೇಪದಿಂದಾಗಿ, ಚೀನಾದ ಸೈನಿಕರು ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ತಮ್ಮ ಮೂಲ ಸ್ಥಳಗಳಿಗೆ ಮರಳಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಚೀನಾ, ಗಡಿಯಲ್ಲಿ ತನ್ನ ವಾಯಪಡೆ ಚಟುವಟಿಕೆಯನ್ನು ವೃದ್ಧಿಸಿದ್ದು, ಇದಕ್ಕೆ ಪ್ರತಿಯಾಗಿ ಇದೀಗ ಭಾರತೀಯ ವಾಯುಸೇನೆ ಕೂಡ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಎಲ್‌ಎಸಿ ಉದ್ದಕ್ಕೂ, ಕೆಲವು ಪ್ರದೇಶಗಳಲ್ಲಿ ವಿಭಿನ್ನ ಗ್ರಹಿಕೆಯ ಪ್ರದೇಶಗಳಿವೆ. ಈ ಪ್ರದೇಶಗಳ ಮೇಲಿನ ಹಕ್ಕನ್ನು ಎರಡೂ ಕಡೆಯವರು ಪ್ರತಿಪಾದಿಸುತ್ತಿದ್ದು, ಇಲ್ಲಿ ಆಗಾಗ ಸಂಘರ್ಷಗಳು ನಡೆಯುವುದು ಮಾಮೂಲಿ. ಆದರೆ ಈ ಬಾರಿ ಗಡಿ ನುಸುಳಲು ಪ್ರಯತ್ನಿಸಿದ ಚೀನಿ ಸೈನಿಕರಿಗೆ, ಭಾರತೀಯ ಸೈನಿಕರು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ.
ಶಾಂತಿ ಮತ್ತು ನೆಮ್ಮದಿಯನ್ನು ಮರುಸ್ಥಾಪಿಸಲು ಹಾಗೂ ರಚನಾತ್ಮಕ ಕಾರ್ಯವಿಧಾನಗಳನ್ನು ಅನುಸರಿಸಲು, ಸದ್ಯ ಭಾರತೀಯ ಮತ್ತು ಚೀನಿ ಸೇನೆಯ ಉನ್ನತ ಅಧಿಕಾರಿಗಳ ನಡುವೆ ಮಿಲಿಟರಿ ಸಭೆ ನಡೆದಿದೆ ಎಂದು ಮೂಲಗಳು ಖಚಿತಪಡಿಸಿವೆ.
ಸದ್ಯ ತವಾಂಗ್ ಗಡಿ ವಿವಾದ ಸಂತ್ತಿನಲ್ಲೂ ಪ್ರತಿಧ್ವನಿಸಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಕುರಿತು ಸಂಸತ್ತಿನ ಸ್ಪಷ್ಟನೆ ನೀಡಿದ್ದಾರೆ. ಘರ್ಷಣೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಹಾಗೂ ಭಾರತೀಯ ಸೈನಿಕರು ಗಂಭೀರವಾಗಿ ಗಾಯಗೊಂಡಿಲ್ಲ ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ರಾಜತಾಂತ್ರಿಕ ಮಟ್ಟದಲ್ಲೂ ಚೀನಾದೊಂದಿಗೆ ಮಾತುಕತೆ ನಡೆಸುವುದಾಗಿ ರಾಜನಾಥ್ ಸಿಂಗ್ ಸದನಕ್ಕೆ ಭರವಸೆ ನೀಡಿದ್ದಾರೆ. ಆದರೆ ರಾಜನಾಥ್ ಸಿಂಗ್ ಉತ್ತರದಿಂದ ತೃಪ್ತರಾಗದ ವಿಪಕ್ಷಗಳು ಸಭಾತ್ಯಾಗ ನಡೆಸಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿವೆ.
2020 ರ ಜೂನ್‌ನಲ್ಲಿ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿತ್ತು. ಈ ಘರ್ಷಣೆಗಳಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಈ ಘರ್ಷಣೆಯಲ್ಲಿ ಚೀನಾದ 40ಕ್ಕೂ ಹೆಚ್ಚು ಸೈನಿಕರು ಸತ್ತಿದ್ದರೂ, ಈ ಕುರಿತು ಚೀನಾ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ವಿಭಾಗ